ಅನಾರೋಗ್ಯದಿಂದ ಹಾಸಿಗೆ ಹಿಡಿದ ಮಗನಿಗಾಗಿ JEE ಕ್ಲಾಸ್ ಕೇಳಿ ನೋಟ್ಸ್ ಮಾಡಿ ಕೊಡುತ್ತಿದ್ದ ಅಮ್ಮನ ಅದ್ಭುತ ಕಥೆ
ತಾಯಿಯ ಪ್ರೀತಿಯ ಮುಂದೆ ಯಾವುದು ಸರಿ ಸಾಟಿಯಿಲ್ಲ ಎಂದು ಎಲ್ಲರೂ ಸುಮ್ಮನೆ ಹೇಳಲ್ಲ. ಏಕೆಂದರೆ ತನ್ನ ಮಕ್ಕಳಿಗಾಗಿ ಆಕೆ ಎಂತಹ ತ್ಯಾಗ ಮಾಡಲು ಕೂಡ ಸಿದ್ದಳಿರುತ್ತಾಳೆ. ನಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜಸ್ಥಾನದ ಕೋಟಾ ನಗರವು ಐಐಟಿ ಮತ್ತು ನೀಟ್‌ನಂತಹ ಕಾಂಪಿಟೇಟಿವ್ ಏಕ್ಸಾಮ್‌ಗಳ ತರಬೇತಿಗೆ ಹೆಸರುವಾಸಿ.
ಇಲ್ಲಿ ಹಗಲಿರುಳು ಪುಸ್ತಕದ ಮುಂದೆ ಕುಳಿತು ಓದಿ ರ್‍ಯಾಂಕ್ ಗಳಿಸುವ ವಿದ್ಯಾರ್ಥಿಗಳಿದ್ದಾರೆ. ಇದು ಸಹಜ. ಆದರೆ, ಇಲ್ಲೊಬ್ಬಳು ತಾಯಿ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ತನ್ನ ಮಗನ ಕನಸನ್ನು ನನಸು ಮಾಡಲು ತಾನೇ ವಿದ್ಯಾರ್ಥಿಯಾಗಿ ಕ್ಲಾಸ್ ಅಟೆಂಡ್ ಮಾಡುತ್ತಿದ್ದಳು. ಆಕೆ ಓದಿದ್ದು ಕಲಾ ವಿಭಾಗದಲ್ಲಿ,ಆದರೆ ತನ್ನ ಮಗನಿಗಾಗಿ ಭೌತಶಾಸ್ತ್ರ ಮತ್ತು ಗಣಿತದ ಪಾಠಗಳನ್ನು ಕೇಳಿ ನೋಟ್ಸ್ ಮಾಡಿ ಆತನ ಐಐಟಿಗೆ ಸೇರುವ ಕನಸನ್ನು ನನಸು ಮಾಡಿದ್ದಾರೆ.

2024ರ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಬರೆಯಬೇಕು ಎನ್ನುವ ಆಸೆಯಿಂದ ಬಿಹಾರದ ಸೀತಾಮರ್ಹಿ ಎಂಬ ಊರಿನಿಂದ ಗುಂಜನ್ ಎಂಬ ವಿದ್ಯಾರ್ಥಿ 2023ರಲ್ಲಿ ಕೋಟಾಗೆ ಬಂದಿದ್ದ. ತನ್ನ ಊರಿನಲ್ಲಿ ಸಂಪನ್ಮೂಲಗಳ ಮತ್ತು ಅವಕಾಶಗಳ ಕೊರತೆ ಇದ್ದಿದ್ದರಿಂದ, ಶಿಕ್ಷಣವೇ ತನ್ನ ಭವಿಷ್ಯವನ್ನು ಬದಲಾಯಿಸುವ ಏಕೈಕ ಅಸ್ತ್ರ ಎಂದು ಆತ ನಂಬಿದ್ದ. ಆದರೆ, ಗುಂಜನ್‌ಗೆ 9.5 ಪವರ್ ಇರುವ ಕನ್ನಡಕ ಬಳಸುವಷ್ಟು ಕಣ್ಣಿನ ದೃಷ್ಟಿ ದೋಷವಿತ್ತು. ಇದರ ಜೊತೆಗೆ ಕೋಟಾದ ಹೊಸ ವಾತಾವರಣ ಮತ್ತು ಹೆಚ್ಚು ಸಮಯ ಅಧ್ಯಯನ ಮಾಡುವುದು ಆತನಿಗೆ ಕಷ್ಟವಾಗಲು ಶುರುವಾಯಿತು.
ಆದರೆ ಪರೀಕ್ಷೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವಾಗ, ಭಾರವಾದ ವಸ್ತುವೊಂದನ್ನು ಎತ್ತಿದ ಕಾರಣಕ್ಕೆ ಗುಂಜನ್‌ಗೆ 'ನ್ಯುಮೋಥರಾಕ್ಸ್' ಎಂಬ ಶಾಸ್ವಕೋಶಕ್ಕೆ ಸಂಬಂಧಿಸಿದ ಗಂಭೀರ ಖಾಯಿಲೆ ಶುರುವಾಯಿತು. ಇದರಿಂದಾಗಿ ಆತ ಸತತ ಮೂರು ತಿಂಗಳ ಕಾಲ ಹಾಸಿಗೆ ಹಿಡಿಯಬೇಕಾಯಿತು. ಡಾಕ್ಟರ್‌ಗಳ ಸೂಚನೆಯಂತೆ ಆತನಿಗೆ ಕಂಪ್ಲೀಟ್ ವಿಶ್ರಾಂತಿಯೇ ಅನಿವಾರ್ಯವಾಗಿತ್ತು.
ಮಗನ ಬೆಂಬಲಕ್ಕೆ ನಿಂತ ತಾಯಿ ಗುಂಜಾ
ಮಗನ ಅನಾರೋಗ್ಯದ ಸಮಯದಲ್ಲಿ ಆತನ ಶಿಕ್ಷಣ ನಿಂತುಹೋಗಬಾರದು ಹಾಗೂ ಆತ ಭರವಸೆ ಕಳೆದುಕೊಳ್ಳಬಾರದು ಎಂದು ನಿರ್ಧರಿಸಿದ ತಾಯಿ ಗುಂಜಾ, ಆತನ ಆನ್‌ಲೈನ್ ತರಗತಿಗಳಿಗೆ ತಾನೇ ಹಾಜರಾಗಲು ಶುರುಮಾಡಿದರು. ಕಲಾ ವಿಭಾಗದ ಹಿನ್ನೆಲೆ ಹೊಂದಿದ್ದ ಅವರಿಗೆ ವಿಜ್ಞಾನ, ಅದರಲ್ಲೂ ಭೌತಶಾಸ್ತ್ರ ಮತ್ತು ಗಣಿತ ಸಂಪೂರ್ಣ ಹೊಸ ವಿಷಯವಾಗಿತ್ತು. ಅರ್ಥನೂ ಆಗುತ್ತಿರಲಿಲ್ಲ. ಆದರೂ ಛಲ ಬಿಡದೆ, ಶಿಕ್ಷಕರಿಗೆ ಪದೇ ಪದೇ ಪ್ರಶ್ನೆಗಳನ್ನು ಕೇಳಿ ಅರ್ಥಮಾಡಿಕೊಂಡು ಮಗನಿಗಾಗಿ ನೋಟ್ಸ್ ಬರೆಯಲಾರಂಭಿಸಿದರು. ಪ್ರತಿದಿನ ಬೇಗನೇ ತರಗತಿಗೆ ಹಾಜರಾಗಿ, ಪಾಠಗಳನ್ನು ಕೇಳಿ, ಸಂಜೆಯ ವೇಳೆಗೆ ಅದನ್ನು ಅಚ್ಚುಕಟ್ಟಾಗಿ ಬರೆದು ಮಗನಿಗೆ ಓದಲು ಕೊಡಲು ರೂಢಿಸಿಕೊಂಡರು. ದೈಹಿಕವಾಗಿ ಮತ್ತು ಮಾನಸಿಕವಾಗಿ ಎಷ್ಟೇ ಸುಸ್ತಾದರೂ, ಮಗ ಆ ನೋಟ್ಸ್ ಇಟ್ಟುಕೊಂಡು ಓದುವುದನ್ನು ಕಂಡು ಅವರು ತಮ್ಮ ಕಷ್ಟವನ್ನಾ ಮರೆಯುತ್ತಿದ್ದರು.
ಜೆಇಇ ಅಡ್ವಾನ್ಸ್ಡ್‌ನಲ್ಲಿ ದೊರೆತ ಯಶಸ್ಸು
ಐಐಟಿ ದೆಹಲಿಯಲ್ಲಿ ಕಲಿಯಬೇಕು ಎಂದು ಮಗನಿಗೆ ದೊಡ್ಡ ಕನಸಿತ್ತು. ಅನಾರೋಗ್ಯದ ನಡುವೆಯೂ ಆತ ತಾಯಿಯ ಬೆಂಬಲದಿಂದಲೇ ತನ್ನ ಕಲಿಕೆಯನ್ನಾ ಮುಂದುವರಿಸಿದ. ಜೂನ್ 10 ರಂದು ಜೆಇಇ ಅಡ್ವಾನ್ಸ್ಡ್ ಫಲಿತಾಂಶ ಬಂದಾಗ, ಆ ಇಡೀ ಕುಟುಂಬದ ಶ್ರಮಕ್ಕೆ ಪ್ರತಿಫಲ ದೊರಕಿತ್ತು ಎನ್ನಬಹುದು. ಏಕೆಂದರೆ ಗುಂಜನ್ ಆ ಐಐಟಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದ. ಆತನ ಈ ಯಶಸ್ಸಿನ ಹಿಂದೆ ಆತನ ತಾಯಿಯ ಕಠಿಣ ಪರಿಶ್ರಮವೂ ಕೂಡ ಇತ್ತು.
ಮಕ್ಕಳ ಪೋಷಕರಿಗೆ ಕಿವಿಮಾತು ಹೇಳಿರುವ ಗುಂಜಾ, "ರ್‍ಯಾಂಕ್ ಮತ್ತು ಅಂಕಗಳು ಮುಖ್ಯ, ಆದರೆ ಅದೇ ಕೊನೆಯಲ್ಲ. ಕಷ್ಟದ ಸಮಯದಲ್ಲಿ ಮಕ್ಕಳ ಜೊತೆ ನಿಂತು ಅವರಿಗೆ ಆತ್ಮವಿಶ್ವಾಸ ನೀಡಿ. ಆಗ ಅದಕ್ಕಿಂತಲೂ ದೊಡ್ಡ ಬದಲಾವಣೆಯನ್ನು ತರಬಲ್ಲದು" ಎಂದಿದ್ದಾರೆ.












Click it and Unblock the Notifications