ಮೈಸೂರು ದಸರಾ 2026ಕ್ಕೆ ಮುಹೂರ್ತ ಫಿಕ್ಸ್: ಈ ಬಾರಿ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರ ಭರ್ಜರಿ ಸಿದ್ಧತೆ

ನಾಡಹಬ್ಬ ಮೈಸೂರು ದಸರಾಕ್ಕೆ ರಾಜ್ಯ ಸರ್ಕಾರ ಸಕಲ ಸಿದ್ಧತೆಗಳನ್ನ ಆರಂಭಿಸಿದೆ. ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ನಡೆಯುತ್ತಿರುವ ಮೊದಲ ದಸರಾ ಇದಾಗಿದ್ದು, ಈ ಬಾರಿಯ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸರ್ಕಾರ ತೀರ್ಮಾನಿಸಿದೆ.

ಬೆಂಗಳೂರಿನ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಮೈಸೂರು ದಸರಾ ಪೂರ್ವಭಾವಿ ಸಭೆಯಲ್ಲಿ, ಮೈಸೂರು ದಸರಾ 2026ರ ದಿನಾಂಕಗಳು ಹಾಗೂ ಜಂಬೂಸವಾರಿಯ ಮುಹೂರ್ತವನ್ನು ಅಂತಿಮಗೊಳಿಸಿ, ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

Mysore Dasara 2026

ಉನ್ನತ ಮಟ್ಟದ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ, ಈ ಬಾರಿಯ ಮೈಸೂರು ದಸರಾ ಕಾರ್ಯಕ್ರಮಗಳು ಆಗಸ್ಟ್ ತಿಂಗಳಿನಿಂದಲೇ ಶುರುವಾಗಲಿದೆ. ಆಗಸ್ಟ್ 26ರಂದು ಮೈಸೂರು ಅರಮನೆಯ ಪ್ರವೇಶ ದ್ವಾರದಲ್ಲಿ ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ದಸರಾಗೆ ಅಧಿಕೃತವಾಗಿ ಚಾಲನೆ ದೊರೆಯಲಿದ್ದು. ತದನಂತರ, ಅಕ್ಟೋಬರ್ 11ರಂದು ಬೆಳಿಗ್ಗೆ 11:50ರ ಶುಭ ಧನುರ್ ಲಗ್ನದಲ್ಲಿ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವದ ಅದ್ಧೂರಿ ಉದ್ಘಾಟನೆ ನೆರವೇರಲಿದೆ. ಇನ್ನು, ದಸರಾದ ಅತ್ಯಂತ ಪ್ರಮುಖ ಆಕರ್ಷಣೆಯಾದ ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ಅಕ್ಟೋಬರ್ 21ರಂದು ನಡೆಯಲಿದೆ.

ಅಂದು ಸಂಜೆ 4:10ರಿಂದ 4:35ರ ನಡುವಿನ ಶುಭ ಲಗ್ನದಲ್ಲಿ ಸ್ವರ್ಣ ಅಂಬಾರಿಯಲ್ಲಿ ವಿರಾಜಮಾನಳಾಗುವ ನಾಡದೇವತೆ ಚಾಮುಂಡೇಶ್ವರಿ ತಾಯಿಗೆ ಮುಖ್ಯಮಂತ್ರಿಗಳು ಪುಷ್ಪಾರ್ಚನೆ ನೆರವೇರಿಸುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ.

ವಿಜೃಂಭಣೆಯ ನಾಡಹಬ್ಬದ ಆಚರಣೆಗೆ ಒತ್ತು: ಡಾ. ಜಿ.ಪರಮೇಶ್ವರ

ನಾಡಿನ ಪರಂಪರೆ, ಸಂಸ್ಕೃತಿ, ಇತಿಹಾಸವನ್ನು ಪ್ರತಿಬಿಂಬಿಸುವ ನಾಡಹಬ್ಬ ಮೈಸೂರು ದಸರಾ ಕಾರ್ಯಕ್ರಮವನ್ನು ಹೆಚ್ಚು ವಿಜೃಂಭಣೆಯಿಂದ ಆಚರಿಸೋಣ ಎಂದು ಉಪಮುಖ್ಯಮಂತ್ರಿಗಳಾದ ಡಾ. ಜಿ.ಪರಮೇಶ್ವರ ಅವರು ಹೇಳಿದರು.

ಮೈಸೂರು ದಸರಾ ಸುಮ್ಮನೇ ನಡೆಯುವ ಯಾವುದೋ ಸಾಮಾನ್ಯ ಉತ್ಸವವಲ್ಲ. ಪ್ರತಿ ವರ್ಷಕ್ಕೊಮ್ಮೆ ದೇವಸ್ಥಾನಗಳಲ್ಲಿ ನಡೆಯುವ ರಥೋತ್ಸವ ಅಥವಾ ಪೂಜೆಯೂ ಅಲ್ಲ‌. ಇದು ನಾಡಿನ ಪರಂಪರೆ, ಸಂಸ್ಕೃತಿ, ಇತಿಹಾಸವನ್ನು ಪ್ರತಿಬಿಂಬಿಸುವಂಥ ಕಾರ್ಯಕ್ರಮ ಎಂದು ಹೇಳಿದರು‌.

ಹಿಂದೆ ಮೈಸೂರು ಮಹಾರಾಜರು ಅಂಬಾರಿ ಮೇಲೆ ಮೆರವಣಿಗೆ ಬರುತ್ತಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ಹಿನ್ನೆಲೆಯಲ್ಲಿ ಅದನ್ನು ಇಂದು ನೋಡಲು ಸಾಧ್ಯವಿಲ್ಲ‌. ನಾಡಿನ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪ್ರತಿಬಿಂಬಿಸುವ ಕೆಲಸ ಮಾಡಬೇಕು ಎಂದರು.

ಕಳೆದ ವರ್ಷ ಮೈಸೂರು ದಸರಾಕ್ಕೆ 25 ಲಕ್ಷಕ್ಕೂ ಹೆಚ್ಚು ಜನ ಭೇಟಿ ನೀಡಿದ್ದಾರೆ. ನಾನು ನಾಲ್ಕೈದು ಬಾರಿ ಗೃಹ ಸಚಿವನಾಗಿ ಜವಾಬ್ದಾರಿ‌ ನಿರ್ವಹಿಸಿದ್ದೇನೆ. ಪ್ರತಿದಿನ ಮಾಹಿತಿ ಪಡೆಯಲಾಗುತ್ತಿತ್ತು. ಯಾವುದೇ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ಕಳೆದ ವರ್ಷ ಹೆಚ್ಚಿನ ಜನ ಆಗಮಿಸಿದ್ದರು. ಜಿಲ್ಲಾಡಳಿತ ಉತ್ತಮವಾಗಿ ಅಯೋಜನೆ ನಡೆಸಿಕೊಟ್ಟಿದೆ. ಇದಕ್ಕೆ ಜನಪ್ರತಿನಿಧಿಗಳು ಸಹಕರಿಸಿದರು.

ಈಗ, ಸಿಎಂ ಡಿ.ಕೆ‌.ಶಿವಕುಮಾರ್ ಅವರು ಹೊಸ ಚಿಂತನೆಯೊಂದಿಗೆ ಅಧಿಕಾರ ವಹಿಸಿಕೊಂಡಿದ್ದಾರೆ‌. ರಾಜ್ಯದಲ್ಲಿ 16 ರಿಂದ 30 ವರ್ಷದೊಗಿನ 1.9 ಕೋಟಿ ಯುವಕರಿದ್ದಾರೆ‌. ಇವರಿಗೆ ನಮ್ಮ ಪರಂಪರೆ, ಸಂಸ್ಕೃತಿ, ಇತಿಹಾಸದ ಬಗ್ಗೆ ಸಂದೇಶ ನೀಡಬೇಕಲ್ಲವೇ? ಮೈಸೂರಿನ ಇತಿಹಾಸ ಪ್ರತಿಬಿಂಬಿಸುವ ವಸ್ತುಪ್ರದರ್ಶನವನ್ನು ನಡೆಸಬೇಕು. ಸೌಂಡ್ ಆ್ಯಂಡ್ ಲೈಟ್ ರೂಪದಲ್ಲಿ ಮೈಸೂರಿನ‌ ಪರಂಪರೆಯನ್ನು ತೋರಿಸುವ ವ್ಯವಸ್ಥೆ ಮಾಡಬೇಕು ಎಂದರು.

ಮೈಸೂರು ದಸರಾವನ್ನು ವಿಶ್ವಮಟ್ಟಕ್ಕೆ ಪ್ರಚುರಪಡಿಸುವ ಕೆಲಸವಾಗಬೇಕು. ಹೆಚ್ಚು ಪ್ರವಾಸಿಗರನ್ನು ಹೆಚ್ಚು ಸೆಳೆಯುವ ಪ್ರಯತ್ನ ಮಾಡಬೇಕು‌. ವಿದೇಶಿ ಪ್ರವಾಸಿಗರಿಗಾಗಿ ಮೈಸೂರು ಮಹಾರಾಜರು ಮೆಟ್ರೋಪೋಲೋ ಹೋಟೆಲ್ ಕಟ್ಟಿದ್ದರು‌. ಆ ಪ್ರಮಾಣದಲ್ಲಿ ಇಂದು ವಿದೇಶಿಗರು ಬರುತ್ತಿಲ್ಲ. ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ನಮ್ಮ ಪರಂಪರೆ ವಿಶ್ವಕ್ಕೆ ತಿಳಿಸಬೇಕು ಎಂದರು.

ದಸರಾ ಕ್ರೀಡೆ ಯಶಸ್ವಿಯಾಗಿ ನಡೆಯುತ್ತಿಲ್ಲ. ನಾವೆಲ್ಲ ದಸರಾ ಕ್ರೀಡೆಯಿಂದ ಗುರುತಿಸಿಕೊಂಡವರು. ಕ್ರೀಡೆಗಳು ತಾಲ್ಲೂಕು ಮಟ್ಟದಿಂದ ಪ್ರಾರಂಭವಾಗುತ್ತಿತ್ತು. ಈಗ ಸರಿಯಾಗಿ ನಡೆಯುತ್ತಿಲ್ಲ. ದಸರಾ ಕ್ರೀಡೆಯಿಂದ ಯುವಕರಿಗೆ ಹೊಸ ಅವಕಾಶ ಸಿಗುತ್ತದೆ. 'ಮೈಸೂರು ದಸರಾ ಕ್ರೀಡಾ ವಿಜೇತ' ಎಂದರೆ ಹೆಚ್ಚಿನ ಉತ್ತೇಜನ ಸಿಗುತ್ತದೆ ಎಂದರು.

ಕರ್ನಾಟಕವನ್ನು ಪರಿಣಾಮಕಾರಿಯಾಗಿ, ಹೆಚ್ಚು ವಿಜೃಂಭಣೆಯಿಂದ ಪ್ರತಿಬಿಂಬಿಸಬೇಕು ಎಂಬ ಪರಿಕಲ್ಪನೆ ಸಿಎಂ‌ ಅವರಿಗೆ ಇದೆ. ಯುವ ದಸರಾವನ್ನು ಇನ್ನೂ ಹೆಚ್ಚು ಅರ್ಥಪೂರ್ಣವಾಗಿ ನಡೆಸಲು ವ್ಯವಸ್ಥೆ ಕೈಗೊಳ್ಳಬೇಕು ಎಂದು ಹೇಳಿದರು‌.

ದಸರಾ ಆಚರಣೆ ಮೈಸೂರಿಗೆ ಸೀಮಿತವಾಗುವುದು ಬೇಡ. ಎಲ್ಲ ಕಡೆ ನಮ್ಮ ಪರಂಪರೆಯನ್ನು ಪ್ರತಿಬಿಂಬಿಸುವ ಕೆಲಸ ಆಗಬೇಕು. ಚಾಮರಾಜನಗರ, ಶ್ರೀರಂಗಪಟ್ಟಣ, ಮಡಿಕೇರಿ ಮತ್ತು ಮಂಗಳೂರಿನಲ್ಲಿ ದಸರಾ ಆಚರಿಸಲಾಗುತ್ತಿದೆ‌. ಕಳೆದ ಎರಡು ವರ್ಷದಿಂದ ತುಮಕೂರಿನಲ್ಲಿ ಆಚರಿಸಲಾಗುತ್ತದೆ. ಬೇರೆ ಜಿಲ್ಲೆಗಳಲ್ಲಿಯೂ ದಸರಾ ಆಚರಿಸುವುದು ಆಗಬೇಕು. ಆಯಾ ಜಿಲ್ಲೆಯ ಸಂಸ್ಕೃತಿ, ಕಲೆ, ಸಾಹಿತ್ಯದ ಬಗ್ಗೆ ಸ್ಥಳೀಯರಿಗೆ ತಿಳಿಯಲಿ ಎಂದರು.

ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡವನ್ನು ಉಳಿಸಿಕೊಳ್ಳಬೇಕು ಎಂದು ಶಾಸಕರ ಹೇಳಿದರು.‌ ಈ ವೇಳೆ ಡಿಸಿಎಂ ಪರಮೇಶ್ವರ ಅವರು, ಪ್ಯಾರೀಸ್, ರೋಮ್ ನಗರಗಳಲ್ಲಿ ಕಟ್ಟಡಗಳನ್ನು ಉತ್ತಮವಾಗಿ ಮೆಂಟೇನ್ ಮಾಡಿದ್ದಾರೆ. ನಮ್ಮಲ್ಲೂ ಆ ಕೆಲಸ ಆಗಬೇಕು. ಕೋರ್ಟ್‌ನಲ್ಲಿ ಇರುವ ಕೇಸ್ ವಾದ ಮಾಡಿ, ಬಗೆಹರಿಸಬೇಕು. ಅಲ್ಲಿಯವರೆಗೂ ಹಾಳಾಗಲು ಬಿಡಬಾರದು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+