ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆ ಆಕಾಂಕ್ಷಿಗಳ ಗಮನಕ್ಕೆ: ಅರ್ಜಿ ತಿದ್ದುಪಡಿಗೆ ಲಿಂಕ್ ಓಪನ್, ಜುಲೈ 13 ಕೊನೆ ದಿನ
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಬೇಕು ಎಂದು ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಈಗಾಗಲೇ ಅರ್ಜಿ ಹಾಕಿದ್ದರೆ ನೀವು ಈ ಸುದ್ದಿಯನ್ನು ಸಂಪೂರ್ಣವಾಗಿ ಓದಲೇಬೇಕು. ಏಕೆಂದರೆ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆ ಆಕಾಂಕ್ಷಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನೀಡಿರುವ ಮಹತ್ವದ ಸುದ್ದಿ ಇಲ್ಲಿದೆ.
ನಿಮಗೆಲ್ಲರಿಗೂ ತಿಳಿದಿರುವಂತೆ ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಆನ್‌ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಮುಗಿದಿದೆ. ಆದರೆ, ಅರ್ಜಿ ಸಲ್ಲಿಸುವಾಗ ಹಲವು ಅಭ್ಯರ್ಥಿಗಳು ಗಡಿಬಿಡಿಯಲ್ಲೋ ಅಥವಾ ತಾಂತ್ರಿಕ ಕಾರಣಗಳಿಂದಲೋ ಕೆಲವು ಸಣ್ಣ ಸಣ್ಣ ತಪ್ಪುಗಳನ್ನು ಮಾಡಿಕೊಂಡಿರುವುದು ಪ್ರಾಧಿಕಾರದ ಗಮನಕ್ಕೆ ಬಂದಿದೆ. ಹಾಗಾಗಿ, ಅರ್ಜಿಯಲ್ಲಿನ ತಪ್ಪಿಗಳನ್ನು ಸರಿಪಡಿಸಿಕೊಳ್ಳಲು ಕೆಇಎ ವಿಶೇಷ ಎಡಿಟ್ ಲಿಂಕ್ ಅನ್ನು ಒಪನ್ ಮಾಡಿದೆ.

ಅಭ್ಯರ್ಥಿಗಳು ತಮ್ಮ ಅರ್ಜಿಯಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಲು ಜುಲೈ 13ರವರೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಒಮ್ಮೆ ಮಾತ್ರ ತಪ್ಪುಗಳನ್ನಾ ತಿದ್ದುಪಡಿ ಮಾಡಲು ಅವಕಾಶ ಇರುವುದರಿಂದ ಅಭ್ಯರ್ಥಿಗಳು ಅತ್ಯಂತ ಜಾಗ್ರತೆಯಿಂದ ಸರಿಪಡಿಸಿಕೊಳ್ಳಬೇಕು.
ಅರ್ಜಿ ತಿದ್ದುಪಡಿ ಮಾಡುವ ಈ ಕೆಳಗಿನ ಹಂತವನ್ನು ಪಾಲಿಸಿ
ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಲ್ಲಿ ತಮ್ಮ ಅರ್ಜಿಗಳನ್ನ ತಿದ್ದಬಹುದು. ಇದಕ್ಕಾಗಿ ಪ್ರಾಧಿಕಾರವು ತನ್ನ ಅಧಿಕೃತ ಪ್ರಕಟಣೆಯಲ್ಲಿ ಪಾಲಿಸಬೇಕಾದ ಐದು ಪ್ರಮುಖ ಹಂತಗಳನ್ನು ತಿಳಿಸಿದೆ:
ಹಂತ 1: ಕೆಇಎ ವೆಬ್‌ಸೈಟ್‌ನಲ್ಲಿ ನೀಡಿದ 'Edit Application for the Karnataka State Police' ಲಿಂಕ್ ಬಳಸಿ ಲಾಗಿನ್ ಆಗಿ.
ಹಂತ 2: ನಿಮ್ಮ ಪೋಟೋ ಅಥವಾ ಹಾಗೂ ಸಹಿ ಬದಲಾಯಿಸಬೇಕಿದ್ದರೆ ಮರು ಅಪ್‌ಲೋಡ್ ಮಾಡಲು ಅವಕಾಶವಿದೆ.
ಹಂತ 3: ಶುಲ್ಕ ಪಾವತಿಯಲ್ಲಿ ಏನಾದರೂ ವ್ಯತ್ಯಾಸಗಳಿದ್ದಲ್ಲಿ ಆನ್‌ಲೈನ್ ಮೂಲಕ ಶುಲ್ಕ ಪಾವತಿಸಿ.
ಹಂತ 4: ಶುಲ್ಕ ಕಟ್ಟಿದ ನಂತರ ಪೇಮೆಂಟ್ ಸ್ಟೇಟಸ್‌ನ್ನು ಕಡ್ಡಾಯವಾಗಿ ನೋಡಿಕೊಳ್ಳಿ
ಹಂತ 5: ತಿದ್ದುಪಡಿ ಆದ ನಂತರ ಅಂತಿಮ ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಿ.
ಅಭ್ಯರ್ಥಿಗಳು ಲಾಗಿನ್ ಆಗಲು ತಮ್ಮ ಅಪ್ಲೀಕೇಶನ್ ನಂಬರ್ ಹಾಗೂ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿರುವಂತೆ ಹುಟ್ಟಿದ ದಿನಾಂಕವನ್ನು ನಮೂದಿಸಬೇಕು. ಸುರಕ್ಷತೆಯ ದೃಷ್ಟಿಯಿಂದ ಮತ್ತು ಅಭ್ಯರ್ಥಿಗಳ ದೃಢೀಕರಣಕ್ಕಾಗಿ ನೀಡಿದ ಮೊಬೈಲ್ ಸಂಖ್ಯೆಗೆ ವಾಟ್ಸಾಪ್‌ಗೆ ಒಟಿಪಿ ಕಳುಹಿಸಲಾಗುತ್ತದೆ. ಈ ಒಟಿಪಿ ಹಾಕಿದ ನಂತರವೇ ಅರ್ಜಿ ತಿದ್ದುಪಡಿ ಪುಟ ತೆರೆದುಕೊಳ್ಳುತ್ತದೆ.
#CivilPoliceRecruitment: ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಗಿದಿದ್ದು, ಕೆಲ ಅಭ್ಯರ್ಥಿಗಳ ಕೋರಿಕೆ ಮೇರೆಗೆ ಅರ್ಜಿಯಲ್ಲಿನ ದೋಷಗಳ ತಿದ್ದುಪಡಿಗೆ ಲಿಂಕ್ ತೆರೆಯಲಾಗಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) July 10, 2026
ಜುಲೈ 13ರವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
ಅಭ್ಯರ್ಥಿಗಳು ಎಚ್ಚರಿಕೆಯಿಂದ ಆಗಿರುವ ದೋಷಗಳನ್ನು ಸರಿ… pic.twitter.com/yKcRfqtqK0
ನೆನಪಿಡಿ
ನೆನಪಿನಲ್ಲಿ ಇರಬೇಕಾದ ಪ್ರಮುಖ ಅಂಶ ಏನೆಂದರೆ, ಎಲ್ಲಾ ವಿವರಗಳನ್ನು ಒಂದು ಬಾರಿ ಮಾತ್ರ ತಿದ್ದುಪಡಿ ಮಾಡಲು ಅವಕಾಶ ಇರುತ್ತದೆ. ಭಾವಚಿತ್ರ ಹಾಗೂ ಸಹಿ ಸೇರಿದಂತೆ ಯಾವುದೇ ಬದಲಾವಣೆಗಳಿದ್ದರೂ ಒಂದೇ ಬಾರಿಗೆ ಸರಿಪಡಿಸಿಕೊಳ್ಳಬೇಕು. ಒಂದು ವೇಳೆ ನೀವು ಕೆಟಗರಿ, ಮೀಸಲಾತಿ ಅಥವಾ ಇತರೆ ಅರ್ಹತಾ ವಿವರಗಳನ್ನು ಬದಲಾಯಿಸಿದಾಗ ಅರ್ಜಿ ಶುಲ್ಕದಲ್ಲಿ ಹೆಚ್ಚಳವಾದರೆ, ಆ ವ್ಯತ್ಯಾಸದ ಮೊತ್ತವನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಪಾವತಿಸಬೇಕು.
ಕೊನೆಯದಾಗಿ, ತಿದ್ದುಪಡಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದ ನಂತರ ಅಂತಿಮ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳುವುದನ್ನು ಮರೆಯಬೇಡಿ. ಪ್ರಾಧಿಕಾರ ಅಥವಾ ಇಲಾಖೆಯು ದಾಖಲಾತಿ ಪರಿಶೀಲನೆಗೆ ಸೂಚಿಸಿದಾಗ ಈ ಪ್ರತಿಯನ್ನು ಕಡ್ಡಾಯವಾಗಿ ಕೊಡಬೇಕಾಗುತ್ತದೆ. ಮತ್ತೊಮ್ಮೆ ತಿದ್ದುಪಡಿಗೆ ಅವಕಾಶ ಇರುವುದಿಲ್ಲ. ಹಾಗಾಗಿ ಸಿಕ್ಕ ಈ ಕೊನೆಯ ಅವಕಾಶವನ್ನ ಎಚ್ಚರಿಕೆಯಿಂದ ಬಳಸಿ ಇಂದೇ ಅನ್ಲೈನ್ ಅಲ್ಲಿ ತಿದ್ದುಪಡಿ ಮಾಡಿಕೊಳ್ಳಿ.












Click it and Unblock the Notifications