ಪ್ರೇಯಸಿ ಜೊತೆ ಓಯೋ ರೂಂಗೆ ಹೋದವನು ಬೆಳಗಾಗುವಷ್ಟರಲ್ಲಿ ಶವವಾಗಿ ಪತ್ತೆ, ಅನುಮಾನ ಹುಟ್ಟಿಸಿದ ಮಿಡ್‌ನೈಟ್ ಕಾಲ್
ಏಕಾಂತ ಕಳೆಯಲು ಓಯೋ ರೂಂಗೆ (OYO room) ತೆರಳಿದ ಜೋಡಿಯ ಬದುಕಲ್ಲಿ ದೊಡ್ಡ ದುರಂತವೇ ನಡೆದು ಹೋಗಿದೆ. ಹೋಟೆಲ್ ರೂಂ ಬುಕ್ ಮಾಡಲು ಈ ಜೋಡಿ ಸಹಜವಾಗಿಯೇ ಬಂದಿದ್ದರು. ಆದ್ರೆ ಬೆಳಗಾಗುವಷ್ಟರಲ್ಲಿ ಕೋಣೆಯಿಂದ ಹೊರಬಂದಿದ್ದು ಇಬ್ಬರಲ್ಲಿ ಒಬ್ಬರು ಮಾತ್ರ. ಈ ಕಥೆ ಕೇಳಿ ಸದ್ಯ ಪೊಲೀಸರಿಗೇ ತಲೆತಿರುಗಿದೆ. ಇಬ್ಬರೂ ಏಕಾಂತದಲ್ಲಿದ್ದಾಗ ಬಂದಿದ್ದ ಒಂದು ಫೋನ್ ಕಾಲ್ ಸದ್ಯ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಛತ್ತೀಸ್‌ಗಢದ ಭಿಲಾಯ್ ಸಮೀಪದ ಕೋಹ್ಕಾ ಪ್ರದೇಶದ ಓಯೋ ಹೋಟೆಲ್‌ವೊಂದರಲ್ಲಿ 19 ವರ್ಷದ ಯುವಕನೊಬ್ಬ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತನನ್ನು ಭಿಲಾಯ್‌ನ ಕ್ಯಾಂಪ್-1 ನಿವಾಸಿ ಶಾಬಾದ್ ಶೇಖ್ ಎಂದು ಗುರುತಿಸಲಾಗಿದ್ದು, ಹೋಟೆಲ್ ರೂಂನಲ್ಲಿ ಆತನ ಶವ ಪತ್ತೆಯಾಗಿದೆ. ಸ್ಮೃತಿ ನಗರ ಪೊಲೀಸ್ ಚೌಕಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಪ್ರೇಯಸಿ ಜೊತೆ ಹೋಟೆಲ್‌ಗೆ ಬಂದಿದ್ದ ಯುವಕ
ಪೊಲೀಸರ ಪ್ರಕಾರ, ಶಾಬಾದ್ ಶೇಖ್ ಮಂಗಳವಾರ ಸಂಜೆ ತನ್ನ ಗೆಳತಿಯೊಂದಿಗೆ ಹೋಟೆಲ್‌ಗೆ ಬಂದು ರೂಮ್ ಬುಕ್ ಮಾಡಿದ್ದ. ಇಬ್ಬರೂ ರಾತ್ರಿ ಒಟ್ಟಿಗೆ ಸಮಯ ಕಳೆದಿದ್ದು, ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಆದರೆ ರಾತ್ರಿ ವೇಳೆ ಶಾಬಾದ್‌ಗೆ ಆತನ ಮಾಜಿ ಗರ್ಲ್‌ಫ್ರೆಂಡ್‌ನಿಂದ ಫೋನ್ ಕಾಲ್ ಬಂದಿದ್ದು, ಇದೇ ವಿಚಾರವಾಗಿ ಜೊತೆಯಲ್ಲಿದ್ದ ಗೆಳತಿ ಹಾಗೂ ಶಾಬಾದ್ ನಡುವೆ ಜೋರಾಗಿ ಜಗಳ ಶುರುವಾಗಿದೆ. ರಾತ್ರಿ ಕಳೆಯುತ್ತಿದ್ದಂತೆ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ.
ಕೈ ಕತ್ತರಿಸಿಕೊಂಡಿದ್ದ ಯುವತಿ
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಜಗಳದ ಮಧ್ಯೆ ಮದ್ಯದ ಅಮಲಿನಲ್ಲಿದ್ದ ಯುವತಿ ಆಕ್ರೋಶಗೊಂಡು ತನ್ನ ಕೈ ಕತ್ತರಿಸಿಕೊಂಡು ಗಾಯಗೊಳಿಸಿದ್ದಾಳೆ. ರಕ್ತಸ್ರಾವವಾದ ಕಾರಣ ಆಕೆ ಪ್ರಜ್ಞೆ ಕಳೆದುಕೊಂಡು ರೂಮ್‌ನಲ್ಲಿ ಬಿದ್ದಿದ್ದಾಳೆ. ಪೊಲೀಸರ ಪ್ರಾಥಮಿಕ ಶಂಕೆಯ ಪ್ರಕಾರ ಗೆಳತಿ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ನೋಡಿ ಗಾಬರಿಗೊಂಡ ಶಾಬಾದ್, ಅದೇ ಯುವತಿಯ ದುಪಟ್ಟಾ ಬಳಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿದ್ದಾರೆ.
ಬೆಳಗ್ಗೆ ಗೆಳತಿ ಹೇಳಿದ್ದೇನು?
ರಾತ್ರಿ 11 ಗಂಟೆಯ ಸುಮಾರಿಗೆ ಇವರಿಬ್ಬರ ಜಗಳದ ವಿಷಯ ತಿಳಿದ ಶಾಬಾದ್ ಸ್ನೇಹಿತರು ಹೋಟೆಲ್‌ಗೆ ಬಂದು ಕೌಂಟರ್‌ನಲ್ಲಿ ವಿಚಾರಿಸಿದ್ದಾರೆ. ಬಳಿಕ ರೂಮ್ ಬಾಗಿಲನ್ನು ಸಖತ್ ಜೋರಾಗಿ ತಟ್ಟಿದರೂ ಒಳಗಿನಿಂದ ಯಾವುದೇ ಉತ್ತರ ಬರಲಿಲ್ಲ. ಮರುದಿನ ಬೆಳಿಗ್ಗೆ ಪ್ರಜ್ಞೆ ಬಂದ ಯುವತಿ ರೂಮ್‌ನಿಂದ ಹೊರಗೆ ಬಂದು, ಶಾಬಾದ್ ಇನ್ನು ಮಲಗಿದ್ದಾನೆ ಎಂದು ಹೋಟೆಲ್ ಸಿಬ್ಬಂದಿಗೆ ತಿಳಿಸಿದ್ದಳು. ಆದರೆ ಬೆಳಗ್ಗೆ ಮತ್ತೆ ಬಂದ ಶಾಬಾದ್ ಸ್ನೇಹಿತರು ರೂಮ್ ಒಳಗೆ ಹೋಗಿ ನೋಡಿದಾಗ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ, ಆತ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.
ಸದ್ಯ ಪೊಲೀಸರು ಆ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆ ರಾತ್ರಿ ಹೋಟೆಲ್ ರೂಮ್‌ನೊಳಗೆ ಅಸಲಿಗೆ ಏನಾಯಿತು? ಇಬ್ಬರ ನಡುವೆ ಯಾಕೆ ಗಲಾಟೆ ನಡೆದಿತ್ತು ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ರಿಪೋರ್ಟ್ ಬಂದ ಬಳಿಕವಷ್ಟೇ ಈ ಯುವಕನ ಸಾವಿಗೆ ಅಸಲಿ ಕಾರಣ ಏನೆಂಬುದು ಅಧಿಕೃತವಾಗಿ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.













Click it and Unblock the Notifications