ಹೀರೋಗಳಿಗೆ ಒಂದು, ನಟಿಯರಿಗೆ ಇನ್ನೊಂದು ನ್ಯಾಯನಾ: ಚಿತ್ರರಂಗದ ವಿರುದ್ಧ ನಟಿ ರಕ್ಷಿತಾ ಪ್ರೇಮ್ ಗರಂ ಆಗಿದ್ದೇಕೆ?
ನಟ ಪ್ರಜ್ವಲ್ ದೇವರಾಜ್ ನಟನೆಯ "ಕರಾವಳಿ" ಸಿನಿಮಾ ವಿವಾದಗಳಿಂದಲೇ ಸುದ್ದಿಯಾಗ್ತಿದೆ. ಸಿನಿಮಾದ ನಾಯಕ ಪ್ರಜ್ವಲ್ ಹಾಗೂ ನಿರ್ದೇಶಕರ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಇದೇ ಕಾರಣಕ್ಕೆ ಮುನಿಸು ಜೋರಾಗಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಅವರ ಧ್ವನಿ ಬಳಕೆ ಮಾಡಿಲ್ಲ ಎನ್ನುವುದು ಕೂಡ ಈ ವಿವಾದಕ್ಕೆ ಕಾರಣ ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ ನಟಿ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಹಂಚಿಕೊಂಡಿರುವ ಪೋಸ್ಟ್ ವೈರಲ್ ಆಗಿದೆ.
ಚಿತ್ರರಂಗದಲ್ಲಿ ಕಲಾವಿದರ ಸಂಭಾವನೆ ಮತ್ತು ಡಬ್ಬಿಂಗ್ ಹಕ್ಕುಗಳ ವಿಚಾರ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಗಂಭೀರ ವಿಷಯದ ಬಗ್ಗೆ ಸ್ಯಾಂಡಲ್‌ವುಡ್‌ನ ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಚಿತ್ರರಂಗದ ನಿಲುವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಚಿತ್ರರಂಗದಲ್ಲಿ ನಡೆಯುವ ತಾರತಮ್ಯವನ್ನು ಖಂಡಿಸಿರುವ ರಕ್ಷಿತಾ, "ಸಂಭಾವನೆ ವಿಚಾರದಲ್ಲಿ ಗಲಾಟೆಯಾದಾಗ ಮುಖ್ಯ ನಟಿಯರು ಮತ್ತು ಪೋಷಕ ನಟರ ಧ್ವನಿಯನ್ನು ಬೇರೆ ಧ್ವನಿಯೊಂದಿಗೆ ಬದಲಾಯಿಸಿದ ಅದೆಷ್ಟೋ ಉದಾಹರಣೆಗಳನ್ನು ನಾನು ಹಲವು ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಆದರೆ ಆಗೆಲ್ಲ ಯಾರೂ ಇದರ ವಿರುದ್ಧ ಧ್ವನಿ ಎತ್ತಲೇ ಇಲ್ಲ, ಯಾವುದೇ ದೊಡ್ಡ ಮಟ್ಟದ ಆಕ್ರೋಶವೂ ವ್ಯಕ್ತವಾಗಲಿಲ್ಲ. ಆದರೆ ಇವತ್ತು ಅದೇ ಸಮಸ್ಯೆ ಒಬ್ಬ ಸ್ಟಾರ್ ನಟನಿಗೆ ಎದುರಾದ ತಕ್ಷಣ ಇದು ಇಡೀ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದ ಸುದ್ದಿಯಾಗುತ್ತಿದೆ" ಎಂದು ಬೇಸರ ಹೊರಹಾಕಿದ್ದಾರೆ.
ಧ್ವನಿ ಇಲ್ಲದಿದ್ದರೆ ನಟನೆ ಅಪೂರ್ಣ
ಕಲಾವಿದರಿಗೆ ಅವರ ಧ್ವನಿಯೇ ಜೀವಾಳ ಎಂದಿರುವ ನಟಿ ರಕ್ಷಿತಾ, "ನಟ ಅಥವಾ ನಟಿ, ಯಾರೇ ಇರಲಿ, ಅವರ ಸ್ಟೇಟಸ್ ಏನೇ ಇರಲಿ, ಬೆಳ್ಳಿತೆರೆಯ ಮೇಲೆ ಒಬ್ಬ ಕಲಾವಿದ ಗುರುತಿಸಿಕೊಳ್ಳುವುದು ಕೇವಲ ಅವರ ಮುಖ ಅಥವಾ ನಟನೆಯಿಂದ ಮಾತ್ರವಲ್ಲ, ಅವರ ಧ್ವನಿಯಿಂದಲೂ ಹೌದು. ಒಬ್ಬ ನಟ ತಾನು ಕಷ್ಟಪಟ್ಟು ಇಷ್ಟಪಟ್ಟು ಮಾಡಿದ ಪಾತ್ರಕ್ಕೆ ತಾನೇ ಡಬ್ಬಿಂಗ್ ಮಾಡಲು ಅವಕಾಶ ನಿರಾಕರಿಸುವುದು ಸರಿಯಲ್ಲ. ಇದು ಆ ಕಲಾವಿದನಿಗೆ ಮಾಡುವ ಅನ್ಯಾಯ ಎಂದು ರಕ್ಷಿತಾ ಅಭಿಪ್ರಾಯಪಟ್ಟಿದ್ದಾರೆ.
ಸಂಭಾವನೆ ಜಗಳಕ್ಕೆ ಬೇರೆ ದಾರಿ ಹುಡುಕಿ, ಧ್ವನಿ ಕಸಿಯಬೇಡಿ
ಇತ್ತೀಚೆಗೆ ಕರಾವಳಿ ಸಿನಿಮಾದ ವಿವಾದವನ್ನು ಪರೋಕ್ಷವಾಗಿ ಉಲ್ಲೇಖಿಸಿರುವ ರಕ್ಷಿತಾ, ನಿರ್ಮಾಪಕರು ಮತ್ತು ಕಲಾವಿದರ ನಡುವೆ ಸಂಭಾವನೆಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಆದರೆ ಅದಕ್ಕೆ ನ್ಯಾಯಯುತವಾದ ಪರಿಹಾರ ಕಂಡುಕೊಳ್ಳಬೇಕು. ಅದನ್ನು ಬಿಟ್ಟು ಕಲಾವಿದನ ನಟನೆಯನ್ನು ಅಪೂರ್ಣಗೊಳಿಸುವಂತೆ ಅವರ ಡಬ್ಬಿಂಗ್ ಹಕ್ಕನ್ನು ಕಸಿಯುವುದು ಕಾನೂನುಬಾಹಿರ ಮತ್ತು ಅಮಾನವೀಯ ಎಂದಿದ್ದಾರೆ. ಈ ನಿಯಮ ಮತ್ತು ಈ ನ್ಯಾಯ ಚಿತ್ರರಂಗದ ಪ್ರತಿಯೊಬ್ಬ ಕಲಾವಿದನಿಗೂ ಸಮಾನವಾಗಿ ಅನ್ವಯವಾಗಬೇಕು ಎಂದು ಹೇಳುವ ಮೂಲಕ ರಕ್ಷಿತಾ ಅವರು ಚಿತ್ರರಂಗದ ದೊಡ್ಡ ತಲೆಗಳಿಗೆ ಟಾಂಗ್ ಕೊಟ್ಟಿದ್ದಾರೆ. ರಕ್ಷಿತಾ ಅವರ ಈ ಪೋಸ್ಟ್ ವೈರಲ್ ಆಗಿದ್ದು, ಡಬ್ಬಿಂಗ್ ವಿವಾದಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.













Click it and Unblock the Notifications