ಚಿನ್ನದ ಬೆಲೆ ಇಳಿಕೆ ಬೆನ್ನಲ್ಲೇ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಚಿನ್ನದ ವ್ಯಾಪಾರಿಗಳು; ಕಾರಣವೇನು, ಪತ್ರದಲ್ಲಿ ಏನಿದೆ ?
ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದ್ದು, ಚಿನ್ನದ ವ್ಯಾಪಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಚಿನ್ನದ ಬೆಲೆಯು ವಿಪರೀತವಾಗಿ ಹೆಚ್ಚಳವಾಗುವ ಸಂದರ್ಭದಲ್ಲಿ ಜನ ಅತೀ ಹೆಚ್ಚು ಚಿನ್ನ ಖರೀದಿ ಮಾಡುತ್ತಿದ್ದರು, ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಒಂದು ವರ್ಷದ ಅವಧಿಗೆ ಚಿನ್ನ ಖರೀದಿ ಮಾಡಬೇಡಿ ಎಂದಿದ್ದರು. ಅದರ ಲಾಭವು ಇದೀಗ ಸಿಗುತ್ತಿದೆ. ಹೀಗಾಗಿ, ಚಿನ್ನಾಭರಣ ವ್ಯಾಪಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಚಿನ್ನ ಖರೀದಿ ಮಾಡುವುದನ್ನು ಕಡಿಮೆ ಮಾಡುವಂತೆ ದೇಶದ ಜನರಿಗೆ ಈ ಹಿಂದೆ ಮಾಡಿದ ಮನವಿಗೆ ಕೃತಜ್ಞತೆ ಸಲ್ಲಿಸಿ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (CTI) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಈ ಪತ್ರದಲ್ಲಿ ಮೋದಿ ಅವರ ಸಲಹೆಯಿಂದ ಲಕ್ಷಾಂತರ ಆಭರಣ ವ್ಯಾಪಾರಿಗಳು, ವ್ಯಾಪಾರಿಗಳು ಮತ್ತು ಹೂಡಿಕೆದಾರರನ್ನು ಭಾರೀ ನಷ್ಟದಿಂದ ಪಾರಾಗಿದ್ದಾರೆ ಅಂತ ಹೇಳಲಾಗಿದೆ.

ಮುಂದುವರಿದು ನವೆಂಬರ್ 22 ರಂದು ಬರೆದ ಪತ್ರದಲ್ಲಿ, ಪ್ರಧಾನ ಮಂತ್ರಿಯವರ ಸಲಹೆಯು ದೇಶದ ರಕ್ಷಣೆ ದೃಷ್ಟಿಯಿಂದ ನೀಡಲಾಗಿತ್ತು. ಈ ಸಲಹೆಯನ್ನು ನೀಡಿದಾಗ ಟೀಕೆಗಳನ್ನು ಎದುರಿಸಬೇಕಾಯಿತು, ಆದರೆ ವ್ಯಾಪಾರಿಗಳು ಚಿನ್ನದ ಬೆಲೆಯಲ್ಲಿನ ಕುಸಿತದ ನಂತರ ಗಣನೀಯ ಆರ್ಥಿಕ ನಷ್ಟವನ್ನು ತಪ್ಪಿಸಲು ಸಹಾಯ ಮಾಡಿದೆ ಎಂದು ಸಿಟಿಐ ಹೇಳಿದೆ.
'ನಿಮ್ಮ ದೂರದೃಷ್ಟಿಯು ಲಕ್ಷಾಂತರ ಆಭರಣ ವ್ಯಾಪಾರಿಗಳು ಮತ್ತು ಹೂಡಿಕೆದಾರರನ್ನು ಸಾಲಕ್ಕೆ ಬೀಳದಂತೆ ಉಳಿಸಿದೆ ಎಂಬ ಶೀರ್ಷಿಕೆಯೊಂದಿಗೆ ಪತ್ರ ಬರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಮುಂದಿನ ಒಂದು ವರ್ಷದ ವರೆಗೆ ದಯವಿಟ್ಟು ಚಿನ್ನ ಖರೀದಿ ಮಾಡಬೇಡಿ ಎಂದಿದ್ದರು. ಆಗ ಚಿನ್ನದ ಬೆಲೆ ಪ್ರತಿ ಕಿಲೋಗ್ರಾಂಗೆ 1.90 ಕೋಟಿ ರೂ.ಗಳಷ್ಟಿತ್ತು, ಆದರೆ ಅದರ ಬೆಲೆ ಈಗ ಪ್ರತಿ ಕಿಲೋಗ್ರಾಂಗೆ 1.25 ಕೋಟಿ ರೂ.ಗಳಿಗೆ ಇಳಿದಿದೆ, ಇದು ಪ್ರತಿ ಕಿಲೋಗ್ರಾಂಗೆ 65 ಲಕ್ಷ ರೂ.ಗಳ ಕುಸಿತವಾಗಿದೆ ಎಂದು ಉಲ್ಲೇಖಿಸಲಾಗಿದೆ.
ನಷ್ಟದಿಂದ ತಪ್ಪಿಸಿದ್ದಕ್ಕೆ ಧನ್ಯವಾದ ಮೋದಿ
ಇನ್ನು ಚಿನ್ನದ ವ್ಯಾಪಾರಿಗಳು ನಮಗೆ ಆಗಬಹುದಾಗಿತ್ತ ನಷ್ಟದಿಂದ ನಮ್ಮನ್ನು ತಪ್ಪಿಸಿದ್ದಕ್ಕೆ ಧನ್ಯವಾದಗಳು ಪ್ರಧಾನಿ ನರೇಂದ್ರ ಮೋದಿ ಅಂತ ಹೇಳಿದ್ದಾರೆ. ಆ ಸಮಯದಲ್ಲಿ ವ್ಯಾಪಾರಿಗಳು ನಿಮ್ಮ ಸಲಹೆಯನ್ನು ನಿರ್ಲಕ್ಷಿಸಿ ಚಿನ್ನ ಖರೀದಿಸಿದ್ದರೆ, ಇಂದು ಪ್ರತಿ ಕಿಲೋಗ್ರಾಂಗೆ 65 ಲಕ್ಷ ರೂ. ನಷ್ಟವಾಗುತ್ತಿತ್ತು. ಲಕ್ಷಾಂತರ ಆಭರಣ ವ್ಯಾಪಾರಿಗಳು ಸಾಲಕ್ಕೆ ಸಿಲುಕಿ ದಿವಾಳಿತನ ಎದುರಿಸುತ್ತಿದ್ದರು ಎಂದು ಹೇಳಲಾಗಿದೆ.
ದೇಶಾದ್ಯಂತ ಲಕ್ಷಾಂತರ ಆಭರಣ ವ್ಯಾಪಾರಿಗಳು ಹಲವಾರು ತಿಂಗಳುಗಳ ಮೌಲ್ಯದ ದಾಸ್ತಾನುಗಳನ್ನು ಕಾಯ್ದುಕೊಂಡಿದ್ದಾರೆ ಮತ್ತು ಹಿಂದಿನ ಬೆಲೆಯಲ್ಲಿ ದಾಸ್ತಾನು ಖರೀದಿಸಿದ್ದರೆ ಕೋಟಿಗಟ್ಟಲೆ ನಷ್ಟ ಅನುಭವಿಸಬಹುದಿತ್ತು ಎಂದು ಸಿಟಿಐ ಹೇಳಿದೆ. ಪ್ರತಿ ಕಿಲೋಗ್ರಾಂಗೆ 1.90 ಕೋಟಿ ರೂ.ಗೆ ಚಿನ್ನದ ಬೆಲೆ ಇದ್ದಾಗ ಅವರು ತಮ್ಮ ದಾಸ್ತಾನನ್ನು ಖರೀದಿಸಿದ್ದರೆ, ಇಂದು ಅವರು ಕೋಟಿಗಟ್ಟಲೆ ನಷ್ಟ ಅನುಭವಿಸುತ್ತಿದ್ದರು. ಆನ್‌ಲೈನ್ ಮತ್ತು ಆಫ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಚಿನ್ನವನ್ನು ವ್ಯವಹರಿಸುವ ಸಣ್ಣ ವ್ಯಾಪಾರಿಗಳು ಮತ್ತು ಷೇರು ಮಾರುಕಟ್ಟೆ ಹೂಡಿಕೆದಾರರನ್ನು ಸಂಭಾವ್ಯ ನಷ್ಟದಿಂದ ರಕ್ಷಿಸಲಾಗಿದೆ ಎಂದೂ ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಯನ್ನು ವಿರೋಧಿಸಿದ್ದ ವ್ಯಾಪಾರಿಗಳು ಮತ್ತು ಆಭರಣ ವ್ಯಾಪಾರಿಗಳು ಸಹ ಈಗ ಅವರ ಸಲಹೆ ಪ್ರಯೋಜನಕಾರಿಯಾಗಿದೆ ಎಂದು ಒಪ್ಪಿಕೊಳ್ಳುತ್ತಿದ್ದಾರೆ ಎಂದು ಸಿಟಿಐ ಹೇಳಿಕೊಂಡಿದೆ. ಆಭರಣ ವ್ಯಾಪಾರಿಗಳು ಮತ್ತು ವ್ಯಾಪಾರಿಗಳು "ಆ ಸಮಯದಲ್ಲಿ ಸಲಹೆಯನ್ನು ವಿರೋಧಿಸಿದ್ದವರು ಈಗ ಪ್ರಧಾನಿ ಹೇಳಿದ್ದು ಸರಿ ಎಂದು ಒಪ್ಪಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಮದುವೆ ಸಮಯದಲ್ಲಿ ಲಾಭ
ಚಿನ್ನದ ಬೆಲೆ ಇಳಿಕೆಯಿಂದ ಸಾಮಾನ್ಯ ಗ್ರಾಹಕರಿಗೆ ಅನುಕೂಲವಾಗಿದೆ. 52 ಲಕ್ಷ ಮದುವೆಗಳು ನಡೆದ ಈ ಮದುವೆ ಋತುವಿನಲ್ಲಿ ಕುಟುಂಬಗಳು ಕಡಿಮೆ ಬೆಲೆಗೆ ಚಿನ್ನ ಖರೀದಿಸಲು ಸಾಧ್ಯವಾಗಿದೆ ಎಂದು ಸಂಸ್ಥೆ ತಿಳಿಸಿದೆ. ಅಲ್ಲದೆ ಮದುವೆ ಸಮಯದಲ್ಲಿನ ಚಿನ್ನದ ಬೆಲೆ ಇಳಿಕೆಯಿಂದ ಲಕ್ಷಾಂತರ ಕುಟುಂಬಗಳಿಗೆ ಲಾಭವಾಗಿದೆ ಎಂದೂ ಹೇಳಲಾಗಿದೆ.
ಅಲ್ಲದೆ, ಚಿನ್ನ ಮತ್ತು ಬೆಳ್ಳಿಯಂತಹ ಬೆಲೆಗಳಲ್ಲಿ ಏರಿಳಿತವಾಗುವ ಮಾರುಕಟ್ಟೆಗಳ ಬಗ್ಗೆ ಪ್ರಧಾನಿ ಕಾಲಕಾಲಕ್ಕೆ ಸೂಕ್ತ ಸಲಹೆ ನೀಡಬೇಕು. ಇದರಿಂದ ವ್ಯಾಪಾರಿಗಳು ಊಹಾಪೋಹಗಳಿಗೆ ಬಲಿಯಾಗದೆ, ಅಗತ್ಯಕ್ಕಿಂತ ಹೆಚ್ಚು ಚಿನ್ನ ಸಂಗ್ರಹಿಸುವುದನ್ನು ತಪ್ಪಿಸಬಹುದು ಎಂದು ಸಂಸ್ಥೆ ಒತ್ತಾಯಿಸಿದೆ.




Click it and Unblock the Notifications
