2027ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಆಡ್ತಾರಾ? ಕೊನೆಗೂ ಬಿಸಿಸಿಐ ಕೊಡ್ತು ಬಿಗ್ ಅಪ್ಡೇಟ್
ODI World Cup 2027: ಭಾರತೀಯ ಕ್ರಿಕೆಟ್‌ನ ಇಬ್ಬರು ದಿಗ್ಗಜರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು 2027ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಆಡಲಿದ್ದಾರಾ ಎನ್ನುವ ಪ್ರಶ್ನೆಗಳು ಎದ್ದಿವೆ. ಈ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆತಿಥ್ಯ ವಹಿಸಲಿರುವ ಈ ಮೆಗಾ ಟೂರ್ನಿಯಲ್ಲಿ ಈ ಅನುಭವಿ ಜೋಡಿಯನ್ನು ಉಳಿಸಿಕೊಳ್ಳಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀವ್ರ ಆಸಕ್ತಿ ಹೊಂದಿದೆ ಎಂದು ವರದಿಗಳು ತಿಳಿಸಿವೆ. ಆಟಗಾರರ ಫಿಟ್‌ನೆಸ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರೆಯುವ ಅವರ ಇಚ್ಛೆಯನ್ನು ಆಧರಿಸಿ ಈ ನಿರ್ಧಾರ ನಿಂತಿದೆ.

ಬಿಸಿಸಿಐ ಅಧಿಕಾರಿಗಳು ಹೇಳಿದ್ದೇನು?
ಇತ್ತೀಚೆಗಷ್ಟೇ ಮುಕ್ತಾಯಗೊಂಡ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿರೀಕ್ಷಿತ ಮಟ್ಟದ ರನ್ ಗಳಿಸಲು ವಿಫಲರಾಗಿದ್ದರು. ಇದರ ಬೆನ್ನಲ್ಲೇ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಕುರಿತು ಹಲವು ಊಹಾಪೋಹಗಳು ಎದ್ದಿದ್ದವು. ಆದರೆ ಈ ಎಲ್ಲಾ ವದಂತಿಗಳಿಗೆ ತೆರೆ ಎಳೆಯುವಂತೆ ಬಿಸಿಸಿಐ ಹಿರಿಯ ಅಧಿಕಾರಿಗಳು ತಂಡಕ್ಕೆ ಈ ಇಬ್ಬರು ಅನುಭವಿ ಆಟಗಾರರ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
'ರೋ-ಕೊ ಇಲ್ಲದೆ ಭಾರತ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ'
ವರದಿಗಳ ಪ್ರಕಾರ, ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು 2027ರ ವಿಶ್ವಕಪ್ ಗೆಲ್ಲುವ ಭಾರತದ ಅವಕಾಶಗಳನ್ನು ಹೆಚ್ಚಿಸುವಲ್ಲಿ ರೋಹಿತ್ ಮತ್ತು ಕೊಹ್ಲಿ ಪಾತ್ರ ನಿರ್ಣಾಯಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 'ದಕ್ಷಿಣ ಆಫ್ರಿಕಾದಲ್ಲಿ ನಮಗೆ ರೋಹಿತ್ ಮತ್ತು ವಿರಾಟ್ ಅವರ ಅಗತ್ಯವಿದೆ. ಅವರಿಲ್ಲದೆ ನಾವು ಅಲ್ಲಿ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ. ದಕ್ಷಿಣ ಆಫ್ರಿಕಾದ ಪಿಚ್‌ಗಳಲ್ಲಿ ಆಡಿದ ಅವರ ಅಪಾರ ಅನುಭವ ತಂಡಕ್ಕೆ ಖಂಡಿತವಾಗಿಯೂ ನೆರವಾಗಲಿದೆ,' ಎಂದು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಭವಿಷ್ಯದ ಕುರಿತು ತಕ್ಷಣವೇ ಯಾವುದೇ ನಿರ್ಧಾರ ತೆಗೆದುಕೊಳ್ಳುವಂತೆ ಈ ಇಬ್ಬರು ಆಟಗಾರರ ಮೇಲೆ ಬಿಸಿಸಿಐ ಯಾವುದೇ ಒತ್ತಡ ಹೇರುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಬದಲಾಗಿ ಟೂರ್ನಿಯ ವೇಳೆಗೆ ಅವರ ಲಭ್ಯತೆ, ಫಿಟ್‌ನೆಸ್ ಮತ್ತು ಆಡುವ ಉತ್ಸಾಹವೇ ಪ್ರಮುಖ ಮಾನದಂಡವಾಗಲಿದೆ.
'ಕೊಹ್ಲಿ, ರೋಹಿತ್ ಸೇವೆ ಅತ್ಯಗತ್ಯ'
ಮತ್ತೊಬ್ಬ ಬಿಸಿಸಿಐ ಅಧಿಕಾರಿ ಕೂಡ ತಂಡದ ವಿಶ್ವಕಪ್ ಯೋಜನೆಯಲ್ಲಿ ಈ ಜೋಡಿಯ ಮಹತ್ವವನ್ನು ಒತ್ತಿಹೇಳಿದ್ದಾರೆ. 'ಇವರಿಬ್ಬರೂ ಕ್ರಿಕೆಟ್ ಲೋಕದ ದಿಗ್ಗಜರು. ತಾವು ಎಷ್ಟು ಕಾಲ ಕ್ರಿಕೆಟ್ ಆಡಬೇಕು ಎಂಬುದನ್ನು ಅವರೇ ನಿರ್ಧರಿಸುತ್ತಾರೆ. ಆದರೆ ಭಾರತದ ವಿಶ್ವಕಪ್ ಅಭಿಯಾನದ ದೃಷ್ಟಿಯಿಂದ ನೋಡಿದರೆ, 2027ರಲ್ಲಿ ನಮಗೆ ಅವರ ಸೇವೆ ಅತ್ಯಗತ್ಯ. ದಕ್ಷಿಣ ಆಫ್ರಿಕಾದಂತಹ ಸವಾಲಿನ ಪಿಚ್‌ಗಳಲ್ಲಿ ಅವರು ಅತ್ಯಂತ ಪ್ರಮುಖ ಪಾತ್ರ ವಹಿಸಲಿದ್ದಾರೆ ಮತ್ತು ಅಲ್ಲಿನ ಅವರ ಅನುಭವ ತಂಡಕ್ಕೆ ಅಮೂಲ್ಯವಾಗಿದೆ,' ಎಂದು ಅವರು ಹೇಳಿದ್ದಾರೆ.
ನಿವೃತ್ತಿ ವದಂತಿಗಳಿಗೆ ತೆರೆ ಎಳೆದ ಬಿಸಿಸಿಐ
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಈಗಾಗಲೇ ಟಿ20 ಅಂತಾರಾಷ್ಟ್ರೀಯ ಹಾಗೂ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ ಪ್ರಸ್ತುತ ಅವರು ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 2027ರ ಏಕದಿನ ವಿಶ್ವಕಪ್‌ಗೆ ಇನ್ನೂ ಸಾಕಷ್ಟು ಸಮಯ ಇದ್ದರೂ, ಮತ್ತೊಂದು ಐಸಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳುವ ಗುರಿ ಹೊಂದಿರುವ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್, ದೇಶದ ಅತ್ಯಂತ ಯಶಸ್ವಿ ವೈಟ್-ಬಾಲ್ ಕ್ರಿಕೆಟಿಗರ ಅನುಭವವನ್ನು ಬಳಸಿಕೊಳ್ಳಲು ಉತ್ಸುಕವಾಗಿದೆ.
ಒಟ್ಟಿನಲ್ಲಿ ಮುಂಬರುವ ಏಕದಿನ ವಿಶ್ವಕಪ್‌ಗೂ ಮುನ್ನ ಈ ಇಬ್ಬರು ದಿಗ್ಗಜರು ಈ ಮಾದರಿಗೂ ವಿದಾಯ ಹೇಳಲಿದ್ದಾರೆ ಎಂದು ಹಬ್ಬಿದ್ದ ವದಂತಿಗೆ ಬಿಸಿಸಿಐ ಇದೀಗ ತೆರೆ ಎಳೆಯುವ ಕೆಲಸವನ್ನು ಮಾಡಿದೆ. ಈ ಸುದ್ದಿ ಕೇಳಿತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.


Click it and Unblock the Notifications
