ಮೂಗುತಿ, ಕಾಲುಂಗುರ, ಕಾಲ್ಗೆಜ್ಜೆ ಕೇವಲ ಸೌಂದರ್ಯಕ್ಕಾಗಿ ಅಲ್ಲ! ಇದನ್ನು ಧರಿಸುವುದರ ಹಿಂದಿದೆ ಆರೋಗ್ಯದ ಗುಟ್ಟು
ಭಾರತದಲ್ಲಿ ಪ್ರತಿ ಆಚರಣೆಯ ಹಿಂದೆ ಒಂದೊಂದು ಸಂಪ್ರದಾಯವಿದೆ. ಇಲ್ಲಿ ಮಹಿಳೆಯರು ಧರಿಸುವ ಆಭರಣದ ಹಿಂದೆಯೂ ಸಂಪ್ರದಾಯ ಅಡಗಿದೆ. ಮಹಿಳೆಯರು ಶತಮಾನಗಳಿಂದ ಮೂಗುತಿಗಳು, ಕಾಲ್ಗೆಜ್ಜೆ ಮತ್ತು ಕಾಲ್ಬೆರಳ ಉಂಗುರಗಳನ್ನು ಧರಿಸುವುದು ನಮ್ಮ ಸಂಪ್ರದಾಯ. ಮಾತ್ರವಲ್ಲ ಸಾಂಸ್ಕೃತಿಕ, ಭಾವನಾತ್ಮಕ ಮತ್ತು ಸಾಂಕೇತಿಕ ಕಾರಣಗಳಿಗಾಗಿಯೂ ಇವುಗಳನ್ನು ಧರಿಸುತ್ತಾರೆ. ಈ ಆಭರಣಗಳನ್ನು ಕೇವಲ ಫ್ಯಾಷನ್ ಉದ್ದೇಶಗಳಿಗಾಗಿ ಮಾತ್ರ ಹಾಕುವುದಿಲ್ಲ. ಅವು ಮದುವೆ, ಆರೋಗ್ಯ ನಂಬಿಕೆಗಳು ಮತ್ತು ಆಧ್ಯಾತ್ಮಿಕತೆಗೆ ಸಂಬಂಧಿಸಿವೆ. ಕಾಲ ಬದಲಾದಂತೆ ಅನೇಕ ಸಂಪ್ರದಾಯಗಳು ಕೂಡಾ ಬದಲಾಗುತ್ತಿವೆ. ಆದರೆ ಈ ಆಭರಣಗಳು ಇನ್ನೂ ಭಾರತೀಯ ಸಂಸ್ಕೃತಿಯಲ್ಲಿ ವಿಶೇಷ ಸ್ಥಾನವನ್ನು ಹೊಂದಿವೆ.
ಮೂಗುತಿ:
ಮೂಗುತಿ ಬೇರೆ ಬೇರೆ ಡಿಸೈನ್‌ಗಲ್ಲಿ ಲಭ್ಯವಿರುತ್ತದೆ. ಅತಿ ಸಣ್ಣ ಮೂಗುತಿಯಿಂದ ಹಿಡಿದು ದೊಡ್ಡ ದೊಡ್ಡ ಮೂಗು ನತ್ತಿನವರೆಗಿನ ಆಭರಣವನ್ನು ಮಹಿಳೆಯರು ಧರಿಸುತ್ತಾರೆ. ಇದು ಅತ್ಯಂತ ಸುಂದರವಾದ ಆಭರಣಗಳಲ್ಲಿ ಒಂದು ಎಂದರೆ ತಪ್ಪಲ್ಲ. ಹುಡುಗಿಯರು ಯಾವ ಸಂದರ್ಭದಲ್ಲಿ ಮೂಗುತಿ ಹಾಕದಿದ್ದರೂ, ಮದುವೆ ವೇಳೆ ಮಾತ್ರ ವಧುವಿನ ಸಂಪೂರ್ಣ ಅಲಂಕಾರದಲ್ಲಿರುವಾಗ ಮೂಗುತಿ ಹಾಕುವುದು ಪದ್ದತಿ. ಇದು ಮದುವೆ ಶೃಂಗಾರದ ಪ್ರಮುಖ ಭಾಗ.

ಇನ್ನು ಅನೇಕ ಸಾಂಪ್ರದಾಯಿಕ ನಂಬಿಕೆಗಳು ಮೂಗುತಿಗೂ ಮಹಿಳೆಯರ ಆರೋಗ್ಯಕ್ಕೂ ಸಂಬಂಧವಿದೆ ಎಂದು ಹೇಳುತ್ತದೆ. ಆಯುರ್ವೇದದಿಂದ ಪ್ರೇರಿತವಾದ ಹಳೆಯ ಸಾಂಸ್ಕೃತಿಕ ವಿಚಾರಗಳ ಪ್ರಕಾರ, ಎಡ ಮೂಗಿನ ಹೊಳ್ಳೆಯನ್ನು ಚುಚ್ಚುವುದು ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯವನ್ನು ಹೆಚ್ಚು ಮಾಡುತ್ತದೆ ಎನ್ನಲಾಗಿದೆ. ಆಧುನಿಕ ವೈದ್ಯಕೀಯ ವಿಜ್ಞಾನವು ಇದನ್ನು ಬಲವಾಗಿ ಒಪ್ಪುವುದಿಲ್ಲವಾದರೂ ಅನೇಕ ಸಮುದಾಯಗಳಲ್ಲಿ ಈ ನಂಬಿಕೆ ಅರ್ಥಪೂರ್ಣವಾಗಿ ಉಳಿದುಕೊಂಡು ಬಂದಿದೆ.
ಮೂಗುತಿ ಭಾವನಾತ್ಮಕ ಮೌಲ್ಯವನ್ನೂ ಹೊಂದಿದೆ. ಕೆಲವು ಕುಟುಂಬಗಳಲ್ಲಿ, ಇದು ಕುಟುಂಬದ ಹೆಮ್ಮೆ, ಸಂಪ್ರದಾಯ. ಆದರೆ ಈಗಿನ ಕಾಲದಲ್ಲಿ ಅನೇಕ ಮಹಿಳೆಯರು ಮೂಗುತಿಗಳನ್ನು ಫ್ಯಾಷನ್‌ನ ಭಾಗವಾಗಿ ಧರಿಸುತ್ತಾರೆ. ಇನ್ನು ಕೆಲವರು ಫ್ಯಾಷನ್ ಜೊತೆಗೆ ಅವುಗಳ ಸಾಂಸ್ಕೃತಿಕ ಮಹತ್ವವನ್ನು ಒಪ್ಪುವುದೂ ಇದೆ.
ಕಾಲ್ಗೆಜ್ಜೆ ಭಾರತೀಯ ಮಹಿಳೆಯರು ಧರಿಸುವ ಮತ್ತೊಂದು ಸಾಂಪ್ರದಾಯಿಕ ಆಭರಣ. ಈ ಗೆಜ್ಜೆಯಿಂದ ಹೊರ ಬರುವ ಶಬ್ದ ಹಿಂದಿನಿಂದಲೂ ಸೊಬಗು ಮತ್ತು ಸ್ತ್ರೀತ್ವದೊಂದಿಗೆ ಸಂಬಂಧ ಹೊಂದಿದೆ. ಹಳೆಯ ಕಾಲದಲ್ಲಿ, ಗೆಜ್ಜೆ ಶಬ್ದ ಬಂತು ಎಂದರೆ ಯಾರೋ ಬಂದರು ಎನ್ನುವುದನ್ನು ಗುರತಿಸಬಹುದಾಗಿತ್ತು. ಗೆಜ್ಜೆ ಯಾವತ್ತೂ ಬೆಳ್ಳಿಯದ್ದೇ ಆಗಿರುತ್ತದೆ. ಸೊಂಟದಿಂದ ಕೆಳಗೆ ಚಿನ್ನ ಧರಿಸಬಾರದು ಎನ್ನುವ ನಂಬಿಕೆ ನಮ್ಮಲ್ಲಿ ಇದೆ. ಹಾಗಾಗಿ ಗೆಜ್ಜೆಯನ್ನು ಬೆಳ್ಳಿಯಿಂದಲೇ ಮಾಡಲಾಗುತ್ತದೆ. ಈ ಬೆಳ್ಳಿ ಗೆಜ್ಜೆಯಿಂದ ಬರುವ ಸದ್ದು ಸಕಾರಾತ್ಮಕ ಶಕ್ತಿಯೊಂದಿಗೆ ಸಂಬಂಧ ಹೊಂದಿದೆ.
ಕಾಲ್ಗೆಜ್ಜೆಗಳನ್ನು ಕಣಕಾಲಿನ ಸುತ್ತ ಧರಿಸಲಾಗುತ್ತದೆ. ಇದು ಕಾಲಿನ ಚರ್ಮದ ಮೇಲೆ ಚಲಿಸುವ ಮೂಲಕ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ ಅಥವಾ ದೇಹವನ್ನು ಶಕ್ತಿಯುತವಾಗಿರಿಸುತ್ತದೆ ಎಂದು ಹೇಳಲಾಗುತ್ತದೆ. ಈ ವಿಚಾರಗಳು ವೈದ್ಯಕೀಯ ವಿಜ್ಞಾನಕ್ಕಿಂತ ಸಾಂಸ್ಕೃತಿಕ ಚಿಂತನೆಯನ್ನು ಆಧರಿಸಿವೆ.
ಕಾಲುಂಗುರು:
ಭಾರತದಲ್ಲಿ ಕಾಲಿನ ಬೆರಳುಗಳಿಗೂ ಉಂಗುರ ಹಾಕುವ ಪದ್ದತಿ ಇದೆ. ಕಾಲಿನ ಬೆರಳಿಗೆ ಉಂಗುರವನ್ನು ಎಲ್ಲರೂ ಹಾಕುವಂತಿಲ್ಲ.ಮದುವೆಯಾದವರು ಮಾತ್ರ ಕಾಲುಂಗುರು ಹಾಕುವುದು ಪದ್ದತಿ. ಕಾಲುಂಗರವನ್ನು ಮುತ್ತೈದೆ ಶೃಂಗಾರದ ಒಂದು ಭಾಗ ಎಂದು ಕೂಡಾ ಕರೆಯಲಾಗುತ್ತದೆ.
ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯಕ್ಕೆ ಕಾಲುಂಗುರ ಪ್ರಯೋಜನಕಾರಿಯಾಗಿದೆ ಎನ್ನಲಾಗಿದೆ. ಈ ಕಾಲುಂಗುರು ಗರ್ಭಾಶಯ ಮತ್ತು ಋತುಚಕ್ರಕ್ಕೆ ಸಂಬಂಧಿಸಿದ ಕೆಲವು ನರಗಳ ಮೇಲೆ ಸೌಮ್ಯ ಒತ್ತಡವನ್ನು ಹಾಕುತ್ತವೆ. ಇದು ಫರ್ಟಿಲಿಟಿ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಈ ನಂಬಿಕೆಗಳು ಸಾಂಸ್ಕೃತಿಕ ಸಂಪ್ರದಾಯಗಳನ್ನು ಆಧರಿಸಿವೆ. ಆಧುನಿಕ ವೈದ್ಯಕೀಯ ವಿಜ್ಞಾನ ಇದನ್ನು ಒಪ್ಪುವುದಿಲ್ಲ. ಆದರೂ ಭಾರತೀಯ ಸಂಸ್ಕೃತಿಯಲ್ಲಿ ಕಾಲುಂಗುರಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ. ಅನೇಕ ಮಹಿಳೆಯರಿಗೆ, ಅವು ಕೇವಲ ಆಭರಣಗಳಲ್ಲ, ಸಂಪ್ರದಾಯ, ಮದುವೆ ಮತ್ತು ಸಾಂಸ್ಕೃತಿಕ ಗುರುತಿನ ಸಂಕೇತ.
ಆಭರಣಗಳಿಗಿಂತ ಹೆಚ್ಚು:
ಮೂಗುತಿಗಳು, ಕಾಲ್ಗೆಜ್ಜೆ, ಕಾಲುಂಗುರ ಕೇವಲ ಆಭರಣಗಳಲ್ಲ. ಅವು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಾಗಿಬರುವ ಸಂಸ್ಕೃತಿ, ಮೌಲ್ಯಗಳು ಮತ್ತು ನಂಬಿಕೆಗಳ ಕಥೆಗಳನ್ನು ಹೇಳುತ್ತವೆ. ಈ ಸಂಪ್ರದಾಯಗಳು ಭಾವನೆಗಳು, ನೆನಪುಗಳನ್ನು ಒಳಗೊಂಡಿರುತ್ತವೆ. ಇಂದು ಅನೇಕ ಮಹಿಳೆಯರು ಅವುಗಳನ್ನು ಸಂಪ್ರದಾಯ ಮತ್ತು ಫ್ಯಾಷನ್ ಎರಡರ ಭಾಗವಾಗಿಯೂ ಧರಿಸುತ್ತಾರೆ. ಇತರರು ಅವು ಹೇಗೆ ಕಾಣುತ್ತವೆ ಎನ್ನುವುದನ್ನು ನೋಡುವುದಕ್ಕೆ ಧರಿಸಿದರೆ ಇನ್ನು ಕೆಲವರು ನಮ್ಮ ಸಂಪ್ರದಾಯದ ಭಾಗ ಎನ್ನುವ ಕಾರಣಕ್ಕೇ ಹಾಕಿಕೊಳ್ಳುತ್ತಾರೆ.














Click it and Unblock the Notifications