ಆರೋಗ್ಯ, ಆಹಾರ, ಅಕ್ಷರ ಮಾರುವ ಸರಕಲ್ಲ: ಸತ್ಯ ಸಾಯಿ ಗ್ರಾಮದಲ್ಲಿ ಓಪನ್ ಹಾರ್ಟ್ ಸರ್ಜರಿಯೂ ಫ್ರೀ

ವಿದ್ಯೆ, ಅನ್ನ ದಾನ ಮಹಾದಾನ ಎಂದು ನಂಬಿದವರು ಭಾರತೀಯರು. ಅಲ್ಲದೇ ಚಿಕಿತ್ಸೆ ನೀಡಿ, ಜೀವ ಉಳಿಸುವ ವೈದ್ಯರನ್ನು ನಾರಾಯಣನ ಸ್ವರೂಪ ಎನ್ನುವ ಎಲ್ಲರ ನಂಬಿಕೆ. ಆದರೆ, ಕಾಲ ಬದಲಾದಂತೆ ವಿದ್ಯೆ ಮಾರಾಟದ ಸರಕಾಗಿದೆ. ಎದೆ ಹಿಡಿದಿದೆ ಎಂದು ಆಸ್ಪತ್ರೆಗೆ ಹೋದರೆ ಸಾಕು, ಹೃದಯ ಸಂಬಂಧಿ ಕಾಯಿಲೆ ಇದೆ. ನಾಳೆಯೇ ಆಪರೇಷನ್ ಆಗಬೇಕೆಂದು ದಾಖಲಿಸಿಕೊಳ್ಳುತ್ತಾರೆ. ಮತ್ತೊಂದು ಕಡೆ ಪರೀಕ್ಷಿಸಿದರೆ ಯಾವ ಹೃದಯದ ಕಾಯಿಲೆಯೂ ಇಲ್ಲವೆಂಬ ವರದಿ ನೀಡುತ್ತಾರೆ.

ಲಕ್ಷ, ಕೋಟಿಗಟ್ಟಲೆ ಫೀಸ್ ಕೊಟ್ಟು ವೈದ್ಯ ಪದವಿ ಪಡೆದಿರುವ ವೈದ್ಯರಿಗೆ ಅದನ್ನು ದುಡಿಯೋದು ಅನಿವಾರ್ಯ. ಒಟ್ಟಿನಲ್ಲಿ ಶಿಕ್ಷಣ, ಆರೋಗ್ಯ ಎರಡೂ ಮಾರಾಟದ ಸರಕಾಗಿರುವುದು ಸಮಾಜದಲ್ಲಿ ಪ್ರಾಮಾಣಿಕತೆ, ದಕ್ಷರು ಸಿಗುವುದು ದುರ್ಲಭವಾಗುವಂತೆ ಮಾಡಿದೆ. ಆರೋಗ್ಯ ಕ್ಷೇತ್ರವೂ ದುಡ್ಡು ಮಾಡೋ ಉದ್ಯಮ ಆಗಿರುವುದರಿಂದ ಸೂಜಿಯಿಂದ ತೆಗೆಯಬಹುದಾದ ಸಣ್ಣ ಆರೋಗ್ಯ ಸಮಸ್ಯೆಗೂ ಸರ್ಜರಿಯೇ ಆಗಬೇಕೆಂದು ಪಟ್ಟು ಹಿಡಿಯುತ್ತಾರೆ ವೈದ್ಯರು. ಇವೆಲ್ಲವುಗಳಿಂದ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಶಿಕ್ಷಣ ಹಾಗೂ ಆರೋಗ್ಯ ಕೈಗೆ ಎಟುಕುವುದು ಸುಲಭವಲ್ಲ.

Sathya Sai Grama

ಆರೋಗ್ಯ, ಶಿಕ್ಷಣವೇ ಸಿಗದಿದ್ದರೆ ಮನುಷ್ಯನಿಗೆ ಉಳಿದೆಲ್ಲವೂ ಸಿಕ್ಕರೆಷ್ಟು, ಬಿಟ್ಟರೆಷ್ಟು? ಕಾಸಿಲ್ಲ ಅನ್ನೋ ಒಂದೇ ಕಾರಣಕ್ಕೆ ಯಾರೂ ಇಂಥ ಅಗತ್ಯತೆಯಿಂದ ವಂಚಿತರಾಗಬಾರದೆಂದು ಸದ್ಗುರು ಸಾಯಿ ಮಧುಸೂದನ್ ಅವರು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸ್ಥಾಪಿಸಿ, ಸಂಕಲ್ಪ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಆಹಾರ ಮೂರೂ ಅರ್ಹರಿಗೆ ತಲುಪಿಸುವಂತೆ ಮಾಡಲು ಯುವ ಪಡೆಯನ್ನು ಸನ್ನದ್ಧಗೊಳಿಸಿದ್ದಾರೆ. ಇಲ್ಲಿ ಪ್ರಾಥಮಿಕ ಶಿಕ್ಷಣದಿಂದ ವೈದ್ಯ ಶಿಕ್ಷಣದವರೆಗೂ ಪೂರ್ತಿ ಉಚಿತ. ಅಷ್ಟೇ ಅಲ್ಲ ತೆರೆದ ಹೃದಯ ಚಿಕಿತ್ಸೆ ಮಾಡಿಸುವುದಾದರೂ ಇಲ್ಲಿರುವ ಅತ್ಯಾಧುನಿಕ ಯಂತ್ರೋಪಕರಣವುಳ್ಳ, ಸುಸಜ್ಜಿತ ಆಸ್ಪತ್ರೆಗಳಲ್ಲಿ, ಬಹಳ ವರ್ಷಗಳ ಕಾಲ ಅನುಭವ ಇರುವ ತಜ್ಞ ವೈದ್ಯರು ನೀಡುವ ಚಿಕಿತ್ಸೆಗೆ ಒಂದು ಪೈಸೆಯೂ ತೆಗುದಕೊಳ್ಳುವುದಿಲ್ಲ. ಮತ್ತೊಂದು ವಿಶೇಷವೆಂದರೆ ಇಲ್ಲಿರುವ ಪ್ರತಿಯೊಂದೂ ಚಿಕಿತ್ಸೆ, ಔಷಧಕ್ಕೆ ಯಾವುದೇ ಹಣ ನೀಡಬೇಕಾಗಿಲ್ಲ. ಇಲ್ಲಿ ಬಿಲ್ಲಿಂಗ್ ಕೌಂಟರ್‌ಗಳೇ ಇಲ್ಲವೆನ್ನುವುದು ಮತ್ತೊಂದು ವಿಶೇಷ.

ಯಾರು ಈ ಸೌಲಭ್ಯ ಪಡೆಯಬಹುದು?

ಫ್ರೀ ಚಿಕಿತ್ಸೆ ಪಡೆಯಲು ಯಾವುದು ಬಿಪಿಎಲ್ ಕಾರ್ಡ್ ತೋರಿಸುವ ಅಗತ್ಯವಿಲ್ಲ. ಯಾವ ಜಾತಿ, ಮತ, ಧರ್ಮದ ಬಂಧನವವಿಲ್ಲ. ಯಾರಿಗೆ ನೋವು ಕಾಡುತ್ತಿದೆಯೋ ಅವರು ಬಂದು ಅಗತ್ಯ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಿ, ನಿಜವಾಗಲೂ ಆಗತ್ಯವಿದ್ದರೆ ಮಾತ್ರ ಶಸ್ತ್ರ ಚಿಕಿತ್ಸೆ ಇಲ್ಲವೆಂದರೆ ಗುಣಮುಖರಾಗಲು ಔಷಧ ಪಡೆದುಕೊಂಡು ಹೋಗಬಹುದು. ದೂರದೂರುಗಳಿಂದಲೂ ಜನರು ಆಗಮಿಸುತ್ತಿದ್ದು, ಅವರಿಗೆ ಇಲ್ಲಿ ವಸ್ತಿ ವ್ಯವಸ್ಥೆಯೂ ಇದೆ.

Sathya Sai Grama

ಇವರು ನೀಡುವ ಔಷಧಕ್ಕೆ ಸೂಕ್ತ ಬಿಲ್ ನೀಡಲಾಗುತ್ತದೆ. ನೀಡುವ ಬಿಲ್‌ನಲ್ಲಿ ಔಷಧದ ಎಕ್ಸ್‌ಪೈರಿ ದಿನಾಂಕವನ್ನೂ ಸ್ಪಷ್ಟವಾಗಿ ನಮೂದಿಸಲಾಗಿರುತ್ತದೆ. ಯಾವುದೇ ಕಾರಣಕ್ಕೂ ಎಲ್ಲಿಯೂ ಜನರಿಗೆ ತಪ್ಪು ತಿಳುವಳಿಕೆ ಆಗಬಾರದೆಂದು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ, ಇಲ್ಲಿಂದ ಔಷಧಿಗಳನ್ನು ಕೊಂಡೋಯ್ದ ಬೇರೆ ಕಡೆ ಮಾರುತ್ತಿರುವುದೂ ಇವರ ಗಮನಕ್ಕೆ ಬಂದಿತ್ತು. ಆ ಕಾರಣದಿಂದ ದಿನನಿತ್ಯ ಔಷಧಿ ತೆಗೆದುಕೊಳ್ಳುವವರು, ತಾವು ಬಳಿಸಿದ ಮಾತ್ರೆಯ ಖಾಲಿ ಶೀಟ್ ತಂದು ಕೊಟ್ಟರೆ ಮಾತ್ರ ಮತ್ತೆ ಮಾತ್ರೆಗಳನ್ನು ಕೊಟ್ಟು ಕಳುಹಿಸಲಾಗುತ್ತದೆ. ನೀಡುವ ಬಿಲ್‍‌ನಲ್ಲಿ ಸ್ಪಷ್ಟವಾಗಿ ಔಷಧಿಗೆ ತಗಲುವ ವೆಚ್ಚವೂ ನಮೂದಿಸಲಾಗಿರುತ್ತದೆ. ಆದರೆ, ನೀಡುಬೇಕಾದ ಹಣ ಮಾತ್ರ ಸದಾ ಶೂನ್ಯ. ಸತ್ಯ ಸಾಯಿ ಟ್ರಸ್ಟ್ ಪೂರ್ತಿ ಹಣವನ್ನೂ ವ್ಯಯಿಸುತ್ತದೆ.

ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ

ಇದುವರೆಗೆ ಎಷ್ಟು ಜನ ಚಿಕಿತ್ಸೆ ಪಡೆದಿದ್ದಾರೆ?

2021ರಲ್ಲಿ ಈ ಸೇವೆ ಆರಂಭಿಸಿದ ಈ 360 ಬೆಡ್ ಸಾಮರ್ಥ್ಯದ ಈ ಆಸ್ಪತ್ರೆಯಲ್ಲಿ ಸುಮಾರು ಏಳು ಅತ್ಯಾಧುನಿಕ ಸೌಲಭ್ಯವುಳ್ಳ ಶಸ್ತ್ರ ಚಿಕಿತ್ಸಾ ಕೊಠಡಿಗಳಿವೆ, 56 ತುರ್ತು ನಿಗಾ ಘಟಕ ಹಾಸಿಗೆಗಳಿವೆ. ಇದುವರೆಗೂ ಸುಮಾರು 1.45 ದಶಲಕ್ಷ ಮಂದಿ ಹೊರ ರೋಗಿಗಳಾಗಿ, 66 ಸಾವಿರ ಜನರು ಒಳ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ. 41,800 ಶಸ್ತ್ರ ಚಿಕಿತ್ಸೆಗಳು ನಡೆದಿದ್ದು, 8 ಸಾವಿರಕ್ಕೂ ಹೆಚ್ಚು ಮಕ್ಕಳು ಜನಿಸಿವೆ. ದೇಶದಲ್ಲಿಯೇ ಉಚಿತ ಚಿಕಿತ್ಸೆ ನೀಡುತ್ತಿರುವ ಅತ್ಯಂತ ದೊಡ್ಡ ಆಸ್ಪತ್ರೆ ಎಂಬ ಕೀರ್ತಿಗೆ ಪಾತ್ರವಾಗಿದೆ.

ಸೇವಾ ಮನೋಭಾವದಿಂದಲೇ ಆರಂಭವಾಗಿರುವ ಈ ಆಸ್ಪತ್ರೆಯಲ್ಲಿ ಯಾವುದೇ ಕಾರಣಕ್ಕೂ ಗುಣಮಟ್ಟದೊಂದಿಗೆ ರಾಜೀ ಆಗುವ ಪ್ರಶ್ನೆಯೇ ಇಲ್ಲ. ಇಲ್ಲಿರುವ ನವಜಾತ ಶಿಶು ತುರ್ತು ನಿಗಾ ಘಟಕವಾಗಿರಲಿ, ಎಂಆರ್‌ಐ ಯಂತ್ರವಾಗಲಿ ಎಲ್ಲವೂ ಅತ್ಯುತ್ತಮ ತಂತ್ರಜ್ಞಾನವನ್ನು ಒಳಗೊಂಡಿದ್ದು, ಉಚಿತ ಎಂಬೊಂದೇ ಕಾರಣಕ್ಕೆ ಯಾವುದೇ ಕಳಪೆ ಗುಣಮಟ್ಟದ ಯಂತ್ರೋಪಕರಣಗಳು ಹಾಗೂ ಇತರೆ ಅಗತ್ಯ ವೈದ್ಯ ಸೌಲಭ್ಯಗಳನ್ನು ಬಳಸುತ್ತಿಲ್ಲ. ಮನಸ್ಸಿಗೆ ಬಂದಷ್ಟು ದುಡ್ಡು ಪಡೆದರೂ, ಕೆಲವು ಆಸ್ಪತ್ರೆಗಳು ಉಳಿಯುವುದೇ ಕಷ್ಟವಾಗಿರುವಾಗ ಇಲ್ಲಿ ಹೇಗೆ ಉಚಿತವಾಗಿ ಆರೋಗ್ಯ ಸೇವೆ ನೀಡಲಾಗುತ್ತಿದೆ ಎಂಬುವುದು ಪ್ರತಿಯೊಬ್ಬರೂ ಕೇಳುವ ಸಾಮಾನ್ಯ ಪ್ರಶ್ನೆ. ದಾನಿಗಳು ಕೈ ತುಂಬಾ ನೀಡುತ್ತಿರುವ ದೇಣಿಗೆಯಿಂದಲೇ ಆಸ್ಪತ್ರೆ ನಡೆಯುತ್ತಿದ್ದು, ಯಾವುದೇ ಸೌಲಭ್ಯಕ್ಕೂ ಕೊರತೆಯಾಗದಂತೆ ಎಚ್ಚರವಹಿಸಲಾಗುತ್ತದೆ, ಎನ್ನುತ್ತಾರೆ ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯಲ್ಲಿ ನಡೆಯುತ್ತಿರುವ ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಿಇಒ ಸುಚೇತನ್.

ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ CSR ರಾಷ್ಟ್ರೀಯ ಸಮಾವೇಶ: ವಿಕಸಿತ ಭಾರತ ಚರ್ಚೆ
ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ CSR ರಾಷ್ಟ್ರೀಯ ಸಮಾವೇಶ: ವಿಕಸಿತ ಭಾರತ ಚರ್ಚೆ

ಶಿಕ್ಷಣವೂ ಫ್ರೀ:

ಆರೋಗ್ಯ ಸೇವೆಯಂತೆ, ಆರಂಭಿಕ ಶಿಕ್ಷಣದಿಂದ ಪಿಎಚ್‌ಡಿ ಮಾಡುವುದಾದರೂ ಇಲ್ಲಿ ಉಚಿತವೇ. ಪ್ರತಿಭೆ ಇದ್ದು, ಬಡವರು ಎಂಬೊಂದೇ ಕಾರಣದಿಂದ ಶಿಕ್ಷಣದಿಂದ ವಂಚಿತರಾಗುವ ಅನೇಕರು ಇಲ್ಲಿ ಉನ್ನತ ಪದವಿಯನ್ನೂ ಪಡೆದು, ತಮ್ಮ ಕಾಲ ಮೇಲೆ ನಿಂತಿದ್ದಾರೆ. ಕೇವಲ ವಿದ್ಯೆಯನ್ನು ಮಾತ್ರವಲ್ಲ. ಉತ್ತಮವಾದ ವ್ಯಕ್ತಿತ್ವವನ್ನೂ ರೂಪಿಸಿಕೊಂಡು, ಸಮಾಜಕ್ಕೆ ಆಸ್ತಿಯಾಗಿ ರೂಪುಗೊಳ್ಳುತ್ತಿರುವುದು ಇಲ್ಲಿಯ ವಿಶೇಷ.

ಸಾಂಪ್ರಾದಾಯಿಕ ಶಿಕ್ಷಣದ ಜೊತೆಗೆ ವೇದ, ಕ್ರಿಕೆಟ್ ತರಬೇತಿ, ಸಂಗೀತಕ್ಕೂ ಸಮಾನ ಆದ್ಯತೆ ನೀಡುತ್ತಿದ್ದು, ತಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿಯೇ ಇಲ್ಲಿ ಶಿಕ್ಷಣ ಪಡೆಯಬಹುದು. ಪುಟ್ಟಪರ್ತಿಯ ಇಂಥದ್ದೇ ಶಿಕ್ಷಣ ಸಂಸ್ಥೆಯಲ್ಲಿ ಎಂಬಿಎ ಪದವಿ ಪಡೆದು, ನಂತರ ಕಾರ್ಪೋರೇಟ್ ಜಗತ್ತಿನಲ್ಲಿ ಉತ್ತಮ ವೇತನ ಬರುವ ಉದ್ಯೋಗ ಪಡೆದಿದ್ದರೂ, ಬಿಟ್ಟು ಇದೀಗ ಸಾಯಿ ಗ್ರಾಮದಲ್ಲಿ ಜನರಿಗೆ ಅಗತ್ಯ ಸೇವೆ ನೀಡಲು ಸಂಕಲ್ಪ ತೊಟ್ಟಿದ್ದಾರೆ ಸದ್ಗುರು ಮಧುಸೂದನ ಸಾಯಿ ಅವರು.

ಎಲ್ಲೆಡೆ ಆಸ್ಪತ್ರೆಗಳು, ವೈದ್ಯ ತಪಾಸಣೆಯಲ್ಲಿ ಲ್ಯಾಬೋರೇಟರಿಗಳು ಕಂಡ್ ಕಂಡಲ್ಲಿ ತಲೆ ಎತ್ತಿವೆ. ವೈದ್ಯರು ಪದವಿ ಪಡೆದು ಪ್ರತಿ ವರ್ಷವೂ ಪ್ರತಿಷ್ಠಿತ ಕಾಲೇಜುಗಳಿಂದ ಹೊರ ಬರುತ್ತಲೇ ಇದ್ದಾರೆ. ಆದರೆ, ಮನುಷ್ಯನಿಗೆ ಆಗತ್ಯವಿರುವ ಆರೋಗ್ಯ ಸೇವೆ ಮಾತ್ರ ಸುಲಭವಾಗಿ, ಕೈಗೆಟುಕುವ ದರದಲ್ಲಿ ಸಿಗುವುದು ಮಾತ್ರ ದುರ್ಲಭವಾಗಿದೆ. ಅವೆಲ್ಲವೂ ಪಡೆಯಲು ಯಾರೂ ಕಷ್ಟ ಪಡಬಾರದೆಂಬ ಉದ್ದೇಶದಿಂದಲೇ ವಿಶ್ವವೇ ಒಂದು ಕುಟುಂಬ ಎಂಬ ಧ್ಯೇಯದಡಿ ಈ ಸೇವೆಯನ್ನು ಆರಂಭಿಸಲಾಗಿದೆ ಎನ್ನುತ್ತಾರೆ ಸದ್ಗುರು.

ಪ್ರೀತಿಯಿಂದ ವಿದ್ಯಾರ್ಥಿಯರ ಹಾಗೂ ರೋಗಿಗಳ ಕಾಳಜಿ ತೋರುವವರು ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ತಿನ್ನುವ ಆಹಾರಕ್ಕೂ ಇಲ್ಲಿ ಯಾವುದೇ ಹಣ ನೀಡಬೇಕಾಗಿಲ್ಲ.

ಎಲ್ಲ ಉಚಿತ ಆಸ್ಪತ್ರೆಗಳಿಗಿಂತ ಇದು ಹೇಗೆ ವಿಭಿನ್ನ?

ಭಾರತದಲ್ಲಿ ಹಲವು ಫ್ರೀ ಆಗಿ ಚಿಕಿತ್ಸೆ ನೀಡುವ ಆಸ್ಪತ್ರೆಗಳಿವೆ. ಅವಗಳಲ್ಲಿ ಕೆಲವು ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರವೇ ಚಿಕಿತ್ಸೆ ನೀಡುತ್ತದೆ. ಜೊತೆಗೆ ಉಳ್ಳವರ ಹಣ ಪಡೆದು ಆರೋಗ್ಯ ಸೇವೆ ನೀಡುತ್ತವೆ. ಆದರೆ, ಈ ಸಂಸ್ಥೆಯಡಿಯಲ್ಲಿರುವ ಆಸ್ಪತ್ರೆಗಳಲ್ಲಿ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡಲಾಗುತ್ತಿದ್ದು, ಯಾರು ಬೇಕಾದರೂ ಆರೋಗ್ಯ ಸೇವೆ ಪಡೆಯಬಹುದು. ಹೃದಯ ಸಂಬಂಧಿ ಸಮಸ್ಯೆ ಹಾಗು ಚಿಕಿತ್ಸೆಗೆ ತಜ್ಞರು ಸದಾ ಲಭ್ಯವಿರುತ್ತಾರೆ. ನವಜಾತ ಶಿಶು ತಜ್ಞರು, ಸ್ತ್ರಿರೋಗ ತಜ್ಞರು, ನರ ರೋಗ ತಜ್ಞರು, ಕಿಡ್ನಿ ಸಂಬಂಧ ರೋಗಗಳಿಗೆ ಚಿಕಿತ್ಸೆ ನೀಡುವವರು, ಮೂಳ ರೋಗ ತಜ್ಞರು ಸೇರಿ ವಿವಿಧ ರೋಗಗಳಿಗೆ ಚಿಕಿತ್ಸೆ ನೀಡುವವರು ಸದಾ ಲಭ್ಯವಿದ್ದು, ತುತ್ತು ಸಮಯದಲ್ಲಿ ಚಿಕಿತ್ಸೆ ಪಡೆಯಬಹುದು. ಇಲ್ಲಿ ರೋಬೋಟಿಕ್ ಬೆಂಬಲಿತ ಚಿಕಿತ್ಸೆಯನ್ನೂ ನೀಡಲಾಗುತ್ತಿದ್ದು, ಆರೋಗ್ಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗುತ್ತದೆ. ಟೆಲಿ ಮೆಡಿಸನ್ ಸೌಲಭ್ಯವೂ ಇದೆ ಎನ್ನುವುದು ಮತ್ತೊಂದು ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+