ಕರೂರ್ ದುರಂತಕ್ಕೆ ನನ್ನ ಬಲಿಪಶು ಮಾಡಿದ್ರು, ಪೊಲೀಸರೇ ಬೇಕಂತ ಜನಸಂದಣಿಗೆ ತಳ್ಳಿದ್ರು ಎಂದ ಸಿಎಂ ವಿಜಯ್‌

ಚೆನ್ನೈ: ಇತ್ತೀಚೆಗೆ ಕರೂರ್ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಉಂಟಾದ ಭಾರೀ ಗದ್ದಲ ಮತ್ತು ಜನದಟ್ಟಣೆಯ ಹಿಂದೆ ವ್ಯವಸ್ಥಿತ ಪಿತೂರಿ ಇತ್ತು ಎಂದು ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ನಾಯಕ, ತಮಿಳುನಾಡು ಸಿಎಂ ವಿಜಯ್ ಗಂಭೀರ ಆರೋಪ ಮಾಡಿದ್ದಾರೆ. ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ವಿಜಯ್‌ ಕಿಡಿಕಾರಿದ್ದಾರೆ. ಕರೂರ್ ಪ್ರವಾಸ ಮುಗಿದ ಆರಂಭದಲ್ಲಿ ತಮಗೆ ರಕ್ಷಣೆ ನೀಡಿದ ಭದ್ರತಾ ಸಿಬ್ಬಂದಿಗೆ ವಿಜಯ್ ಧನ್ಯವಾದ ತಿಳಿಸಿದ್ದರು. ಈಗ ಆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಅವರು, "ಪೊಲೀಸರ ಅಸಲಿ ಉದ್ದೇಶ ಮತ್ತು ಒಳಗಿನ ಪ್ಲ್ಯಾನ್‌ ಏನು ಎಂಬುದು ನನಗೆ ಆಗ ಅರ್ಥವಾಗಲಿಲ್ಲ, ನನ್ನನ್ನು ಕತ್ತಲಲ್ಲಿ ಇಡಲಾಗಿತ್ತು" ಎಂದು ಬೇಸರ ಹೊರಹಾಕಿದ್ದಾರೆ.

ಪೊಲೀಸರೇ ಜನಸಂದಣಿಯೊಳಗೆ ನೂಕಿದರು

ಘಟನೆಯನ್ನು ನೆನಪಿಸಿಕೊಂಡ ವಿಜಯ್, "ನಾನು ಕರೂರ್‌ಗೆ ಹೋದಾಗ ಅಲ್ಲಿ ಜನಸಾಗರವೇ ಹರಿದುಬಂದಿತ್ತು. ಅಲ್ಲಿ ಪರಿಸ್ಥಿತಿ ಮಿತಿಮೀರಿದೆ, ಸದ್ಯಕ್ಕೆ ನೀವು ಒಳಗೆ ಹೋಗಬೇಡಿ ಎಂದು ಪೊಲೀಸರು ನನಗೆ ಸುಲಭವಾಗಿ ಎಚ್ಚರಿಕೆ ನೀಡಬಹುದಿತ್ತು. ಆದರೆ ಅವರು ಹಾಗೆ ಮಾಡಲೇ ಇಲ್ಲ. ಬದಲಿಗೆ ಅವರೇ ನನ್ನನ್ನು ಗದ್ದಲದ ಮಧ್ಯಕ್ಕೆ ಕರೆದುಕೊಂಡು ಹೋಗಿ ಬಿಟ್ಟರು" ಎಂದು ಹೇಳಿದ್ದಾರೆ.

CM Vijay

ಜನರನ್ನು ಸರಿಯಾಗಿ ನಿರ್ವಹಿಸದಂತೆ ಮತ್ತು ತಮಗೆ ಮುಜುಗರ ಉಂಟುಮಾಡುವಂತೆ ಮಾಡಲು ಪೊಲೀಸರೇ ಮುಂಚಿತವಾಗಿ ಈ ಸ್ಕೆಚ್ ಹಾಕಿದ್ದರು ಎಂಬ ಅರ್ಥದಲ್ಲಿ ವಿಜಯ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಿಳುನಾಡು ರಾಜಕೀಯದಲ್ಲಿ ವಿಜಯ್ ಅವರ ಪಕ್ಷ ಸಖತ್ ಸೌಂಡ್ ಮಾಡುತ್ತಿರುವ ಬೆನ್ನಲ್ಲೇ ಈ 'ಪೊಲೀಸ್ ಪಿತೂರಿ' ಆರೋಪ ತಮಿಳುನಾಡು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಏನಿದು ಘಟನೆ?

ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದ ಸೆಪ್ಟೆಂಬರ್ 2025ರ ಕರೂರ್ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ, ರಾಜ್ಯ ಪೊಲೀಸರು ತಮ್ಮ ಮೇಲೆಯೇ ಗೂಬೆ ಕೂರಿಸಲು ಯತ್ನಿಸುತ್ತಿದ್ದಾರೆ ಎಂದು ಸಿಎಂ ವಿಜಯ್ ನೇರ ಆರೋಪ ಮಾಡಿದ್ದಾರೆ. ಚುನಾವಣೆಗೂ ಮುನ್ನ ಪ್ರಚಾರದಲ್ಲಿ ನಡೆದಿದ್ದ ಆ ಭೀಕರ ಘಟನೆ ನೆನಪಿಸಿಕೊಂಡ ಅವರು, ಆ ಸಮಯದಲ್ಲಿ ನಾನು ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದೆ. ಚುನಾವಣಾ ರ‍್ಯಾಲಿಗೂ ಮುನ್ನ ನಾನು ಪೊಲೀಸರನ್ನು ಸಂಪೂರ್ಣವಾಗಿ ನಂಬಿದ್ದೆ. ಆದರೆ ಇಡೀ ವ್ಯವಸ್ಥೆ ಅಂದು ಹಳಿ ತಪ್ಪಿ ಇಂತಹದೊಂದು ದೊಡ್ಡ ದುರಂತಕ್ಕೆ ಕಾರಣವಾಯಿತು ಎಂದು ಬೇಸರ ಹೊರಹಾಕಿದ್ದಾರೆ.

ತಮಿಳುನಾಡು ರಾಜಕೀಯದಲ್ಲಿ ವಿಜಯ್ ಗೆಲುವಿಗೆ ಮ್ಯಾಜಿಕ್ ಮಾಡಿದ್ದು ಸ್ಟಾಲಿನ್ ಅಂಕಲ್ ಎಂಬ ಮಾತು

41 ಜನರ ಬಲಿ ಪಡೆದಿದ್ದ ಕರೂರ್ ರ‍್ಯಾಲಿ

2025ರ ಸೆಪ್ಟೆಂಬರ್‌ನಲ್ಲಿ ಕರೂರ್‌ನಲ್ಲಿ ನಡೆದಿದ್ದ ವಿಜಯ್ ಅವರ ಚುನಾವಣಾ ಪ್ರಚಾರದ ವೇಳೆ ಜನಸಾಗರವೇ ಹರಿದುಬಂದಿತ್ತು. ಆದರೆ ಜನಸಂದಣಿ ನಿರ್ವಹಣೆ ಕೊರತೆಯಿಂದಾಗಿ ಭೀಕರ ಕಾಲ್ತುಳಿತ (Stampede) ಸಂಭವಿಸಿತ್ತು. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ದುರಂತದಲ್ಲಿ ಬರೋಬ್ಬರಿ 41 ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. ಈ ಇಡೀ ದುರಂತದ ಹೊಣೆಯನ್ನು ರಾಜ್ಯದ ಪೊಲೀಸ್ ಇಲಾಖೆ ತನ್ನ ಮೇಲೆ ಹೊರಿಸಲು ಯತ್ನಿಸುತ್ತಿದೆ ಎಂದೂ ವಿಜಯ್ ಗುಡುಗಿದ್ದಾರೆ. ಅಂದು ವಿರೋಧ ಪಕ್ಷದಲ್ಲಿದ್ದು ಚುನಾವಣಾ ಕಣದಲ್ಲಿದ್ದ ವಿಜಯ್, ಇಂದು ತಮಿಳುನಾಡಿನ ಮುಖ್ಯಮಂತ್ರಿಯೂ ಆಗಿದ್ದಾರೆ. ಆದರೂ ಅಂದಿನ ಘಟನೆಯ ತನಿಖೆ ಮತ್ತು ಪೊಲೀಸರ ನಡೆ ಕುರಿತು ಅವರು ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿರುವುದು ಈಗ ತಮಿಳುನಾಡು ರಾಜಕೀಯ ವಲಯದಲ್ಲಿ ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಸಂತ್ರಸ್ತರಿಗೆ ಇಂದು ಸರ್ಕಾರಿ ಉದ್ಯೋಗ ನೇಮಕಾತಿ ಪತ್ರ ವಿತರಣೆ

ವಿಜಯ್ ಇಂದು ಕರೂರ್ ಜಿಲ್ಲೆಗೆ ಭೇಟಿ ನೀಡುತ್ತಿದ್ದು, ಜಿಲ್ಲೆಯ ಅಭಿವೃದ್ಧಿ ಹಾಗೂ ದುರಂತದ ಸಂತ್ರಸ್ತರ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಹಲವು ಪ್ರಮುಖ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳ ಕೈಹಿಡಿಯಲು ವಿಜಯ್‌ ಮುಂದಾಗಿದ್ದಾರೆ. ಮೃತಪಟ್ಟ 41 ಜನರ ಪೈಕಿ 32 ಸಂತ್ರಸ್ತ ಕುಟುಂಬಗಳ ಸದಸ್ಯರಿಗೆ ಇಂದು ಮಧ್ಯಾಹ್ನ 3 ಗಂಟೆಗೆ ಕರೂರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಖುದ್ದಾಗಿ ಸರ್ಕಾರಿ ಕೆಲಸದ ನೇಮಕಾತಿ ಆದೇಶ ವಿತರಿಸಲಿದ್ದಾರೆ. ಈ ಹಿಂದೆ ಇದ್ದ ಡಿಎಂಕೆ ಸರ್ಕಾರ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು. ಆದರೆ ವಿಜಯ್ ಅವರು ತಮ್ಮ ವೈಯಕ್ತಿಕ ವತಿಯಿಂದ ಪ್ರತಿ ಕುಟುಂಬಕ್ಕೆ ಬರೋಬ್ಬರಿ 20 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಿದ್ದರು. ಅಕ್ಟೋಬರ್‌ನಲ್ಲಿ ಚೆನ್ನೈನಲ್ಲಿ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+