ಬೆಂಗಳೂರಲ್ಲಿ ಫುಟ್‌ಪಾತ್ ಕ್ರಾಂತಿ: 9 ದಿನದಲ್ಲಿ 400 ಕಿ.ಮೀ ಪಾದಚಾರಿ ಮಾರ್ಗ ಕ್ಲೀನ್, ಅಖಾಡಕ್ಕೆ ಇಂದು ಸಿಎಂ ಎಂಟ್ರಿ
ಬೆಂಗಳೂರು: ನಗರದೆಲ್ಲೆಡೆ ಫುಟ್‌ಪಾತ್ ಅತಿಕ್ರಮಣವಾಗಿ ಪಾದಚಾರಿಗಳಿಗೆ ನಡೆಯಲು ಜಾಗವಿಲ್ಲ ಎನ್ನುವುದು ಹಿಂದಿನಿಂದಲೂ ಕೇಳಿಬರುತ್ತಿದ್ದ ದೊಡ್ಡ ಸಮಸ್ಯೆ. ಇದೀಗ ಡಿಕೆಶಿ ಸರ್ಕಾರವು ಫುಟ್‌ಪಾತ್ ವಿಚಾರದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದೆ. ಸದ್ಯ ನಗರದ ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯ ವೇಗವಾಗಿ ಸಾಗಿದ್ದು, ಇದರ ಪ್ರಗತಿ ಬಗ್ಗೆ ಸಿಎಂ ಡಿ.ಕೆ.ಶಿವಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ. "ಒಂದು ನಗರದ ಯೋಗ್ಯತೆಯನ್ನು ಕೇವಲ ಅಲ್ಲಿನ ರಸ್ತೆಗಳನ್ನು ನೋಡಿ ಅಳೆಯಲು ಸಾಧ್ಯವಿಲ್ಲ. ಬದಲಿಗೆ, ಅಲ್ಲಿನ ಸಾಮಾನ್ಯ ಜನ ಎಷ್ಟು ಸುರಕ್ಷಿತವಾಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಾರೆ ಎಂಬುದರ ಮೇಲೆ ನಗರದ ಗುಣಮಟ್ಟ ನಿರ್ಧಾರವಾಗುತ್ತದೆ" ಎಂದು ಹೇಳಿದ್ದಾರೆ.
ದಾಖಲೆ ಅವಧಿಯಲ್ಲಿ 400 ಕಿ.ಮೀ ಫುಟ್‌ಪಾತ್ ತೆರವು
ಬೆಂಗಳೂರನ್ನು ಪಾದಚಾರಿ ಸ್ನೇಹಿಯನ್ನಾಗಿ ಮಾಡಲು ರಾಜ್ಯ ಸರ್ಕಾರ ಪಣತೊಟ್ಟು ಬೃಹತ್ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದು, ಕಳೆದ ಕೇವಲ 9 ದಿನಗಳ ಅವಧಿಯಲ್ಲಿ ನಗರದ ಮೂಲೆ ಮೂಲೆಗಳಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಲಾಗಿದೆ. ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದ್ದ, ಅತಿಕ್ರಮಣಕ್ಕೊಳಗಾಗಿದ್ದ 400 ಕಿಲೋ ಮೀಟರ್‌ಗಿಂತಲೂ ಹೆಚ್ಚು ಉದ್ದದ ಪಾದಚಾರಿ ಮಾರ್ಗಗಳನ್ನು ಯಶಸ್ವಿಯಾಗಿ ತೆರವು ಮಾಡಲಾಗಿದೆ. ರಸ್ತೆ ಬದಿಯ ಸಾರ್ವಜನಿಕ ಜಾಗಗಳನ್ನು ಸಾರ್ವಜನಿಕರಿಗೇ ಮುಕ್ತಗೊಳಿಸುವ ಮೂಲಕ ಪಾದಚಾರಿಗಳು ನಿಶ್ಚಿಂತೆಯಾಗಿ ಓಡಾಡಲು ದಾರಿ ಮಾಡಿಕೊಡಲಾಗಿದೆ ಎಂದು ಡಿಕೆಶಿ ಮಾಹಿತಿ ನೀಡಿದ್ದಾರೆ.

ಬೀದಿ ಬದಿ ವ್ಯಾಪಾರಿಗಳಿಗೂ ಅನ್ಯಾಯವಿಲ್ಲ
ಇನ್ನು ಪಾದಚಾರಿಗಳಿಗೆ ಜಾಗ ಕೊಡುವ ಭರದಲ್ಲಿ ಬೀದಿ ಬದಿ ವ್ಯಾಪಾರಿಗಳ ಹೊಟ್ಟೆಯ ಮೇಲೆ ಹೊಡೆಯುವುದಿಲ್ಲ ಎಂದೂ ಸರ್ಕಾರ ಸ್ಪಷ್ಟಪಡಿಸಿದೆ. ಇದಕ್ಕಾಗಿ ಅತ್ಯಂತ ಮಾನವೀಯ ಮತ್ತು ಸಮತೋಲಿತ "ಫುಟ್‌ಪಾತ್ ನೀತಿ"ಯನ್ನು (Footpath Policy) ತರಲಾಗುತ್ತಿದೆ. ಇದರ ಅಡಿಯಲ್ಲಿ ನಗರದ ಪ್ರಮುಖ ಕಡೆಗಳಲ್ಲಿ ಪ್ರತ್ಯೇಕವಾಗಿ 'ವ್ಯಾಪಾರ ವಲಯ'ಗಳನ್ನು (Planned Vending Zones) ಗುರುತಿಸಲಾಗುತ್ತದೆ. ಇದರಿಂದ ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯಕ್ಕೂ ಯಾವುದೇ ತೊಂದರೆಯಾಗುವುದಿಲ್ಲ. ಮತ್ತೊಂದೆಡೆ ಸಾರ್ವಜನಿಕರ ಫುಟ್‌ಪಾತ್‌ಗಳು ಯಾವುದೇ ಅಡೆತಡೆಯಿಲ್ಲದೆ, ಸುರಕ್ಷಿತವಾಗಿ ಜನಸಾಮಾನ್ಯರ ಬಳಕೆಗೆ ಸಿಗಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.
A city is judged not just by its roads, but by how safely its people can walk.
— DK Shivakumar (@DKShivakumar) July 10, 2026
Over the last 9 days, we have restored more than 400 km of footpaths across Bengaluru, reclaiming public spaces for pedestrians and making our city safer and more accessible.
Our Government is… pic.twitter.com/G69gJmEMAF
ಇಂದು ಖುದ್ದಾಗಿ ಬೆಂಗಳೂರಿನ ವಿವಿಧ ರಸ್ತೆಗಳಿಗೆ ನಾನೇ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದೇನೆ. ಕಾಮಗಾರಿಗಳು ನೆಲಮಟ್ಟದಲ್ಲಿ ಎಷ್ಟು ಯಶಸ್ವಿಯಾಗಿವೆ, ಜನರಿಗೆ ಇದರಿಂದ ಅನುಕೂಲವಾಗಿದೆಯೇ ಎಂಬುದನ್ನು ಖುದ್ದಾಗಿ ವೀಕ್ಷಿಸಲಿದ್ದೇನೆ. ನಡೆಯಲು ಯೋಗ್ಯವಾದ ಬೆಂಗಳೂರೇ, ವಾಸಿಸಲು ಯೋಗ್ಯವಾದ ಬೆಂಗಳೂರು ಎಂಬ ವಾಕ್ಯದೊಂದಿಗೆ ನಗರದ ಚಿತ್ರಣ ಬದಲಿಸುವುದು ನಮ್ಮ ಸರ್ಕಾರ ಉದ್ದೇಶ ಎಂದಿದ್ದಾರೆ.
ಪಾದಚಾರಿ ಮಾರ್ಗ ಸಾರ್ವಜನಿಕರ ಆಸ್ತಿ
ಪಾದಾಚಾರಿ ಮಾರ್ಗ ಸಾರ್ವಜನಿಕರ ಆಸ್ತಿಯಾಗಿದ್ದು, ಬಿಡಾಡಿ ವಾಹನಗಳನ್ನು ಹೀಗೆ ರಸ್ತೆಬದಿ ನಿಲ್ಲಿಸುವುದರಿಂದ ಪಾದಾಚಾರಿಗಳಿಗೂ ಕಿರಿಕಿರಿ, ಟ್ರಾಫಿಕ್ ಸಮಸ್ಯೆ ಮುಗಿಯದ ಅಧ್ಯಾಯವಾಗಿದೆ. ನಗರದ ಸೌಂದರ್ಯಕ್ಕೂ ಇದು ಕುತ್ತು ತರುತ್ತಿದೆ. ಇದೇ ಕಾರಣಕ್ಕೆ ಮಾಲೀಕರು ತಮ್ಮ ವಾಹನವನ್ನು ತೆರವುಗೊಳಿಸಲು 15 ದಿನಗಳ ಹಿಂದೆಯೇ ಮಾಹಿತಿ ನೀಡಲಾಗಿತ್ತು. ಆದರೂ ಬಿಡಾಡಿ ವಾಹನಗಳನ್ನು ತೆರವುಗೊಳಿಸದ ಕಾರಣ ಇದೀಗ ಸ್ಟಿಕ್ಕರ್ ಅಂಟಿಸಿ ಲಾಕ್ ಮಾಡಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.












Click it and Unblock the Notifications