Rashmika Mandanna: ಭಾರತ ಚಿತ್ರರಂಗದಲ್ಲೇ ಹಿಸ್ಟರಿ ಕ್ರಿಯೇಟ್ ಮಾಡಿದ ರಶ್ಮಿಕಾ, ಈ ಡೇಂಜರಸ್ ಸಾಹಸಕ್ಕೆ ಬಾಲಿವುಡ್ ಮಂದಿಯೂ ಶಾಕ್
ಕನ್ನಡದ ನಟಿ ರಶ್ಮಿಕಾ ಮಂದಣ್ಣ ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸುತ್ತಿರುವುದು ಹೊಸದೇನಲ್ಲ. ಮದುವೆ ಬಳಿಕವೂ ರಶ್ಮಿಕಾ ಬಿಡುವಿಲ್ಲದೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈ ಬಾರಿ ಅವರು ಮಾಡಿರುವ ಸಾಹಸ ಇಡೀ ಭಾರತೀಯ ಚಿತ್ರರಂಗವೇ ಇವರತ್ತ ತಿರುಗಿ ನೋಡುವಂತೆ ಮಾಡಿದೆ. ಇಂತಹ ಸಾಹಸ ಇಲ್ಲಿವರೆಗೆ ಬೇರೆ ಇನ್ಯಾವ ನಟಿಯೂ ಮಾಡಿಲ್ಲ ಎಂದೇ ಹೇಳಲಾಗುತ್ತಿದೆ. ತಮ್ಮ ಮುಂದಿನ ಚಿತ್ರರಂಗಕ್ಕಾಗಿ ರಶ್ಮಿಕಾ ಅಂತಹ ಡೇಂಜರಸ್ ರಿಸ್ಕ್ ತೆಗೆದುಕೊಂಡಿದ್ದಾರೆ.
ಡೂಪ್ ಇಲ್ಲದೆ ರಶ್ಮಿಕಾ ಸಾಹಸ
ಹೌದು, ರಶ್ಮಿಕಾ ತಮ್ಮ ಮುಂಬರುವ 'ಮೈಸಾ' (Mysaa) ಸಿನಿಮಾಗಾಗಿ ಭಾರತೀಯ ಸಿನಿಮಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳಾ ಪ್ರಧಾನ "ಅಂಡರ್ ವಾಟರ್ ಫೈಟ್ ಸೀಕ್ವೆನ್ಸ್" (ನೀರಿನೊಳಗಿನ ಸಾಹಸ ದೃಶ್ಯ) ಒಂದರಲ್ಲಿ ನಟಿಸಿ ದಾಖಲೆ ಬರೆದಿದ್ದಾರೆ. ಸಾಮಾನ್ಯವಾಗಿ ಇಂತಹ ಕಠಿಣವಾದ ಸಾಹಸ ದೃಶ್ಯಗಳಿಗೆ ಸ್ಟಂಟ್ ಡೂಪ್‌ಗಳನ್ನು (ಬದಲಿ ನಟರು) ಬಳಸುವುದು ಸಾಮಾನ್ಯ. ಆದರೆ ರಶ್ಮಿಕಾ ಮಂದಣ್ಣ ಯಾವುದೇ ಡೂಪ್ ಸಹಾಯವಿಲ್ಲದೇ ಈ ಅಪಾಯಕಾರಿ ಫೈಟ್ ಸೀನ್ ಅನ್ನು ಖುದ್ದಾಗಿ ತಾವೇ ಮಾಡಿದ್ದಾರೆ.

ಚಿತ್ರತಂಡ ಅಧಿಕೃತವಾಗಿ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಕೇವಲ ಎರಡೇ ದಿನದಲ್ಲಿ ಸುಮಾರು 20 ಗಂಟೆಗಳ ಕಾಲ ರಶ್ಮಿಕಾ ನೀರಿನ ಅಡಿಯಲ್ಲೇ ಇದ್ದು ಈ ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ಚಿತ್ರದ ಮೇಕಿಂಗ್ ಹಾಗೂ ಬಿಟಿಎಸ್ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. 'ನನ್ನ ಲೈಫ್‌ನಲ್ಲೇ ಬಿಗ್ಗೆಸ್ಟ್ ಚಾಲೆಂಜ್' ಎಂದ ನಟಿ ಈ ರೋಮಾಂಚಕ ಶೂಟಿಂಗ್ ಅನುಭವವನ್ನು ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. "ನಾನು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳದಿದ್ದಕ್ಕೆ ಇದೇ ಕಾರಣ ಎಂದೂ ಹೇಳಿದ್ದಾರೆ. ನನ್ನ ಇಡೀ ಜೀವನದಲ್ಲೇ ನಾನು ಎದುರಿಸಿದ ಅತಿ ದೊಡ್ಡ ಮತ್ತು ಕಠಿಣವಾದ ಸವಾಲು ಇದು. ನಾವೆಲ್ಲ ಇಷ್ಟು ಹುಚ್ಚರ ತರಹ ಸಾಹಸ ಮಾಡಿದ್ದೀವಿ ಅಂದುಕೊಂಡರೆ ನನಗೇ ಸಖತ್ ಎಕ್ಸೈಟ್‌ಮೆಂಟ್ ಆಗ್ತಿದೆ ಎಂದು ಬರೆದುಕೊಂಡಿದ್ದಾರೆ.
ಏನಿದು 'ಮೈಸಾ' ಸಿನಿಮಾ?
'ಮೈಸಾ' ಚಿತ್ರವನ್ನು ರವೀಂದ್ರ ಪುಲ್ಲೆ ಅವರು ನಿರ್ದೇಶನ ಮಾಡುತ್ತಿದ್ದು, 'ಅನ್‌ಫಾರ್ಮುಲಾ ಫಿಲ್ಮ್ಸ್' ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಗಿರಿಜನರ ಭೂಮಿ ಅಥವಾ ಬುಡಕಟ್ಟು ಪ್ರದೇಶದ ಹಿನ್ನೆಲೆಯಲ್ಲಿ ನಡೆಯುವ ಭಾವುಕ ಆಕ್ಷನ್ ಥ್ರಿಲ್ಲರ್ ಕಥೆಯನ್ನು ಈ ಸಿನಿಮಾ ಹೊಂದಿದೆ. ನಟಿ ರಶ್ಮಿಕಾ ಮಂದಣ್ಣ ಅವರ ಕೆರಿಯರ್‌ನಲ್ಲೇ ಇದು ಮೊದಲ ಕಂಪ್ಲೀಟ್ ಮಹಿಳಾ ಪ್ರಧಾನ ಪ್ಯಾನ್ ಇಂಡಿಯಾ ಆಕ್ಷನ್ ಸಿನಿಮಾವಾಗಿದ್ದು, ಇದೇ 2026ರಲ್ಲಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ.
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದಿಂದ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ, ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಅಲ್ಲಿಯೂ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಳ್ಳುವ ಮೂಲಕ ಟಾಪ್ ನಟಿಯಾಗಿದ್ದರು. ತಮಿಳು, ಬಾಲಿವುಡ್‌ನಲ್ಲಿಯೂ ಮಿಂಚುತ್ತಿರುವ ಕೊಡಗಿನ ಬೆಡಗಿ, ಇತ್ತೀಚೆಗೆ ನಟ ವಿಜಯ್ ದೇವರಕೊಂಡ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಬಳಿಕ ಬ್ರೇಕ್ ಪಡೆಯದೆ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ.













Click it and Unblock the Notifications