IPL 2027 ಮಿನಿ ಹರಾಜು: ಇಂಗ್ಲೆಂಡ್ ಸ್ಟಾರ್ ಯುವ ವೇಗಿ ಖರೀದಿಗೆ ಭಾರಿ ಪೈಪೋಟಿ
Sonny Baker: ಐಪಿಎಲ್ 2027 ಐಪಿಎಲ್ ಮಿನಿ ಹರಾಜಿಗೆ ದಿನಗಣನೆ ಆರಂಭವಾಗಿದ್ದು, ಡಿಸೆಂಬರ್ 16ರಂದು ನಡೆಯಲಿರುವ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡ್ನ 23 ವರ್ಷದ ಉದಯೋನ್ಮುಖ ವೇಗದ ಬೌಲರ್ ಸನ್ನಿ ಬೇಕರ್ ಸಜ್ಜಾಗಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕಳೆದ ಒಂದು ವರ್ಷದಿಂದ ಅಂತಾರಾಷ್ಟ್ರೀಯ ಹಾಗೂ ಫ್ರಾಂಚೈಸಿ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಈ ಬಲಗೈ ವೇಗಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಲಕ್ನೋ ಸೂಪರ್ ಜೈಂಟ್ಸ್ ಮತ್ತು ಪಂಜಾಬ್ ಕಿಂಗ್ಸ್ ಸೇರಿದಂತೆ ಹಲವು ಫ್ರಾಂಚೈಸಿಗಳು ತೀವ್ರ ಆಸಕ್ತಿ ತೋರಿವೆ. ಹಾಗಾದ್ರೆ ಇವರ ಸಾಧನೆಗಳ ವಿವರವನ್ನು ಇಲ್ಲಿ ತಿಳಿಸಲಾಗಿದೆ.

ಭರ್ಜರಿ ಫಾರ್ಮ್ನಲ್ಲಿರುವ ಬೇಕರ್
ಗಂಟೆಗೆ ಸುಮಾರು 145 ಕಿಲೋ ಮೀಟರ್ ವೇಗದಲ್ಲಿ ನಿಖರವಾಗಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಸನ್ನಿ ಬೇಕರ್, ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ಪ್ರವಾಸದ ಏಕದಿನ ಸರಣಿಯಲ್ಲಿ ಮಾರಕ ಬೌಲಿಂಗ್ ದಾಳಿ ನಡೆಸಿ ಗಮನ ಸೆಳೆದಿದ್ದರು. ಅನುಭವಿ ವೇಗಿ ಜೋಫ್ರಾ ಆರ್ಚರ್ ಅವರೊಂದಿಗೆ ಹೊಸ ಚೆಂಡನೊಂದಿಗೆ ದಾಳಿ ನಡೆಸಿದ್ದ ಅವರು, ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಕೇವಲ 45 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ವೃತ್ತಿಜೀವನದ ಶ್ರೇಷ್ಠ ಸಾಧನೆ ಮಾಡಿದ್ದರು.
2022ರಲ್ಲಿ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದಾಗಿನಿಂದ ಇಲ್ಲಿಯವರೆಗೆ ಆಡಿರುವ 27 ಟಿ20 ಪಂದ್ಯಗಳಲ್ಲಿ 18.88ರ ಅತ್ಯುತ್ತಮ ಸರಾಸರಿಯೊಂದಿಗೆ 71 ವಿಕೆಟ್ಗಳನ್ನು ಪಡೆದಿದ್ದಾರೆ. ಇದರಲ್ಲಿ ಎರಡು ಬಾರಿ ನಾಲ್ಕು ವಿಕೆಟ್ ಹಾಗೂ ಎರಡು ಬಾರಿ ಐದು ವಿಕೆಟ್ಗಳನ್ನು ಪಡೆದ ಸಾಧನೆಯೂ ಸೇರಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸೂಕ್ತ ಆಯ್ಕೆ
ಹರಾಜಿನಲ್ಲಿ ಬೇಕರ್ ಅವರನ್ನು ಖರೀದಿಸಲು ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಮುಂಚೂಣಿಯಲ್ಲಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಈ ವರ್ಷ ಇಂಗ್ಲೆಂಡ್ನಲ್ಲಿ ನಡೆದ 'ದಿ ಹಂಡ್ರೆಡ್' ಟೂರ್ನಿಯಲ್ಲಿ ಲಕ್ನೋ ಮಾಲೀಕತ್ವದ ಆರ್ಪಿಎಸ್ಜಿ ಗ್ರೂಪ್ನ ತಂಡವಾದ ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ಪರ ಬೇಕರ್ ಆಡಿದ್ದರು.
ಆ ಟೂರ್ನಿಯಲ್ಲಿ 13 ವಿಕೆಟ್ ಪಡೆದಿದ್ದ ಅವರು, ಫೈನಲ್ ಪಂದ್ಯದಲ್ಲಿ 2 ವಿಕೆಟ್ ಉರುಳಿಸಿ ಮ್ಯಾಂಚೆಸ್ಟರ್ ತಂಡಕ್ಕೆ ಚೊಚ್ಚಲ ಪ್ರಶಸ್ತಿ ಗೆದ್ದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಹೀಗಾಗಿ ಲಕ್ನೋ ತಂಡದ ಆಡಳಿತ ಮಂಡಳಿಗೆ ಬೇಕರ್ ಸಾಮರ್ಥ್ಯದ ಬಗ್ಗೆ ಸ್ಪಷ್ಟ ಅರಿವಿದೆ. ಮತ್ತೊಂದೆಡೆ ತನ್ನ ವೇಗದ ಬೌಲಿಂಗ್ ವಿಭಾಗವನ್ನು ಬಲಪಡಿಸಲು ಎದುರು ನೋಡುತ್ತಿರುವ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳೂ ಇವರ ಮೇಲೆ ಕಣ್ಣಿಟ್ಟಿವೆ.
ಬ್ರೆಂಡನ್ ಮೆಕಲಮ್ ಹೇಳಿದ್ದೇನು?
ಕಳೆದ ತಿಂಗಳಷ್ಟೇ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯು (ಇಸಿಬಿ) ಸನ್ನಿ ಬೇಕರ್ ಅವರಿಗೆ ಎರಡು ವರ್ಷಗಳ ಕೇಂದ್ರೀಯ ಗುತ್ತಿಗೆ ನೀಡಿದೆ. ಸಾಮಾನ್ಯವಾಗಿ ಕೇಂದ್ರೀಯ ಗುತ್ತಿಗೆ ಪಡೆದ ಆಟಗಾರರಿಗೆ ಬದಲಿ ಆಟಗಾರರಾಗಿ ಅಲ್ಪಾವಧಿಗೆ ಐಪಿಎಲ್ ಆಡಲು ಇಸಿಬಿ ಅನುಮತಿ ನೀಡುವುದಿಲ್ಲ. ಆದರೆ, ಹರಾಜಿನಲ್ಲಿ ಆಯ್ಕೆಯಾದ ಆಟಗಾರರಿಗೆ ಪೂರ್ಣ ಆವೃತ್ತಿಯಲ್ಲಿ ಆಡಲು ಗ್ರೀನ್ ಸಿಗ್ನಲ್ ತೋರಿದೆ. ಐಪಿಎಲ್ ಪಂದ್ಯಾವಳಿಗಾಗಿ ಆಟಗಾರರನ್ನು ಅರ್ಧದಲ್ಲೇ ವಾಪಸ್ ಕರೆಸಿಕೊಳ್ಳುವುದಿಲ್ಲ ಎಂದು ಇಂಗ್ಲೆಂಡ್ ವೈಟ್-ಬಾಲ್ ಕೋಚ್ ಬ್ರೆಂಡನ್ ಮೆಕಲಮ್ ಕೂಡ ಸ್ಪಷ್ಟಪಡಿಸಿದ್ದಾರೆ.
ಟೆಸ್ಟ್ ತಂಡದಲ್ಲೂ ಅವಕಾಶ ಸಿಗುವ ಸಾಧ್ಯತೆ
ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಜ್ಜಾಗುತ್ತಿರುವ ಇಂಗ್ಲೆಂಡ್ ಟೆಸ್ಟ್ ತಂಡದಲ್ಲೂ ಬೇಕರ್ ಸ್ಥಾನ ಪಡೆದಿದ್ದಾರೆ. ತಂಡದ ಪ್ರಮುಖ ವೇಗಿ ಜೋಶ್ ಟಂಗ್ ವೈಯಕ್ತಿಕ ಕಾರಣಗಳಿಂದ ಮೊದಲ ಟೆಸ್ಟ್ಗೆ ಅಲಭ್ಯರಾಗಿರುವುದರಿಂದ, ಡಿಸೆಂಬರ್ 17ರಂದು ಜೋಹಾನ್ಸ್ಬರ್ಗ್ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಬೇಕರ್ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಅಂದರೆ ಐಪಿಎಲ್ ಹರಾಜು ನಡೆದ ಮರುದಿನವೇ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ನಿರೀಕ್ಷೆಯಿದೆ.


Click it and Unblock the Notifications
