ಗಿಫ್ಟ್ ಬೇಡ ಕ್ಯಾಶ್ ನೀಡಿ: ಮದುವೆ ಹಾಲ್ ಬಳಿಯೇ ಎಟಿಎಂ ಮಿಶಿನ್ ಹಾಕಿಸಿದ ವಧು ವರ
ಮದುವೆ ಸಂಪ್ರದಾಯಗಳು ಊರಿನಿಂದ ಊರಿಗೆ ಬದಲಾಗುತ್ತವೆ. ದಕ್ಷಿಣ ಭಾರತದಲ್ಲಿ ವರ ಧೋತಿ, ಪಂಚೆಯಲ್ಲಿ ಬಂದರೆ ಉತ್ತರ ಭಾರತದಲ್ಲಿ ಶೆರ್ವಾನಿ ಹಾಕಿಕೊಂಡು ಕುದುರೆಯೇರಿ ಬರುತ್ತಾನೆ. ಕೆಲವು ಕಡೆಗಳಲ್ಲಿ ಮದುವೆ ಶಾಸ್ತ್ರಗಳು ಒಂದು ವಾರದವರೆಗೂ ನಡೆಯುವುದುಂಟು. ಇನ್ನು ಕೆಲವು ಜಾಗಗಳಲ್ಲಿ ಎರಡೇ ದಿನಗಳಲ್ಲಿ ಎಲ್ಲಾ ಶಾಸ್ತ್ರ ಮುಗಿಯುವುದೂ ಇದೆ. ಈಗಂತೂ ಎಲ್ಲವೂ ಅನುಕೂಲಕ್ಕೆ ತಕ್ಕಂತೆ ನಡೆಯುತ್ತದೆ.
ಮದುವೆಗೆ ಬರುವ ಅತಿಥಿಗಳು ಉಡುಗೊರೆ ನೀಡುವುದು ಬಹುತೇಕ ಎಲ್ಲಾ ಕಡೆಗಳಲ್ಲಿ ನಡೆದುಕೊಂಡು ಬಂದಿರುವ ಪದ್ದತಿ. ಆದರೆ ಇಲ್ಲಿ ಮದುವೆಗೆ ಬರುವ ಅತಿಥಿಗಳಿಗೆ ಸ್ಪಷ್ಟವಾಗಿ ಒಂದು ಸೂಚನೆ ನೀಡಲಾಗಿದೆ. ಅದೇನೆಂದರೆ ಮದುವೆಗೆ ಬರುವವರು ಯಾರೇ ಆಗಲಿ ಗಿಫ್ಟ್ ರೂಪದಲ್ಲಿ ಯಾವುದೇ ವಸ್ತುಗಳನ್ನು ನೀಡಬಾರದು ಎಂದು. ಭೌತಿಕ ಉಡುಗೊರೆಯ ಬದಲು ನಗದೇ ಅತ್ಯುತ್ತಮ ಉಡುಗೊರೆ ಎಂದು ಇಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಒಂದು ವೇಳೆ ಯಾವುದಾದರೂ ಅತಿಥಿ ಕ್ಯಾಶ್ ತರಲು ಮರೆತಿದ್ದರೆ, ಅವರಿಗಾಗಿಯೂ ವ್ಯವಸ್ಥೆ ಮಾಡಲಾಗಿದೆ.

ದಕ್ಷಿಣ ಕೊರಿಯಾದ ಈ ವಿವಾಹ ಸಂಪ್ರದಾಯವು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಅಲೆಯನ್ನು ಎಬ್ಬಿಸಿದೆ. ಈ ಮದುವೆಯ ವೀಡಿಯೊ ಇದೀಗ ವೈರಲ್ ಆಗುತ್ತಿದೆ.
ಇಲ್ಲಿ ಕ್ಯಾಶೇ ಗಿಫ್ಟ್:
ದಕ್ಷಿಣ ಕೊರಿಯಾದಲ್ಲಿ, ಮದುವೆಗಳಲ್ಲಿ ಹಣ ನೀಡುವುದು ಸರ್ವೇ ಸಾಮಾನ್ಯ ಮತ್ತು ದೀರ್ಘಕಾಲದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. ಜನರು ಕವರ್‌ಗಳಲ್ಲಿ ಹಾಕಿ ವಧು ಅಥವಾ ವರನಿಗೆ ಹಣ ನೀಡುವುದು ಪದ್ದತಿ. ಹೊಸ ಜೀವನವನ್ನು ಪ್ರಾರಂಭಿಸುವ ದಂಪತಿಗಳಿಗೆ ಹಣವೇ ಅತ್ಯಂತ ಉಪಯುಕ್ತ ಉಡುಗೊರೆಯಾಗಿದೆ ಎಂದು ನಂಬಲಾಗಿದೆ. ಉಡುಗೊರೆ ಬದಲು ಹಣ ನೀಡಿದರೆ ಮುಂದೆ ಹೊಸ ಜೀವನ ನಡೆಸಲು ಸಹಾಯ ಆಗುವುದು ಎನ್ನುವ ಉದ್ದೇಶದಿಂದ ಈ ಹಣವನ್ನು ನೀಡಲಾಗುತ್ತದೆ.
ಹಣ ನೀಡಲು ಮರೆತವರಿಗಾಗಿ ಮದುವೆ ಮನೆಯಲ್ಲಿಯೇ ಎಟಿಎಂ:
ಈ ಸಂಪ್ರದಾಯದ ಅತ್ಯಂತ ಆಸಕ್ತಿದಾಯಕ ಅಂಶವೊಂದಿದೆ. ಅದೇನೆಂದರೆ ಮದುವೆಗೆ ಬರುವವರ ಅನುಕೂಲಕ್ಕಾಗಿ ಎಟಿಎಂ ಮೆಷಿನ್‌ಗಳನ್ನು ಹಾಕಲಾಗಿರುತ್ತದೆ. ಮದುವೆಗೆ ಬರುವ ಅತಿಥಿಗಳು ಹಣವನ್ನು ತರಲು ಮರೆತಿದ್ದರೆ ಮದುವೆ ಮನೆಯಲ್ಲಿಯೇ ಇರುವ ಎಟಿಎಂನಿಂದ ನೇರವಾಗಿ ಹಣವನ್ನು ಡ್ರಾ ಮಾಡಬಹುದು. ಹೀಗೆ ಡ್ರಾ ಮಾಡಿದ ಹಣವನ್ನು ಕವರ್‌ನಲ್ಲಿ ಹಾಕಿ ವಧು ಅಥವಾ ವರನಿಗೆ ನೀಡಬಹುದು.
ಈ ಪದ್ದತಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದ ಹಾಗೆಯೇ ಜನ ಇದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ಇದನ್ನು ಅತ್ಯಂತ ಪ್ರಾಯೋಗಿಕ ಎಂದು ಕರೆದರೆ, ಇನ್ನು ಕೆಲವರು ಕ್ಯಾಶ್ ಇಲ್ಲ ಎಂದಾದರೆ ಮದುವೆಗೆ ಎಂಟ್ರಿಯೂ ಇಲ್ಲ ಎಂದು ಬರೆದಿದ್ದಾರೆ.
ನಗದು ಹಣಕ್ಕೆ ಇಷ್ಟೊಂದು ಒತ್ತು ಏಕೆ?
ದಕ್ಷಿಣ ಕೊರಿಯಾದಲ್ಲಿ ಮದುವೆ ಸಾಕಷ್ಟು ದುಬಾರಿ. ಮದುವೆ ನಡೆಯುವ ಸ್ಥಳ, ಅದ್ದೂರಿ ಅಲಂಕಾರಗಳು, ಫೋಟೋ ಮತ್ತು ವಿಡಿಯೋಗ್ರಾಫಿ, ಸೇರಿದಂತೆ ಇತರ ಸಿದ್ಧತೆಗಳಿಗಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡಲಾಗುತ್ತದೆ. ಕುಟುಂಬ ಮತ್ತು ಸ್ನೇಹಿತರು ಸಾಮಾನ್ಯವಾಗಿ ನವವಿವಾಹಿತರಿಗೆ ಹಣ ನೀಡುವ ಮೂಲಕ ಆರ್ಥಿಕವಾಗಿ ಸಹಾಯ ಮಾಡುತ್ತಾರೆ. ಇದರಿಂದ ಮದುವೆಯ ವೆಚ್ಚಗಳನ್ನು ನಿರ್ವಹಿಸಲು ಮತ್ತು ಹೊಸ ಜೀವನವನ್ನು ಪ್ರಾರಂಭಿಸಲು ಅವರಿಗೆ ಸಹಾಯವಾಗುತ್ತದೆ ಎನ್ನುವುದು ನಂಬಿಕೆ.
ಈ ವ್ಯವಸ್ಥೆ ಭಾರತಕ್ಕಿಂತ ಎಷ್ಟು ಭಿನ್ನವಾಗಿದೆ?:
ಮೊದಲೇ ಹೇಳಿದ ಹಾಗೆ ಭಾರತದಲ್ಲಿ ಮದುವೆ ಸಂಪ್ರದಾಯ ಊರಿನಿಂದ ಊರಿಗೆ ಬೇರೆ ಬೇರೆಯಾಗಿದೆ. ಇಲ್ಲಿ ಮದುವೆ ಎಂದರೆ ಅನೇಕ ಆಚರಣೆಗಳ ಜೊತೆಗೆ ಉಡುಗೊರೆಗಳ ದೊಡ್ಡ ಪಟ್ಟಿಯನ್ನೇ ಒಳಗೊಂಡಿರುತ್ತವೆ. ನಮ್ಮಲ್ಲಿ ಯಾರದ್ದಾದರೂ ಮದುವೆ ನಿಗದಿಯಾದರೆ ಸಾಕು ಉಡುಗೊರೆ ಏನು ನೀಡಬೇಕೆಂದು ತಿಂಗಳುಗಳ ಮುಂಚೆಯೇ ನಿರ್ಧರಿಸಿ ಬಿಡುತ್ತಾರೆ. ಕೆಲವು ಕಡೆಗಳಲ್ಲಿ ವರನಿಗೆ ವಧುವಿನ ಕಡೆಯವರು ಅಡುಗೆ ಮನೆಯ ಚಮಚದಿಂದ ಲಕ್ಸುರಿ ಕಾರನ್ನು ಉಡುಗೊರೆಯಾಗಿ ನೀಡಬೇಕಾಗುತ್ತದೆ. ಆದರೆ ದಕ್ಷಿಣ ಕೊರಿಯಾದಲ್ಲಿ, ಪರಿಸ್ಥಿತಿ ತುಂಬಾ ಭಿನ್ನವಾಗಿದೆ. ಅಲ್ಲಿ, ಉಡುಗೊರೆಯನ್ನು ಆಯ್ಕೆ ಮಾಡುವ ಭಯವೇ ಇಲ್ಲ. ಹೆಚ್ಚಿನವರು ಇಲ್ಲಿ ವಧು ವರರಿಗೆ ಕ್ಯಾಶ್ ಅನ್ನೇ ನೀಡುತ್ತಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ ಚರ್ಚೆ:
ದಕ್ಷಿಣ ಕೊರಿಯಾದ ವಿವಾಹದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆಯೇ ಜನ ವಿಧ ವಿಧವಾಗಿ ಪ್ರತಿಕ್ರಿಯಿಸಿದ್ದಾರೆ. ಇದೇ ರೀತಿಯ ವ್ಯವಸ್ಥೆ ಇಲ್ಲೂ ಇದ್ದಿದ್ದರೆ ಉಡುಗೊರೆ ಖರೀದಿಸುವ ತೊಂದರೆ ಇರುತ್ತಿರಲಿಲ್ಲ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಕೆಲವರು ಇದು ವಧು-ವರರಿಗೆ ನಿಜವಾಗಿಯೂ ಅಗತ್ಯವಿರುವುದನ್ನು ಮಾತ್ರ ಖರೀದಿಸುವ ಸ್ವಾತಂತ್ರ್ಯವನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಇನ್ನು ಕೆಲವರು ಮದುವೆಗೆ ನೀಡುವ ಉಡುಗೊರೆಗಳು ಕೇವಲ ವಸ್ತುಗಳಲ್ಲ, ಅದರ ಹಿಂದೆ ಭಾವನೆಗಳೂ ಅಡಗಿವೆ ಎಂದು ಹೇಳಿದ್ದಾರೆ.
ಮದುವೆಗಳಲ್ಲಿ ಮಾತ್ರವಲ್ಲದೆ ಇತರ ಸಂದರ್ಭಗಳಲ್ಲಿಯೂ ನಗದು:
ದಕ್ಷಿಣ ಕೊರಿಯಾದಲ್ಲಿ, ಮದುವೆಗಳಲ್ಲಿ ಮಾತ್ರವಲ್ಲದೆ, ಇತರ ಅನೇಕ ವಿಶೇಷ ಸಂದರ್ಭಗಳಲ್ಲಿಯೂ ನಗದು ನೀಡುವ ಸಂಪ್ರದಾಯವಿದೆ. ಹುಟ್ಟುಹಬ್ಬಗಳು, ಫ್ಯಾಮಿಲಿ ಗೆಟ್ ಟುಗೆದರ್ ಸೇರಿದಂತೆ ಇತರ ಶುಭ ಸಂದರ್ಭಗಳಲ್ಲಿ, ಜನರು ಲಕೋಟೆಗಳಲ್ಲಿ ಹಾಕಿ ಹಣವನ್ನು ನೀಡುವ ಮೂಲಕ ಶುಭಾಶಯಗಳನ್ನು ಸಲ್ಲಿಸುತ್ತಾರೆ. ಇದನ್ನು ಗೌರವ ಮತ್ತು ಸಹಕಾರದ ಸಂಕೇತವೆಂದು ಕರೆಯಲಾಗುತ್ತದೆ.
ಬದಲಾಗುತ್ತಿರುವ ಜಗತ್ತಿನೊಂದಿಗೆ ಬದಲಾಗುತ್ತಿರುವ ಸಂಪ್ರದಾಯಗಳು:
ಪ್ರತಿಯೊಂದು ದೇಶವು ತನ್ನ ಅಗತ್ಯತೆಗಳು ಮತ್ತು ಆದ್ಯತೆಗಳ ಆಧಾರದ ಮೇಲೆ ಸಂಪ್ರದಾಯಗಳನ್ನು ರೂಪಿಸಿಕೊಳ್ಳುತ್ತವೆ. ಈ ದಕ್ಷಿಣ ಕೊರಿಯಾದ ವ್ಯವಸ್ಥೆಯು ಕೆಲವರಿಗೆ ಅಸಾಮಾನ್ಯವಾಗಿ ಕಾಣಿಸಬಹುದು, ಆದರೆ ಅಲ್ಲಿನ ಜನರಿಗೆ ಇದು ಸಾಮಾನ್ಯವಾಗಿದೆ. ಭಾರತದಲ್ಲಿ, ಮಗಳು ಅಳಿಯನ ಮೇಲಿನ ಪ್ರೀತಿಯನ್ನು ಉಡುಗೊರೆಗಳ ಮೂಲಕ ತೋರಿಸಲಾಗುತ್ತಿದೆ. ಆದರೆ, ದಕ್ಷಿಣ ಕೊರಿಯಾದಲ್ಲಿ, ನವವಿವಾಹಿತರಿಗೆ ಹಣಕಾಸಿನ ಬೆಂಬಲವನ್ನು ನೀಡುವುದೇ ಪ್ರೀತಿಯ ಸಂಕೇತ. ಹಾಗಾಗಿಯೇ ಇಲ್ಲಿ ದುಬಾರಿ ಮದುವೆಯ ಉಡುಗೊರೆ ಅಮೂಲ್ಯ ವಸ್ತುವಲ್ಲ, ಕವರ್‌ನಲ್ಲಿ ಹಾಕಿರುವ ಗರಿಗರಿಯಾದ ನೋಟುಗಳಾಗಿರುತ್ತವೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications