ಮಧುಮೇಹಿಗಳಿಗೆ ಸಿಹಿ ಸುದ್ದಿ: ಭಾರತಕ್ಕೂ ಬಂದಿದೆ ವಾರಕ್ಕೆ ಒಮ್ಮೆ ಪಡೆಯುವ ಇನ್ಸುಲಿನ್
ಭಾರತದ ಆರೋಗ್ಯ ಕ್ಷೇತ್ರದಲ್ಲಿ ಇದು ಅತ್ಯಂತ ಮಹತ್ವದ ದಿನ. ಮಧುಮೇಹ (ಡಯಾಬಿಟಿಸ್) ರೋಗಿಗಳಿಗೆ ಪ್ರತಿದಿನ ಇನ್ಸುಲಿನ್ ಇಂಜೆಕ್ಷನ್ ನೀಡುವ ಪದ್ಧತಿ ಜಾರಿಗೆ ಬಂದು ಸದ್ಯಕ್ಕೆ ಬರೋಬ್ಬರಿ 104 ವರ್ಷಗಳು ಕಳೆದಿವೆ. ಇಷ್ಟು ದಶಕದಿಂದ ರೋಗಿಗಳು ಅನುಭವಿಸುತ್ತಿದ್ದ ಸೂಜಿ ಚುಚ್ಚಿಸಿಕೊಳ್ಳುವ ದೈಹಿಕ ಮತ್ತು ಮಾನಸಿಕ ನೋವಿಗೆ ಈಗ ದೊಡ್ಡದೊಂದು ಬ್ರೇಕ್ ಬಿದ್ದಿದೆ. ಡೆನ್ಮಾರ್ಕ್ ಮೂಲದ ಜಾಗತಿಕ ಔಷಧ ತಯಾರಿಕಾ ದೈತ್ಯ ಸಂಸ್ಥೆಯಾದ 'ನೋವೊ ನೊರ್ಡಿಸ್ಕ್' (Novo Nordisk) ಭಾರತದಲ್ಲಿ ವಾರಕ್ಕೊಮ್ಮೆ ಮಾತ್ರ ತೆಗೆದುಕೊಳ್ಳುವ ಇನ್ಸುಲಿನ್ 'ಅವಿಕ್ಲಿ' ಅನ್ನು ಅಧಿಕೃತವಾಗಿ ಮಾರುಕಟ್ಟೆಗೆ ಪರಿಚಯಿಸಿದೆ.
ವರ್ಷಕ್ಕೆ 365 ಇಂಜೆಕ್ಷನ್ ಬೇಡ, 52 ಸಾಕು
ವಿಶ್ವದಾದ್ಯಂತ ಈ ಅತ್ಯಾಧುನಿಕ ಇನ್ಸುಲಿನ್ ಬಿಡುಗಡೆಯಾಗಿರುವ ಕೆಲವೇ ದೇಶಗಳ ಪಟ್ಟಿಯಲ್ಲಿ ಭಾರತವೂ ಸ್ಥಾನ ಪಡೆದಿದೆ. ಇದು ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಹೊಂದಿರುವ ವಯಸ್ಕ ರೋಗಿಗಳಿಗೆ ಲಭ್ಯವಾಗಲಿದೆ. ಭಾರತದಲ್ಲಿ ಮಧುಮೇಹದ ಮಟ್ಟ ಮಿತಿಮೀರುತ್ತಿದ್ದರೂ, ರೋಗಿಗಳು ಇನ್ಸುಲಿನ್ ಚಿಕಿತ್ಸೆಗೆ ಒಳಪಡಲು ಪ್ರತಿದಿನ ಇಂಜೆಕ್ಷನ್ ಚುಚ್ಚಿಕೊಳ್ಳುವ ಭಯ ದೊಡ್ಡ ಸಮಸ್ಯೆಯಾಗಿತ್ತು. ಈ ನೋವಿನ ಹಿಂಜರಿಕೆಯಿಂದಾಗಿ ರೋಗಿಗಳು ಇನ್ಸುಲಿನ್ ತೆಗೆದುಕೊಳ್ಳುವುದನ್ನು ಸುಮಾರು 7ರಿಂದ 9 ವರ್ಷಗಳ ಕಾಲ ಮುಂದೂಡುತ್ತಾ ಬರುತ್ತಾರೆ. ಇದರಿಂದ ಕಾಯಿಲೆ ಮತ್ತಷ್ಟು ಉಲ್ಬಣಗೊಳ್ಳುತ್ತದೆ.

ಇನ್ನು ಈಗ ಬಂದಿರುವ ಹೊಸ 'ಅವಿಕ್ಲಿ' ಔಷಧಿಯು ರೋಗಿಗಳ ಈ ಇಂಜಕ್ಷನ್ ಸಂಖ್ಯೆಯನ್ನು ವರ್ಷಕ್ಕೆ 365 ದಿನಗಳಿಂದ ನೇರವಾಗಿ ಕೇವಲ 52 ದಿನಗಳಿಗೆ ಇಳಿಸಲಿದೆ. ಇದರರ್ಥ ರೋಗಿಗಳು ಇನ್ಮುಂದೆ ಪ್ರತಿದಿನ ಇಂಜೆಕ್ಷನ್ ಚುಚ್ಚಿಕೊಳ್ಳುವ ಅಗತ್ಯವಿಲ್ಲ, ವಾರಕ್ಕೆ ಒಂದು ಬಾರಿ ತಗೊಂಡರೆ ಸಾಕು. ಭಾರತದ ರೋಗಿಗಳು ಸೇರಿದಂತೆ ವಿಶ್ವದ 4,000ಕ್ಕೂ ಹೆಚ್ಚು ವಯಸ್ಕರ ಮೇಲೆ ನಡೆಸಲಾದ ಪ್ರಯೋಗಗಳಲ್ಲಿ, ಇದು ದಿನನಿತ್ಯದ ಇನ್ಸುಲಿನ್‌ಗಿಂತಲೂ ಅತ್ಯಂತ ಪರಿಣಾಮಕಾರಿಯಾಗಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂಬುದು ಸಾಬೀತಾಗಿದೆ.
ವೈದ್ಯಕೀಯ ತಜ್ಞರು ಏನೆನ್ನುತ್ತಾರೆ?
"ಕಳೆದ ಸುಮಾರು ಎರಡು ದಶಕಗಳಿಂದ ಬೇಸಲ್ ಇನ್ಸುಲಿನ್ ವಲಯದಲ್ಲಿ ಯಾವುದೇ ಹೊಸ ಆವಿಷ್ಕಾರಗಳು ನಡೆದಿರಲಿಲ್ಲ. ಪದೇ ಪದೇ ಸೂಜಿ ಚುಚ್ಚಿಸಿಕೊಳ್ಳುವ ಕಿರಿಕಿರಿ ತಪ್ಪುವುದರಿಂದ ಇನ್ಸುಲಿನ್ ಅಗತ್ಯವಿರುವ ರೋಗಿಗಳು ಇನ್ನು ಮುಂದೆ ಯಾವುದೇ ಭಯವಿಲ್ಲದೆ ಸಕಾಲದಲ್ಲಿ ಚಿಕಿತ್ಸೆ ಆರಂಭಿಸಲು ಇದು ಪ್ರೇರಣೆ ನೀಡುತ್ತದೆ" ಎಂದು ದೆಹಲಿಯ ಹೆಸರಾಂತ ಎಂಡೋಕ್ರೈನಾಲಜಿಸ್ಟ್ (ಮಧುಮೇಹ ತಜ್ಞರು) ಆದ ಡಾ.ಅನೂಪ್ ಮಿಶ್ರಾ ಇದರ ಅನುಕೂಲ ತಿಳಿಸಿದ್ದಾರೆ.
ವಾರದ ಇನ್ಸುಲಿನ್ ಬಂದ ತಕ್ಷಣ ದಿನನಿತ್ಯದ ಇನ್ಸುಲಿನ್ ಸಂಪೂರ್ಣವಾಗಿ ಮಾರುಕಟ್ಟೆಯಿಂದ ಮಾಯವಾಗುವುದಿಲ್ಲ ಮತ್ತು ಇದು ಎಲ್ಲ ರೋಗಿಗಳಿಗೂ ಒಂದೇ ತರಹ ಮ್ಯಾಜಿಕ್ ಮಾಡಲ್ಲ ಎಂದೂ ವೈದ್ಯರು ಎಚ್ಚರಿಸಿದ್ದಾರೆ. ಯಾರ ದೇಹದಲ್ಲಿ ನೈಸರ್ಗಿಕವಾಗಿ ಸ್ವಲ್ಪ ಮಟ್ಟಿಗಾದರೂ ಇನ್ಸುಲಿನ್ ಉತ್ಪತ್ತಿಯಾಗುತ್ತಿರುತ್ತದೆಯೋ, ಅಂತಹ ಬೇಸಲ್ ಇನ್ಸುಲಿನ್ ಅಗತ್ಯವಿರುವ ರೋಗಿಗಳಿಗೆ ಮಾತ್ರ ಇದು ಉತ್ತಮ. ಇತ್ತೀಚಿನ ದಿನಗಳಲ್ಲಿ ಮಧುಮೇಹಿಗಳಲ್ಲಿ ಇನ್ಸುಲಿನ್ ಅವಲಂಬನೆ ಮೊದಲೇ ಕಡಿಮೆಯಾಗುತ್ತಿದೆ. ಆದರೂ, ಬೇಸಲ್ ಇನ್ಸುಲಿನ್ ಬೇಕೇ ಬೇಕಾದ ರೋಗಿಗಳಿಗೆ ಈ ವಾರದ ಇನ್ಸುಲಿನ್ ದೊಡ್ಡ ವರದಾನ ಎನ್ನಲಾಗಿದೆ.












Click it and Unblock the Notifications