ಪ್ರಜ್ವಲ್ ಕಿರಿಕ್ ಮಾಡೋನಲ್ಲ, ನನಗೆ ಅವನ ಬಗ್ಗೆ ಚೆನ್ನಾಗಿ ಗೊತ್ತು: 'ಕರಾವಳಿ' ವಿವಾದಕ್ಕೆ ಮೇಘನಾ ರಾಜ್ ಎಂಟ್ರಿ
ಸ್ಯಾಂಡಲ್‌ವುಡ್‌ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ, ಗುರುದತ್ ಗಾಣಿಗ ನಿರ್ದೇಶನದ 'ಕರಾವಳಿ' (Karavali) ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲೇ ದೊಡ್ಡ ವಿವಾದದ ಸುಳಿಗೆ ಸಿಲುಕಿದೆ. ಸಂಭಾವನೆ ವಿಚಾರವಾಗಿ ನಟ ಮತ್ತು ಚಿತ್ರತಂಡದ ನಡುವೆ ವೈಮನಸ್ಸು ಮೂಡಿದ್ದು, ಇತ್ತೀಚೆಗೆ ನಡೆದ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಪ್ರಜ್ವಲ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಈ ಗಲಾಟೆ ಮತ್ತಷ್ಟು ದೊಡ್ಡದಾಗಿದೆ. ಈ ಬಗ್ಗೆ ಪ್ರಜ್ವಲ್ ದೇವರಾಜ್ ಅವರ ಆಪ್ತ ಗೆಳತಿಯೂ ಆಗಿರುವ ನಟಿ ಮೇಘನಾ ರಾಜ್ ಮಾತನಾಡಿದ್ದು, ತಮ್ಮ ಸ್ನೇಹಿತನ ಬೆಂಬಲಕ್ಕೆ ನಿಂತಿದ್ದಾರೆ.
ಪ್ರಜ್ವಲ್ ದೇವರಾಜ್ ಅವರು ಸಂಭಾವನೆ ಕೊಡದ ಕಾರಣಕ್ಕೆ ಡಬ್ಬಿಂಗ್ ಬಹಿಷ್ಕರಿಸಿದ್ದಾರೆ ಎಂದು ಚಿತ್ರತಂಡ ಹೇಳುತ್ತಿದ್ದರೆ, ಇತ್ತ ಪ್ರಜ್ವಲ್ ಪರವಾಗಿ ಅವರ ಸ್ನೇಹಿತರು ಬೆನ್ನಿಗೆ ನಿಲ್ಲುತ್ತಿದ್ದಾರೆ. ಪ್ರಜ್ವಲ್ ಗುಣದ ಬಗ್ಗೆ ಮಾತನಾಡಿರುವ ಮೇಘನಾ ರಾಜ್, "ಪ್ರಜ್ವಲ್ ಬೇರೆಯವರಿಗೆ ಈಗ ಪರಿಚಯ ಇರಬಹುದು. ಆದರೆ, ನನಗೆ ಆತ ನಾಲ್ಕೈದು ವರ್ಷದ ಮಗುವಾಗಿದ್ದಾಗಿನಿಂದಲೂ ಗೊತ್ತು. ನಮ್ಮದು ಬಾಲ್ಯದ ಸ್ನೇಹ. ಅಂದಿನಿಂದ ಇಲ್ಲಿವರೆಗೂ ಆತನಲ್ಲಿ ನಾನು ಕಂಡುಕೊಂಡ ಅತ್ಯುತ್ತಮ ಗುಣವೆಂದರೆ ಸೌಜನ್ಯ. ಪ್ರಜ್ವಲ್ ಎಂದಿಗೂ ಅನಗತ್ಯ ವಿವಾದಗಳಿಗೆ ಹೋದವನಲ್ಲ, ಯಾರೊಂದಿಗೂ ಗಲಾಟೆ ಮಾಡಿಕೊಂಡವನಲ್ಲ. ಕಷ್ಟ ಅಂತ ಯಾರೇ ಹೋದರೂ ಮೊದಲು ಸಹಾಯಕ್ಕೆ ಬರುವ ಗುಣ ಅವನದ್ದು" ಎಂದಿದ್ದಾರೆ.

ಸಿನಿಮಾ ಕಷ್ಟ ಅವನಿಗೂ ಗೊತ್ತಿದೆ
"ನಾನು ಪ್ರಜ್ವಲ್ ಜೊತೆ ಎರಡು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇನೆ. ಹಾಗಾಗಿ ಅವನ ಕೆಲಸ ಮತ್ತು ಶಿಸ್ತು ನನಗೆ ಚೆನ್ನಾಗಿ ಗೊತ್ತು. ಆತ ಚಿತ್ರರಂಗದ ಹಿನ್ನೆಲೆ ಇರುವ ದೊಡ್ಡ ಕುಟುಂಬದಿಂದ ಬಂದವನು. ಸಿನಿಮಾದ ಕಷ್ಟ-ಸುಖಗಳನ್ನು ಬಾಲ್ಯದಿಂದಲೇ ನೋಡಿದವನು. ಆತ ಸ್ವತಃ ಒಬ್ಬ ನಿರ್ಮಾಪಕ ಕೂಡ, ಒಬ್ಬ ನಿರ್ಮಾಪಕನ ಕಷ್ಟ ಏನು ಎಂಬುದು ಪ್ರಜ್ವಲ್‌ಗೆ ಚೆನ್ನಾಗಿ ಗೊತ್ತಿರುತ್ತೆ. ಅಂತಹ ಜವಾಬ್ದಾರಿಯುತ ವ್ಯಕ್ತಿಯ ಬಗ್ಗೆ ಈಗ ಇಂತಹ ಮಾತುಗಳು ನಿಜಕ್ಕೂ ಬೇಸರದ ವಿಚಾರ" ಎಂದಿದ್ದಾರೆ ಮೇಘನಾ.
ಕಪ್ಪು ಚುಕ್ಕೆ ಇರಲಿಲ್ಲ
ಇಷ್ಟು ವರ್ಷಗಳ ಸಿನಿಮಾ ಕೆರಿಯರ್‌ನಲ್ಲಿ ಪ್ರಜ್ವಲ್ ಮೇಲೆ ಯಾವುದೇ ಒಂದು ಕಪ್ಪು ಚುಕ್ಕೆ ಇರಲಿಲ್ಲ. ಈಗ ದಿಢೀರನೆ ಇಂತಹ ಆರೋಪ ಕೇಳಿಬರುತ್ತಿರುವುದು ನಮ್ಮೆಲ್ಲರಿಗೂ ನಿಜಕ್ಕೂ ಆಶ್ಚರ್ಯ ತಂದಿದೆ. ಅಭಿಮಾನಿಗಳಿಗೆ ಪ್ರಜ್ವಲ್ ಪಯಣ ಏನು ಎಂಬುದು ಗೊತ್ತು. ಹಾಗಾಗಿ ಯಾರೋ ಹೇಳುವ ಮಾತುಗಳನ್ನು ನಂಬಬೇಡಿ. ಪ್ರಜ್ವಲ್ ಮೇಲಿರುವ ನಂಬಿಕೆಯನ್ನು ಕಳೆದುಕೊಳ್ಳಬೇಡಿ ಎಂದು ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ. ಪ್ರಜ್ವಲ್ ತನ್ನ ಕೆರಿಯರ್‌ನಲ್ಲೇ ಇದು ಮಹತ್ವದ ಸಿನಿಮಾ. ಅವನಿಗೆ ಸಿನಿಮಾದ ಮೇಲಿದ್ದ ಪ್ರೀತಿ, ಗೌರವ ಇಂದಿಗೂ ಕಡಿಮೆ ಆಗಿಲ್ಲ. ಕನ್ನಡಿಗರು ಅವನ ಕೈಬಿಡಲ್ಲ ಎಂದು ಮೇಘನಾ ರಾಜ್ ಹೇಳಿದ್ದಾರೆ.
ಏನಿದು ವಿವಾದ?
ಈ ವಿವಾದ ಶುರುವಾಗಿದ್ದೇ ಸಂಭಾವನೆಯ ವಿಚಾರದಿಂದ ಎನ್ನಲಾಗಿದೆ. ಚಿತ್ರತಂಡ ಆರೋಪಿಸುವ ಪ್ರಕಾರ, ಒಪ್ಪಿಕೊಂಡಿದ್ದ ಹಣದ ವ್ಯವಹಾರದಲ್ಲಿ ಉಂಟಾದ ಭಿನ್ನಾಭಿಪ್ರಾಯದಿಂದಾಗಿ ನಟ ಪ್ರಜ್ವಲ್ ದೇವರಾಜ್ ಅವರು ಚಿತ್ರದ ಮುಖ್ಯ ಪಾತ್ರಕ್ಕೆ ಡಬ್ಬಿಂಗ್ ಮಾಡಲು ನಿರಾಕರಿಸಿದ್ದಾರೆ. ನಾಯಕ ನಟನೇ ಡಬ್ಬಿಂಗ್ ಮಾಡದಿದ್ದರೆ ಸಿನಿಮಾ ಹಾಳಾಗುತ್ತದೆ ಎಂದು ಚಿತ್ರತಂಡ ಆತಂಕ ವ್ಯಕ್ತಪಡಿಸಿದ್ದು, ಪ್ರಜ್ವಲ್ ಅವರ ಅಸಹಕಾರವೇ ಕಾರಣ ಎಂದು ಹೇಳಿದೆ. ಇತ್ತೀಚೆಗೆ ಚಿತ್ರತಂಡ ಹಮ್ಮಿಕೊಂಡಿದ್ದ 'ಕರಾವಳಿ' ಚಿತ್ರದ ಅಧಿಕೃತ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಆಕ್ರೋಶ ಬಹಿರಂಗವಾಗಿ ಸ್ಫೋಟಗೊಂಡಿತು. ಪ್ರಜ್ವಲ್ ದೇವರಾಜ್ ಅವರ ಅಭಿಮಾನಿಗಳು ಕಾರ್ಯಕ್ರಮದ ಜಾಗದಲ್ಲಿ ಭಾರಿ ಗದ್ದಲ ಹಾಗೂ ಗಲಾಟೆ ಸೃಷ್ಟಿಸಿದರು.












Click it and Unblock the Notifications