ವಿದ್ಯಾರ್ಥಿ ಸಮಾವೇಶ ದಿಢೀರ್ ರದ್ದು: ರಾಹುಲ್ ಗಾಂಧಿ ಎಲ್ಲಿದ್ದಾರೆ? ಕಾಂಗ್ರೆಸ್‌ನಲ್ಲಿ ಶುರುವಾಯ್ತು ತೀವ್ರ ಚರ್ಚೆ
ಇತ್ತೀಚೆಗೆ ಎಲ್ಲರಿಗೂ ತಿಳಿದಿರುವ ಹಾಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ ನೀಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗೂ ಮೊದಲೇ ಪ್ರಶ್ನೆ ಪತ್ರಿಕೆ ಲೀಕ್ ಆಗಿರುವುದು ಹಾಗೆಯೇ ಸಿಬಿಎಸ್‌ಸಿ ಮೌಲ್ಯಮಾಪನದಲ್ಲಾದ ತೊಂದರೆಗಳು ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಲಾಗಿದೆ ಎಂದು ಕಾಂಗ್ರೆಸ್ ಬೃಹತ್ ಹೋರಾಟಕ್ಕೆ ಸಹ ಇಳಿದಿತ್ತು.
ಈ ಕುರಿತು, ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಸರ್ಕಾರದ ವಿರುದ್ಧ ಧ್ವನಿ ಎತ್ತಬೇಕು ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ನೇತೃತ್ವದಲ್ಲಿ ನಾಲ್ಕು ಬೃಹತ್ ವಿದ್ಯಾರ್ಥಿ ಸಮಾವೇಶಗಳನ್ನು ಆಯೋಜಿಸಲು ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿತ್ತು. ಅದರಂತೆ, ಜೂನ್ 17ರಂದು ರಾಜಸ್ಥಾನದ ಕೋಟಾದಲ್ಲಿ ಮೊದಲ ಸಮಾವೇಶ ಯಶಸ್ವಿಯಾಗಿ ನಡೆಯಿತು. ಆದರೆ, ಇದೀಗ ಮುಂದಿನ ಬಹುನಿರೀಕ್ಷಿತ ಸಮಾವೇಶಗಳನ್ನು ದಿಢೀರ್ ಮುಂದೂಡಲಾಗಿದೆ. ಇದು ಪಕ್ಷದ ಒಳಗೇ 'ಕಾಣೆಯಾದ ನಾಯಕ' ಎಂಬ ಚರ್ಚೆಗೆ ಕಾರಣವಾಗಿದ್ದು, ರಾಹುಲ್ ಗಾಂಧಿ ಈಗ ಎಲ್ಲಿದ್ದಾರೆ ಎಂಬ ಲೆಕ್ಕಾಚಾರಗಳು ಶುರುವಾಗಿದೆ.

ದಿಢೀರ್ ರದ್ದಾದ ಕಾಂಗ್ರೆಸ್ ವಿದ್ಯಾರ್ಥಿ ಸಮಾವೇಶ
ಪೇಪರ್ ಲೀಕ್ ಹಗರಣಗಳನ್ನು ಖಂಡಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗಿತ್ತು. ಜುಲೈ 10 ಅಂದರೆ ಇಂದು ಉತ್ತರ ಪ್ರದೇಶದ ಪ್ರಮುಖ ಶೈಕ್ಷಣಿಕ ಕೇಂದ್ರವಾದ ಪ್ರಯಾಗರಾಜ್‌ನಲ್ಲಿ ಎರಡನೇ ವಿದ್ಯಾರ್ಥಿ ಸಮಾವೇಶ ನಡೆಯಬೇಕಿತ್ತು. ಇದರ ಬೆನ್ನಲ್ಲೇ ಅಂದರೆ ನಾಳೆ ಜುಲೈ 11ರಂದು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಮೂರನೇ ಬೃಹತ್ ಸಮಾವೇಶವನ್ನು ನಡೆಸಲು ನಿರ್ಧರಿಸಲಾಗಿತ್ತು. ಇದಕ್ಕಾಗಿ ಯುಪಿ ಮತ್ತು ಬಿಹಾರದ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಭಾರಿ ಸಿದ್ಧತೆಗಳನ್ನು ಕೂಡ ಮಾಡಿಕೊಂಡಿದ್ದರು. ಆದರೆ, ಪಕ್ಷದ ಉನ್ನತ ಮೂಲಗಳ ಪ್ರಕಾರ ಈ ಎರಡೂ ಸಮಾವೇಶಗಳನ್ನು ಸದ್ಯಕ್ಕೆ ಮುಂದೂಡಲಾಗಿದೆ. ಈ ಬಗ್ಗೆ ಸ್ಥಳೀಯ ನಾಯಕರಿಗೆ ಮಾಹಿತಿ ನೀಡಿದ್ದು, ಸಿದ್ಧತೆಗಳಿಗೆ ಬ್ರೇಕ್ ಬಿದ್ದಂತಾಗಿದೆ.
ವಿದೇಶಿ ಪ್ರವಾಸ ವಿಸ್ತರಿಸಿದ್ರಾ ರಾಹುಲ್ ಗಾಂಧಿ?
ಈ ರೀತಿ ದಿಢೀರ್ ಆಗಿ ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮಗಳು ರದ್ದಾಗಿರುವುದಕ್ಕೆ ಕಾರಣವೇನು ಎನ್ನುವುದು ಅಧಿಕೃತವಾಗಿ ಹೊರಬಿದ್ದಿಲ್ಲ. ಆದರೆ, ಇದು ಕಾಂಗ್ರೆಸ್ ಪಾಳಯದಲ್ಲೇ ಚರ್ಚೆಗಳನ್ನು ಹುಟ್ಟುಹಾಕಿದೆ. ಹಲವರಲ್ಲಿ ಕಾರ್ಯಕ್ರಮಗಳನ್ನು ಮುಂದೂಡಿದ್ದೇಕೆ ಎಂಬ ಪ್ರಶ್ನೆಗಳು ಎದ್ದಿದೆ. ಮೂಲಗಳ ಪ್ರಕಾರ, ರಾಹುಲ್ ಗಾಂಧಿ ಅವರು ಪ್ರಸ್ತುತ ವಿದೇಶಿ ಪ್ರವಾಸದಲ್ಲಿದ್ದು, ತಮ್ಮ ಈ ಪ್ರವಾಸವನ್ನು ಮತ್ತಷ್ಟು ದಿನಗಳ ಕಾಲ ವಿಸ್ತರಿಸಿರಬಹುದು ಎನ್ನಲಾಗುತ್ತಿದೆ. ಅವರ ಅನುಪಸ್ಥಿತಿಯೇ ಈ ಸಮಾವೇಶ ರದ್ದಾಗಲು ಕಾರಣ ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಕೇಳಿಬರುತ್ತಿವೆ.
ಡೆಹ್ರಾಡೂನ್‌ನಲ್ಲಿ ಪರ್ಯಾಯ ಸಮಾವೇಶಕ್ಕೆ ಚಿಂತನೆ
ಸದ್ಯಕ್ಕೆ ಯುಪಿ ಮತ್ತು ಬಿಹಾರದ ಸಮಾವೇಶಗಳು ರದ್ದಾಗಿದ್ದರೂ, ಈ ಹೋರಾಟವನ್ನು ಅರ್ಧಕ್ಕೆ ಕೈಬಿಡುವುದಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಜುಲೈ ತಿಂಗಳ ಮಧ್ಯದಲ್ಲಿ ಈ ಸಮಾವೇಶಗಳಿಗೆ ಮತ್ತೆ ಹೊಸ ದಿನಾಂಕಗಳನ್ನು ನಿಗದಿಪಡಿಸುವ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ. ಜೊತೆಗೆ, ಕಾರ್ಯತಂತ್ರದ ಭಾಗವಾಗಿ ಬೇರೆ ಸ್ಥಳಗಳ ಬಗ್ಗೆಯೂ ಪಕ್ಷ ಚಿಂತನೆ ನಡೆಸಿದೆ. ವರದಿಗಳ ಪ್ರಕಾರ, ಪ್ರಯಾಗರಾಜ್ ಮತ್ತು ಪಾಟ್ನಾದ ಬದಲು ಉತ್ತರಾಖಂಡದ ಡೆಹ್ರಾಡೂನ್ ಅನ್ನು ಮುಂದಿನ ಸಮಾವೇಶದ ಸ್ಥಳ ಎಂದು ಹೇಳಲಾಗಿದೆ.
ಆದರೂ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ಯುವಜನರು ಮತ್ತು ವಿದ್ಯಾರ್ಥಿಗಳು ತೀವ್ರ ಆಕ್ರೋಶಗೊಂಡಿರುವ ಈ ಹೊತ್ತಿನಲ್ಲಿ, ಪ್ರತಿಪಕ್ಷವಾಗಿ ಕಾಂಗ್ರೆಸ್ ತನ್ನ ಹೋರಾಟದ ಕಾವು ಕಡಿಮೆ ಆಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಆದರೆ, ಈ ಸಮಯದಲ್ಲಿ ಪಕ್ಷದ ನಾಯಕನ ಗೈರುಹಾಜರಿ ಕಾರ್ಯಕರ್ತರಲ್ಲಿ ಕೊಂಚ ಗೊಂದಲ ಮೂಡಿಸಿರುವುದು ಸುಳ್ಳಲ್ಲ.












Click it and Unblock the Notifications