Mysuru Zoo: ಸುಡು ಬೇಸಿಗೆಯಲ್ಲಿ ಮೈಸೂರು ಮೃಗಾಲಯದ ಪ್ರಾಣಿಗಳ ಆರೈಕೆ ಹೇಗೆ ಗೊತ್ತಾ..?
ಮೈಸೂರು, ಮಾರ್ಚ್ 15: ಬೇಸಿಗೆ ಧಗೆ ನಗರದ ಮೃಗಾಲಯದ ಮೇಲೆ ಪರಿಣಾಮ ಬೀರಿದ್ದು, ಇಲ್ಲಿರುವ ಪ್ರಾಣಿ ಪಕ್ಷಿಗಳು ಸಂಕಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಮೃಗಾಲಯವನ್ನು ತಂಪಾಗಿಸುವ ಕಾರ್ಯ ಸಮಾರೋಪಾದಿಯಲ್ಲಿ ಸಾಗಿದೆ. ಸದ್ಯ ಮೃಗಾಲಯದ ಪ್ರಾಣಿಗಳ ಮೇಲೆ ನೀರು ಹಾಯಿಸಿ ವಾತಾವರಣವನ್ನು ತಂಪು ಮಾಡಲಾಗುತ್ತಿದೆ. ಮೈಮೇಲೆ ನೀರ ಹನಿ ಬೀಳುತ್ತಿದ್ದಂತೆಯೇ ಪ್ರಾಣಿಗಳು ಖುಷಿ ಪಡುತ್ತಿವೆ.
ಮೃಗಾಲಯದಲ್ಲಿ ಪ್ರಾಣಿಗಳಿಗೆ ನೀರು ಹಾಯಿಸಿ ತಂಪು ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಸಕಾಲದಲ್ಲಿ ಮಳೆ ಬಂದರೆ ವಾತಾವರಣ ತಂಪಾಗುತ್ತದೆ. ಇದರಿಂದ ಪ್ರಾಣಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಈ ಬಾರಿ ಮಳೆ ಬಾರದೆ ಬಿಸಿಲ ಝಳ ಹೆಚ್ಚಾಗಿರುವುದರಿಂದ ಪ್ರಾಣಿಗಳು ಒದ್ದಾಡುತ್ತಿದ್ದು, ತಂಪಾದ ವಾತಾವರಣವನ್ನು ಬಯಸುತ್ತಿವೆ. ಇದನ್ನು ಮನಗಂಡು ಬಿಸಿಲ ಝಳದಿಂದ ಪ್ರಾಣಿಗಳನ್ನು ರಕ್ಷಿಸಿ, ತಂಪಾಗಿರಿಸಲು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಹಲವು ಕ್ರಮ ಕೈಗೊಂಡಿದ್ದು ಅದರಲ್ಲೊಂದು ಸ್ಪಿಂಕ್ಲರ್ ಮೂಲಕ ನೀರು ಹಾಯಿಸುವುದಾಗಿದೆ.

ಇದೀಗ ನಗರದಲ್ಲಿ ಬಿಸಿಲ ತಾಪಮಾನ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್ ಗೆ ಏರಿಕೆಯಾಗಿದೆ. ಇದರಿಂದ ಪ್ರಾಣಿಗಳು ಸಮಸ್ಯೆ ಅನುಭವಿಸುತ್ತಿವೆ. ಅದರಲ್ಲೂ ಹಲವು ಪ್ರಾಣಿಗಳು ಸದಾ ತಂಪು ಬಯಸುತ್ತವೆ. ಅಂತಹ ಪ್ರಾಣಿಗಳಿಗೆ ಪ್ರಾಣಿಗಳಿಗೆ ನೀರು ಸಿಂಪಡಣೆ, ಕೊಳಗಳ ನಿರ್ಮಾಣ ಮಾಡಿದ್ದಲ್ಲದೆ, ಹಣ್ಣು ಹಾಗೂ ತಂಪಾದ ಪಾನೀಯ ನೀಡಿ ತಂಪು ಮಾಡಲಾಗುತ್ತಿದೆ. ಇದರ ಜತೆಗೆ ಚಿಂಪಾಂಜಿಗಳಿಗೆ ಎಳನೀರು ನೀಡಲಾಗುತ್ತಿದ್ದು, ಕರಡಿಗಳಿಗೆ ಐಸ್ಬಾಕ್ಸ್ನಲ್ಲಿ ಕಲ್ಲಂಗಡಿ, ಕಿತ್ತಳೆ ಇನ್ನಿತರ ತಾಜಾ ಹಣ್ಣುಗಳನ್ನು ಪ್ರತಿನಿತ್ಯ ನೀಡಲಾಗುತ್ತಿದೆ.
ತಂಪಾಗಿಸಲು ಹಲವು ಕ್ರಮ
ಇನ್ನು ಹುಲಿ, ಸಿಂಹ, ಚಿರತೆಗಳಿಗೆ ಅವುಗಳ ಪ್ರಾಂಗಣದಲ್ಲಿ ಕೊಳಗಳನ್ನು ನಿರ್ಮಿಸಿ ನೀರು ತುಂಬಿಸಲಾಗುತ್ತಿದೆ. ಅಲ್ಲದೆ, ಪ್ರತಿದಿನ ಎರಡು ಬಾರಿ ಕೊಳದ ನೀರನ್ನು ಬದಲಾಯಿಸಲಾಗುತ್ತಿದ್ದು, ಪ್ರಾಣಿಗಳು ಕೊಳದಲ್ಲಿಯೇ ಸ್ನಾನ ಮಾಡಿ ಸೆಖೆಯಿಂದ ಪಾರಾಗುತ್ತಿವೆ.ಆನೆ ಮತ್ತು ಜಿಂಕೆಗಳಿಗಾಗಿ ಕೆಸರು ಗುಂಡಿ ನಿರ್ಮಿಸಲಾಗಿದೆ. ಈ ಪ್ರಾಣಿಗಳು ಇರುವ ಸ್ಥಳದಲ್ಲಿ ಮಣ್ಣಿಗೆ ನೀರು ಮಿಶ್ರಣ ಮಾಡಿದ್ದು, ಆನೆಗಳು ಕೆಸರನ್ನು ಮೈಮೇಲೆ ಎರಚಿಕೊಂಡು ದೇಹವನ್ನು ತಂಪು ಮಾಡಿಕೊಳ್ಳುತ್ತಿವೆ. ಜಿಂಕೆಗಳು ಕೆಸರಿನಲ್ಲಿ ಕುಳಿತು ತಂಪಾಗುತ್ತಿವೆ. ಈ ಕ್ರಮಗಳಿಂದ ಮೃಗಾಲಯದ ಪ್ರಾಣಿಗಳು ತಂಪು ವಾತಾವರಣ ಅನುಭವಿಸುತ್ತಿವೆ.

ಪಕ್ಷಿಗಳಿರುವ ಆವರಣದಲ್ಲೂ ಕೊಳಗಳನ್ನು ನಿರ್ಮಾಣ ಮಾಡಿ ನೀರು ತುಂಬಿಸಲಾಗಿದ್ದು, ಇದನ್ನು ಪಕ್ಷಿಗಳು ಬಳಸಿಕೊಳ್ಳುತ್ತಿವೆ. ಪ್ರಾಣಿಗಳಿಗೆ ನೀಡಲಾಗುತ್ತಿದ್ದ ಹಣ್ಣಿನ ಪ್ರಮಾಣವನ್ನು ಹೆಚ್ಚಿಸಿ ದೇಹದ ಉಷ್ಣಾಂಶ ಏರದಂತೆ ನೋಡಿಕೊಳ್ಳಲಾಗುತ್ತಿದೆ. ಏಕೆಂದರೆ ಈ ಸಮಯದಲ್ಲಿ ನಿರ್ಜಲೀಕರಣದ ಸಮಸ್ಯೆ ಕಾಣಿಸಿಕೊಳ್ಳುವುದು ಮಾಮೂಲಿಯಾಗಿದ್ದು, ಇದನ್ನು ತಪ್ಪಿಸಲು ಪ್ರಾಣಿಗಳಿಗೆ ಕರಬೂಜ, ಕಲ್ಲಂಗಡಿ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗುತ್ತಿದೆ.
ಮೃಗಾಲಯಕ್ಕೆ ಶತಮಾನಗಳ ಇತಿಹಾಸ
ಇನ್ನು ಮೈಸೂರು ಮೃಗಾಲಯದ ಬಗ್ಗೆ ಹೇಳಬೇಕೆಂದರೆ, ಮೃಗಾಲಯಕ್ಕೆ 134 ವರ್ಷಗಳ ಇತಿಹಾಸವಿದ್ದು, ಪ್ರವಾಸಿಗರನ್ನು ಸೆಳೆಯುವ ಪ್ರವಾಸಿ ತಾಣಗಳಲ್ಲಿ ಇದು ಒಂದಾಗಿದೆ. ಈ ಮೃಗಾಲಯದಲ್ಲಿ ಭಾರತ ಮಾತ್ರವಲ್ಲದೆ, ವಿಶ್ವದ ಹಲವು ರಾಷ್ಟ್ರಗಳ ಪ್ರಾಣಿ, ಪಕ್ಷಿ ಹಾಗೂ ಸರಿಸೃಪಗಳಿವೆ. ಸುಮಾರು 152 ಜಾತಿಯ 1500ಕ್ಕೂ ಹೆಚ್ಚಿನ ಪ್ರಾಣಿಗಳಿವೆ. 300ಕ್ಕೂ ಹೆಚ್ಚಿನ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿ ದಿನ 4 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡುತ್ತಾರೆ. 245 ಎಕರೆ ವಿಸ್ತೀರ್ಣದ ಚಾಮರಾಜೇಂದ್ರ ಮೃಗಾಲಯ ದಕ್ಷಿಣ ಭಾರತದ ಪ್ರಾಚೀನ ಹಾಗೂ ಪ್ರಸಿದ್ಧ ಮೃಗಾಲಯಗಳಲ್ಲಿ ಒಂದು. ಇದು ವಿಶ್ವದ ಪ್ರಾಚೀನ ಹಾಗೂ ಪ್ರಸಿದ್ಧ ಮೃಗಾಲಯಗಳ ಪಟ್ಟಿಯಲ್ಲೂ ಸೇರಿದೆ.












Click it and Unblock the Notifications