Bengaluru-Mysuru Highway: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ಬದಲಾವಣೆ, ಭುಗಿಲೆದ್ದ ಆಕ್ರೋಶ
Bengaluru-Mysuru Natioal Highway: ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರು ಹಾಗೂ ಸ್ಥಳೀಯ ನಿವಾಸಿಗಳ ತೀವ್ರ ವಿರೋಧದ ನಡುವೆಯೂ ಎನ್ಎಚ್‌ಎಐ ಹಲವೆಡೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ದಿಢೀರ್ ಮುಚ್ಚಿದೆ. ಹಾಗಾದ್ರೆ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಟೋಲ್ ಪಾವತಿಸುವುದನ್ನು ತಪ್ಪಿಸಲು ಅನೇಕ ವಾಹನ ಸವಾರರು ಹೆದ್ದಾರಿ ಬಿಟ್ಟು ಅದರ ಪಕ್ಕದ ಸರ್ವಿಸ್ ರಸ್ತೆಗಳನ್ನು ಬಳಸುತ್ತಿದ್ದರು. ಇದರಿಂದ ಪ್ರಾಧಿಕಾರಕ್ಕೆ ಭಾರಿ ಪ್ರಮಾಣದ ಆದಾಯ ನಷ್ಟವಾಗುತ್ತಿತ್ತು. ಈ ರೀತಿ ಟೋಲ್ ತಪ್ಪಿಸುವವರನ್ನು ತಡೆಯಲು ಮತ್ತು ಆದಾಯ ಸೋರಿಕೆಯನ್ನು ತಡೆಗಟ್ಟಲು ಹಲವೆಡೆ ಪ್ರವೇಶ ಹಾಗೂ ನಿರ್ಗಮನ ದ್ವಾರಗಳನ್ನು ಮುಚ್ಚುವುದು ಅನಿವಾರ್ಯವಾಗಿತ್ತು ಎಂದು ಹೆದ್ದಾರಿ ಪ್ರಾಧಿಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ.

ದೈನಂದಿನ ಪ್ರಯಾಣಿಕರಿಗೆ ಹೆಚ್ಚಿದ ತಲೆನೋವು
ಬೆಂಗಳೂರು ಮತ್ತು ಮೈಸೂರು ನಡುವೆ ಪ್ರತಿನಿತ್ಯ ಸಂಚರಿಸುವ ಸಾವಿರಾರು ವಾಹನ ಸವಾರರು ಮತ್ತು ಉದ್ಯೋಗಿಗಳಿಗೆ ಈ ನಿರ್ಧಾರ ಭಾರಿ ಆಘಾತ ನೀಡಿದೆ. ಪ್ರಮುಖ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್‌ಗಳನ್ನು ಮುಚ್ಚಿರುವುದರಿಂದ ಪ್ರಯಾಣಿಕರು ಈಗ ಲೂಪ್‌ಗಳನ್ನು ಬಳಸಿ ಸುತ್ತಿ ಬಳಸಿ ಬರಬೇಕಾಗಿದೆ. ಇದರಿಂದ ಪ್ರಯಾಣದ ಸಮಯ ಗಣನೀಯವಾಗಿ ಹೆಚ್ಚಾಗಲಿದ್ದು, ಸಾರ್ವಜನಿಕರಿಗೆ ತೀವ್ರ ಅನಾನುಕೂಲ ಉಂಟಾಗಲಿದೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಸ್ಥಳೀಯ ನಿವಾಸಿಗಳು, ವ್ಯಾಪಾರಿಗಳ ಆತಂಕ ಏನು?
ತುಂಬಾ ದಿನಗಳಿಂದ ಸ್ಥಳೀಯರು ರೂಢಿಸಿಕೊಂಡು ಬಂದಿದ್ದ ಸಂಚಾರ ವ್ಯವಸ್ಥೆ ಈ ನಿರ್ಧಾರದಿಂದ ಸಂಪೂರ್ಣವಾಗಿ ಏರುಪೇರಾಗಿದೆ. ಹೆದ್ದಾರಿಯ ಆಸುಪಾಸಿನಲ್ಲೇ ಇರುವ ಸ್ಥಳೀಯ ಉದ್ಯಮಗಳು, ಹೋಟೆಲ್‌ಗಳು ಹಾಗೂ ವ್ಯಾಪಾರಸ್ಥರ ವ್ಯಾಪಾರ ಕುಂಠಿತಗೊಳ್ಳುವ ಭೀತಿ ಎದುರಾಗಿದೆ. ಅಲ್ಲದೆ ಇದರಿಂದ ಹೆಚ್ಚುವರಿ ಇಂಧನ ಮತ್ತು ಆರ್ಥಿಕ ಹೊರೆ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಆಕ್ರೋಶಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಪ್ರಾಧಿಕಾರ ಈ ಹಿಂದೆ ನೀಡಿದ್ದ ಭರವಸೆಯನ್ನು ಈಡೇರಿಸದೇ ಇರುವುದು. ವಾಹನಗಳು ಹೆದ್ದಾರಿಯಲ್ಲಿ ಎಷ್ಟು ದೂರ ಚಲಿಸುತ್ತವೆಯೋ ಅದಕ್ಕೆ ತಕ್ಕಂತೆ ಮಾತ್ರ ಟೋಲ್ ವಿಧಿಸುವ 'ದೂರ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ' ಜಾರಿಗೆ ತರುತ್ತೇವೆ ಎಂದು ಎನ್‌ಎಚ್‌ಎಐ ಈ ಹಿಂದೆ ಹೇಳಿತ್ತು. ಈ ವ್ಯವಸ್ಥೆ ಜಾರಿಯಾಗಿದ್ದರೆ ಟೋಲ್ ತಪ್ಪಿಸುವ ಸಮಸ್ಯೆಯೂ ಇರುತ್ತಿರಲಿಲ್ಲ ಮತ್ತು ಸ್ಥಳೀಯರಿಗೂ ಅನ್ಯಾಯ ಆಗುತ್ತಿರಲಿಲ್ಲ. ಆದರೆ ಪ್ರಾಧಿಕಾರ ಇದನ್ನು ಜಾರಿಗೆ ತರದೆ ವಿಳಂಬ ಮಾಡುತ್ತಿದೆ ಎಂದು ಸಾರ್ವಜನಿಕರು ಆರೋಪ ಮಾಡಿದ್ದಾರೆ.
ಈ ಹೊಸ ಟೋಲ್ ವ್ಯವಸ್ಥೆಯನ್ನು ಯಾವಾಗ ಜಾರಿಗೆ ತರಲಾಗುತ್ತದೆ ಎಂಬ ಬಗ್ಗೆ ಎನ್‌ಎಚ್‌ಎಐ ಈವರೆಗೂ ಯಾವುದೇ ಸ್ಪಷ್ಟ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ಆದ್ದರಿಂದ ಸದ್ಯಕ್ಕೆ ಉಂಟಾಗಿರುವ ಸಂಚಾರ ಅಡಚಣೆ ಎಷ್ಟು ದಿನ ಮುಂದುವರೆಯಲಿದೆ ಎಂಬ ಗೊಂದಲದಲ್ಲಿ ವಾಹನ ಸವಾರರಿದ್ದಾರೆ.
ಗೊಂದಲ ನಿರ್ಮಾಣವಾಗಲು ಕಾರಣ ಏನು?
ಹೆದ್ದಾರಿಯಲ್ಲಿ ಇಷ್ಟು ದೊಡ್ಡ ಗೊಂದಲ ನಿರ್ಮಾಣವಾಗಲು ಎನ್‌ಎಚ್‌ಎಐನ ಅಸಮರ್ಪಕ ಯೋಜನೆಯೇ ಕಾರಣ ಎಂದು ಅನೇಕರು ದೂರಿದ್ದಾರೆ. ಸರ್ಕಾರ ಈ ಹಿಂದೆ ಭರವಸೆ ನೀಡಿದ್ದ 'ದೂರ ಆಧಾರಿತ ಟೋಲ್' ವ್ಯವಸ್ಥೆಯನ್ನು ತಕ್ಷಣವೇ ಜಾರಿಗೆ ತರಬೇಕು. ಯಾರು ಎಷ್ಟು ದೂರ ಚಲಿಸುತ್ತಾರೋ ಅಷ್ಟು ಮಾತ್ರ ಹಣ ಪಡೆದರೆ ಈ ಟೋಲ್ ತಪ್ಪಿಸುವ ಸಮಸ್ಯೆಯೇ ಇರುವುದಿಲ್ಲ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇನ್ನೂ ಈ ದಿಢೀರ್ ನಿರ್ಧಾರದಿಂದಾಗಿ ಸ್ಥಳೀಯ ವ್ಯಾಪಾರಸ್ಥರ ಉದ್ಯಮಗಳಿಗೂ ಭಾರಿ ಹೊಡೆತ ಬಿದ್ದಿದ್ದು, ಪ್ರಾಧಿಕಾರವು ಜನರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಪರ್ಯಾಯ ಮಾರ್ಗ ಅಥವಾ ಸರ್ವಿಸ್ ರಸ್ತೆಗಳ ಸಮರ್ಪಕ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Click it and Unblock the Notifications
