ಬೈಕ್ನಿಂದ ಅಮೆರಿಕದಲ್ಲಿ BMW ಕಾರು ಖರೀದಿವರೆಗೆ: ವೈರಲಾಯ್ತು ಮಥುರಾ ಯುವಕನ ಯಶಸ್ಸಿನ ಕಥೆ
ಸಾಮಾನ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ, ತಮ್ಮ ಕನಸುಗಳನ್ನು ನನಸಾಗಿಸಲು ಹಗಲಿರುಳು ಶ್ರಮಿಸುವವರ ಯಶಸ್ಸಿನ ಕಥೆಗಳು ಯಾವಾಗಲೂ ಎಲ್ಲರಿಗೂ ಸ್ಫೂರ್ತಿ. ಭಾರತದಲ್ಲಿ ಕೇವಲ ಒಂದು ಬೈಕ್ ಹೊಂದಿದ್ದ ಯುವಕನೊಬ್ಬ, ಇಂದು ಅಮೆರಿಕದಲ್ಲಿ ಸ್ವಂತ ಮನೆ ಮತ್ತು ಐಷಾರಾಮಿ ಬಿಎಂಡಬ್ಲ್ಯು ಕಾರಿನ ಮಾಲೀಕನಾಗಿರುವ ಕಥೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಪ್ರಸ್ತುತ ಅಮೆರಿಕದ ಟೆಕ್ಸಾಸ್ನಲ್ಲಿ ನೆಲೆಸಿರುವ ಉತ್ತರ ಪ್ರದೇಶದ ಮಥುರಾ ಮೂಲದ ಎನ್ಆರ್ಐ ಅಮಿತ್ ಕಶ್ಯಪ್ ಎಂಬ ಯುವಕನ ಯಶಸ್ಸಿನ ಪಯಣ ಇದೀಗ ನೆಟ್ಟಿಗರ ಗಮನ ಸೆಳೆದಿದೆ.
ಅಮಿತ್ ಕಶ್ಯಪ್ ಅವರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ ಒಂದನ್ನು ಹಂಚಿಕೊಂಡಿದ್ದು, "ಒಂದು ಕಾಲದಲ್ಲಿ ಭಾರತದಲ್ಲಿ ನನ್ನ ಬಳಿ ಕೇವಲ ಒಂದು ಬೈಕ್ ಮಾತ್ರ ಇತ್ತು... ಆದರೆ ಇಂದು ನಾನು ಅಮೆರಿಕದಲ್ಲಿರುವ ನನ್ನ ಸ್ವಂತ ಮನೆಯ ಗ್ಯಾರೇಜ್ನಲ್ಲಿ ಕಾರು ಪಾರ್ಕ್ ಮಾಡುತ್ತಿದ್ದೇನೆ ಎಂದು ನೆನಪಿಸಿಕೊಂಡಾಗ ಒಂದು ರೀತಿ ಖುಷಿಯಾಗುತ್ತದೆ" ಎಂದು ಕ್ಯಾಪ್ಷನ್ ನೀಡಿದ್ದಾರೆ. ಅವರ ಈ ಪೋಸ್ಟ್ ಇದೀಗ ಭಾರಿ ಸದ್ದು ಮಾಡುತ್ತಿದೆ.

ಪೋಷಕರ ತ್ಯಾಗ ನೆನೆದ ಕಶ್ಯಪ್
ಅಮಿತ್ ಅವರ ಈ ಸಾಧನೆಯ ಹಿಂದೆ ಅವರ ಪೋಷಕರ ತ್ಯಾಗ ಮತ್ತು ಕಷ್ಟ ಅಡಗಿದೆ. ಎಚ್ಟಿ.ಕಾಮ್ ಜೊತೆ ಮಾತನಾಡಿದ್ದ ಅಮಿತ್, ತಮ್ಮ ತಂದೆ-ತಾಯಿ ಮಾಡಿದ ತ್ಯಾಗವನ್ನು ನೆನಪಿಸಿಕೊಂಡಿದ್ದಾರೆ. "ನನಗೆ ಉತ್ತಮ ಶಿಕ್ಷಣ ಕೊಡಿಸಲು ನನ್ನ ಪೋಷಕರು ತುಂಬ ತ್ಯಾಗಗಳನ್ನ ಮಾಡಿದ್ದಾರೆ. ಮಥುರಾದ ಅತ್ಯುತ್ತಮ ಶಾಲೆಗಳಲ್ಲಿ ಒಂದಕ್ಕೆ ನನ್ನನ್ನು ಕಳುಹಿಸಿದರು. ತಮ್ಮ ಸ್ವಂತ ಖರ್ಚುಗಳನ್ನು ಕಡಿಮೆ ಮಾಡಿ, ಸಾಲ ಮಾಡಿ ನನ್ನ ಎಂಜಿನಿಯರಿಂಗ್ ಶುಲ್ಕಕ್ಕಾಗಿ ಪ್ರತಿಯೊಂದು ಪೈಸೆಯನ್ನೂ ಉಳಿತಾಯ ಮಾಡಿದರು. ನನ್ನ ತಾಯಿ ಒಲೆಯ ಹೊಗೆ ಮತ್ತು ಕಣ್ಣುರಿಯ ನಡುವೆಯೂ ಮಣ್ಣಿನ ಒಲೆಯಲ್ಲಿ ಅಡುಗೆ ಮಾಡುತ್ತಿದ್ದ ದೃಶ್ಯ ಇಂದಿಗೂ ನನ್ನ ಕಣ್ಣಮುಂದಿದೆ. ಅಂದೇ ನಾನು ನಿರ್ಧರಿಸಿದ್ದೆ, ಭವಿಷ್ಯದಲ್ಲಿ ನಾನು ದೊಡ್ಡ ಸಾಧನೆ ಮಾಡಿ ನನ್ನ ಕುಟುಂಬಕ್ಕಿರುವ 'ಮಧ್ಯಮ ವರ್ಗ' ಎಂಬ ಹಣೆಪಟ್ಟಿಯನ್ನ ಕಳಚುತ್ತೇನೆ ಎಂದು," ಎಂದು ಅವರು ಭಾವುಕರಾಗಿ ನುಡಿದಿದ್ದರು.
ಅಮೆರಿಕದಲ್ಲಿ ಸ್ವಂತ ಮನೆ ಮತ್ತು BMW X7 ಕಾರು
ತಮ್ಮ ಪೋಷಕರಿಗೆ ನೀಡಿದ್ದ ಮಾತಿನಂತೆ ಇಂದು ಅಮಿತ್ ಕಶ್ಯಪ್ ಅವರು ಅಮೆರಿಕದಲ್ಲಿ ಉತ್ತಮ ಉದ್ಯೋಗದೊಂದಿಗೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಕಷ್ಟಪಟ್ಟು ಓದಿಸಿ ಬೆಳೆಸಿದ ಪೋಷಕರಿಗೆ ಅಮೆರಿಕದಲ್ಲಿ ಒಂದು ದೊಡ್ಡ ಮನೆಯನ್ನ ಉಡುಗೊರೆಯಾಗಿ ನೀಡಿದ್ದಾರೆ. "ನಾನು ಅಮೆರಿಕದ ರಸ್ತೆಗಳಲ್ಲಿ BMW X7 ಕಾರನ್ನು ಓಡಿಸುತ್ತೇನೆ. ಎಲ್ಲಕ್ಕಿಂತ ಖುಷಿಯ ವಿಚಾರವೆಂದರೆ, ಆ ಕಾರಿನಲ್ಲಿ ನನ್ನ ತಂದೆ-ತಾಯಿಯನ್ನು ಕೂರಿಸಿಕೊಂಡು ಅವರ ಜೊತೆ ನಾನು ಪ್ರಯಾಣಿಸುತ್ತೇನೆ," ಎಂದು ಅಮಿತ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಕೇವಲ ಮನೆ, ಕಾರು ಮಾತ್ರವಲ್ಲದೆ, ತಮ್ಮ ಪೋಷಕರನ್ನು ಅಮೆರಿಕದ ಪ್ರಮುಖ ಸ್ಥಳಗಳಿಗೂ ಕರೆದುಕೊಂಡು ಹೋಗಿ ಅವರ ಆಸೆಗಳನ್ನ ಈಡೇರಿಸುತ್ತಿದ್ದಾರೆ.
ನೆಟ್ಟಿಗರ ಮೆಚ್ಚುಗೆ
ಸಾಮಾನ್ಯ ಹಿನ್ನೆಲೆಯಿಂದ ಬಂದು ಅಮೆರಿಕದಲ್ಲಿ ಸ್ವಂತ ಮನೆ ಖರೀದಿಸುವ ಮಟ್ಟಿಗೆ ಬೆಳೆದಿರುವ ಅಮಿತ್ ಅವರ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. "ಅಭಿನಂದನೆಗಳು. ತಮ್ಮ ಕನಸುಗಳನ್ನ ನನಸಾಗಿಸಿಕೊಳ್ಳುವ ಧೈರ್ಯ ಮತ್ತು ಉತ್ಸಾಹವನ್ನು ದೇವರು ಎಲ್ಲರಿಗೂ ಕರುಣಿಸಲಿ," ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಆದರೆ, ಈ ವಿಡಿಯೋಗೆ ಕೆಲವೊಂದು ಟೀಕೆಗಳು ಕೂಡ ವ್ಯಕ್ತವಾಗಿವೆ. "ಭಾರತದ ಟೈಯರ್-1 ನಗರಗಳಲ್ಲಿ 2BHK ಮನೆ ಖರೀದಿಸುವುದಕ್ಕಿಂತ, ಅಮೆರಿಕದ ಉಪನಗರಗಳಲ್ಲಿ ಮನೆ ಖರೀದಿಸುವುದು ತುಂಬಾ ಸುಲಭ. ಹಾಗಾಗಿ ಇದೇನು ಅಂತಹ ದೊಡ್ಡ ಸಾಧನೆಯಲ್ಲ," ಎಂದು ನೆಟ್ಟಿಗರೊಬ್ಬರು ಟೀಕಿಸಿದ್ದಾರೆ. "ಮನುಷ್ಯರು ತಮ್ಮ ಬಳಿ ಇರುವ ಭೌತಿಕ ವಸ್ತುಗಳನ್ನ ಪ್ರದರ್ಶಿಸಲು ಮಾತ್ರ ಇಷ್ಟಪಡುತ್ತಾರೆ," ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.


Click it and Unblock the Notifications
