ತಮಿಳುನಾಡು ಸಿಎಂ ವಿಜಯ್ 2029ರಲ್ಲಿ ಪ್ರಧಾನಿ ಅಭ್ಯರ್ಥಿಯಾಗ್ತಾರಾ: AIADMK ಮಾಜಿ ಸಚಿವ ಸ್ಫೋಟಕ ಹೇಳಿಕೆ
ಪ್ರಸ್ತುತ ತಮಿಳುನಾಡು ಸಿಎಂ ಆಗಿರುವ ವಿಜಯ್ ಅವರು ಉತ್ತಮ ಕೆಲಸಗಳ ಮೂಲಕ ದೇಶದ ಗಮನ ಸೆಳೆಯುತ್ತಿದ್ದಾರೆ. ಈ ನಡುವೆಯೇ ಅವರು ದೇಶದ ಮುಂದಿನ ಪ್ರಧಾನಮಂತ್ರಿ ಆಗಲಿದ್ದಾರೆ ಎನ್ನುವ ಚರ್ಚೆಯೊಂದು ಮುನ್ನಲೆಗೆ ಬಂದಿದೆ. ಇದು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ.
'2029ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಸಿದ್ಧತೆಗಳು ನಡೆಯುತ್ತಿವೆ. ಎಲ್ಲಾ ಭಾಷೆಗಳಲ್ಲೂ ರೀಲ್ಸ್ ಬಿಡುಗಡೆ ಮಾಡುವ ಮೂಲಕ ಅವರ ವರ್ಚಸ್ಸನ್ನು ಹೆಚ್ಚಿಸಲಾಗುತ್ತಿದೆ. ದೆಹಲಿಯಲ್ಲಿ ಇರುವವರು ತಕ್ಷಣವೇ ಎಚ್ಚೆತ್ತುಕೊಳ್ಳಬೇಕು,' ಎಂದು ಎಐಎಡಿಎಂಕೆ ಮಾಜಿ ಸಚಿವ ಆರ್.ಬಿ. ಉದಯಕುಮಾರ್ ಹೇಳಿದ್ದಾರೆ.

ಆರ್.ಬಿ. ಉದಯಕುಮಾರ್ ಸ್ಫೋಟಕ ಹೇಳಿಕೆ
ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಸರ್ಕಾರ ಜಾರಿಯಲ್ಲಿದೆ. ಈ ನಡುವೆಯೇ ವಿಜಯ್ ಅವರ ಆಡಳಿತವನ್ನು ವಿಪಕ್ಷಗಳು ಟೀಕಿಸಲಾರಂಭಿಸಿವೆ. ಎಐಎಡಿಎಂಕೆ ಮಾಜಿ ಸಚಿವ ಆರ್.ಬಿ. ಉದಯಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 'ತಮಿಳುನಾಡಿನಲ್ಲಿ ವಿಜಯ್ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡು 75 ದಿನಗಳು ಕಳೆದಿವೆ. ಈ ಅವಧಿಯಲ್ಲಿ ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂದು ಸ್ವತಃ ಸಿಎಂ, ಸಚಿವರು, ಶಾಸಕರು, ಅಧಿಕಾರಿಗಳಿಗೆ ಅಥವಾ ಜನರಿಗಾದರೂ ಏನಾದರೂ ತಿಳಿದಿದೆಯೇ ಎಂಬ ಅನುಮಾನ ನಮಗೆ ಮೂಡುತ್ತಿದೆ,' ಎಂದು ಹೇಳಿದ್ದಾರೆ.
ಟಿವಿಕೆ ಪಕ್ಷದ ವಿರುದ್ಧ ಟೀಕೆ
'ವಿಪಕ್ಷಗಳು ಎತ್ತಿ ತೋರಿಸುವ ವಿಷಯಗಳ ಕಡೆಗೆ ಮುಖ್ಯಮಂತ್ರಿ ವಿಜಯ್ ಅವರು ಗಮನದಲ್ಲಿ ಇಟ್ಟುಕೊಳ್ಳುತ್ತಿಲ್ಲ. ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ, ಮಹಿಳೆಯರ ರಕ್ಷಣೆ, ಬೆಳೆ ಸಾಲ ಮನ್ನಾ, ಬರಗಾಲ, ಮೇಕೆದಾಟು ಅಣೆಕಟ್ಟು ವಿವಾದ, ದ್ವಿಭಾಷಾ ಸಮಸ್ಯೆ ಹೀಗೆ ತಕ್ಷಣವೇ ಪರಿಹರಿಸಬೇಕಾದ ಸಾವಿರಾರು ಸಮಸ್ಯೆಗಳಿವೆ. ಆದರೆ ಅತ್ಯಂತ ಸಹಜವಾಗಿ ಸಣ್ಣ ತಪ್ಪು ನಡೆದುಹೋಗಿದೆ. ತಪ್ಪು ಮಾಡಿದವರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ,' ಎಂದು ಹೇಳಿ ಟಿವಿಕೆ ಪಕ್ಷದವರು ಜಾರಿಕೊಳ್ಳುತ್ತಿದ್ದಾರೆ,' ಎಂದು ಆರೋಪಿಸಿದ್ದಾರೆ.
'ಮುಖ್ಯಮಂತ್ರಿ ವಿಜಯ್ ಅವರು ಮಾಡದ ಕೆಲಸಗಳನ್ನೂ ಮಾಡಿದ್ದಾರೆ ಎಂದು ಫೇಕ್ ವಿಡಿಯೋಗಳನ್ನು ಸಿದ್ಧಪಡಿಸಲಾಗಿದೆ. ತಮಿಳು ಮಾತ್ರವಲ್ಲದೆ ವಿವಿಧ ಭಾಷೆಗಳ ಇನ್‌ಫ್ಲುಯೆನ್ಸರ್‌ಗಳ ಮೂಲಕ ರೀಲ್ಸ್‌ಗಳನ್ನು ಬಿಡುಗಡೆ ಮಾಡಿ ಅವರ ವರ್ಚಸ್ಸನ್ನು ಹೆಚ್ಚಿಸಲಾಗುತ್ತಿದೆ. ಇದನ್ನು ಬಿಟ್ಟರೆ ಈ 75 ದಿನಗಳಲ್ಲಿ ವಿಜಯ್ ಸರ್ಕಾರ ಯಾವುದೇ ಕೆಲಸ ಮಾಡಿದ್ದಾಗಿ ನಮಗಂತೂ ಕಾಣಿಸುತ್ತಿಲ್ಲ,' ಎಂದು ಹೇಳಿದ್ದಾರೆ.
'ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಸಿದ್ಧತೆ'
'ಈ ಸುಳ್ಳು ವರ್ಚಸ್ಸನ್ನು ಇಟ್ಟುಕೊಂಡೇ ಮುಂಬರುವ 2029ರ ಲೋಕಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ವಿಜಯ್ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಬಿಂಬಿಸಲು ಸಿದ್ಧತೆಗಳು ನಡೆಯುತ್ತಿವೆ. ದೆಹಲಿಯಲ್ಲಿ ಇರುವವರು ತಕ್ಷಣವೇ ಎಚ್ಚೆತ್ತುಕೊಳ್ಳಬೇಕು ಎಂಬುದೇ ನಮ್ಮ ಎಚ್ಚರಿಕೆಯಾಗಿದೆ,' ಎಂದು ಅವರು ತಿಳಿಸಿದ್ದಾರೆ.
ಮುಂದುವರಿದು ಮಾತನಾಡಿದ ಆರ್.ಬಿ. ಉದಯಕುಮಾರ್ ಅವರು, 'ಸಿ.ಟಿ.ಆರ್. ನಿರ್ಮಲ್ ಕುಮಾರ್ ಮಾತನಾಡುವುದೆಲ್ಲ ಶುದ್ಧ ಸುಳ್ಳು. ಅವರು ನಮ್ಮ ಜೊತೆಗಿದ್ದವರೇ. ಅವರು ನಮ್ಮ ಕಡೆಯವರೇ. ನಾವೇ ಅವರನ್ನು ಅಲ್ಲಿಗೆ ಕಳುಹಿಸಿಕೊಟ್ಟಿದ್ದೇವೆ. ವಿಜಯ್ ಅವರನ್ನು ರಾಜಕೀಯವಾಗಿ ಮುಗಿಸಿ ಬಾ ಎಂದು ನಾವೇ ಅವರನ್ನು ಕಳುಹಿಸಿದ್ದೇವೆ,' ಎಂದು ಹೇಳಿದ್ದಾರೆ.
'ಈಗ ತಮಿಳುನಾಡಿನಲ್ಲಿ ವಿದ್ಯುತ್ ಕಡಿತ ಉಂಟಾಗುತ್ತಿರುವುದಕ್ಕೆ ನಿರ್ಮಲ್ ಕುಮಾರ್ ಅವರೇ ಕಾರಣ. ವಿಜಯ್ ಸರ್ಕಾರಕ್ಕೆ ಕೆಟ್ಟ ಹೆಸರು ತರಲು, ಪ್ರತಿಭಟನೆಗಳು ನಡೆಯುವಂತೆ ಮಾಡಲು ಅವರು ವಿದ್ಯುತ್ ವ್ಯತ್ಯಯ ಉಂಟುಮಾಡುತ್ತಿದ್ದಾರೆ. ಈ ಮೂಲಕ ವಿಜಯ್ ರಾಜಕೀಯವನ್ನು ಮುಗಿಸಿದ ಮೇಲೆಯೇ ಅವರು ವಾಪಸ್ ಬರುತ್ತಾರೆ,' ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಒಟ್ಟಿನಲ್ಲಿ ಸಿಎಂ ವಿಜಯ್ ಅವರನ್ನು ದೇಶದ ಮುಂದಿನ ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡುವ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ ಎಂದು ಆರ್.ಬಿ. ಉದಯಕುಮಾರ್ ಅವರು ನೀಡಿರುವ ಹೇಳಿಕೆ ಇದೀಗ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.


Click it and Unblock the Notifications
