Rajiv Gandhi Security Row: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಭದ್ರತೆ, ಸಾವಿನ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ರಾಹುಲ್ ಗಾಂಧಿ!
ಸೋನಿಯಾ ಗಾಂಧಿ ಅವರ ಆತ್ಮಕಥೆ "ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕವು ದೇಶದ ರಾಜಕೀಯ, ಅವರ ವೈಯಕ್ತಿಕ ಜೀವನ ಹಾಗೂ ಅವರ ಕುಟುಂಬವು ಸೇರಿದಂತೆ ಹಲವು ಪ್ರಮುಖ ಚರ್ಚೆಗಳಿಗೆ ಕಾರಣವಾಗಿದೆ. ಇದೀಗ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಅವರ ತಂದೆ ಹಾಗೂ ದೇಶದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಸಾವಿನ ವಿಚಾರದ ಬಗ್ಗೆ ಗಂಭೀರವಾದ ವಿಚಾರವನ್ನು ಹಂಚಿಕೊಂಡಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಭದ್ರತೆಯಲ್ಲಿ ಲೋಪವಾಗಿತ್ತು ಎನ್ನುವ ವಿಚಾರದ ಬಗ್ಗೆ ಮಾತನಾಡಿದ್ದಾರೆ. ರಾಜೀವ್ ಗಾಂಧಿ ಅವರನ್ನು "ಕೊಲ್ಲಲು ಸಾಧ್ಯವಾಗುವಂತೆ' ಅಥವಾ ಕೃತ್ಯಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಲಾಗಿತ್ತು ಎಂದಿದ್ದಾರೆ. ಆಗಿನ ಪ್ರಧಾನಿ ವಿ.ಪಿ. ಸಿಂಗ್ ಸರ್ಕಾರವು ರಾಜೀವ್ ಗಾಂಧಿ ಅವರ ಭದ್ರತೆಯನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಿತ್ತು ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಇದು ಕಾಂಗ್ರೆಸ್‌ನ ದೀರ್ಘಕಾಲದ ಆರೋಪಕ್ಕೆ ಮತ್ತೆ ಜೀವತುಂಬಿದಂತೆ ಆಗಿದೆ.

ತಮ್ಮ ತಾಯಿ ಸೋನಿಯಾ ಗಾಂಧಿ ಮತ್ತು ಸಹೋದರಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಮಾತನಾಡಿರುವ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಲಾಂಗಿಂಗ್ ಪುಸ್ತಕದ ಬಗ್ಗೆ ಚರ್ಚಿಸಿದ್ದಾರೆ.
ಸಂವಾದದಲ್ಲಿ ಸೋನಿಯಾ ಗಾಂಧಿ ಅವರು ಆ ಘಟನೆಯನ್ನು ನೆನಪಿಸಿಕೊಳ್ಳುತ್ತಾ, ರಾಹುಲ್ ಗಾಂಧಿ ಮನೆಗೆ ಬಂದಾಗ, 'ಅಮ್ಮಾ, ಅಪ್ಪನ ಭದ್ರತೆಯ ವಿಚಾರದಲ್ಲಿ ನಾವು ಏನಾದರೂ ಮಾಡದಿದ್ದರೆ, ಶೀಘ್ರದಲ್ಲೇ ಅವರ ಅಂತ್ಯಕ್ರಿಯೆಗೆ ಹಾಜರಾಗಲು ನಾನು ಮತ್ತೆ ಮನೆಗೆ ಬರಬೇಕಾಗುತ್ತದೆ ಎಂಬುದು ನನಗೆ ಗೊತ್ತಿದೆ' ಎಂದು ಹೇಳಿದ್ದ," ಎಂದಿದ್ದಾರೆ.
ಬಿಹಾರ ಪ್ರವಾಸವೇ ತಮಗೆ ಕೊನೆಯ ಎಚ್ಚರಿಕೆಯ ಗಂಟೆಯಾಗಿತ್ತು ಎಂದು ರಾಹುಲ್ ಗಾಂಧಿ ಹೇಳಿದ್ದರು. ಅಲ್ಲದೆ "ಈ ವಿಚಾರದಲ್ಲಿ ನನ್ನ ನಿಲುವು ಸ್ಪಷ್ಟವಾಗಿತ್ತು. ಅಪ್ಪನ ಭದ್ರತೆಯನ್ನು ತೆಗೆದುಹಾಕಿದ್ದು ಅವರು ಹತ್ಯೆಯಾಗಲೆಂದೇ," ಎಂದು ಅವರು ಹೇಳಿದ್ದಾರೆ. ಮಾಜಿ ಪ್ರಧಾನಿಯ ಭದ್ರತೆಯನ್ನು ಹಿಂಪಡೆದದ್ದು ಕೇವಲ ಆಕಸ್ಮಿಕ ಘಟನೆಯಲ್ಲ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
"ಅವರು ಹತ್ಯೆಯಾಗಲೆಂದೇ ಉದ್ದೇಶಪೂರ್ವಕವಾಗಿ ಭದ್ರತೆಯನ್ನು ತೆಗೆದುಹಾಕಲಾಗಿತ್ತು. ಅವರ ಹತ್ಯೆಗೆ ಅನುಕೂಲವಾಗುವಂತಹ ವಾತಾವರಣವನ್ನೂ ಸೃಷ್ಟಿಸಲಾಗಿತ್ತು. ಅಲ್ಲಿ ಏನು ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿತ್ತು," ಎಂದು ಅವರು ಆರೋಪಿಸಿದ್ದಾರೆ. ಮುಂದುವರಿದು 1991 ರಲ್ಲಿ ಬಿಹಾರಕ್ಕೆ ರಾಹುಲ್ ಗಾಂಧಿ ತಮ್ಮ ತಂದೆ ರಾಜೀವ್ ಗಾಂಧಿ ಅವರ ಪ್ರವಾಸದಲ್ಲಿ ಹೇಗೆ ಭಾಗವಹಿಸಿದ್ದರು ಎಂಬುದನ್ನು ಸೋನಿಯಾ ಗಾಂಧಿ ಉಲ್ಲೇಖಿಸಿದ್ದಾರೆ. ಅಲ್ಲಿ ಮಾಜಿ ಪ್ರಧಾನಿ ಮೇಲೆ ಕಲ್ಲು ತೂರಾಟ ನಡೆಸಲಾಯಿತು ಮತ್ತು ಜನಸಮೂಹ ಅವರ ವಿರುದ್ಧ ಘೋಷಣೆಗಳನ್ನು ಕೂಗಿದ್ದರು ಎಂದೂ ಹೇಳಿದ್ದಾರೆ.
ಪ್ರಿಯಾಂಕಾ ಗಾಂಧಿ ಹೇಳಿದ್ದೇನು ?
ಈ ಸಂವಾದದಲ್ಲಿ ಮಾತನಾಡಿರುವ ಪ್ರಿಯಾಂಕಾ ಗಾಂಧಿ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ ರಾಜೀವ್ ಗಾಂಧಿಯವರ ಭದ್ರತೆಯ ಬಗ್ಗೆ ಸೋನಿಯಾ ಗಾಂಧಿ ತೀವ್ರ ಕಳವಳ ಹೊಂದಿದ್ದರು ಎಂದಿದ್ದಾರೆ. ನೀವು ಸುತ್ತಮುತ್ತಲಿನ ಮುಳ್ಳುತಂತಿಗಳನ್ನು ಪರಿಶೀಲಿಸುತ್ತಿದ್ದದ್ದು ನನಗೆ ನೆನಪಿದೆ. ಭದ್ರತಾ ಸಿಬ್ಬಂದಿಯಲ್ಲಿ ಯಾರಾದರೂ ಮಲಗಿದ್ದರೆ, ಅವರು ನಿದ್ರಿಸುತ್ತಿದ್ದಾರೆ ಎಂದು ನೀವು ಹೇಳುತ್ತಿದ್ದಿರಿ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ರಾಜೀವ್ ಗಾಂಧಿಯವರ ಭದ್ರತೆಯನ್ನು ಹಿಂಪಡೆದ ವಿಚಾರದಲ್ಲಿ ಕಾಂಗ್ರೆಸ್‌ನ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಭದ್ರತೆ ಹಿಂಪಡೆದಿದ್ದ ಮಾಜಿ ಪ್ರಧಾನಿ ವಿಪಿ ಸಿಂಗ್
ಇನ್ನು ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ಬಳಿಕ 1985ರಲ್ಲಿ ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ಸ್ಥಾಪಿಸಲಾಗಿತ್ತು. ಸಂಸತ್ತು 1988ರಲ್ಲಿ ಎಸ್‌ಪಿಜಿ ಕಾಯ್ದೆಯನ್ನು ಅಂಗೀಕರಿಸಿತ್ತು. ಈ ರಕ್ಷಣಾ ತಂಡಕ್ಕೆ ಪ್ರಧಾನಿಯ ಭದ್ರತೆ ಹಾಗೂ ರಕ್ಷಣೆಯ ಜವಾಬ್ದಾರಿ ಇದೆ. ಈ ತಂಡವನ್ನು ಪ್ರಧಾನಿಯನ್ನು ರಕ್ಷಿಸಲು ಮೀಸಲಿಟ್ಟಿತು. ಆ ಸಮಯದಲ್ಲಿ, ಈ ಕಾಯ್ದೆಯಲ್ಲಿ ಮಾಜಿ ಪ್ರಧಾನ ಮಂತ್ರಿಗಳಿಗೆ ಅನ್ವಯವಾಗಿರಲಿಲ್ಲ. 1989ರಲ್ಲಿ ವಿಪಿ ಸಿಂಗ್ ಅಧಿಕಾರಕ್ಕೆ ಬಂದಾಗ, ಅವರ ಸರ್ಕಾರವು ಅವರ ಹಿಂದಿನ ಅವಧಿಯಲ್ಲಿ ರಾಜೀವ್ ಗಾಂಧಿಗೆ ನೀಡಲಾದ ಎಸ್‌ಪಿಜಿ ರಕ್ಷಣೆಯನ್ನು ಹಿಂತೆಗೆದುಕೊಂಡಿತು.
ರಾಜೀವ್ ಗಾಂಧಿಯವರ ಹತ್ಯೆಯ ನಂತರ, ಮಾಜಿ ಪ್ರಧಾನಿಯವರ ಭದ್ರತೆಯನ್ನು ರದ್ದುಗೊಳಿಸುವ ನಿರ್ಧಾರಕ್ಕಾಗಿ ವಿ.ಪಿ. ಸಿಂಗ್ ಸರ್ಕಾರವನ್ನು ಟೀಕಿಸಲಾಯಿತು. 1991ರ ಮೇ ತಿಂಗಳಿನಲ್ಲಿ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಹತ್ಯೆಯ ನಡೆದಿತ್ತು. ಪಿತೂರಿ ಮತ್ತು ಭದ್ರತಾ ಅಂಶಗಳನ್ನು ಪರಿಶೀಲಿಸುವ ಕಾರ್ಯವನ್ನು ಜೈನ್ ತನಿಖಾ ಆಯೋಗಕ್ಕೆ ನೀಡಲಾಗಿತ್ತು. ವಿ.ಪಿ. ಸಿಂಗ್ ಜೈನ್ ಆಯೋಗದ ವರದಿಯನ್ನು ನಿರಾಕರಿಸಿದ್ದರು.


Click it and Unblock the Notifications
