Mohanlal: RSS ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ಮೋಹನ್‌ಲಾಲ್; ಸಂಘದ ಕಾರ್ಯಗಳ ಬಗ್ಗೆ ಹೇಳಿದ್ದೇನು?
ಕೋಝಿಕ್ಕೋಡ್ (ಕ್ಯಾಲಿಕಟ್): ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಲಯಾಳಂನ ಸ್ಟಾರ್ ನಟ ಮೋಹನ್ ಲಾಲ್ ಅವರು ಭಾಗವಹಿಸಿದ್ದು, ಆರ್‌ಎಸ್‌ಎಸ್‌ನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ದೇಶಭಕ್ತಿ ಮತ್ತು ರಾಷ್ಟ್ರೀಯ ಪ್ರಜ್ಞೆ ಕೇವಲ ಘೋಷಣೆಗಳಲ್ಲ, ಬದಲಾಗಿ ಭವಿಷ್ಯದ ಪೀಳಿಗೆಗೆ ತಲುಪಿಸಬೇಕಾದ ಮೌಲ್ಯಗಳು ಮತ್ತು ಸಂಸ್ಕೃತಿ ಎಂದು ಹೇಳಿದ್ದಾರೆ.
ಕೇಸರಿ ವಾರಪತ್ರಿಕೆಯ ವತಿಯಿಂದ ನಿರ್ಮಿಸಲಾಗಿರುವ ಮಾತಂಗಿ ಮಲ್ಟಿಮೀಡಿಯಾ ರೆಕಾರ್ಡಿಂಗ್ ಸ್ಟುಡಿಯೋವನ್ನು ಕೋಝಿಕ್ಕೋಡ್‌ನಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಯುವ ಪೀಳಿಗೆಯಲ್ಲಿ ದೇಶಭಕ್ತಿ ಮತ್ತು ದೇಶದ ಬಗ್ಗೆ ಹೆಮ್ಮೆ ಮೂಡಿಸುವುದು ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.

ಆರ್‌ಎಸ್‌ಎಸ್‌ನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ಲಾಘಿಸಿರುವ ಮೋಹನ್ ಲಾಲ್ ಅವರು, ದೇಶಭಕ್ತಿ ಸಾರುವ ಪತ್ರಿಕೋದ್ಯಮ ಮತ್ತು ಸಾಮಾಜಿಕ ಕಾರ್ಯಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರಬೇಕೆಂಬುದು ಸಂಘದ ಕಾರ್ಯಕರ್ತರ ಆಶಯವಾಗಿತ್ತು. ಕೇಸರಿ ಪತ್ರಿಕೆಯ ಮೂಲಕ ಈ ಉದ್ದೇಶವನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಯಿತು. ಪತ್ರಿಕೆಯ ಪ್ರಕಟಣೆಯ ಮೂಲಕ ಸಂಘವು ತನ್ನ ಸಾಂಸ್ಕೃತಿಕ ಹೊಣೆಗಾರಿಕೆಯನ್ನು ನಿರ್ವಹಿಸಿತು. ಭಾರತದ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯ ಮೌಲ್ಯಗಳನ್ನು ಕೇಸರಿ ಜನರಿಗೆ ತಲುಪಿಸಿದೆ ಎಂದೂ ಹೇಳಿದ್ದಾರೆ.
ಮುಂದುವರಿದು ಈ ಧ್ಯೇಯವನ್ನು ಅರ್ಥಪೂರ್ಣಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ ಪಿ ಪರಮೇಶ್ವರನ್ ಸೇರಿದಂತೆ ಇತರರನ್ನು ನಾನು ವಿಶೇಷವಾಗಿ ಸ್ಮರಿಸುತ್ತೇನೆ. ಕೇಸರಿ ಮೂಲಕ, ಪರಮೇಶ್ವರನ್ ಸ್ವಾಮಿ ವಿವೇಕಾನಂದ ಮತ್ತು ಶ್ರೀ ಅರಬಿಂದೋ ಅವರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳು ಮತ್ತು ಬೋಧನೆಗಳನ್ನು ಮಲಯಾಳಿರ ಮನಸ್ಸಿನಲ್ಲಿ ಮಾರ್ಗದರ್ಶಕ ದೀಪಗಳಾಗಿ ಜೀವಂತವಾಗಿಡುವಲ್ಲಿ ಯಶಸ್ವಿಯಾದರು ಎಂದಿದ್ದಾರೆ.
Mohanlal RSS: ದೇಶಭಕ್ತಿ, ರಾಷ್ಟ್ರೀಯ ಪ್ರಜ್ಞೆಯ ಬಗ್ಗೆ ಹೇಳಿದ್ದೇನು ?
ದೇಶಭಕ್ತಿ ಮತ್ತು ರಾಷ್ಟ್ರೀಯ ಪ್ರಜ್ಞೆಯನ್ನು ಒಳಗೊಂಡ ಹಲವಾರು ಚಿತ್ರಗಳಲ್ಲಿ, ವಿಶೇಷವಾಗಿ ಸಶಸ್ತ್ರ ಪಡೆಗಳನ್ನು ಆಧರಿಸಿದ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕಿತು ಎಂದು ಮೋಹನ್ ಲಾಲ್ ಹೇಳಿದ್ದಾರೆ. ಈ ಚಿತ್ರಗಳ ಕುರಿತಾದ ಅವರ ಕೆಲಸದ ಭಾಗವಾಗಿ, ಅವರು ಹಲವಾರು ಸಂದರ್ಭಗಳಲ್ಲಿ ಮಿಲಿಟರಿ ಶಿಬಿರಗಳು ಮತ್ತು ಗಡಿ ಪ್ರದೇಶಗಳಿಗೆ ಭೇಟಿ ನೀಡಿದ್ದರು. ಈ ಭೇಟಿಗಳು ಅವರು ಪುಸ್ತಕಗಳ ಮೂಲಕ ಕಲಿತದ್ದನ್ನು ಮೀರಿ ದೇಶಭಕ್ತಿ ಮತ್ತು ರಾಷ್ಟ್ರೀಯ ಹೆಮ್ಮೆಯನ್ನು ನೇರವಾಗಿ ಅನುಭವಿಸಲು ಸಹಾಯ ಮಾಡಿದ್ದವು ಎಂದು ಸ್ಮರಿಸದ್ದಾರೆ.
ಅಲ್ಲದೆ, ಸೈನಿಕರು ನಮ್ಮ ಗಡಿಗಳಲ್ಲಿ ಕಾವಲು ಕಾಯುತ್ತಿರುವುದರಿಂದ ನಾವು ಸುರಕ್ಷಿತವಾಗಿ ಬದುಕಲು ಸಾಧ್ಯವಾಗಿದೆ. ಈ ಸೈನಿಕರ ಹೃದಯ ಬಡಿತದಲ್ಲಿ ನಿಜವಾದ ದೇಶಭಕ್ತಿಯನ್ನು ಕಾಣಬಹುದು ಎಂದು ನಾನು ಆಗಾಗ್ಗೆ ಭಾವಿಸಿದ್ದೇನೆ. ಮುಂದಿನ ಸಿನಿಮಾ ಆಪರೇಷನ್ ಗಂಗಾ ಚಿತ್ರವು ದೇಶಭಕ್ತಿಯನ್ನು ಕೇಂದ್ರ ವಿಷಯವಾಗಿ ಹೊಂದಿದೆ. ಈ ಸಿನಿಮಾದಲ್ಲಿ ನಟಿಸುವ ಮೂಲಕ ತಮ್ಮ ಕೆಲಸದ ಮೂಲಕ ದೇಶಭಕ್ತಿಯ ಪ್ರಚಾರಕ್ಕೆ ಕೊಡುಗೆ ನೀಡುವುದನ್ನು ಮುಂದುವರಿಸುವುದಾಗಿಯೂ ಹೇಳಿದ್ದಾರೆ.
ಇನ್ನು ಮಲಯಾಳಂ ನಟ ಮೋಹನ್‌ಲಾಲ್ ಅವರು ಆರ್‌ಎಸ್‌ಎಸ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ. ಈ ವಿಚಾರವು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೂ ಸಹ ಕಾರಣವಾಗಿದೆ.




Click it and Unblock the Notifications
