ಕರ್ನಾಟಕದಲ್ಲಿ ಜಪಾನ್ ಮಾದರಿ ರೈಲ್ವೆ ನಿಲ್ದಾಣ ನಿರ್ಮಾಣ! ಸಿಎಂ ಡಿಕೆಶಿ ಮಹತ್ವದ ಆಸೆ
ಬೆಂಗಳೂರು: ಕರ್ನಾಟಕದಲ್ಲೂ ಜಪಾನ್ ಮಾದರಿಯ ಅತ್ಯಾಧುನಿಕ ರೈಲ್ವೆ ನಿಲ್ದಾಣ ನಿರ್ಮಾಣವಾಗಬೇಕು ಎಂಬ ಅಭಿಲಾಷೆಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಕ್ತಪಡಿಸಿದ್ದಾರೆ. ಜಪಾನ್‌ನ ರೈಲ್ವೆ ವ್ಯವಸ್ಥೆ, ಅಲ್ಲಿನ ಆಧುನಿಕ ಸೌಲಭ್ಯಗಳು ಮತ್ತು ಪ್ರಯಾಣಿಕರಿಗೆ ಕಲ್ಪಿಸಿರುವ ಅನುಕೂಲತೆಗಳು ಮಾದರಿಯಾಗಿದ್ದು, ರಾಜ್ಯದ ಒಂದು ರೈಲ್ವೆ ನಿಲ್ದಾಣವನ್ನಾದರೂ ಇದೇ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಆಸೆ ಇದೆ ಎಂದು ತಿಳಿಸಿದ್ದಾರೆ. ಡಿಕೆ ಶಿವಕುಮಾರ್ ಅವರ ಈ ಹೇಳಿಕೆ ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಯ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಜಪಾನ್‌ನಲ್ಲಿ ರೈಲ್ವೆ ಪ್ರಯಾಣದ ಅನುಭವವನ್ನು ವಿಡಿಯೋ ಮೂಲಕ ಹಂಚಿಕೊಂಡಿರುವ ಸಿಎಂ ಅವರು, ಅಲ್ಲಿನ ರೈಲ್ವೆ ನಿಲ್ದಾಣಗಳ ಸ್ವಚ್ಛತೆ, ಆಧುನಿಕ ಸೌಲಭ್ಯಗಳು, ರೈಲುಗಳ ವೇಗ ಹಾಗೂ ಸಮಯಪಾಲನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿಯೂ ಜಪಾನ್ ಮಾದರಿಯ ಅತ್ಯಾಧುನಿಕ ರೈಲ್ವೆ ನಿಲ್ದಾಣವನ್ನು ನಿರ್ಮಿಸುವ ಪ್ರಯತ್ನ ಮಾಡಬೇಕು ಎಂಬ ಅಭಿಲಾಷೆ ಹೊಂದಿರುವುದಾಗಿ ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ನಮ್ಮ ಕರ್ನಾಟಕದಲ್ಲಿಯೂ ಜಪಾನ್ ಮಾದರಿ ರೈಲ್ವೆ
ಜಪಾನ್‌ನಲ್ಲಿರುವ ರೈಲ್ವೆ ನಿಲ್ದಾಣಗಳನ್ನು ನೋಡಿದಾಗ ವಿಶೇಷ ಅನುಭವವಾಗುತ್ತದೆ. ಪ್ರತಿಯೊಂದು ರೈಲ್ವೆ ನಿಲ್ದಾಣದಲ್ಲಿಯೂ ಕೆಳಭಾಗ ಮತ್ತು ಮೇಲ್ಭಾಗದಲ್ಲಿ ದೊಡ್ಡ ದೊಡ್ಡ ಶಾಪಿಂಗ್ ಸೆಂಟರ್‌ಗಳು, ಪಂಚತಾರಾ ಹೋಟೆಲ್‌ಗಳಿವೆ. ವಿಮಾನ ನಿಲ್ದಾಣಗಳನ್ನು ಹೇಗೆ ಸ್ವಚ್ಛವಾಗಿ ನಿರ್ವಹಿಸುತ್ತಾರೋ ಅದೇ ರೀತಿ ರೈಲುಗಳು ಮತ್ತು ರೈಲ್ವೆ ನಿಲ್ದಾಣಗಳನ್ನು ಅತ್ಯಂತ ಸ್ವಚ್ಛವಾಗಿ ಇಟ್ಟುಕೊಂಡಿದ್ದಾರೆ. ಇಂತಹ ಮಾದರಿಯನ್ನು ನಮ್ಮ ಕರ್ನಾಟಕದಲ್ಲಿಯೂ ಕನಿಷ್ಠ ಒಂದು ಕಡೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಬೇಕು ಎಂಬ ಆಸೆ ಇದೆ ಎಂದು ಹೇಳಿದರು.
ಇಲ್ಲಿನ ರೈಲುಗಳ ವೇಗ, ಸ್ವಚ್ಛತೆ ಮತ್ತು ಪ್ರಯಾಣಿಕರಿಗೆ ಕಲ್ಪಿಸಿರುವ ಸೌಲಭ್ಯಗಳು ಅದ್ಭುತವಾಗಿವೆ. ವಿಮಾನ ಪ್ರಯಾಣದಲ್ಲಿ ಸಿಗುವ ಸೌಲಭ್ಯಗಳಿಗಿಂತಲೂ ಉತ್ತಮವಾದ ಸ್ವಚ್ಛತೆಯನ್ನು ರೈಲ್ವೆ ವ್ಯವಸ್ಥೆಯಲ್ಲಿ ಕಾಯ್ದುಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಒಂದು ನಿಮಿಷವೂ ವ್ಯತ್ಯಯವಾಗದಂತೆ ರೈಲುಗಳ ಆಗಮನ ಮತ್ತು ನಿರ್ಗಮನದ ಸಮಯವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ನಿಗದಿತ ಸಮಯಕ್ಕೆ ರೈಲುಗಳು ಸಂಚರಿಸುತ್ತವೆ. ಇಲ್ಲಿನ ವಿವಿಧ ರೈಲ್ವೆ ನಿಲ್ದಾಣಗಳು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ವೀಕ್ಷಿಸುವ ಅವಕಾಶವೂ ಸಿಕ್ಕಿದೆ ಎಂದರು.
ಇಂತಹ ಅನೇಕ ಹೊಸ ಪ್ರಯತ್ನಗಳಿಗೆ ನಾವು ಕೈಹಾಕಬೇಕು. ನಮ್ಮ ದೇಶವೂ ಅಭಿವೃದ್ಧಿಯ ಹಾದಿಯಲ್ಲಿ ಇನ್ನಷ್ಟು ವೇಗವಾಗಿ ಮುನ್ನಡೆಯಲು ಇಂತಹ ಅತ್ಯುತ್ತಮ ಮಾದರಿಗಳನ್ನು ಅಳವಡಿಸಿಕೊಳ್ಳುವ ಕೆಲಸ ಮಾಡಬೇಕಿದೆ. ಜಪಾನ್ ಪ್ರವಾಸ ನನ್ನ ಜೀವನದಲ್ಲಿ ಹೊಸ ಅನುಭವ ನೀಡಿದೆ ಎಂದು ವಿಡಿಯೋದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಪ್ರತಿದಿನ 900 ಟನ್ ನಗರ ತ್ಯಾಜ್ಯವನ್ನು ಸಂಸ್ಕರಿಸಿ
ಮೈಶಿಮಾ ದ್ವೀಪದಲ್ಲಿರುವ ಈ ಘಟಕ 2001ರಿಂದ ಕಾರ್ಯನಿರ್ವಹಿಸುತ್ತಿದೆ. ಇಂಥ ಎರಡು ದಹನಕಾರಿ ಘಟಕಗಳ ಮೂಲಕ ಪ್ರತಿದಿನ ಗರಿಷ್ಠ 900 ಟನ್ ಪುರಸಭೆ ಘನ ತ್ಯಾಜ್ಯವನ್ನು ಸಂಸ್ಕರಿಸಿ, 32 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದಿಂದ ತ್ಯಾಜ್ಯವನ್ನು ವಿದ್ಯುತ್ತಾಗಿ ಪರಿವರ್ತಿಸಲಾಗುತ್ತದೆ. ಘಟಕವು ತನ್ನ ಸ್ವಂತ ಬಲದಿಂದಲೇ ವಿದ್ಯುತ್ ಅಗತ್ಯವನ್ನು ಪೂರೈಸಿಕೊಂಡು, ಉಳಿದ ವಿದ್ಯುತ್ತನ್ನು ವಿದ್ಯುತ್ ಜಾಲಕ್ಕೆ ಪೂರೈಸುತ್ತಿದೆ.
ಈ ಘಟಕವು ಸುಧಾರಿತ ದಹನ ನಿಯಂತ್ರಣ, ನಿರಂತರ ಹೊರಸೂಸುವಿಕೆ ಮೇಲ್ವಿಚಾರಣೆ ಮತ್ತು ಆಧುನಿಕ ಮಾಲಿನ್ಯ ನಿಯಂತ್ರಣ ವ್ಯವಸ್ಥೆಗಳನ್ನು ಬಳಸುತ್ತದೆ. ಇದರಿಂದ ತ್ಯಾಜ್ಯ ಸಂಸ್ಕರಣೆ ವೈಜ್ಞಾನಿಕ ವಾಗಿ ನಡೆದು, ಪರಿಸರದ ಮೇಲಿನ ದುಷ್ಪರಿಣಾಮ ಕಡಿಮೆಯಾಗುತ್ತದೆ. ಈ ಘಟಕ ತನ್ನ ತಂತ್ರಜ್ಞಾನದ ಜೊತೆಗೆ ವಿಶಿಷ್ಟ ವಿನ್ಯಾಸಕ್ಕೂ ಪ್ರಸಿದ್ಧವಾಗಿದೆ.
ಆಸ್ಟ್ರಿಯನ್ ಕಲಾವಿದ ಫ್ರೀಡೆನ್ಸ್‌ರೈಕ್ ಹಂಡರ್ಟ್‌ವಾಸರ್ ಇದನ್ನು ವಿನ್ಯಾಸಗೊಳಿಸಿದ್ದು, ವರ್ಣರಂಜಿತ ಹೊರನೋಟ, ವಿಭಿನ್ನ ಆಕಾರಗಳು ಮತ್ತು ವ್ಯಾಪಕ ಹಸಿರು ಇದರಲ್ಲಿದೆ. ಈ ವಿನ್ಯಾಸ ಕಲೆ, ಪರಿಸರ ಮತ್ತು ಕೈಗಾರಿಕಾ ಮೂಲಸೌಕರ್ಯದ ಸಂಗಮವಾಗಿದೆ. ನಗರದ ಅಗತ್ಯ ಸೌಲಭ್ಯಗಳು ಪರಿಸರ ಜಾಗೃತಿ ಮೂಡಿಸುವ ಸ್ಥಳಗಳನ್ನಾಗಿಯೂ ರೂಪಿಸಬಹುದು ಎಂಬುದನ್ನು ಇದು ತೋರಿಸುತ್ತದೆ.




Click it and Unblock the Notifications
