ದುಬಾರಿ ಗಿಫ್ಟ್ ಆಸೆಗೆ ₹8.5 ಲಕ್ಷ ಕಳೆದುಕೊಂಡ ಮಂಗಳೂರು ಮಹಿಳೆ: ಸ್ಟಾರ್ ಮೇಕರ್ ಆ್ಯಪ್ ಸೈಬರ್ ವಂಚನೆ ಪ್ರಕರಣ ಬಯಲು!
ಮಂಗಳೂರು: ಆನ್‌ಲೈನ್ ಆ್ಯಪ್‌ಗಳ ಮೂಲಕ ಅಪರಿಚಿತರೊಂದಿಗೆ ಸ್ನೇಹ ಬೆಳೆಸುವುದು ಹಾಗೂ ವಿದೇಶಿ ಉಡುಗೊರೆಗಳ ಆಸೆಗೆ ಬೀಳುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಕರಾವಳಿಯಲ್ಲಿ ನಡೆದ ಈ ಪ್ರಕರಣಯೇ ಉದಾಹರಣೆ. ಸ್ಟಾರ್ ಮೇಕರ್ ಆ್ಯಪ್ ಮೂಲಕ ಪರಿಚಯವಾದ ಅಪರಿಚಿತ ವ್ಯಕ್ತಿಯೊಬ್ಬನ ಮಾತು ನಂಬಿ, ಬ್ರಿಟನ್‌ನಿಂದ ಬರುವ ದುಬಾರಿ ಉಡುಗೊರೆಯ ನಿರೀಕ್ಷೆಯಲ್ಲಿದ್ದ ಮಂಗಳೂರಿನ 54 ವರ್ಷದ ಮಹಿಳೆಯೊಬ್ಬರು ಬರೋಬ್ಬರಿ 8.5 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಈ ಸಂಬಂಧ ಮಂಗಳೂರಿನ ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಸೈಬರ್ ವಂಚನೆ ಪ್ರಕರಣ ದಾಖಲಾಗಿದೆ.

ಬ್ರಿಟನ್ ನಿವಾಸಿ ಎಂದು ನಂಬಿಸಿದ ಕ್ರಿಸ್ ಪಾಲ್!
ದೂರಿನ ಮಾಹಿತಿಯ ಪ್ರಕಾರ, ಸಂತ್ರಸ್ತ ಮಹಿಳೆಯು 2021ರಲ್ಲಿ ಸ್ಟಾರ್ ಮೇಕರ್ ಆ್ಯಪ್ ಡೌನ್‌ಲೋಡ್ ಮಾಡಿ ಸದಸ್ಯರಾಗಿದ್ದರು. ಸುಮಾರು ಎರಡು ತಿಂಗಳ ಹಿಂದೆ ಈ ಆ್ಯಪ್ ಮೂಲಕ ಕ್ರಿಸ್ ಪಾಲ್ ಎಂಬ ಹೆಸರಿನ ಅಪರಿಚಿತ ವ್ಯಕ್ತಿಯ ಪರಿಚಯವಾಗಿತ್ತು. ತಾನು ಬ್ರಿಟನ್‌ನಲ್ಲಿ (UK) ನೆಲೆಸಿರುವುದಾಗಿ ನಂಬಿಸಿದ್ದ ಆತ, ಕ್ರಮೇಣ ಮಹಿಳೆಯೊಂದಿಗೆ ವಾಟ್ಸ್‌ಆ್ಯಪ್ ಮೂಲಕ ಸಂಪರ್ಕ ಬೆಳೆಸಿದ್ದ.
ನವೆಂಬರ್ 8ರಂದು ಮಗುವಿನ ಹುಟ್ಟುಹಬ್ಬದ ವಿಚಾರ ಪ್ರಸ್ತಾಪವಾದಾಗ, ಮಹಿಳೆಯು ಉಡುಗೊರೆ ಕಳುಹಿಸುವಂತೆ ಕೇಳಿಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕ, ಡಾಲರ್ ಕರೆನ್ಸಿ, ಚಿನ್ನಾಭರಣ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನ ಪ್ಯಾಕ್ ಮಾಡಿರುವ ಫೋಟೋಗಳನ್ನ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿ, ಕೊರಿಯರ್ ಮೂಲಕ ರವಾನಿಸಿರುವುದಾಗಿ ವಂಚನೆಯ ಬಲೆ ಬೀಸಿದ್ದ.
ಮುಂಬೈ ಕೊರಿಯರ್ ಹೆಸರಲ್ಲಿ ಕರೆ: ಗಿಫ್ಟ್ ಪಾರ್ಸೆಲ್ ಸ್ಕ್ಯಾಮ್ ನಡೆದಿದ್ದು ಹೇಗೆ?
ಫೋಟೋ ಕಳುಹಿಸಿದ ಮರುದಿನವೇ ಅಂದರೆ ನವೆಂಬರ್ 9ರಂದು ಮಹಿಳೆಗೆ ಅಪರಿಚಿತ ಸಂಖ್ಯೆಯಿಂದ ಕರೆಯೊಂದು ಬಂದಿತ್ತು. ತಾವು ಮುಂಬೈನ ಕೊರಿಯರ್ ಸಂಸ್ಥೆಯ ಪ್ರತಿನಿಧಿಗಳು ಎಂದು ಪರಿಚಯಿಸಿಕೊಂಡ ವಂಚಕರು, "ಬ್ರಿಟನ್‌ನಿಂದ ನಿಮ್ಮ ಹೆಸರಿಗೆ ದುಬಾರಿ ಪಾರ್ಸೆಲ್ ಬಂದಿದೆ. ಅದರಲ್ಲಿ ವಿದೇಶಿ ಕರೆನ್ಸಿ ಹಾಗೂ ಚಿನ್ನಾಭರಣ ಇರುವುದರಿಂದ ಪಾರ್ಸೆಲ್ ಬಿಡುಗಡೆ ಮಾಡಲು ಶುಲ್ಕ ಪಾವತಿಸಬೇಕು" ಎಂದು ಹೇಳಿದ್ದಾರೆ.
ಕೊರಿಯರ್ ಶುಲ್ಕ, ಆದಾಯ ತೆರಿಗೆ (Income Tax) ಹಾಗೂ ಭಯೋತ್ಪಾದನಾ ನಿಗ್ರಹ ಪ್ರಮಾಣಪತ್ರದ (Anti-terrorism clearance certificate) ಶುಲ್ಕ ಹೀಗೆ ನಾನಾ ಕಾರಣಗಳನ್ನ ನೀಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದನ್ನ ನಿಜವೆಂದು ನಂಬಿದ ಮಹಿಳೆ, ನವೆಂಬರ್ 13ರಿಂದ ನವೆಂಬರ್ 20ರ ನಡುವೆ ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳು ಹಾಗೂ ಗೂಗಲ್ ಪೇ ಸಂಖ್ಯೆಗಳಿಗೆ ಹಂತಹಂತವಾಗಿ ಒಟ್ಟು 8.5 ಲಕ್ಷ ರೂಪಾಯಿ ವರ್ಗಾಯಿಸಿದ್ದಾರೆ.
ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು: ಸಾರ್ವಜನಿಕರಿಗೆ ಎಚ್ಚರಿಕೆ
ಲಕ್ಷಾಂತರ ರೂಪಾಯಿ ಪಾವತಿಸಿದರೂ ಯಾವುದೇ ಪಾರ್ಸೆಲ್ ಬಾರದಿದ್ದಾಗ ಹಾಗೂ ವಂಚಕರು ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಮಹಿಳೆಗೆ ತಾನು ಮೋಸ ಹೋಗಿರುವುದು ಅರಿವಾಗಿದೆ. ತಕ್ಷಣವೇ ಅವರು ಮಂಗಳೂರು ಸೆನ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರ ಬ್ಯಾಂಕ್ ಖಾತೆಗಳು ಹಾಗೂ ಮೊಬೈಲ್ ಸಂಖ್ಯೆಗಳ ಜಾಡು ಹಿಡಿದು ತನಿಖೆ ಆರಂಭಿಸಿದ್ದಾರೆ.
ಸೋಶಿಯಲ್ ಮೀಡಿಯಾ ಅಥವಾ ಆ್ಯಪ್‌ಗಳಲ್ಲಿ ಪರಿಚಯವಾಗುವ ಅಪರಿಚಿತರು ಕಳುಹಿಸುವ ದುಬಾರಿ ಗಿಫ್ಟ್ ಆಸೆಗೆ ಬಿದ್ದು ಯಾವುದೇ ಕಾರಣಕ್ಕೂ ಹಣ ವರ್ಗಾಯಿಸಬಾರದು ಎಂದು ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.




Click it and Unblock the Notifications
