ವಿಜಯ್‌ಗೆ ಹೈಕೋರ್ಟ್‌ನಲ್ಲಿ ಮುಖಭಂಗ; ₹30 ಕೋಟಿ ಆಸ್ತಿ ಮರೆಮಾಚಿದ ಆರೋಪದ ಅರ್ಜಿ ವಜಾಕ್ಕೆ ನಕಾರ!
ತಮಿಳುನಾಡು ಮುಖ್ಯಮಂತ್ರಿ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ಸಿ. ಜೋಸೆಫ್ ವಿಜಯ್ ಅವರಿಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. 2026ರ ವಿಧಾನಸಭೆ ಚುನಾವಣೆಯಲ್ಲಿ ಪೆರಂಬೂರು ಕ್ಷೇತ್ರದಿಂದ ವಿಜಯ್ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಚುನಾವಣಾ ಅರ್ಜಿಯನ್ನು ಆರಂಭದಲ್ಲೇ ವಜಾಗೊಳಿಸುವಂತೆ ಅವರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ಚುನಾವಣಾ ಅಫಿಡವಿಟ್‌ನಲ್ಲಿ ತಮ್ಮ ಸಂಪೂರ್ಣ ಆಸ್ತಿ ವಿವರಗಳನ್ನು ಬಹಿರಂಗಪಡಿಸಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಅರ್ಜಿ ಸಲ್ಲಿಕೆಯಾಗಿದ್ದು, ಪ್ರಕರಣದ ಕುರಿತು ಸಂಪೂರ್ಣ ವಿಚಾರಣೆ ನಡೆಯಬೇಕೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿ ವಿ. ಲಕ್ಷ್ಮೀನಾರಾಯಣನ್ ಅವರಿದ್ದ ಪೀಠ ಶುಕ್ರವಾರ ಈ ಮಹತ್ವದ ಆದೇಶ ನೀಡಿದೆ. ಅಕ್ಟೋಬರ್ 8ರಂದು ವಿಜಯ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಲಾಗಿತ್ತು. ಇದೀಗ ಅರ್ಜಿಯನ್ನು ಆರಂಭಿಕ ಹಂತದಲ್ಲೇ ವಜಾಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಆದಾಯ ಮತ್ತು ಆಸ್ತಿ ವಿವರಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ ಎಂಬ ಆರೋಪಗಳು ವಿಚಾರಣೆಗೆ ಅರ್ಹವಾಗಿವೆ. ಈ ಹಂತದಲ್ಲೇ ಆರೋಪಗಳನ್ನು ಸಾಬೀತುಪಡಿಸಲು ಯಾವುದೇ ಆಧಾರಗಳಿಲ್ಲ ಎಂದು ತೀರ್ಮಾನಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರಕರಣದ ಕುರಿತು ಸಂಪೂರ್ಣ ವಿಚಾರಣೆ ನಡೆಸಬೇಕಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಏನಿದು ವಿಜಯ್ ವಿರುದ್ಧದ ಚುನಾವಣಾ ಅರ್ಜಿ?
2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ಅವರು ಪೆರಂಬೂರು ಮತ್ತು ತಿರುಚ್ಚಿ ಪೂರ್ವ ಕ್ಷೇತ್ರಗಳೆರಡರಿಂದಲೂ ಗೆಲುವು ಸಾಧಿಸಿದ್ದರು. ಬಳಿಕ ಅವರು ತಿರುಚ್ಚಿ ಪೂರ್ವ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸದ್ಯ ಪೆರಂಬೂರು ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಅಲ್ಲಿನ ಮತದಾರ ಎಸ್. ದಿನೇಶ್ ಎಂಬುವರು ಮದ್ರಾಸ್ ಹೈಕೋರ್ಟ್‌ಗೆ ಚುನಾವಣಾ ಅರ್ಜಿ ಸಲ್ಲಿಸಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರದೊಂದಿಗೆ ಸಲ್ಲಿಸುವ ಫಾರ್ಮ್-26 ಅಫಿಡವಿಟ್‌ನಲ್ಲಿ ಆಸ್ತಿ, ಆದಾಯ, ಸಾಲ ಮತ್ತು ಇತರ ಅಗತ್ಯ ವಿವರಗಳನ್ನು ಸಂಪೂರ್ಣವಾಗಿ ಬಹಿರಂಗಪಡಿಸಬೇಕು. ಆದರೆ ವಿಜಯ್ ಅವರು ತಮ್ಮ ಆಸ್ತಿ ವಿವರಗಳನ್ನು ಸಂಪೂರ್ಣವಾಗಿ ಘೋಷಿಸಿಲ್ಲ. ಕೆಲವು ಆಸ್ತಿಗಳ ಖರೀದಿ, ಮಾರಾಟ ಮತ್ತು ನೋಂದಣಿ ವಿವರಗಳನ್ನು ಮರೆಮಾಚಿದ್ದಾರೆ ಎಂಬುದು ಅರ್ಜಿದಾರರ ಪ್ರಮುಖ ಆರೋಪವಾಗಿದೆ.
₹30 ಕೋಟಿ ಮೌಲ್ಯದ 3 ಎಕರೆ ಜಮೀನು
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎನ್.ಸಿ. ಅಶೋಕ್ ಕುಮಾರ್ ಅವರು, ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 33A ಹಾಗೂ ಚುನಾವಣಾ ನಡವಳಿಕೆ ನಿಯಮಗಳು 1961ರ ನಿಯಮ 4A ಅಡಿಯಲ್ಲಿ ವಿಜಯ್ ಅವರು ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಹಲವು ಮಾಹಿತಿಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ರಮುಖವಾಗಿ, 2026ರ ಜನವರಿ 6ರಂದು ವಾಲಾಜಾಬಾದ್ ಉಪನೋಂದಣಾಧಿಕಾರಿ ಕಚೇರಿಯ ವ್ಯಾಪ್ತಿಯ ಪನ್ರುಟ್ಟಿ ಗ್ರಾಮದಲ್ಲಿ ಸುಮಾರು 3 ಎಕರೆ ಜಮೀನನ್ನು ₹30 ಕೋಟಿ ಮೌಲ್ಯಕ್ಕೆ ಖರೀದಿಸಿರುವುದನ್ನು ಚುನಾವಣಾ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿಲ್ಲ ಎಂದು ಅರ್ಜಿದಾರರ ಪರ ವಕೀಲರು ಆರೋಪಿಸಿದ್ದಾರೆ.
ಇದರ ಜೊತೆಗೆ ಕೊಡೈಕೆನಾಲ್‌ನ ವಿಲ್ಲಿಪಟ್ಟಿ ಗ್ರಾಮದಲ್ಲಿರುವ ಸರ್ಕಾರಿ ಪೋರಂಬೋಕ್ ಜಮೀನನ್ನು ತಮ್ಮ ವೈಯಕ್ತಿಕ ಆಸ್ತಿಯೆಂದು ತೋರಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಜಮೀನಿನ ಮಾರಾಟ ಪತ್ರಗಳನ್ನು ಮರೆಮಾಚುವುದು, ನೋಂದಣಿ ಮೌಲ್ಯಗಳಲ್ಲಿ ತಪ್ಪು ಮಾಹಿತಿ ನೀಡುವುದು ಸೇರಿದಂತೆ ಹಲವು ಅಂಶಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ರೀತಿಯ ಮಾಹಿತಿಯನ್ನು ಮುಚ್ಚಿಡುವುದು ಮತದಾರರ ಮೇಲೆ ಅನಗತ್ಯ ಪ್ರಭಾವ ಬೀರುವ ಪ್ರಯತ್ನವಾಗಿದ್ದು, ಚುನಾವಣೆಯ ಪಾರದರ್ಶಕತೆಗೆ ಧಕ್ಕೆ ತರುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದಾರೆ.
ನಾಮಪತ್ರ ಪರಿಶೀಲನೆಯ ನಂತರವೂ ಅರ್ಜಿ ಸಲ್ಲಿಸಲು ಅವಕಾಶ
ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ದಾಖಲೆಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳು ಸೀಮಿತ ಅವಧಿಯಲ್ಲಿ ಮಾತ್ರ ವಿಚಾರಣೆ ನಡೆಸಲು ಸಾಧ್ಯವಾಗುತ್ತದೆ. ನಾಮಪತ್ರಗಳ ಪರಿಶೀಲನೆ ವೇಳೆ ಚುನಾವಣಾಧಿಕಾರಿಗಳು ಸಾಮಾನ್ಯವಾಗಿ 24 ಗಂಟೆಗಳೊಳಗೆ ಸಂಕ್ಷಿಪ್ತ ವಿಚಾರಣೆ ನಡೆಸುತ್ತಾರೆ.
ಈ ಸಂದರ್ಭದಲ್ಲಿ ಅಭ್ಯರ್ಥಿಯ ಅಫಿಡವಿಟ್‌ನಲ್ಲಿರುವ ಪ್ರತಿಯೊಂದು ಆಸ್ತಿ ವಿವರವನ್ನು ಆಳವಾಗಿ ಪರಿಶೀಲಿಸುವುದು ಸಾಧ್ಯವಿಲ್ಲ. ಹೀಗಾಗಿ ನಾಮಪತ್ರ ಪರಿಶೀಲನೆಯ ಸಮಯದಲ್ಲಿ ಗಮನಕ್ಕೆ ಬಾರದ ಅಥವಾ ಮರೆಮಾಚಲಾದ ಮಾಹಿತಿಗಳ ವಿರುದ್ಧ ಮತದಾರರು ನಂತರವೂ ಚುನಾವಣಾ ಅರ್ಜಿ ಸಲ್ಲಿಸುವ ಕಾನೂನುಬದ್ಧ ಹಕ್ಕು ಹೊಂದಿರುತ್ತಾರೆ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವಿಜಯ್ ಪರ ವಕೀಲರು ಹೇಳಿದ್ದೇನು?
ಇನ್ನೊಂದೆಡೆ, ವಿಜಯ್ ಪರ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ಆರೋಪಗಳನ್ನು ವಿರೋಧಿಸಿ ವಾದ ಮಂಡಿಸಿದ್ದಾರೆ. ಆಸ್ತಿ ವಿವರಗಳನ್ನು ಬಹಿರಂಗಪಡಿಸದಿರುವುದನ್ನು ಕ್ರಿಮಿನಲ್ ಹಿನ್ನೆಲೆಯನ್ನು ಮರೆಮಾಚುವುದಕ್ಕೆ ಸಮಾನವಾಗಿ ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಅಭ್ಯರ್ಥಿಯ ಅಪರಾಧ ಹಿನ್ನೆಲೆಯನ್ನು ಮರೆಮಾಚುವುದು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಗಂಭೀರ ಅಪಾಯ ಉಂಟುಮಾಡಬಹುದು. ಆದರೆ ಆಸ್ತಿ ವಿವರಗಳಲ್ಲಿನ ವ್ಯತ್ಯಾಸಗಳನ್ನು ಅದೇ ರೀತಿಯಲ್ಲಿ ನೋಡಲು ಸಾಧ್ಯವಿಲ್ಲ ಎಂಬುದು ಅವರ ವಾದವಾಗಿತ್ತು.
ವಿಜಯ್ ಅವರು ಈಗಾಗಲೇ ತಮ್ಮ ಒಟ್ಟು ಆಸ್ತಿಯನ್ನು ಸುಮಾರು ₹630 ಕೋಟಿ ಎಂದು ಘೋಷಿಸಿದ್ದಾರೆ. ಅವರು ಶ್ರೀಮಂತ ಹಿನ್ನೆಲೆಯಿಂದ ಬಂದವರು ಎಂಬುದು ಮತದಾರರಿಗೆ ತಿಳಿದಿರುವ ವಿಚಾರ. ಹೀಗಿರುವಾಗ ಆಸ್ತಿ ಮೌಲ್ಯದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಅಥವಾ ₹650 ಕೋಟಿಗಿಂತ ಹೆಚ್ಚಿನ ಆಸ್ತಿಗಳ ವಿವರಗಳನ್ನು ಬಹಿರಂಗಪಡಿಸದಿರುವುದು ಮತದಾರರ ನಿರ್ಧಾರವನ್ನು ನಿಜವಾಗಿಯೂ ಬದಲಾಯಿಸುತ್ತದೆಯೇ? ಇದರಿಂದ ರಾಜಕೀಯವನ್ನು ಅಪರಾಧೀಕರಣಗೊಳಿಸಿದಂತಾಗುತ್ತದೆಯೇ? ಎಂದು ವಿಜಯ್ ಪರ ವಕೀಲರು ಪ್ರಶ್ನಿಸಿದ್ದಾರೆ.




Click it and Unblock the Notifications
