ವೈಭವ್ ಸೂರ್ಯವಂಶಿ ಪ್ರತಿ ಬಾರಿಯೂ 28 ಸಿಕ್ಸರ್ ಸಿಡಿಯಲು ಸಾಧ್ಯವಿಲ್ಲ: ಕಿವೀಸ್ ಮಾಜಿ ಕ್ರಿಕೆಟರ್ ಹಿಂಗ್ ಹೇಳಿದ್ಯಾಕೆ?
Vaibhav Sooryavanshi: ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಯುಎಇ ವಿರುದ್ಧ ಕೇವಲ 53 ಎಸೆತಗಳಲ್ಲಿ 204 ರನ್ ಬಾರಿಸಿ ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಐತಿಹಾಸಿಕ ದ್ವಿಶತಕ ಸಿಡಿಸಿದ್ದ 15 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರ ಆಟಕ್ಕೆ ಇಡೀ ಕ್ರಿಕೆಟ್ ಜಗತ್ತೇ ನಿಬ್ಬೆರಗಾಗಿದೆ. ಈ ಬೆಳವಣಿಗೆಯ ಬೆನ್ನಲ್ಲೇ ನ್ಯೂಜಿಲೆಂಡ್‌ನ ಮಾಜಿ ದಿಗ್ಗಜ ಆಲ್‌ರೌಂಡರ್ ಕ್ರಿಸ್ ಕೈರ್ನ್ಸ್ ಅವರು ವೈಭವ್ ಅವರನ್ನು 'ಅಸಾಮಾನ್ಯ ಪ್ರತಿಭೆ' ಎಂದು ಶ್ಲಾಘಿಸಿದ್ದು, ಜೊತೆಗೆ ಭಾರತೀಯ ಅಭಿಮಾನಿಗಳ ಅತಿಯಾದ ನಿರೀಕ್ಷೆಗಳ ಸವಾಲು ಕುರಿತು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ವೈಭವ್ ಸೂರ್ಯವಂಶಿ ಅವರ ಭರ್ಜರಿ ಬ್ಯಾಟಿಂಗ್ ಕುರಿತು ಮಾತನಾಡಿರುವ ಕ್ರಿಸ್ ಕೇರ್ನ್ಸ್, ದ್ವಿಶತಕದ ವೇಳೆ ಅವರು ಸಿಡಿಸಿದ 28 ಸಿಕ್ಸರ್‌ಗಳ ಸುರಿಮಳವನ್ನು ನೆನಪಿಸಿಕೊಂಡಿದ್ದಾರೆ. 'ನಾನು ವೈಭವ್ ಆಟವನ್ನು ನೋಡಿದ್ದೇನೆ, ಅವರು ನಿಜವಾಗಿಯೂ ಅದ್ಭುತ ಪ್ರತಿಭೆ. ದ್ವಿಶತಕದ ಹಾದಿಯಲ್ಲಿ 28 ಸಿಕ್ಸರ್ ಬಾರಿಸುವುದು ಸಾಮಾನ್ಯವಲ್ಲ. ಅವರು ಪ್ರತಿ ಪಂದ್ಯದಲ್ಲೂ ಇದೇ ರೀತಿ ಆಡಲು ಸಾಧ್ಯವಿಲ್ಲ. ಬಹುಶಃ ಅವರು ತಮ್ಮ ವೃತ್ತಿಜೀವನದಲ್ಲಿ ಮತ್ತೆಂದೂ ಇಂತಹ ಇನ್ನಿಂಗ್ಸ್ ಆಡದಿರಬಹುದು,' ಎಂದು ಹೇಳಿದ್ದಾರೆ.

ಮತ್ತೆ 28 ಸಿಕ್ಸರ್‌ಗಳ ಪ್ರದರ್ಶನ ನೀಡುವುದು ಅಸಾಧ್ಯ
ಮುಂದಿನ ದಿನಗಳಲ್ಲಿ ವೈಭವ್ ಸೂರ್ಯವಂಶಿ ಎದುರಿಸಬೇಕಾದ ಅತಿದೊಡ್ಡ ಸವಾಲಿನ ಬಗ್ಗೆಯೂ ಕೇರ್ನ್ಸ್ ಪ್ರತಿಕ್ರಿಯಿಸಿದ್ದಾರೆ. 'ಅವರು ಕ್ರೀಸ್‌ಗೆ ಇಳಿದ ಪ್ರತಿ ಬಾರಿಯೂ ಭಾರತೀಯ ಕ್ರಿಕೆಟ್ ಪ್ರೇಕ್ಷಕರು ಇದೇ ರೀತಿಯ ಸಿಡಿಲಬ್ಬರದ ಬ್ಯಾಟಿಂಗ್ ಮತ್ತು ದಾಖಲೆಗಳನ್ನು ನಿರೀಕ್ಷಿಸುತ್ತಾರೆ. ಆದರೆ ಪ್ರತಿ ಬಾರಿಯೂ ಅಂತಹದ್ದೇ ಪ್ರದರ್ಶನ ನೀಡುವುದು ಅಸಾಧ್ಯ. ಅಭಿಮಾನಿಗಳ ಈ ನಿರೀಕ್ಷೆಯೇ ಅವರಿಗೆ ಮುಂದೆ ದೊಡ್ಡ ಸವಾಲಾಗಲಿದೆ,' ಎಂದು ಕೇರ್ನ್ಸ್ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಸೂರ್ಯವಂಶಿಗೆ ಯುವರಾಜ್ ಸಿಂಗ್ ಮಹತ್ವದ ಸಲಹೆ
ಈ ಟೂರ್ನಿಯಲ್ಲಿ ಯುಎಇ ವಿರುದ್ಧದ ಸ್ಫೋಟಕ ಇನ್ನಿಂಗ್ಸ್‌ಗೂ ಮುನ್ನ ವೈಭವ್ ಸೂರ್ಯವಂಶಿ ಕಡಿಮೆ ರನ್‌ಗಳ ಸವಾಲು ಎದುರಿಸಿದ್ದರು (ಪಾಕಿಸ್ತಾನ ಶಾಹೀನ್ಸ್ ವಿರುದ್ಧ 11 ರನ್ ಮತ್ತು ನೇಪಾಳ ಎ ವಿರುದ್ಧ 26 ರನ್). ಆ ಸಂದರ್ಭದಲ್ಲಿ ತಮ್ಮ ನೆಚ್ಚಿನ ಆಟಗಾರ ಯುವರಾಜ್ ಸಿಂಗ್ ಅವರೊಂದಿಗೆ ಸುಮಾರು ಅರ್ಧ ಗಂಟೆ ಕಾಲ ಮಾತನಾಡಿ, ಬ್ಯಾಟಿಂಗ್ ತಂತ್ರಗಾರಿಕೆ ಮತ್ತು ಆತ್ಮವಿಶ್ವಾಸದ ಕುರಿತು ಸಲಹೆ ಪಡೆದಿದ್ದಾಗಿ ವೈಭವ್ ಹೇಳಿಕೊಂಡಿದ್ದರು. ಯುವರಾಜ್ ನೀಡಿದ ಮಾರ್ಗದರ್ಶನದ ಬೆನ್ನಲ್ಲೇ ಅವರು ಕೇವಲ 52 ಎಸೆತಗಳಲ್ಲಿ ದ್ವಿಶತಕ ಪೂರೈಸಿ ಹೊಸ ದಾಖಲೆ ಬರೆದಿದ್ದರು.
ವೈಭವ್ ಸೂರ್ಯವಂಶಿ ಅವರ ಸಾಧನೆಯ ಅಂಕಿಅಂಶಗಳು
ಭಾರತದ 19 ವರ್ಷದೊಳಗಿನವರ (U19) ತಂಡದ ಪರ ಯುವ ಏಕದಿನ ಪಂದ್ಯಗಳಲ್ಲಿ 25 ಇನ್ನಿಂಗ್ಸ್‌ಗಳಿಂದ 56.48ರ ಸರಾಸರಿ ಮತ್ತು 165.72ರ ಸ್ಟ್ರೈಕ್ ರೇಟ್‌ನಲ್ಲಿ 1,412 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ ಮತ್ತು 7 ಅರ್ಧಶತಕಗಳಿದ್ದು, ಈ ವರ್ಷದ ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಗಳಿಸಿದ 175 ರನ್ ಗರಿಷ್ಠ ಮೊತ್ತವಾಗಿದೆ. ಭಾರತದ ಪರ 10 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಅವರು, 185ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ 295 ರನ್ ಕಲೆಹಾಕಿದ್ದು, ಎರಡು ಅರ್ಧಶತಕ ಮತ್ತು ಗರಿಷ್ಠ 81 ರನ್ ದಾಖಲಿಸಿದ್ದಾರೆ.


Click it and Unblock the Notifications
