KEA ಗುಡ್‌ನ್ಯೂಸ್: 814 ಉಪನ್ಯಾಸಕರ ನೇಮಕಾತಿಗೆ ಅಧಿಸೂಚನೆ, ಡಿ.25 ಅರ್ಜಿ ಸಲ್ಲಿಕೆಗೆ ಕೊನೆ ದಿನ, ವಿವರ
ಬೆಂಗಳೂರು: ಕರ್ನಾಟಕ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ವಿವಿಧ ವಿಷಯಗಳ ಒಟ್ಟು 814 ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು ಗುರುವಾರ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಅರ್ಹತೆ, ದಿನಾಂಕ, ಶುಲ್ಕ ಪಾವತಿ ಸೇರಿದಂತೆ ಸಂಪೂರ್ಣ ಪ್ರಕ್ರಿಯೆ ಮಾಹಿತಿ ಇಲ್ಲಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಡಿಸೆಂಬರ್ 25 ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಡಿಸೆಂಬರ್ 26 ಕೊನೆ ದಿನ ಎಂದು ತಿಳಿಸಿದ್ದಾರೆ.

ಒಟ್ಟು ಉಪನ್ಯಾಸಕರ ಹುದ್ದೆಗಳಲ್ಲಿ ಉಳಿಕೆ ಮೂಲ ವೃಂದದ 778 ಹಾಗೂ ಕಲ್ಯಾಣ ಕರ್ನಾಟಕ ವೃಂದದ 36 ಹುದ್ದೆಗಳು ಸೇರಿವೆ. ಸ್ನಾತಕೋತ್ತರ ಪದವಿ ಜತೆಗೆ ಬಿ.ಇಡಿ ಮಾಡಿರುವ ಅಭ್ಯರ್ಥಿಗಳೂ ಈ ಉಪನ್ಯಾಸಕ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಮುಂದಿನ 2027ರಲ್ಲಿ ಮಾರ್ಚ್ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ಅವರು ಹೇಳಿದರು.
ಆಂಗ್ಲ, ಕನ್ನಡ ಭಾಷಾ ಹೆಚ್ಚಿನ ಉಪನ್ಯಾಸಕರ ಅಗತ್ಯತೆ
ಕನ್ನಡ ವಿಷಯದಲ್ಲಿ 89 ಹುದ್ದೆ ಭರ್ತಿಗೆ ಅರ್ಜಿ ಕರೆಯಲಾಗಿದೆ. ಹಾಗೆಯೇ ಇಂಗ್ಲಿಷ್- 145, ಇತಿಹಾಸ- 50, ಅರ್ಥಶಾಸ್ತ್ರ- 90, ರಾಜ್ಯಶಾಸ್ತ್ರ- 25, ಸಮಾಜಶಾಸ್ತ್ರ- 25, ಭೂಗೋಳ ಶಾಸ್ತ್ರ- 10, ವಾಣಿಜ್ಯ ಶಾಸ್ತ್ರ- 150, ಭೌತಶಾಸ್ತ್ರ- 30, ರಸಾಯನಶಾಸ್ತ್ರ- 30, ಗಣಿತ- 30, ಜೀವಶಾಸ್ತ್ರ- 30, ಕಂಪ್ಯೂಟರ್ ಸೈನ್ಸ್- 110 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಅರ್ಹರು ನಿಗದಿತ ಅವಧಿಯೊಳಗೆ ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬೇಕೆಂದು ತಿಳಿಸಲಾಗಿದೆ.
ಶೈಕ್ಷಣಿಕ ಅರ್ಹತೆ ಸೇರಿದಂತೆ ಇತರ ಹೆಚ್ಚಿನ ವಿವರಗಳಿಗೆ ಈ ನೀಡಲಾಗಿರುವ ಅಧಿಸೂಚನೆ ಲಿಂಕ್ (http://share.google/Q0G30vdRn7KXZZ84r) ಬಳಸಿ ಮಾಹಿತಿ ನೋಡಬಹುದು.
ಉಳಿಕೆ ಮೂಲ ವೃಂದದ ಅಧಿಸೂಚನೆ ವೀಕ್ಷಣೆಗೆ ಇಲ್ಲಿನ https://share.google/Q0G30vdRn7KXZZ84r ಬಳಬೇಕು. ಅಲ್ಲದೇ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಮಾಹಿತಿ ತಿಳಿಯಲು ಇಲ್ಲಿ ನೀಡಲಾಗಿರುವ https://share.google/lT0FNl674Uu9LcWzk ಲಿಂಕ್ ಬಳಸುವಂತೆ ತಿಳಿಸಲಾಗಿದೆ.
ನೇರ ನೇಮಕಾತಿ
ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ನೇರ ನೇಮಕಾತಿ ಕೋಟಾದ ಶೇ. 75 ರಷ್ಟು ಹುದ್ದೆಗಳಲ್ಲಿ ಶೇ. 74 ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮಾಡಲಾಗುವುದು. ಶೇ. 01 ರಷ್ಟು ಹುದ್ದೆಗಳನ್ನು ಸದರಿ ಇಲಾಖೆಯ ಯಾವುದೇ ಗ್ರೂಪ್-ಸಿ ವೃಂದದಲ್ಲಿನ ಸೇವಾನಿರತ ಸಿಬ್ಬಂದಿಗಳು ಖಾಯಂ ಪೂರ್ವಾವಧಿ ತೃಪ್ತಿಕರವಾಗಿ ಪೂರೈಸಿರುತ್ತಾರೆಂದು ಸಕ್ಷಮ ಪ್ರಾಧಿಕಾರದಿಂದ ಘೋಷಿಸಲ್ಪಟ್ಟಿರುವವರಿಗೆ ಮೀಸಲಿಡಲಾಗಿದೆ. ಅರ್ಹ ಸೇವಾನಿರತ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ ಸದರಿ ಹುದ್ದೆಯನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು ಎಂದು ಕೆಇಎ ತಿಳಿಸಿದೆ.




Click it and Unblock the Notifications
