2 ತಿಂಗಳಲ್ಲಿ 1,300 ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ! AI ಜತೆ ಸ್ಕಿಲ್, ಸಂಗೀತ, ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ
ಬೆಂಗಳೂರು: ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣದಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಶಾಲೆಗಳ ಪ್ರತಿಯೊಂದಕ್ಕೆ ನುರಿತ ಶಿಕ್ಷಕರ ನೇಮಿಸುವ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಇನ್ನೇನ ಮುಂದಿನ 2 ತಿಂಗಳಲ್ಲಿ ರಾಜ್ಯಾವ್ಯಾಪ್ತಿ 1,300 ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್ ಮಧು ಬಂಗಾರಪ್ಪ ಹೇಳಿದರು.
ಬೆಂಗಳೂರಿನ ಬಿಐಇಸಿ ಸಭಾಂಗಣದಲ್ಲಿ ಇಂದು ಬುಧವಾರ ʻಇಂಡಿಯಾ ಡೈಡ್ಯಾಕ್ʼ ಆಯೋಜಿಸಿದ್ದ ಟೈಸ್ (TIEES) ಅಂತಾರಾಷ್ಟ್ರೀಯ ಶಿಕ್ಷಣ ಮತ್ತು ಕೌಶಲ್ಯ ಕುರಿತ ಸಮ್ಮೇಳನ ಮತ್ತು ವಸ್ತುಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣದ ಮೂಲಕ ಕರ್ನಾಟಕವು ಶೈಕ್ಷಣಿಕವಾಗಿ ದೇಶದಲ್ಲೇ ಗಮನ ಸೆಳೆಯಲಿದೆ. ಈ ನಿಟ್ಟಿನಲ್ಲಿ ಮುಂದಿನ ಎರಡೇ ತಿಂಗಳಲ್ಲಿ ಕೆಪಿಎಸ್ ನಿರ್ಮಾಣ ಗುರಿ ಮುಟ್ಟಿಲಿದ್ದೇವೆ ಎಂದು ಅವರುವ ವಿಶ್ವಾಸ ವ್ಯಕ್ತಪಡಿಸಿದರು.
ಕಲಿಕೆಯ ಗುಣಮಟ್ಟ ಸುಧಾರಣೆಗೆ ಒತ್ತು
ಮಕ್ಕಳ ಕಲಿಕೆಯ ಗುಣಮಟ್ಟ ಸುಧಾರಣೆಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಕೆಪಿಎಸ್ ಶಾಲೆಗಳಲ್ಲಿ ಪ್ರತಿಯೊಂದು ವಿಷಯಕ್ಕೂ ನುರಿತ ಶಿಕ್ಷಕರನ್ನು ನೇಮಕ ಮಾಡಲಾಗುವುದು. ಮೂರನೇ ತರಗತಿಯಿಂದಲೇ ಕೃತಕ ಬುದ್ಧಿಮತ್ತೆ (ಎಐ) ಶಿಕ್ಷಣ ನೀಡಲಾಗುವುದು. ಪ್ರಾಥಮಿಕ ಹಂತದಿಂದಲೇ ಕಂಪ್ಯೂಟರ್ ಕಲಿಕೆಗೆ ಅವಕಾಶ ಒದಗಿಸಲಾಗುವುದು ಎಂದು ವಿವರಿಸಿದರು.
ಕೆಪಿಎಸ್ ಶಾಲೆಗಳ ಅಭಿವೃದ್ಧಿಗೆ ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಸಾಲ ದೊರೆತಿದ್ದು, ರಾಜ್ಯ ಸರ್ಕಾರದ ಅನುದಾನ ಸೇರಿದಂತೆ ಒಟ್ಟು 4,500 ಕೋಟಿ ರೂ. ವೆಚ್ಚದಲ್ಲಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಕ್ಯಾಂಪಸ್‌ನಲ್ಲಿ ಗುಣಮಟ್ಟದ ಶಿಕ್ಷಣ ದೊರೆಯಲಿದೆ. ಪ್ರತಿಯೊಂದು ಕೆಪಿಎಸ್ ಶಾಲೆಗೂ ಸರ್ಕಾರದ ವತಿಯಿಂದ ಉಚಿತ ಬಸ್ ಸೌಲಭ್ಯ ಕಲ್ಪಿಸುವ ಉದ್ದೇಶ ಸರ್ಕಾರ ಹೊಂದಿದೆ ಎಂದರು.
ಕೆಪಿಎಸ್ ಶಾಲೆಗಳಲ್ಲಿ ಸಂಗೀತ, ರಂಗಭೂಮಿ, ಮಾನವೀಯ ಮೌಲ್ಯ..
ಶೈಕ್ಷಣಿಕ ವಿಷಯಗಳ ಬೋಧನೆಯ ಜೊತೆಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಸಂಗೀತ ಮತ್ತು ರಂಗಭೂಮಿ ಶಿಕ್ಷಕರನ್ನೂ ಕೆಪಿಎಸ್ ಶಾಲೆಗಳಲ್ಲಿ ಒದಗಿಸಲಾಗುವುದು. ನಮ್ಮದು ಸಂಸ್ಕೃತಿಯನ್ನು ಗೌರವಿಸುವ ದೇಶ. ಅದರಲ್ಲೂ ದಕ್ಷಿಣ ಭಾರತದಲ್ಲಿ ಸಂಸ್ಕೃತಿ ಮತ್ತು ಪರಂಪರೆಗೆ ವಿಶೇಷ ಗೌರವವಿದೆ. ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದಕ್ಕೂ ವಿಶೇಷ ಆದ್ಯತೆ ನೀಡಲು ಚಿಂತನೆ ನಡೆಸಿದ್ದೇವೆ ಎಂದು ಹೇಳಿದರು. ಇದು ಹೇಗೆ, ಯಾವ ರೀತಿ ಎಲ್ಲ ಶಾಲೆಗಳಲ್ಲಿ ಅನುಷ್ಠಾನ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಶಾಲೆಗಳ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದ್ದು, ಮುಂದಿನ 60 ದಿನಗಳಲ್ಲಿ ಪೂರ್ಣಗೊಲಿಸುವ ಗುರಿ ಸರ್ಕಾರ ಹೊಂದಿದೆ.
ಸಂವಿಧಾನದ ಪ್ರಸ್ತಾವನೆ ಓದು ಕಡ್ಡಾಯ
ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ 46 ಸಾವಿರ ಸರ್ಕಾರಿ ಶಾಲೆಗಳಿವೆ., ಎಲ್ಲ ಶಾಲೆಗಳ ಮಕ್ಕಳೂ ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ಪ್ರತಿದಿನ ಓದುವುದನ್ನು ಕಡ್ಡಾಯಗೊಳಿಸಲಾಗಿದೆ. ಇಂದು ಮಕ್ಕಳು ಸಂವಿಧಾನದ ಪ್ರತಿಯನ್ನು ಕೈಯಲ್ಲಿ ಹಿಡಿಯದೆಯೇ ನಿರರ್ಗಳವಾಗಿ ಪ್ರಸ್ತಾವನೆಯನ್ನು ಓದುತ್ತಿದ್ದಾರೆ. ಸಂವಿಧಾನವೇ ಶ್ರೇಷ್ಠ ಎಂಬ ಭಾವನೆಯನ್ನು ಮಕ್ಕಳಲ್ಲಿ ಬೆಳೆಸಲಾಗುತ್ತಿದೆ ಎಂದು ತಿಳಿಸಿದರು.
ಮಕ್ಕಳಿಗೆ ಶಿಕ್ಷದ ಜತೆ ಕೌಶಲ್ಯಾಭಿವೃದ್ಧಿ ಕಲಿಕೆ
ಮಕ್ಕಳ ಶಿಕ್ಷಣ ಕಲಿಕೆ ಜೊತೆಗೆ ಅವರಿಗೆ ಕೌಶಲ್ಯಾಭಿವೃದ್ಧಿ ಕಲಿಸಲು ಆದ್ಯತೆ ನೀಡಲಾಗುತ್ತಿದೆ. ಪ್ರೌಢಶಿಕ್ಷಣ ಪೂರ್ಣಗೊಳಿಸುವ ವೇಳೆಗೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಭವಿಷ್ಯದಲ್ಲಿ ಸ್ವಾವಲಂಬಿಯಾಗಿ ಬದುಕಲು ಹಾಗೂ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಅಗತ್ಯವಾದ ಕೌಶಲ್ಯಗಳನ್ನು ಕಲಿಸುವ ವಾತಾವರಣ ನಿರ್ಮಿಸಲಾಗುತ್ತಿದೆ. ಇದರಿಂದ ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಉದ್ಯೋಗಾವಕಾಶಗಳನ್ನು ಸುಲಭವಾಗಿ ಪಡೆಯಲು ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು.




Click it and Unblock the Notifications
