Karnataka Industry: ಕರ್ನಾಟಕದಲ್ಲಿ ಲಿಯೋ ಎಲೆಕ್ಟ್ರಾನಿಕ್ಸ್ ನಿಂದ ₹500 ಕೋಟಿ ಹೂಡಿಕೆ: ಎಂಬಿ ಪಾಟೀಲ್
ಬೆಂಗಳೂರು: ಜಪಾನಿನ ಪ್ರವಾಸದಲ್ಲಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಎಂಬಿ ಪಾಟೀಲ್ ಅವರು ಗುಡ್‌ನ್ಯೂಸ್ ನೀಡಿದ್ದಾರೆ. ಜಪಾನಿನ ಪ್ರಮುಖ ಎಲೆಕ್ಟ್ರಾನಿಕ್ಸ್ ತಯಾರಿಕಾ ಕಂಪನಿ ಲಿಯೋ ಎಲೆಕ್ಟ್ರಾನಿಕ್ಸ್ ರಾಜ್ಯದಲ್ಲಿ 500 ಕೋಟಿ ರೂಪಾಯಿ ಬಂಡವಾಳ ತೊಡಗಿಸಲಿದೆ. ಇದರಿಂದ ರಾಜ್ಯದ ತಯಾರಿಕಾ ವಲಯದ ಬಲವರ್ಧನೆ ಆಗಲಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯಕ್ಕೆ ಜಪಾನಿ ಕಂಪನಿಗಳಿಂದ ಹೆಚ್ಚಿನ ಬಂಡವಾಳ ಆಕರ್ಷಿಸಲೆಂದು ಜಪಾನ್ ಪ್ರವಾಸದಲ್ಲಿರುವ ಅವರು, ತಾವು ಲಿಯೋ ಎಲೆಕ್ಟ್ರಾನಿಕ್ಸ್ ಕಂಪನಿಯ ಉನ್ನತ ಮಟ್ಟದ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದ್ದಾಗಿ ಅವರು ಮಾಹಿತಿ ನೀಡಿದರು.

800 ಉದ್ಯೋಗ ಸೃಷ್ಟಿ
ಕಂಪನಿಯು ಒಟ್ಟು ಮೂರು ಹಂತಗಳಲ್ಲಿ, 10 ವರ್ಷಗಳಲ್ಲಿ ಈ ಬಂಡವಾಳ ಹೂಡಲಿದೆ. ಇದರಿಂದ 800 ಉದ್ಯೋಗಗಳು ಸೃಷ್ಟಿ ಆಗಲಿವೆ. ಕಂಪನಿಯು 10 ಎಕರೆ ಭೂಮಿ ಕೇಳಿದ್ದು, ಇದನ್ನು ಒದಗಿಸಲಾಗುವುದು. ಈ ಸಂಬಂಧ ಲಿಯೋ ಎಲೆಕ್ಟ್ರಾನಿಕ್ಸ್ ರಾಜ್ಯ ಸರಕಾರದ ಜತೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಂಡವಾಳ ಹೂಡಿಕೆಯಿಂದ ಪ್ರಿಸಿಷನ್ ತಯಾರಿಕಾ ಕ್ಷೇತ್ರಕ್ಕೆ ಲಾಭವಾಗಲಿದೆ. 2027ರ ಏಪ್ರಿಲ್ ತಿಂಗಳಲ್ಲಿ ನಡೆಯಲು ನಿಗದಿಯಾಗಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸುವಂತೆಯೂ ಕಂಪನಿಗೆ ಆಹ್ವಾನ ನೀಡಲಾಗಿದೆ ಎಂದರು. ಜಪಾನಿನ ಸಭೆ ಮಾತುಕತೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಆಯುಕ್ತೆ ಖುಷ್ಬೂ ಗೋಯಲ್ ಇದ್ದರು.
ಜಪಾನ್ ಟೋಕಿಯೊದಲ್ಲಿ 4 ಕಂಪನಿ ಜತೆ ಸಭೆ
ಕರ್ನಾಟಕಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸುವ ಉದ್ದೇಶದೊಂದಿಗೆ ಎಂಬಿ ಪಾಟೀಲ್ ಅವರು ಜಪಾನ್ ಪ್ರವಾಸದಲ್ಲಿದ್ದಾರೆ. ನೆನ್ನೆ ಗುರುವಾರದಂದು ಸೀರೆನ್, ಸಕ್ರಾ ವರ್ಲ್ಡ್ ಹಾಸ್ಪಿಟಲ್, ಮಕಿನೊ ಮತ್ತು ಎನೊಮೊಟೊ ಕಂಪನಿಗಳೊಂದಿಗೆ ಟೋಕಿಯೊದಲ್ಲಿ ಮಾತುಕತೆ ನಡೆಸಿದರು.
ಈಗಾಗಲೇ ಕರ್ನಾಟಕದಲ್ಲಿ ನೆಲೆಯೂರಿರುವ ಕಂಪನಿಗಳೊಂದಿಗೆ ಅವುಗಳ ವಿಸ್ತರಣೆ ಕುರಿತು ಚರ್ಚಿಸಲಾಗಿದೆ. ಮೈಸೂರಿನ ಕಡಕೋಳದಲ್ಲಿ ಆಟೋಮೋಟೀವ್ ಟೆಕ್ಸ್-ಟೈಲ್ಸ್ ತಯಾರಿಕಾ ಘಟಕ ಹೊಂದಿರುವ ಸೀರೆನ್ ಕಂಪನಿಗೆ ಟೊಯೋಟಾ ಕಂಪನಿ ಮುಖ್ಯ ಗ್ರಾಹಕ ಸ್ಥಾನದಲ್ಲಿದೆ. ಇದರ ಜತೆಗೆ ಸೀರನ್ ಕಂಪನಿ ಒಇಎಂ ಸ್ತರದ ಕಂಪನಿಗಳಿಗೆ ತನ್ನ ಉತ್ಪನ್ನಗಳನ್ನು ತಲುಪಿಸಬೇಕು ಎಂದು ಹೇಳಲಾಗಿದೆ.
ಪ್ರಿಸಿಷನ್ ಕನೆಕ್ಟರ್ ಬಿಡಿ ಭಾಗಗಳು ಮತ್ತು ಸೆಮಿಕಂಡಕ್ಟರ್ ಲೆಡ್ ಫ್ರೇಮ್ ತಯಾರಿಕೆಗೆ ಹೆಸರಾಗಿರುವ ಎನೊಮೊಟೊ ಕಂಪನಿಯು ರಾಜ್ಯದಲ್ಲಿ ನೆಲೆಯೂರಲು ಆಸಕ್ತಿ ವ್ಯಕ್ತಪಡಿಸಿದೆ. ಈ ಕಂಪನಿಯು ಪ್ರಿಸಿಷನ್ ಸ್ಟಾಂಪಿಂಗ್, ಎಲೆಕ್ಟ್ರೋಪ್ಲೇಟಿಂಗ್, ರೆಸಿನ್ ಮೌಲ್ಡಿಂಗ್ ಮತ್ತು ಹೈ-ಅಕ್ಯುರೆಸಿ ಡೈ ತಯಾರಿಕೆಯಲ್ಲಿ ಕೂಡ ಮುಂಚೂಣಿಯಲ್ಲಿದೆ ಎಂದರು.



Click it and Unblock the Notifications
