ಜಪಾನ್‌ನಲ್ಲಿ 'ರಿಯಲ್ ಎಸ್ಟೇಟ್ ಸಿಎಂ ಡಿಕೆಶಿ' ದಂಡು: ಅದೆಷ್ಟು ಬಂಡವಾಳ ತರುತ್ತಾರೋ! ಸರ್ಕಾರಕ್ಕೆ ಚಾಟಿ ಬೀಸಿದ ವಿಜಯೇಂದ್ರ
ಬೆಂಗಳೂರು: ರಾಜ್ಯದ ರೈತರು ಬರಗಾಲ ಸಂಕಷ್ಟದಲ್ಲಿದ್ದಾರೆ. ವಾರಗಳಿಂದ ಪ್ರತಿಭಟಿಸುತ್ತಿರುವ ಆಶಾ ಕಾರ್ಯಕರ್ತೆಯರು ಚಳಿಯಲ್ಲಿ ಬೀದಿಯಲ್ಲಿ ಕಷ್ಟ ಅನುಭವಿಸುತ್ತಿದ್ದಾರೆ. ಇತ್ತ ಸಿಎಂ ಡಿಕೆ ಶಿವಕುಮಾರ್ , ಸಚಿವರು ಮತ್ತು ಅಧಿಕಾರಿಗಳ ನಿಯೋಗವು ಜಪಾನ್ ನಲ್ಲಿ ಮೋಜು ಮಸ್ತಿ ಮಾಡುತ್ತಿದೆ. 'ಕಷ್ಟಕ್ಕೆ ಕರಿಬೇಡಿ..ಮೋಜು ಮಸ್ತಿಗೆ ಮರಿಬೇಡಿ... 'ಎಂಬುದು ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ದಿನಗಳಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ-2027 ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳಲು ಆಹ್ವಾನಿಸುವ ಜೊತೆಗೆ ಮುಖ್ಯವಾಗಿ ರಾಜ್ಯಕ್ಕೆ ವಿದೇಶಿ ಕಂಪನಿಗಳಿಂದ ಬಂಡವಾಳ ಆಕರ್ಷಿಸಿಲು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ಒಳಗೊಂಡ ಅಧಿಕಾರಿಗಳ ನಿಯೋಗವನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಜಪಾನ್ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಇಂದಿನಿಂದ ಸೆಪ್ಟೆಂಬರ್ 23-25ರವರೆಗೆ ಅಲ್ಲಿಯೇ ಇದ್ದು, ಪ್ರಮುಖ ಸಮಾಲೋಚನೆ ನಡೆಸಲಿದೆ.

ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ವಿಜಯೇಂದ್ರ ಅವರು ಎಕ್ಸ್ ಪೋಸ್ಟ್ ಮಾಡಿ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. ಇತ್ತ ಬರಗಾಲ ಇದ್ದರೂ ಗದಗ ಡಿಸಿ ಮತ್ತು ಇತರ ಅಧಿಕಾರಿಗಳು ಕಾರ್ಯಕ್ರಮವೊಂದರಲ್ಲಿ ಜಾನಪದ ಹಾಡಿಗೆ ಕುಣಿದ ಪೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
'ಮುಖ್ಯಮಂತ್ರಿಗಳು ಜಪಾನ್‌ನಲ್ಲಿ..ಅಧಿಕಾರಿಗಳು ಮೋಜು ಮಸ್ತಿಯಲ್ಲಿ..ರಾಜ್ಯದ ರೈತರು ಸಂಕಷ್ಟದಲ್ಲಿ..ಆಶಾ ಕಾರ್ಯಕರ್ತೆಯರು ಬೀದಿಯಲ್ಲಿ..' ಎಂದು ಟ್ವೀಟ್ ಮಾಡಿದ್ದಾರೆ. ಜನರ ಕಷ್ಟಕ್ಕೆ ನಮ್ಮ ಕರೀಬೇಡಿ, ಮೋಜು ಮಸ್ತಿಗೆ ಮರೀಬೇಡಿ' ಎಂಬುದು ಕಾಂಗ್ರೆಸ್ ಸರ್ಕಾರದ ಸಾಧನೆ ಸರಮಾಲೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಜಪಾನ್‌ನಲ್ಲಿ ರಿಯಲ್ ಎಸ್ಟೇಟ್ ಮುಖ್ಯಮಂತ್ರಿ ದಂಡು: ಬಿವೈವಿ
ರಿಯಲ್ ಎಸ್ಟೇಟ್ ಮುಖ್ಯಮಂತ್ರಿಗಳು ತಮ್ಮ ದಂಡಿನೊಂದಿಗೆ ಜಪಾನ್ ಪ್ರವಾಸದಲ್ಲಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಬಂಡವಾಳ ಹೂಡಿಕೆಯ ಹೊಳೆಯನ್ನೇ ಹರಿಸಲಿದ್ದಾರೆ. ಅದೆಷ್ಟು ಬಂಡವಾಳ ರಾಜ್ಯಕ್ಕೆ ತರುತ್ತಾರೋ ಆ 'ಶಿವನೇ'ಬಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ಭರವಸೆ ನೀಡಿದ ಬೆನ್ನಲ್ಲೆ ಜಪಾನ್‌ಗೆ ತೆರಳಿರುವ ಸಿಎಂ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನೂ ಅಧಿಕಾರಿಗಳಿಗೆ ಹೇಳೋರು ಇಲ್ಲಾ, ಕೇಳೋರು ಇಲ್ಲಾ. ಅಧಿಕಾರಿಗಳಿಗೆ ಜನಸಾಮಾನ್ಯರ ಸಂಕಷ್ಟ ಕಣ್ಣಿಗೆ ಕಾಣುತ್ತಿಲ್ಲ. ಅವರಿಗೆ ಕಿವಿಯೂ ಕೇಳೋಲ್ಲ. ರೈತರು ಬೆಳೆದ ಬೆಳೆಗೆ ನೀರಿಲ್ಲದೆ ಸಂಕಷ್ಟದಲ್ಲಿದ್ದರೆ ಗದಗ ಡಿಸಿ ಮಾತ್ರ ಕುಣಿದು ಕುಪ್ಪಳಿಸುತ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.
ತಿಂಗಳಿಂದ ಚಳಿಯಲ್ಲಿ 'ಆಶಾ' ಪ್ರತಿಭಟನೆ
ಆಶಾ ಕಾರ್ಯಕರ್ತೆಯರು ತಿಂಗಳುಗಳಿಂದ ಮನೆ, ಕುಟುಂಬ ಬಿಟ್ಟು ಕೊರೆಯುವ ಚಳಿಯಲ್ಲಿ ಹಸುಗೂಸುಗಳೊಂದಿಗೆ, ನ್ಯಾಯಯುತ ವೇತನ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ರಸ್ತೆಯಲ್ಲಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರ ಸಂಕಷ್ಟ ಹೇಳತೀರದು. ಸರ್ಕಾರ ಇವರನ್ನು ನಿರ್ಲಕ್ಷಿಸಿದೆ ಎಂದು ವಿಜಯೇಂದ್ರ ದೂರಿದರು.
ರೈತರ ಸಂಕಷ್ಟ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಬಿಡಿಗಾಸಿನ ಬರಪರಿಹಾರ ಇನ್ನೂ ನೀಡಲಾಗಿಲ್ಲ. ಆದರೂ ರಾಜ್ಯ ಸರ್ಕಾರಕ್ಕೆ ಅನ್ನದಾತರು ಕೂಗು ಕೇಳುತ್ತಿಲ್ಲ. ಮುಖ್ಯಮಂತ್ರಿಗಳೇ ಹಾಗೂ ಅಂಧಾ ದರ್ಬಾರ್ ನಡೆಸುತ್ತಿರುವ ಅಧಿಕಾರಿಗಳೇ ನೊಂದ ಹೆಣ್ಣುಮಕ್ಕಳ, ರೈತರ, ಬಡವರ ಶಾಪ ನಿಮ್ಮನ್ನು ತಟ್ಟದೇ ಬಿಡದು. ಅವರೆಲ್ಲರ ಹಿಡಿಶಾಪ ನಿಮ್ಮನ್ನ ಬಲಿ ಪಡೆದೆ ಪಡೆಯುತ್ತದೆ. ಎಚ್ಚೆತ್ತುಕೊಂಡು ಸಮಸ್ಯೆ ಆಲಿಸಿ, ಇಲ್ಲವಾದರೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಬಹಳ ದಿನ ಈ ನಿಮ್ಮ ಆಟ ನಡಿಯುವುದಿಲ್ಲ, ಎಲ್ಲದಕ್ಕೂ ಅಂತ್ಯವಿದೆ ಎಂದು ಅವರು ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿಗಳು ಜಪಾನ್‌ನಲ್ಲಿ...ಅಧಿಕಾರಿಗಳು ಮೋಜು ಮಸ್ತಿಯಲ್ಲಿ.....ರಾಜ್ಯದ ರೈತರು ಸಂಕಷ್ಟದಲ್ಲಿ... ಆಶಾ ಕಾರ್ಯಕರ್ತೆಯರು ಬೀದಿಯಲ್ಲಿ...ಕಷ್ಟಕ್ಕೆ ಕರಿಬೇಡಿ... ಮೋಜು ಮಸ್ತಿಗೆ ಮರೀಬೇಡಿ....ಇದು ಕಾಂಗ್ರೆಸ್ ಸರ್ಕಾರದ ಸಾಧನೆ ಸರಮಾಲೆ …ಮಾನ್ಯ ರಿಯಲ್ ಎಸ್ಟೇಟ್ ಮುಖ್ಯಮಂತ್ರಿಗಳು ತಮ್ಮ ದಂಡಿನೊಂದಿಗೆ ಜಪಾನ್ ಪ್ರವಾಸದಲ್ಲಿದ್ದಾರೆ.. ರಾಜ್ಯಕ್ಕೆ ಬಂಡವಾಳ ಹೂಡಿಕೆಯ ಹೊಳೆಯನ್ನೇ ಹರಿಸಲಿದ್ದಾರೆ...ಅದೆಷ್ಟು ಬಂಡವಾಳ ರಾಜ್ಯಕ್ಕೆ ತರುತ್ತಾರೋ ಆ *ಶಿವನೇ*ಬಲ್ಲ..ಇನ್ನೂ ಅಧಿಕಾರಿಗಳಿಗೆ ಹೇಳೋರು ಇಲ್ಲಾ.. ಕೇಳೋರು ಇಲ್ಲಾ... ಅವರಿಗೆ ಜನಸಾಮಾನ್ಯರ ಸಂಕಷ್ಟ ಕಣ್ಣಿಗೆ ಕಾಣೋಲ್ಲ... ಕಿವಿಗೆ ಕೇಳೋಲ್ಲ... ರೈತರು ಬೆಳೆದ ಬೆಳೆಗೆ ನೀರಿಲ್ಲದೆ ಸಂಕಷ್ಟದಲ್ಲಿದ್ದರೆ ಗದಗ ಡಿಸಿ ಮಾತ್ರ ಕುಣಿದು ಕುಪ್ಪಳಿಸ್ತಿದಾರೆ..ಆಶಾ ಕಾರ್ಯಕರ್ತೆಯರು ತಿಂಗಳುಗಳಿಂದಮನೆ, ಕುಟುಂಬ ಬಿಟ್ಟು ಕೊರೆಯುವ ಚಳಿಯಲ್ಲಿ ಹಸುಗೂಸುಗಳೊಂದಿಗೆ, ನ್ಯಾಯಯುತ ವೇತನಕ್ಕಾಗಿ ರಸ್ತೆಯಲ್ಲಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ.. ಇವರ ಸಂಕಷ್ಟ ಹೇಳತೀರದು..ರೈತರ ಸಂಕಷ್ಟ ಕೂಡ ಇದಕ್ಕಿಂತ ಭಿನ್ನಾವಾಗಿಲ್ಲ.. ಬಿಡಿಗಾಸಿನ ಬರಪರಿಹಾರ ಇನ್ನೂ ನೀಡಲಾಗಿಲ್ಲ ಆದ್ರೂ ಈ ಸರ್ಕಾರಕ್ಕೆ ಇವರ ಕೂಗು ಕೇಳುತ್ತಿಲ್ಲ..ಮಾನ್ಯ ಮುಖ್ಯಮಂತ್ರಿಗಳೇ ಹಾಗೂ ಅಂಧಾದರ್ಬಾರ್ ನಡೆಸುತ್ತಿರುವ ಅಧಿಕಾರಿಗಳೇ ನೊಂದ ಹೆಣ್ಣುಮಕ್ಕಳ ,ರೈತರ,ಬಡವರ ಶಾಪ ನಿಮ್ಮನ್ನು ತಟ್ಟದೇ ಬಿಡದು, ಅವರೆಲ್ಲರ ಹಿಡಿಶಾಪ ನಿಮ್ಮನ್ನ ಬಲಿ ಪಡೆದೆ ಪಡೆಯುತ್ತದೆ.. ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ, ಜನರು ತಕ್ಕ ಪಾಠ ಕಲಿಸಲಿದ್ದಾರೆ.. ಬಹಳ ದಿನ ಈ ನಿಮ್ಮ ಆಟ ನಡಿಯೋಲ್ಲ... ಎಲ್ಲದಕ್ಕೂ ಅಂತ್ಯ ಇರುತ್ತೇ...#CongressFailsKarnataka
— Vijayendra Yediyurappa (@BYVijayendra) November 23, 2026
ಮುಖ್ಯಮಂತ್ರಿಗಳ ಮೇಲೆ ವಿಶ್ವಾಸವಿಲ್ಲ! ಆರ್.ಅಶೋಕ್ ಕಿಡಿ
ಈ ಹಿಂದೆ ನೀಡಿದ್ದ ಭರವಸೆಗಳೇ ಮೂರೂವರೆ ವರ್ಷವಾದರೂ ಈಡೇರಿಲ್ಲದಿರುವಾಗ, ಈಗ ಕೇವಲ ಮೌಖಿಕ ಭರವಸೆ ನೀಡಿದರೆ ಆಶಾ ಕಾರ್ಯಕರ್ತೆಯರು ಹೇಗೆ ನಂಬಬೇಕು?! "ಗ್ಯಾರಂಟಿ ಬೇಡ, ಲಿಖಿತ ಆದೇಶ ನೀಡಿ" ಎಂದು ಬೀದಿಗಿಳಿದು, ಹಗಲು-ರಾತ್ರಿ ಎನ್ನದೆ ಫ್ರೀಡಂ ಪಾರ್ಕ್‌ನಲ್ಲಿ 6ನೇ ದಿನವೂ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಆಕ್ರೋಶ ಸಂಪೂರ್ಣ ನ್ಯಾಯಯುತವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಮಹಿಳೆಯರಿಗೆ ಗ್ಯಾರೆಂಟಿ ಕೊಟ್ಟಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುವ ಕಾಂಗ್ರೆಸ್ ಸರ್ಕಾರ, ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರನ್ನು ಹೀಗೆ ಬೀದಿಗೆ ತಳ್ಳಿ ಕಾಲಹರಣ ಮಾಡುತ್ತಿರುವುದು ಅತ್ಯಂತ ಅಮಾನವೀಯ. ಮಾಸಿಕ ₹15,000 ಗೌರವಧನ, ನಿವೃತ್ತಿ ವೇಳೆ ಇಡಿಗಂಟು ಹಾಗೂ ಸಮಸ್ಯ ಆ್ಯಪ್ ರದ್ದು ಸೇರಿದಂತೆ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾವಿರಾರು ಮಹಿಳೆಯರು ಹಗಲು-ರಾತ್ರಿ ಹೋರಾಟ ಮಾಡುತ್ತಿದ್ದರೂ, ಸರ್ಕಾರಕ್ಕೆ ಕನಿಷ್ಠ ಮಾನವೀಯ ದೃಷ್ಟಿಕೋನವೂ ಇಲ್ಲದಂತಾಗಿದೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ, ನಿಮ್ಮ ಸುಳ್ಳು ಭರವಸೆಗಳ ಗ್ಯಾರಂಟಿ ಸಾಕು! ಮೌಖಿಕ ಮಾತಿನ ನಾಟಕ ಬಿಟ್ಟು, ತಕ್ಷಣವೇ ಅಧಿಕೃತ ಲಿಖಿತ ಆದೇಶ ಹೊರಡಿಸಿ, ಹೋರಾಟನಿರತ ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಿ ಎಂದು ಅವರು ಆಗ್ರಹಿಸಿದರು.




Click it and Unblock the Notifications
