ಬರಗಾಲ, ಮೇಕೆದಾಟು, ಕಾವೇರಿ ನೀರಿನ ಬಗ್ಗೆ ಸರ್ಕಾರಕ್ಕಿಲ್ಲ ಚಿಂತೆ! ಡಿಕೆಶಿ ತಮಿಳುನಾಡಿನ ಪರ: ವಿಪಕ್ಷ ನಾಯಕ
ಬೆಂಗಳೂರು: ಕಾವೇರಿ ವಿಚಾರ, ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಪದೇ ಪದೇ ಕ್ಯಾತೆ ತೆಗೆಯುತ್ತಿದೆ. ಮೇಕೆದಾಟು ಕಟ್ಟಲು ಬಿಡುವುದಿಲ್ಲ ಎಂದು ತಮಿಳುನಾಡು ನಿರ್ಧರಿಸಿದರೂ ಸಹಿತ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆ ಬಗ್ಗೆ ಮಾತನಾಡಿಲ್ಲ. ಬದಲಾಗಿ ಆ ರಾಜ್ಯಕ್ಕೆ ಕದ್ದು ಮುಚ್ಚಿ ಕಾವೇರಿ ನೀರು ಬಿಡಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದ್ದಾರೆ. ಜೊತೆಗೆ ಬರಗಾಲ, ಸರ್ಕಾರದ ಕ್ರಮಗಳ ಜೊತೆಗೆ SIR ನಲ್ಲಿ ಅಕ್ರಮ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಇಂದು ಶಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಬಗ್ಗೆ ತಮಿಳುನಾಡಿನ ನಿರ್ಧಾರ ಬಗ್ಗೆ ಡಿಕೆ ಶಿವಕುಮಾರ್ ಮಾತನಾಡಿಲ್ಲ. ಮೇಕೆದಾಟು ಯೋಜನೆಗೆ 10 ರೂಪಾಯಿ ಸಹ ಹಂಚಿಕೆ ಮಾಡಿಲ್ಲ. ಸಿಎಂ ಡಿ.ಕೆ.ಶಿವಕುಮಾರ್ ತಮಿಳುನಾಡಿನ ಪರ ಇದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ರಾಜ್ಯಾದ್ಯಂತ ಬರಗಾಲದ ಭೀತಿ ಕಂಡು ಬಂದರೂ ಸಹಿತ ಜಲಸಂಪನ್ಮೂಲ ಸಚಿವರು ಬೆಂಗಳೂರಿಗೆ ಬಿಟ್ಟು ಹೊರಗೆ ಹೋಗಿಲ್ಲ. ತುಂಗಭದ್ರಾ ಕ್ರಸ್ಟ್ ಗೇಟ್ ಚಾಲನೆ ಕಾರ್ಯಕ್ರಮಕ್ಕೂ ಅವರು ಹೋಗಿಲ್ಲ. ಕೃಷಿ ಇಲಾಖೆಗೆ ಸಚಿವರೇ ಇಲ್ಲ. ಬರಗಾಲಕ್ಕೆ ಎಷ್ಟು ಪರಿಹಾರ ನಿಗದಿ ಮಾಡಿದ್ದಾರೆ, ಎಷ್ಟು ಕಡೆ ಭೇಟಿ ನೀಡಿದ್ದಾರೆ, ಕೇಂದ್ರ ಸರ್ಕಾರಕ್ಕೆ ಯಾವಾಗ ನಿಯೋಗ ಕಳುಹಿಸುತ್ತಾರೆ ಎಂದು ತಿಳಿಸಲಿ ಎಂದರು.
22 ಜಲಾಶಯಗಳಲ್ಲಿ ಉಳಿದಿದ್ದೇ ಬರೀ 66 ಟಿಎಂಸಿ ನೀರು
ಇದೇ ಅವಧಿಯಲ್ಲಿ ಕಳೆದ ವರ್ಷ 22 ಜಲಾಶಯಗಳಲ್ಲಿ 335.292 ಟಿಎಂಸಿ ನೀರು ಇತ್ತು. ಈಗ 66.099 ಟಿಎಂಸಿ ನೀರು ಇದೆ. ಹೀಗಿರುವಾಗ ಬೆಳೆ ಬೆಳೆಯಬಾರದು ಎಂದರೆ ರೈತರು ಏನು ಮಾಡಬೇಕು ಎಂದು ಸರ್ಕಾರವೇ ತಿಳಿಸಬೇಕು.
ಪ್ರಮುಖ ಜಲಾಶಯಗಳಾದ ಆಲಮಟ್ಟಿ, ತುಂಗಭದ್ರ, ಹಿಡಕಲ್, ಭೀಮಾ ಎಲ್ಲ ಜಲಾಶಯಗಳಲ್ಲೂ ನೀರಿನ ಕೊರತೆ ಇದೆ. ಆಲಮಟ್ಟಿಯಲ್ಲಿ 20 ಟಿಎಂಸಿ, ತುಂಗಭದ್ರಾದಲ್ಲಿ 9 ಟಿಎಂಸಿ ಸೇರಿದಂತೆ ಪ್ರತಿ ಡ್ಯಾಮ್‌ಗಳಲ್ಲೂ ನೀರಿನ ಕೊರತೆ ಇದೆ. ಆದರೆ ಸರ್ಕಾರಕ್ಕೆ ಮಾತ್ರ ಲಂಚದ ಕೊರತೆ ಇಲ್ಲ. ಮುಖ್ಯಮಂತ್ರಿಗಳು ಇಷ್ಟೊತ್ತಿಗೆ ಅಧ್ಯಯನ ನಡೆಸಿ, ರೈತರಿಗೆ ಪರಿಹಾರ ಸೂಚಿಸಬೇಕಿತ್ತು. ರೈತರನ್ನು ಕರೆಸಿ ಮಾತಾಡುವುದರ ಜೊತೆಗೆ, ಬೆಳೆ ಹಾನಿ ಪರಿಹಾರಕ್ಕೆ ಕೂಡಲೇ 10,000 ಕೋಟಿ ರೂ. ಮೀಸಲಿಡಬೇಕು. ಟಾಸ್ಕ್ ಫೋರ್ಸ್ ರಚಿಸಿ, ಗೋ ಶಾಲೆಗಳನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಹಿಂದಿನ ಸಚಿವರೇ ಬೆಂಗಳೂರನ್ನು ಹಾಳು ಮಾಡಿದ್ದರಾ?
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರು ಅಧಿಕಾರಿಗಳನ್ನು ಬೈದು ರೀಲ್ಸ್ ಮಾಡುತ್ತಿದ್ದಾರೆ. ಹಿಂದಿನ ಸಚಿವರು ಹಾಳು ಮಾಡಿಟ್ಟಿದ್ದಾರೆ ಎಂದು ಅವರೇ ಹೇಳುತ್ತಿದ್ದಾರೆ. ರಸ್ತೆ ಗುಂಡಿ ಮುಚ್ಚುವುದು ರಾಕೆಟ್ ಸೈನ್ಸಾ ಎಂದು ಪ್ರಶ್ನಿಸುವುದಾದರೆ, ಆ ಸೈನ್ಸ್‌ನ್ನು ಡಿ.ಕೆ.ಶಿವಕುಮಾರ್ ಅವರೇ ಮಾಡಿದ್ದಾರೆ ಎಂದರ್ಥ. ನಗರದಲ್ಲಿ ಹಣಕಾಸಿನ ಸಮಸ್ಯೆ ಇಲ್ಲ, ಆದರೆ ಆಡಳಿತ ವೈಫಲ್ಯವಿದೆ ಎಂದು ಅವರು ಹೇಳಿದ್ದಾರೆ. ಅಂದರೆ ಮೂರು ವರ್ಷದಲ್ಲಿ ಇವರದ್ದೇ ಆಡಳಿತ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ ಎಂದರು.
ಹೆಚ್ಚು ಹಣ ಬರುವ ಬಿಡಿಎ, ಬಿಎಂಆರ್‌ಡಿಎ ಮೊದಲಾದ ಸಂಸ್ಥೆಗಳನ್ನು ಸಿಎಂ ಇಟ್ಟುಕೊಂಡಿದ್ದು, ಉಳಿದವನ್ನು ಸಚಿವರಿಗೆ ನೀಡಿದ್ದಾರೆ. ಇದರ ನಡುವೆ ಇವರಿಬ್ಬರ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಸರ್ಕಾರ ಇನ್ನಾದರೂ ನಿದ್ರೆಯಿಂದ ಎಚ್ಚೆತ್ತುಕೊಳ್ಳಲಿ ಎಂದರು.
ಮಸೀದಿಗಳ ಮುಂದೆ ಗುಂಪಾಗಿ SIR ಪ್ರಕ್ರಿಯೆ
ದೇಶದ ಭದ್ರತೆಯ ದೃಷ್ಟಿಯಿಂದ ಚುನಾವಣಾ ಆಯೋಗ SIR ಮಾಡುತ್ತಿದೆ. ಇದು ಕೇಂದ್ರ ಸರ್ಕಾರದ ಉದ್ದೇಶ ಕೂಡ ಹೌದು. ಆದರೆ ಕಾಂಗ್ರೆಸ್ ಸರ್ಕಾರ ಬಾಂಗ್ಲಾ ಜನರ ಪಾಲಿಗೆ ಸ್ವರ್ಗವಾಗಿದೆ. ಬೆಂಗಳೂರು, ಕೊಡಗು, ಚಿಕ್ಕಮಗಳೂರು ಸೇರಿದಂತೆ ಸುಮಾರು 20 ಲಕ್ಷ ಬಾಂಗ್ಲಾ ಜನರು ರಾಜ್ಯದಲ್ಲಿದ್ದಾರೆ. 2002 ರ ಮತದಾರರ ಪಟ್ಟಿಯಲ್ಲಿ ಈ ಬಾಂಗ್ಲಾ ಜನರ ಹೆಸರಿಲ್ಲ. ಆದ್ದರಿಂದ ಬಾಂಗ್ಲಾ ನಿವಾಸಿಗಳಿಗೆ ಹೆದ್ದಾರಿ ನಿರ್ಮಿಸಿಕೊಟ್ಟಿದ್ದು, ಹಜ್ ಭವನ, ಮಸೀದಿಗಳ ಮುಂದೆ ರಾಜಾರೋಷವಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಲಾಗುತ್ತಿದೆ.
ಮಹದೇವಪುರ, ಬ್ಯಾಟರಾಯನಪುರದಲ್ಲಿ ಮಸೀದಿಗಳ ಮುಂದೆ ಗುಂಪು ಗುಂಪಾಗಿ ಕುಳಿತು ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗುತ್ತಿದೆ. ಬಿಎಲ್‌ಒಗಳು ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಬೇಕಿದ್ದರೂ ಪ್ರಸಾದ ಹಂಚಿದಂತೆ ಬೀದಿಯಲ್ಲಿ ಕುಳಿತು ಅರ್ಜಿಗಳನ್ನು ಹಂಚುತ್ತಿದ್ದಾರೆ. ಅಧಿಕಾರಿಗಳು ಮನೆ ಗುರುತು ಮಾಡಿ ಅರ್ಜಿ ತುಂಬಿಸಿ, ಮರಳಿ ಅರ್ಜಿಯನ್ನು ಪಡೆಯಬೇಕು. ಆದರೆ ಕಾಂಗ್ರೆಸ್ ಮತಕ್ಕಾಗಿ ಬಾಂಗ್ಲಾ ಜನರನ್ನು ಪಟ್ಟಿಗೆ ಸೇರಿಸುವ ಷಡ್ಯಂತ್ರ ಮಾಡುತ್ತಿದೆ ಎಂದು ಆರ್.ಅಶೋಕ್ ದೂರಿದರು.














Click it and Unblock the Notifications