ಬೆಂಗಳೂರು ಅಭಿವೃದ್ಧಿಗೆ GIS ಡ್ಯಾಶ್‌ಬೋರ್ಡ್! ಒಂದೇ ವೇದಿಕೆಯಲ್ಲಿ ಎಲ್ಲ ಇಲಾಖೆಗಳ ಮಾಹಿತಿ
ಬೆಂಗಳೂರು: ಬೆಂಗಳೂರು ನಗರದ ಅಭಿವೃದ್ಧಿ ಮತ್ತು ನಾಗರಿಕರಿಗೆ ಗುಣಮಟ್ಟದ ಸೇವೆ ಒದಗಿಸಲು ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಬೇಕು. ವಿವಿಧ ಇಲಾಖೆಗಳು ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ಯೋಜನೆಗಳ ಮಾಹಿತಿ ಒಂದೇ ವೇದಕೆಯಡಿ ಸಿಗಲು 'ಜಿಐಎಸ್ ಆಧಾರಿತ ಡ್ಯಾಶ್‌ಬೋರ್ಡ್ ರಚನೆ ಮಾಡುವಂತೆ ಅಧಿಕಾರಿಗಳಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ನಿರ್ದೇಶಿಸಿದರು.
ಇಂದು ಶುಕ್ರವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿವಿಧ ಇಲಾಖೆಗಳನ್ನೊಳಗೊಂಡ ಕಾರ್ಯಕಾರಿ ಸಮಿತಿಯ ಸದಸ್ಯರೊಂದಿಗೆ ಮಹತ್ವದ ಸಭೆ ನಡೆಸಿ ಅವರು ಮಾತನಾಡಿದರು. ಈ ವೇಳೆ ಬೆಂಗಳೂರಿನಲ್ಲಿ ವಿವಿಧ ಇಲಾಖೆಗಳು ಕೈಗೆತ್ತಿಕೊಂಡಿರುವ ಕಾಮಗಾರಿಗಳು, ಅಭಿವೃದ್ಧಿ ಯೋಜನೆಗಳು, ರಸ್ತೆಗಳ ಮಾಹಿತಿ, ಬೀದಿ ದೀಪಗಳು, ಜಲಮಂಡಳಿ ಮೂಲಸೌಕರ್ಯ, ಪ್ರಗತಿಯಲ್ಲಿರುವ ಕಾಮಗಾರಿಗಳು ಸೇರಿದಂತೆ ಎಲ್ಲಾ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಲಭ್ಯವಾಗುವಂತೆ ಮಾಡಬೇಕು. ಅದಕ್ಕಾಗಿ ಜಿಐಎಸ್ ಆಧಾರಿತ ಡ್ಯಾಶ್‌ಬೋರ್ಡ್ ಅಭಿವೃದ್ಧಿಪಡಿಸಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಸಾರ್ವಜನಿಕರು ಹಾಗೂ ಅಧಿಕಾರಿಗಳು ಸಮಗ್ರ ಮಾಹಿತಿಯನ್ನು ಒಂದೇ ಸ್ಥಳದಲ್ಲಿ ಪಡೆಯಲು ಅನುಕೂಲವಾಗುವಂತೆ ಈ ವ್ಯವಸ್ಥೆಯನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲು ಕ್ರಮವಹಿಸಬೇಕಿದೆ. ಇನ್ನೂ ಐದು ಪಾಲಿಕೆ, ಜಲಮಂಡಳಿ, ಬಿಎಂಟಿಸಿ, ನಮ್ಮ ಮೆಟ್ರೋ, ಕೆಪಿಟಿಸಿಎಲ್, ಬೆಸ್ಕಾಂ, ಕೆ-ರೈಡ್ ಸೇರಿದಂತೆ ವಿವಿಧ ಇಲಾಖೆಗಳು ಸಮನ್ವಯ ಇಲ್ಲದೆ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುವದರಿಂದ ನಗರದ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂದು ಅವರು ಎಚ್ಚರಿಸಿದರು.
ಒಂದೆಡೆ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ಕೆಲವೇ ತಿಂಗಳಲ್ಲಿ ಮತ್ತೊಂದು ಇಲಾಖೆ ಅದೇ ರಸ್ತೆಯನ್ನು ಅಗೆಯುವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಹಣವೂ ವ್ಯರ್ಥವಾಗುತ್ತಿದೆ. ಇಂತಹ ಪರಿಸ್ಥಿತಿ ಮರುಕಳಿಸದಂತೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿದರೆ ಯಾವುದೇ ಸಮಸ್ಯೆಗಳು ಆಗುವುದಿಲ್ಲ ಎಂದರು.
ಜಿಬಿಎ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳನ್ನು ಒಗ್ಗೂಡಿಸುವ ವ್ಯವಸ್ಥೆಯನ್ನು ಕಾಯ್ದೆಯಲ್ಲಿ ಕಲ್ಪಿಸಲಾಗಿದೆ. ಕಳೆದ 30-40 ವರ್ಷಗಳಿಂದ ಮುಂದುವರಿದಿರುವ ಸಮನ್ವಯದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದಲೇ ವಿವಿಧ ಇಲಾಖೆಗಳ ಮುಖ್ಯಸ್ಥರನ್ನು ಒಳಗೊಂಡ ಕಾರ್ಯಕಾರಿ ಸಮಿತಿ ರಚಿಸಲಾಗಿದೆ. ಈ ಸಮಿತಿಯಡಿ ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಯಬೇಕು. ಇಲಾಖಾವಾರು ಸಮಸ್ಯೆಗಳು, ಪ್ರಗತಿಯಲ್ಲಿರುವ ಯೋಜನೆಗಳು ಹಾಗೂ ಪರಸ್ಪರ ಸಹಕಾರ ಅಗತ್ಯವಿರುವ ವಿಷಯಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದೆಂದು ಹೇಳಿದರು.
ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು
ನಗರದ ಎಲ್ಲ ಸಮಸ್ಯೆಗಳು ಒಂದೆರಡು ಸಭೆಗಳಿಂದಲೇ ಪರಿಹಾರವಾಗುತ್ತವೆ ಎಂಬುದಲ್ಲ. ಬೃಹತ್ ಮೂಲಸೌಕರ್ಯ ಯೋಜನೆಗಳು, ಮೆಟ್ರೋ ಕಾಮಗಾರಿ, ಲಾಸ್ಟ್ ಮೈಲ್ ಸಂಪರ್ಕ, ರಸ್ತೆ ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳಲ್ಲಿ ಸಮಗ್ರ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಿರಂತರ ಸಭೆಗಳನ್ನು ನಡೆಸಲಾಗುವುದು. ಇಲಾಖೆಗಳ ನಡುವಿನ ಸಮನ್ವಯವನ್ನು ಹೆಚ್ಚಿಸಲು ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಟೀಮ್ ಆಗಿ ಕೆಲಸ ಮಾಡಲು ಸಚಿವರ ಸೂಚನೆ
ನಗರದಲ್ಲಿನ ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುವ ಮನೋಭಾವದಿಂದ ಹೊರಬಂದು ಒಂದೇ ತಂಡದಂತೆ ಕೆಲಸ ಮಾಡಬೇಕು. ಹೀಗಾದಾಗ ಮಾತ್ರವೇ ಬೆಂಗಳೂರಿನಲ್ಲಿ ಬದಲಾವಣೆ ತರಲು ಸಾಧ್ಯತೆ. ಅಲ್ಲದೇ ಸಾರ್ವಜನಿಕ ಹಿತಾಸಕ್ತಿಯನ್ನು ಕಾಪಾಡಲು ಸಾಧ್ಯವಾಗುತ್ತದೆ. ಆಡಳಿತ ವ್ಯವಸ್ಥೆಯಲ್ಲಿ ಅಗತ್ಯವಾದ ಪರಿವರ್ತನೆ ತರುವಂತೆ ಅವರು ಕಿವಿ ಮಾತು ಹೇಳಿದರು.
ಪಾದಚಾರಿಗಳ ಮರಣ ಸರಿಯೇ?
ನಗರದಲ್ಲಿ ಪಾದಾಚಾರಿ ಒತ್ತುವರಿ ತೆರವಿನಿಂದ ಬಡವರು ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಲ್ಲಿ ಪಾದಾಚಾರಿ ಮಾರ್ಗ ಒತ್ತುವರಿಯಿಂದ ಅಪಘಾತಕ್ಕೆ ಕನಿಷ್ಠ 300 ಜನ ಸಾವನ್ನಪ್ಪುತ್ತಿದ್ದಾರೆ. ಇದು ಸರಿನಾ? ಇವರ ಸಾವಿಗೆ ಯಾರು ಹೊಣೆ? ಮೃತರ ಕುಟುಂಬಗಳಿಗೆ ನೀವೇನು ಉತ್ತರ ನೀಡುತ್ತೀರಿ? ವಯೋವೃದ್ಧರು ರಸ್ತೆಯಲ್ಲಿ ನಡೆಯಲು ಪಡುವ ಪಡಿಪಾಟಲಿನ ಬಗ್ಗೆ ನಿಮಗೆ ತಿಳಿದಿಲ್ಲವೇ? ಎಂದು ಸಚಿವರು ಬೇಸರ ಹೊರ ಹಾಕಿದರು.
ಮಾತ್ರವಲ್ಲದೇ ನಗರದ ಶೇ.20 ರಷ್ಟು ರಸ್ತೆಗಳಲ್ಲಿ ಮಾತ್ರ ನಾವು ಒತ್ತುವರಿ ತೆರವು ಮಾಡುತ್ತಿದ್ದೇವೆ, ಉಳಿದ ರಸ್ತೆಗಳಲ್ಲಿ ರಸ್ತೆಬದಿ ವ್ಯಾಪಾರಿಗಳು ಬದುಕು ಕಟ್ಟಿಕೊಳ್ಳಲು ಸ್ವತಂತ್ರ್ಯರು ಎಂದು ಅವರು ಸ್ಪಷ್ಟನೆ ನೀಡಿದರು.














Click it and Unblock the Notifications