ವೈರಲ್ ವಿಡಿಯೋ ಎಫೆಕ್ಟ್: ದೆಹಲಿ-ಮುಂಬೈ ಹೆದ್ದಾರಿ ಕಳಪೆ ಕಾಮಗಾರಿ ಗುತ್ತಿಗೆದಾರ ಅಮಾನತು
ನವದೆಹಲಿ: ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇಯ ರಾಜಸ್ಥಾನದ ಸವಾಯಿ ಮಾಧೋಪುರ ಭಾಗದಲ್ಲಿ ರಸ್ತೆ ಹಾನಿಗೊಳಗಾಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ, ಕಳಪೆ ಕಾಮಗಾರಿಯ ಆರೋಪದ ಹಿನ್ನೆಲೆಯಲ್ಲಿ ಸಂಬಂಧಿಸಿದ ಗುತ್ತಿಗೆದಾರನ ಒಪ್ಪಂದವನ್ನು ಈಗಾಗಲೇ ರದ್ದುಪಡಿಸಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತಿಳಿಸಿದೆ.
ಎನ್ಎಚ್ಎಐ ಅಧಿಕಾರಿಗಳ ಪ್ರಕಾರ, ಗುತ್ತಿಗೆದಾರನು ಹಲವು ಬಾರಿ ಸೂಚನೆ, ನೋಟಿಸ್ ಹಾಗೂ ಎಚ್ಚರಿಕೆ ನೀಡಿದರೂ ಒಪ್ಪಂದದ ಷರತ್ತುಗಳನ್ನು ಸಮರ್ಪಕವಾಗಿ ಪಾಲಿಸಿರಲಿಲ್ಲ. ಹೀಗಾಗಿ 2026ರ ಏಪ್ರಿಲ್ 21ರಂದು ಉಳಿದ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಬಾಕಿ ಇರುವ ಕಾಮಗಾರಿಯನ್ನು ಮತ್ತೊಬ್ಬ ಗುತ್ತಿಗೆದಾರನಿಗೆ ವಹಿಸಲಾಗಿದೆ.

ಹಿಂದಿನ ಗುತ್ತಿಗೆದಾರನ ವೆಚ್ಚದಲ್ಲೇ ರಸ್ತೆ ದುರಸ್ತಿ ಮತ್ತು ನಿರ್ವಹಣಾ ಕಾರ್ಯವನ್ನು ಹೊಸ ಗುತ್ತಿಗೆದಾರ ನಡೆಸುತ್ತಿದ್ದಾನೆ. ಇದರಿಂದ ರಸ್ತೆ ಶೀಘ್ರವಾಗಿ ದುರಸ್ತಿಯಾಗಿ ಸಂಚಾರ ಸುಗಮವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನು ಸಮಸ್ಯೆ?
ಈ ವರ್ಷದ ಫೆಬ್ರವರಿಯಲ್ಲಿ ಮುಂಬೈ-ದೆಹಲಿ ದಿಕ್ಕಿನ ನಾಲ್ಕು ಲೇನ್ಗಳ ಪೈಕಿ ಒಂದು ಮಾರ್ಗವನ್ನು ವಾಹನ ಸಂಚಾರಕ್ಕೆ ತೆರೆಯಲಾಗಿತ್ತು. ಬಳಿಕ ಸುಮಾರು 4 ಕಿ.ಮೀ ಮತ್ತು 3 ಕಿ.ಮೀ ಉದ್ದದ ಎರಡು ರಸ್ತೆ ಭಾಗಗಳಲ್ಲಿ ಮೇಲ್ಮೈ ಹಾನಿ (Pavement Distress) ಹಾಗೂ ರಸ್ತೆ ಕುಸಿತದ ಲಕ್ಷಣಗಳು ಕಂಡುಬಂದಿವೆ.
ದುರಸ್ತಿ ಕಾರ್ಯ ಆರಂಭ
ಹಾನಿಗೊಳಗಾದ ರಸ್ತೆ ಭಾಗಗಳಲ್ಲಿ ಸದ್ಯ ಮೈಕ್ರೋ ಮಿಲ್ಲಿಂಗ್ ತಂತ್ರಜ್ಞಾನದ ಮೂಲಕ ರಸ್ತೆ ಮೇಲ್ಮೈ ಸಮತಟ್ಟುಗೊಳಿಸುವ ಕೆಲಸ ನಡೆಯುತ್ತಿದೆ. ಜೊತೆಗೆ, ಪಕ್ಕದ ಮಾರ್ಗದಲ್ಲಿ ನಿರ್ಮಾಣ ಕಾಮಗಾರಿ ಮತ್ತು ಕ್ರ್ಯಾಶ್ ಬ್ಯಾರಿಯರ್ ಅಳವಡಿಕೆ ನಡೆಯುತ್ತಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ವಾಹನ ಸಂಚಾರವನ್ನು ಆ ಮಾರ್ಗಕ್ಕೆ ವರ್ಗಾಯಿಸಿ, ಹಾನಿಗೊಳಗಾದ ರಸ್ತೆಯನ್ನು ಶಾಶ್ವತವಾಗಿ ಪುನರ್ನಿರ್ಮಿಸಲಾಗುತ್ತದೆ.
ತಜ್ಞರ ಸಮಿತಿಯಿಂದ ಪರಿಶೀಲನೆ
ರಸ್ತೆ ಹಾನಿಗೆ ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಸ್ವತಂತ್ರ ತಾಂತ್ರಿಕ ತಜ್ಞರ ಸಮಿತಿ ಸ್ಥಳ ಪರಿಶೀಲನೆ ನಡೆಸಿದೆ. ರಸ್ತೆ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಶಾಶ್ವತ ದುರಸ್ತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎನ್ಎಚ್ಎಐ ತಿಳಿಸಿದೆ.
ಇತ್ತೀಚೆಗೆ ದೇಶದ ಹಲವು ಎಕ್ಸ್ಪ್ರೆಸ್ವೇಗಳಲ್ಲಿ ರಸ್ತೆ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಎದ್ದಿರುವ ಹಿನ್ನೆಲೆ, ಈ ಘಟನೆ ಮತ್ತೊಮ್ಮೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಗುಣಮಟ್ಟದ ಮೇಲಿನ ನಿಗಾ ಅಗತ್ಯವನ್ನು ಒತ್ತಿ ಹೇಳಿದೆ. ತಜ್ಞರ ವರದಿ ಆಧರಿಸಿ ರಸ್ತೆ ವೈಫಲ್ಯಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಲಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎನ್ಎಚ್ಎಐ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications