Gruha Jyothi ಪರಿಶೀಲನೆ: ಜಾತಿ ಪ್ರಮಾಣ ಪತ್ರ ಕಡ್ಡಾಯವೇ? ಸಾರ್ವಜನಿಕರ ಗೊಂದಲಗಳಿಗೆ ತೆರೆ ಎಳೆದ ಬೆಸ್ಕಾಂ
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ 'ಗೃಹ ಜ್ಯೋತಿ' ಯೋಜನೆಯಡಿ ಲಕ್ಷಾಂತರ ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿವೆ. ಬೆಸ್ಕಾಂ ಈಗ ಈ ಯೋಜನೆಯ ನಿಜವಾದ ಫಲಾನುಭವಿಗಳನ್ನು ಗುರುತಿಸಲು ತಪಾಸಣೆ ಆರಂಭಿಸಿರುವುದು ಎಲ್ಲರಿಗೂ ತಿಳಿದೇ ಇದೆ.
ರಾಜ್ಯಾದ್ಯಂತ ಗೃಹ ಜ್ಯೋತಿ ಪರಿಶೀಲನೆ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಮೀಟರ್ ರೀಡರ್‌ಗಳು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಭೇಟಿ ನೀಡುತ್ತಿದ್ದಾರೆ. ಈ ಪರಿಶೀಲನೆ ವೇಳೆ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ನೀಡಬೇಕೇ? ಎಂದು ಸಾರ್ವಜನಿಕರಲ್ಲಿ ಒಂದು ಗೊಂದಲ ಮೂಡಿತ್ತು. ಅಲ್ಲದೇ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಬಾರಿ ಚರ್ಚೆ ನಡೆಯುತ್ತಿದೆ. ಸಧ್ಯ ಈ ಎಲ್ಲಾ ಗೊಂದಲಗಳಿಗೂ ಬೆಸ್ಕಾಂ ತೆರೆ ಎಳೆದಿದ್ದು, ಅಧಿಕೃತವಾಗಿ ಸ್ಪಷ್ಟನೆ ನೀಡಿದೆ.

ಮನೆ ಬಾಗಿಲಿಗೆ ಬೆಸ್ಕಾಂ ಸಿಬ್ಬಂದಿ: ಗೃಹ ಜ್ಯೋತಿ ಪರಿಶೀಲನೆ ಪ್ರಕ್ರಿಯೆ
ಗೃಹ ಜ್ಯೋತಿಯ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಈ ಸೌಲಭ್ಯವನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಲು ಇಂಧನ ಇಲಾಖೆ ಮತ್ತು ಬೆಸ್ಕಾಂ ಮರುಪರಿಶೀಲನೆ ಕೆಲಸವನ್ನು ಕೈಗೆತ್ತಿಕೊಂಡಿವೆ. ಬೆಸ್ಕಾಂ ಮೀಟರ್ ರೀಡರ್‌ಗಳೇ ಖುದ್ದಾಗಿ ನಿಮ್ಮ ಮನೆ ಬಾಗಿಲಿಗೆ ಬಂದು ಅಗತ್ಯ ದಾಖಲೆಗಳನ್ನು ಪಡೆದು, ಮೊಬೈಲ್ ಅಪ್ಲಿಕೇಷನ್ ಮೂಲಕ ಸ್ಥಳದಲ್ಲೇ ಅರ್ಜಿ ತುಂಬಲು ಹಾಗೂ ದಾಖಲೆಗಳನ್ನು ನವೀಕರಿಸಲು ಸಹಾಯ ಮಾಡಲಿದ್ದಾರೆ.
ಈ ಪ್ರಕ್ರಿಯೆ ಸಂಪೂರ್ಣವಾಗಿ ಪಾರದರ್ಶಕವಾಗಿದ್ದು, ನಿಜವಾದ ಫಲಾನುಭವಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಇದರ ಮುಖ್ಯ ಉದ್ದೇಶ. ಸಿಬ್ಬಂದಿ ಮನೆಗೆ ಬಂದಾಗ ಸಾರ್ವಜನಿಕರು ಅಗತ್ಯ ದಾಖಲೆಗಳನ್ನು ಒದಗಿಸಿ ಸಹಕರಿಸಬೇಕು ಎಂದು ಇಲಾಖೆ ಕೋರಿದೆ.
ಜಾತಿ ಪ್ರಮಾಣ ಪತ್ರ ಕಡ್ಡಾಯವೇ? ಬೆಸ್ಕಾಂ ನೀಡಿದ ಸ್ಪಷ್ಟನೆ ಏನು?
ಪರಿಶೀಲನೆಗೆ ಬರುವ ಸಿಬ್ಬಂದಿ ಜಾತಿ ಪ್ರಮಾಣ ಪತ್ರ ಕೇಳುತ್ತಿದ್ದಾರೆ ಎಂಬ ವಿಚಾರ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಅನೇಕರ ಬಳಿ ಈ ಪ್ರಮಾಣ ಪತ್ರ ಇರಲಿಲ್ಲ ಹಾಗೂ ಹೊಸದಾಗಿ ಮಾಡಿಸುವುದು ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ಇಲಾಖೆ ಸ್ಪಷ್ಟನೆ ನೀಡಿದ್ದು, ಜಾತಿ ಮಾಹಿತಿ ನೀಡುವುದು ಸಂಪೂರ್ಣವಾಗಿ ನಿಮ್ಮ ಆಯ್ಕೆಗೆ ಬಿಟ್ಟಿದ್ದು. ಅಂದರೆ, ಗೃಹ ಜ್ಯೋತಿಗೆ ಜಾತಿ ಪ್ರಮಾಣ ಪತ್ರ ಕಡ್ಡಾಯವಲ್ಲ! ಬಿಡುಗಡೆಯಾಗಿರುವ ಅಧಿಕೃತ ಮಾಹಿತಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದ್ದರಿಂದ ಗ್ರಾಹಕರು ಈ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ.
ಪರಿಶೀಲನಾ ಪ್ರಕ್ರಿಯೆಗೆ ಸಿದ್ಧವಾಗಿಟ್ಟುಕೊಳ್ಳಬೇಕಾದ ಪ್ರಮುಖ ದಾಖಲೆಗಳು
ಮೀಟರ್ ರೀಡರ್ ನಿಮ್ಮ ಮನೆಗೆ ಭೇಟಿ ನೀಡಿದಾಗ, ಯಾವುದೇ ಗೊಂದಲವಿಲ್ಲದೆ ಪ್ರಕ್ರಿಯೆ ಪೂರ್ಣಗೊಳಿಸಲು ಈ ಕೆಳಗಿನ ದಾಖಲೆಗಳನ್ನು ನೀವು ಸಿದ್ಧವಾಗಿಟ್ಟುಕೊಳ್ಳಬೇಕು. ಅಗತ್ಯ ದಾಖಲೆಗಳ ಪಟ್ಟಿ ಹೀಗಿದೆ:
1. ಆಧಾರ್ ಕಾರ್ಡ್
2. ವೋಟರ್ ಐಡಿ
3. ರೇಷನ್ ಕಾರ್ಡ್
4. ಪ್ಯಾನ್ ಕಾರ್ಡ್
5. ಜಾತಿ ಪ್ರಮಾಣ ಪತ್ರ (ಇದು ಕಡ್ಡಾಯವಲ್ಲ)
6. ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ
7. ಬಾಡಿಗೆ ಒಪ್ಪಂದದ ಪತ್ರ (ಬಾಡಿಗೆದಾರರಾಗಿದ್ದರೆ ಮಾತ್ರ ಅನ್ವಯಿಸುತ್ತದೆ)
ಈ ಮೇಲಿನ ದಾಖಲೆಗಳನ್ನು ನೀವು ಮೊದಲೇ ತೆಗೆದಿಟ್ಟುಕೊಂಡರೆ, ಸಿಬ್ಬಂದಿಗೆ ಮೊಬೈಲ್ ಆಪ್‌ನಲ್ಲಿ ತ್ವರಿತವಾಗಿ ವಿವರಗಳನ್ನು ದಾಖಲಿಸಲು ಸುಲಭವಾಗುತ್ತದೆ.
ಗೃಹ ಜ್ಯೋತಿ ಯೋಜನೆ - ಸ್ಥಳದಲ್ಲೇ ದಾಖಲೆ ಪರಿಶೀಲನೆ, ಸ್ಥಳದಲ್ಲೇ ಅರ್ಜಿ ಸಲ್ಲಿಕೆ! ಬೆಸ್ಕಾಂ ಮೀಟರ್ ರೀಡರ್‌ಗಳು ನಿಮ್ಮ ಮನೆ ಬಾಗಿಲಿಗೆ ಬರಲಿದ್ದು, ಗ್ರಾಹಕರು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಂಡು ಸಹಕರಿಸಿ. .
— Namma BESCOM | ನಮ್ಮ ಬೆಸ್ಕಾಂ (@NammaBESCOM) July 3, 2026
ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ 24x7 ಸಹಾಯವಾಣಿ 1912 ಕ್ಕೆ ಕರೆಮಾಡಿ#Bescom #GruhaJyothiScheme #GJYScheme pic.twitter.com/y1hc2VyAgv
ಗ್ರಾಹಕರಿಗೆ ಬೆಸ್ಕಾಂ ಮನವಿ
ಗ್ರಾಹಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಮತ್ತು ಅನಗತ್ಯವಾಗಿ ಆತಂಕಪಡಬಾರದು. ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ, ಗೊಂದಲ ಅಥವಾ ದೂರುಗಳಿದ್ದಲ್ಲಿ, ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಬೆಸ್ಕಾಂ ಸಹಾಯವಾಣಿ ಸಂಖ್ಯೆ 1912 ಕ್ಕೆ ಕರೆ ಮಾಡಿ ನಿಖರ ಮಾಹಿತಿ ಪಡೆಯಬಹುದು. ಗ್ರಾಹಕರು ಸುಳ್ಳು ಸುದ್ದಿಗಳನ್ನು ನಂಬದೆ, ನೇರವಾಗಿ ನಿಮ್ಮ ಮನೆಗೆ ಬರುವ ಮೀಟರ್ ರೀಡರ್‌ಗಳೊಂದಿಗೆ ಸಹಕರಿಸಿ ತಮ್ಮ ಉಚಿತ ವಿದ್ಯುತ್ ಸೌಲಭ್ಯವನ್ನು ಮುಂದುವರಿಸಿಕೊಳ್ಳಬಹುದು.












Click it and Unblock the Notifications