ಸೊಸೆ ಪೊಲೀಸ್ ಆಗಲಿ ಎಂದು ಮನೆಯ ಜವಾಬ್ದಾರಿ ಹೊತ್ತ 70ರ ಅತ್ತೆ: ಇದು ಅತ್ತೆ-ಸೊಸೆಯ ಅಪರೂಪದ ಕಥೆ!
ಅತ್ತೆ-ಸೊಸೆ ಎಂದರೆ ಬರೀ ಜಗಳ, ಭಿನ್ನಾಭಿಪ್ರಾಯ ಎನ್ನುವ ಈ ಕಾಲದಲ್ಲಿ, ಇಂತಹವರು ಕಾಣ ಸಿಗುವುದು ಬಲು ಅಪರೂಪ. ಸಾಮಾನ್ಯವಾಗಿ ಅತ್ತೆ-ಸೊಸೆ ಎಂದರೆ ಟಿವಿ ಸೀರಿಯಲ್ಗಳಲ್ಲಿ ತೋರಿಸುವಂತೆ ಸದಾ ಕಿತ್ತಾಡುವವರೇ ಹೆಚ್ಚು ಎಂದು ನಮ್ಮ ಸಮಾಜ ಭಾವಿಸಿರುತ್ತದೆ. ಆದರೆ, ಇಲ್ಲೊಂದು ಮನೆಯಲ್ಲಿ 70 ವರ್ಷದ ವಯಸ್ಸಾದ ಅತ್ತೆಯೊಬ್ಬರು, ತನ್ನ ಸೊಸೆಯ ಭವಿಷ್ಯಕ್ಕಾಗಿ ಬೆನ್ನೆಲುಬಾಗಿ ನಿಂತು ಮಾದರಿ ಅತ್ತೆಯೆನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ
ಸೊಸೆಯ ಪೊಲೀಸ್ ಆಗುವ ಕನಸಿಗೆ ಅತ್ತೆಯ ಬೆಂಬಲ
ಪ್ರತಿದಿನ ಬೆಳಿಗ್ಗೆ, ಎಲ್ಲರೂ ಎಚ್ಚರಗೊಳ್ಳುವ ಮುನ್ನವೇ ಈ 70 ವರ್ಷದ ಅತ್ತೆ ಅಡುಗೆಮನೆಗೆ ಸೇರಿಕೊಳ್ಳುವ ಇವರು ಇಡೀ ಮನೆಯವರ ಊಟ, ಉಪಚಾರದ ಜವಾಬ್ದಾರಿಯನ್ನ ಸಂಪೂರ್ಣವಾಗಿ ತಮ್ಮ ಹೆಗಲಿಗೆ ಹಾಕಿಕೊಂಡಿದ್ದಾರೆ. ಇದೇನೂ ಅವರು ತಮ್ಮ ಜವಬ್ದಾರಿ ಎಂದೋ, ಅಥವಾ ಮಾಡಲೇಬೇಕು ಎನ್ನುವ ಒತ್ತಡದಿಂದ ಮಾಡುತ್ತಿರುವ ಕೆಲಸವಲ್ಲ, ಬದಲಾಗಿ ಸೊಸೆಯ ಮೇಲಿನ ಪ್ರೀತಿಗೆ ಪ್ರತಿಯಾಗಿ ನೀಡುತ್ತಿರುವ ಶ್ರಮ.

ಇತ್ತ ಅತ್ತೆ ಅಡುಗೆಮನೆಯಲ್ಲಿ ಬ್ಯುಸಿಯಾಗಿರುವಾಗ, ಅವಳ ಸೊಸೆ ಹೊರಗೆ ಮೈದಾನದಲ್ಲಿ ತನ್ನ ಕನಸಿನ ಬೆನ್ನೇರಿ ಓಡುತ್ತಿದ್ದಾಳೆ. ಸೊಸೆ ತನ್ನ ಕನಸಿನಂತೆ ಪೊಲೀಸ್ ಪಡೆಗೆ ಸೇರಲು ದೈಹಿಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿದ್ದು, ಅವಳ ಓಟ, ವ್ಯಾಯಾಮ ಹಾಗೂ ಪೊಲೀಸ್ ಉದ್ಯೋಗದ ತಯಾರಿ ನಡೆಸುತ್ತಿರುವಾಗ ಅತ್ತೆ ಈ ರೀತಿಯಾಗಿ ಬೆಂಬಲ ನೀಡುತ್ತಿದ್ದಾರೆ. ಒಬ್ಬ ಮಹಿಳೆಯ ಯಶಸ್ಸಿಗಾಗಿ ಮತ್ತೊಬ್ಬ ಮಹಿಳೆ ಮುಂಜಾನೆಯೇ ಎದ್ದು ಶ್ರಮಿಸುತ್ತಿರುವುದಕ್ಕೆ ಈ ಇಬ್ಬರೇ ಸಾಕ್ಷಿ.
ವೈರಲ್ ವಿಡಿಯೋದಲ್ಲಿ ಗಮನ ಸೆಳೆದ ಅತ್ತೆಯ ಮಾತುಗಳು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಸಂದರ್ಶಕರು ಈ ವಯಸ್ಸಿನಲ್ಲಿ ನೀವು ಅಡುಗೆ ಮಾಡುತ್ತೀರಾ ಎಂದು ಕೇಳಿದಾಗ ಆ ಅತ್ತೆ ನೀಡಿದ ಉತ್ತರ ಎಲ್ಲರ ಹೃದಯ ಗೆದ್ದಿದೆ. "ಹೌದು, ನಾನು ಅಡುಗೆ ಮಾಡುತ್ತೇನೆ. ಮಗಳು, ಸೊಸೆ ಎಲ್ಲರೂ ಒಂದೇ. ನನಗೆ ಐದು ಜನ ಹೆಣ್ಣುಮಕ್ಕಳು, ಮೂರು ಜನ ಗಂಡುಮಕ್ಕಳು. ಎಲ್ಲರೂ ನನ್ನ ಮಕ್ಕಳೇ... ಸೊಸೆಯಂದಿರನ್ನು ನಾನು ಬೇರೆಯವರಂತೆ ನೋಡುವುದಿಲ್ಲ" ಎಂದಿದ್ದಾರೆ.
ಸಂದರ್ಶಕರು ಅಚ್ಚರಿಯಿಂದ, "ನಿಮಗೆ ಈಗ 70 ವರ್ಷ ದಾಟಿದೆಯಲ್ಲವೇ? ಈ ವಯಸ್ಸಿನಲ್ಲೂ ಅಡುಗೆ ಮಾಡುತ್ತೀರಾ?" ಎಂದು ಕೇಳಿದಾಗ, ಮುಗುಳ್ನಗುತ್ತಲೇ ಉತ್ತರಿಸಿದ ಆಕೆ, "ಹೌದು, ಕೃಷ್ಣನ ಕೃಪೆಯಿಂದ ಎಲ್ಲವನ್ನೂ ಮಾಡುತ್ತೇನೆ" ಎಂದು ಅತ್ಯಂತ ಸರಳವಾಗಿ ಉತ್ತರಿಸಿದ್ದಾರೆ.
ಮಹಿಳೆಯರಿಗೆ ಮಹಿಳೆಯರೇ ಪ್ರೇರಣೆ
ಹೆಚ್ಚಿನ ಕಡೆಗಳಲ್ಲಿ ಮಹಿಳೆಯರಿಗೆ 'ಕುಟುಂಬ ಅಥವಾ ಕೆಲಸ' ಎರಡರಲ್ಲಿ ಒಂದನ್ನು ಮಾತ್ರ ಆರಿಸಿಕೊಳ್ಳುವಂತೆ ಪರಿಸ್ಥಿತಿ ಎದುರಾಗುತ್ತದೆ. ಆದರೆ ಈ ಕುಟುಂಬ ಸಂಪೂರ್ಣವಾಗಿ ವಿಭಿನ್ನವಾಗಿ ಯೋಚಿಸಿದೆ. ಅವರು ಒಬ್ಬರಿಗೊಬ್ಬರು ಪರಸ್ಪರ ಬೆಂಬಲವಾಗಿ ನಿಲ್ಲಲು ನಿರ್ಧರಿಸಿದ್ದಾರೆ. ಸೊಸೆಯ ಸಾಧನೆಗೆ ಅತ್ತೆಯೇ ಅಡ್ಡಿಯಾಗುವ ಎಷ್ಟೋ ಉದಾಹರಣೆಗಳ ನಡುವೆ, ಈ 70 ವರ್ಷದ ವೃದ್ಧೆ ಇಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ. ಸೊಸೆಯ ಯಶಸ್ಸಿನಲ್ಲಿ ತನ್ನ ಸಂತೋಷವನ್ನು ಕಾಣುತ್ತಿರುವ ಈ ಅತ್ತೆ-ಸೊಸೆಯ ಪ್ರೀತಿ ನಿಜಕ್ಕೂ ಶ್ಲಾಘನೀಯ. ಮಹಿಳೆಯರು ಮಹಿಳೆಯರಿಗೆ ಬೆಂಬಲವಾಗಿ ನಿಂತರೆ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ಈ ಘಟನೆಯೇ ಜೀವಂತ ಸಾಕ್ಷಿ.












Click it and Unblock the Notifications