Darshini Hotel: 1980ರ ದಶಕದ ಬೆಂಗಳೂರು 'ದರ್ಶಿನಿ' ಹೋಟೆಲ್ ಮ್ಯಾಜಿಕ್ ಈಗ ಚೆನ್ನೈನಲ್ಲೂ ಸಕ್ಸಸ್
Darshini Hotel: ಮದ್ರಾಸ್ ಟಿಫಿನ್ಗೆ ಹೆಸರಾಗಿದ್ದ ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಈಗ ಕರ್ನಾಟಕ ಮೂಲದ ಆಹಾರ ಪದ್ಧತಿಯ ಹವಾ ಜೋರಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರಸಿದ್ಧ ದರ್ಶಿನಿ ಶೈಲಿಯ ಹೋಟೆಲ್ಗಳು ಹೊಸ ಅಲೆ ಸೃಷ್ಟಿಸುತ್ತಿವೆ. ಹಾಗಾದ್ರೆ ಈ ಕುರಿತ ಇಂಟರೆಸ್ಟಿಂಗ್ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ನಮ್ಮ ಕರ್ನಾಟಕದ ಆಹಾರವನ್ನು ಯಾರೂ ಜರಿಯುವುದಿಲ್ಲ. ಅದಯ ಎಂಥಹದ್ದೇ ಊಟ ಆಗಿರಲಿ ಅದನ್ನ ಇಷ್ಟಪಟ್ಟು ಸವಿಯುತ್ತಾರೆ. ಅದರಲ್ಲೂ ಇಲ್ಲಿನ ಕೆಲ ಹೋಟೆಲ್ಗಳಲ್ಲಿ ಮಾಡುವ ದೋಸೆ ಹಾಗೂ ಇನ್ನಿತರೆ ತಿಂಡಿಗಳು ದೇಶಾದ್ಯಂತ ಪ್ರಸಿದ್ಧಿ ಪಡೆದಿವೆ. ಈ ಸಾಲಿಗೆ ಬೆಂಗಳೂರಿನ ದರ್ಶಿನಿ ಹೋಟೆಲ್ ಸಹ ಸೇರಿದೆ. ಈ ಹೋಟೆಲ್ನ ಆಹಾರದ ರುಚಿ ಇದೀಗ ತಮಿಳುನಾಡಿನ ಚೆನ್ನೈನಲ್ಲೂ ಹವಾ ಸೃಷ್ಟಿಸಿದೆ.

ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಸಾಂಪ್ರದಾಯಿಕ ಮದ್ರಾಸ್ ಟಿಫನ್ ಸಂಸ್ಕೃತಿಗೆ ಈಗ ಪಕ್ಕದ ರಾಜ್ಯ ಕರ್ನಾಟಕದ, ಅದರಲ್ಲೂ ಮುಖ್ಯವಾಗಿ ಬೆಂಗಳೂರಿನ ಪ್ರಸಿದ್ಧ ದರ್ಶಿನಿ ಶೈಲಿಯ ಹೋಟೆಲ್ಗಳು ಸಖತ್ ಸದ್ದು ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಶೈಲಿಯ ಇಡ್ಲಿ, ದೋಸೆ ಹಾಗೂ ಫಿಲ್ಟರ್ ಕಾಫಿ ಚೆನ್ನೈ ನಿವಾಸಿಗಳ ಹೊಸ ಫುಡ್ ಕ್ರೇಜ್ ಆಗಿ ಮಾರ್ಪಟ್ಟಿದೆ ಎಂದು ದಿ ಹಿಂದೂ ವರದಿ ಮಾಡಿದೆ.
ದರ್ಶಿನಿ ವಿಶೇಷತೆ ಏನು?
ಬೆಂಗಳೂರಿನಲ್ಲಿ 1980ರ ದಶಕದಲ್ಲಿ ಆರಂಭವಾದ 'ಮೊದಲು ಹಣ ಪಾವತಿಸಿ ನಂತರ ಸ್ವಯಂ ಸೇವೆಯ ಮೂಲಕ ಆಹಾರ ಸ್ವೀಕರಿಸುವ' ಈ ದರ್ಶಿನಿ ಮಾದರಿಯು ಜಗತ್ಪ್ರಸಿದ್ಧವಾಗಿದೆ. ಕಡಿಮೆ ಸಮಯದಲ್ಲಿ ಕೈಗೆಟುಕುವ ದರದಲ್ಲಿ, ಬಿಸಿಬಿಸಿಯಾದ ಮತ್ತು ಶುಚಿಯಾದ ದಕ್ಷಿಣ ಭಾರತದ ಉಪಾಹಾರವನ್ನು ಒದಗಿಸುವುದು ಇಲ್ಲಿನ ವಿಶೇಷತೆಯಾಗಿದೆ. ಈಗ ಇದೇ ಪರಿಕಲ್ಪನೆ ಚೆನ್ನೈ ನಗರವನ್ನು ನಿಧಾನವಾಗಿ ಆವರಿಸಿಕೊಳ್ಳುತ್ತಿದೆ.
ಚೆನ್ನೈ ಜನರನ್ನು ತನ್ನತ್ತ ಸೆಳೆಯುತ್ತಿರುವ ಕರ್ನಾಟಕದ ಊಟ
ಯಾವುದೇ ಆಹಾರವನ್ನಾಗಲಿ ಕೀಳು ಮಟ್ಟದಲ್ಲಿ ನೋಡಬಾರದು. ಆದರೆ ಪ್ರದೇಶದಿಂದ ಪ್ರದೇಶದ ಬದಲಾಗುವ ಅಥವಾ ಪ್ರಸಿದ್ಧಿ ಪಡೆದಿರುವ ಆಹಾರ ಪದ್ಧತಿ ಬಗ್ಗೆ ಹೇಳಲೇಬೇಕಾಗುತ್ತದೆ. ಮದ್ರಾಸ್ ಶೈಲಿಯ ತೆಳುವಾದ ದೋಸೆಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರು ಶೈಲಿಯ ದೋಸೆಗಳು ಸ್ವಲ್ಪ ದಪ್ಪಗಿದ್ದು, ಒಳಗಡೆ ಬೆಣ್ಣೆ ಅಥವಾ ತುಪ್ಪದ ಸುವಾಸನೆ ಹಾಗೂ ಕೆಂಪು ಚಟ್ನಿಯನ್ನು ಹೊಂದಿರುತ್ತವೆ. ಹೊರಭಾಗದಲ್ಲಿ ಗೋಲ್ಡನ್ ಬ್ರೌನ್ ಬಣ್ಣದಲ್ಲಿ ಸಖತ್ ಹೊಳೆಯುವ, ರುಚಿಕರವಾಗಿರುವ ಈ ದೋಸೆಗಳು ಇಲ್ಲಿನ ಗ್ರಾಹಕರ ನೆಚ್ಚಿನ ಆಯ್ಕೆಯಾಗಿವೆ.
ಕರ್ನಾಟಕದ ಆಹಾರ ಶೈಲಿಗೆ ಚೆನ್ನೈ ಫಿದಾ
ಮೃದುವಾದ ಮತ್ತು ಅಗಲವಾದ ಕರ್ನಾಟಕದ ಸ್ಪೆಷಲ್ ತಟ್ಟೆ ಇಡ್ಲಿ ಹಾಗೂ ಇಡ್ಲಿ-ವಡೆಯನ್ನು ಬಿಸಿಬಿಸಿ ಸಾಂಬಾರ್ನಲ್ಲಿ ಹಾಕಿ ಕೊಡುವ ಡಿಪ್ ಸಂಸ್ಕೃತಿ ಈಗ ಚೆನ್ನೈನಲ್ಲೂ ಭಾರಿ ಸದ್ದು ಮಾಡುತ್ತಿದೆ. ತಮಿಳುನಾಡು ಶೈಲಿಯ ಸಾಂಬಾರ್ಗೆ ಹೋಲಿಸಿದರೆ, ಸ್ವಲ್ಪ ಸಿಹಿಯಾದ ಬೆಂಗಳೂರು ಶೈಲಿಯ ಸಾಂಬಾರ್ ಅನ್ನು ಇಲ್ಲಿನ ಜನರು ಇಷ್ಟಪಟ್ಟು ಸವಿಯುತ್ತಿದ್ದಾರೆ. ಮತ್ತೊಂದೆಡೆ ಉಪ್ಪಿಟ್ಟು, ಮತ್ತು ಕೇಸರಿಬಾತ್ (ಶಿರಾ) ಎರಡನ್ನೂ ಒಂದೇ ಪ್ಲೇಟ್ನಲ್ಲಿ ನೀಡುವ 'ಚೌ ಚೌ ಬಾತ್' ಕಾಂಬಿನೇಷನ್ ಚೆನ್ನೈ ಗ್ರಾಹಕರಿಗೆ ಒಂದು ಹೊಸ ಅನುಭವ ನೀಡುತ್ತಿದೆ.
ಚೆನ್ನೈನ ಪೂನಂನಲ್ಲಿ ಹೈ ರೋಡ್ ಸೇರಿದಂತೆ ವಿವಿಧ ಪ್ರಮುಖ ಪ್ರದೇಶಗಳಲ್ಲಿ ಹೊಸ ಹೋಟೆಲ್ಗಳು ತಲೆಎತ್ತುತ್ತಿವೆ. ಇವುಗಳನ್ನು ಹೆಚ್ಚಾಗಿ ಹೊಸ ತಲೆಮಾರಿನ ಯುವ ಉದ್ಯಮಿಗಳು ಆರಂಭಿಸುತ್ತಿದ್ದಾರೆ. ಕರ್ನಾಟಕಕ್ಕೆ ಪ್ರವಾಸ ಕೈಗೊಂಡಾಗ ಅಲ್ಲಿನ ಆಹಾರ ಶೈಲಿಯಿಂದ ಪ್ರಭಾವಿತರಾಗಿ, ಅದೇ ಸ್ವಾದವನ್ನು ಚೆನ್ನೈ ಜನರಿಗೂ ಪರಿಚಯಿಸುವ ಉದ್ದೇಶದಿಂದ ಈ ಹೋಟೆಲ್ಗಳನ್ನು ತೆರೆಯಲಾಗುತ್ತಿದೆ.
ಗ್ರಾಹಕರನ್ನು ಆಕರ್ಷಿಸುತ್ತಿರುವ ಲೈವ್ ಕಿಚನ್
ಈ ಹೋಟೆಲ್ಗಳ ಮತ್ತೊಂದು ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಲೈವ್ ಕಿಚನ್ ಮಾದರಿ. ಗ್ರಾಹಕರು ಕೌಂಟರ್ನಲ್ಲಿ ನಿಂತು ಕಣ್ಣೆದುರೇ ದೋಸೆ ಬೇಯುವುದನ್ನು ನೋಡುವುದು, ತುಪ್ಪದ ಸುವಾಸನೆ ಮತ್ತು ಫಿಲ್ಟರ್ ಕಾಫಿಯ ಘಮವನ್ನು ಆಸ್ವಾದಿಸುವುದು ಒಂಥರಾ ಮಜಾ ನೀಡುತ್ತದೆ. ಕೇವಲ 15 ರಿಂದ 20 ನಿಮಿಷಗಳಲ್ಲಿ ಹೊಟ್ಟೆತುಂಬಾ ರುಚಿಕರವಾದ ಬಿಸಿ ಬಿಸಿ ಆಹಾರ ಸಿಗುವುದರಿಂದ ಕಚೇರಿಗೆ ಹೋಗುವವರು ಹಾಗೂ ಯುವ ಪೀಳಿಗೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ಹೋಟೆಲ್ಗಳತ್ತ ಮುಖ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಇಷ್ಟು ದಿನ ಮದ್ರಾಸ್ ಫಿಲ್ಟರ್ ಕಾಫಿ ಮತ್ತು ಇಡ್ಲಿಗೆ ಫೇಮಸ್ ಆಗಿದ್ದ ಚೆನ್ನೈ ನಗರವು ಈಗ ಬೆಂಗಳೂರಿನ ದರ್ಶಿನಿ ಶೈಲಿಯ ರುಚಿಗೆ ಸಂಪೂರ್ಣವಾಗಿ ಫಿದಾ ಆಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಇದೇ ರೀತಿಯ ಹೆಚ್ಚು ಹೋಟೆಲ್ಗಳು ತಲೆಎತ್ತುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications