380, 400 ಅಥವಾ 450.. 'ವಂಡರ್ ಕಿಡ್' ಟೆಸ್ಟ್ ಕ್ರಿಕೆಟ್‌ನಲ್ಲೂ ಅಪಾಯಕಾರಿಯಾಗಬಲ್ಲರು: ನ್ಯೂಜಿಲೆಂಡ್ ಸ್ಟಾರ್ ಆಟಗಾರ
Vaibhav Sooryavanshi: ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2026 ಟೂರ್ನಿಯಲ್ಲಿ ಯುಎಇ ವಿರುದ್ಧ ಕೇವಲ 53 ಎಸೆತಗಳಲ್ಲಿ 204 ರನ್ ಚಚ್ಚುವ ಮೂಲಕ ವಿಶ್ವದಾಖಲೆ ನಿರ್ಮಿಸಿರುವ 15 ವರ್ಷದ ವೈಭವ್ ಸೂರ್ಯವಂಶಿ ಅವರ ಆಟಕ್ಕೆ ಕ್ರಿಕೆಟ್ ಜಗತ್ತಿನ ದಿಗ್ಗಜರು ಬೆರಗಾಗಿದ್ದಾರೆ. ವೈಟ್-ಬಾಲ್ (ಟಿ20 ಮತ್ತು ಏಕದಿನ) ಮಾದರಿಯಲ್ಲಿ ತನ್ನ ಸ್ಫೋಟಕ ಬ್ಯಾಟಿಂಗ್ ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿರುವ ವೈಭವ್, ಟೆಸ್ಟ್ ಕ್ರಿಕೆಟ್‌ನಲ್ಲೂ ಯಶಸ್ವಿಯಾಗಬಲ್ಲರು ಎಂದು ನ್ಯೂಜಿಲೆಂಡ್‌ನ ಅನುಭವಿ ಲೆಗ್-ಸ್ಪಿನ್ನರ್ ಇಶ್ ಸೋಧಿ ಭವಿಷ್ಯ ನುಡಿದಿದ್ದಾರೆ.
ಪಿಟಿಐ ಜೊತೆ ಮಾತನಾಡಿರುವ ಇಶ್ ಸೋಧಿ ಅವರು, ವೈಭವ್ ಅವರ ಬ್ಯಾಟಿಂಗ್ ತಂತ್ರ ಮತ್ತು ಶಕ್ತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 'ನನ್ನ ವೃತ್ತಿಜೀವನದಲ್ಲಿ ವೈಭವ್ ಅವರಷ್ಟು ನಿರಂತರವಾಗಿ ಮತ್ತು ನಿಖರವಾಗಿ ಚೆಂಡನ್ನು ಬಾರಿಸುವ ಬ್ಯಾಟರ್ ಅನ್ನು ನಾನು ನೋಡಿಲ್ಲ. ಆತ ಓರ್ವ ಅಸಾಮಾನ್ಯ ಎಡಗೈ ಬ್ಯಾಟರ್. ಅಭಿಷೇಕ್ ಶರ್ಮಾ ಜೊತೆಗೂಡಿ ಮುಂಬರುವ ದಿನಗಳಲ್ಲಿ ಭಾರತ ತಂಡಕ್ಕೆ ಅಪಾರ ಬ್ಯಾಟಿಂಗ್ ಶಕ್ತಿಯನ್ನು ತುಂಬಲಿದ್ದಾರೆ,' ಎಂದು ಹೇಳಿದ್ದಾರೆ.

'ಟೆಸ್ಟ್ ಪಂದ್ಯದ 4ನೇ ಇನ್ನಿಂಗ್ಸ್‌ನಲ್ಲಿ ಗೇಮ್ ಚೇಂಜರ್ ಆಗಬಲ್ಲರು'
ವೈಭವ್ ಸೂರ್ಯವಂಶಿ ರೆಡ್-ಬಾಲ್ ಕ್ರಿಕೆಟ್‌ಗೆ ಹೊಂದಿಕೊಳ್ಳಬಲ್ಲರೇ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಧಿ, ಟೆಸ್ಟ್ ಪಂದ್ಯಗಳ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ದೊಡ್ಡ ಗುರಿ ಬೆನ್ನಟ್ಟುವಾಗ ವೈಭವ್ ಅತ್ಯಂತ ಉಪಯುಕ್ತವಾಗಬಲ್ಲರು ಎಂದಿದ್ದಾರೆ. 'ನಾನು ಈ ಬಗ್ಗೆ ಇತ್ತೀಚೆಗೆ ಒಬ್ಬರೊಂದಿಗೆ ಚರ್ಚಿಸುತ್ತಿದ್ದೆ. ವೈಭವ್ ಟೆಸ್ಟ್ ಆಟಗಾರನಾಗಬಲ್ಲನೇ? ಖಂಡಿತ, ಆತನ ಬ್ಯಾಟಿಂಗ್ ಶೈಲಿ ಅದ್ಭುತವಾಗಿದೆ. ಮೈದಾನದ ಮೂಲೆ-ಮೂಲೆಗಳಿಗೂ ಚೆಂಡನ್ನು ಬಾರಿಸುವ ರೀತಿ ನೋಡಿದರೆ, ಆತನ ತಂತ್ರಗಾರಿಕೆ ಟೆಸ್ಟ್ ಕ್ರಿಕೆಟ್‌ಗೂ ಸರಿಹೊಂದುತ್ತದೆ,' ಎಂದು ಸೋಧಿ ಹೇಳಿದ್ದಾರೆ.
'ವಂಡರ್ ಕಿಡ್ ಅಬ್ಬರ ತಡೆಯುವುದು ತುಂಬಾ ಕಷ್ಟ'
ಮುಂದುವರಿದು ಮಾತನಾಡಿದ ಅವರು, 'ಒಂದು ವೇಳೆ ನೀವು ಟೆಸ್ಟ್ ಪಂದ್ಯವಾಡುತ್ತಿದ್ದು, ಕೊನೆಯ ದಿನದಂದು ಗೆಲುವಿಗಾಗಿ 380 ಅಥವಾ 400 ಅಥವಾ 450 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಬೇಕಾದ ಸಂದರ್ಭ ಬಂದರೆ, ತಂಡದಲ್ಲಿ ವೈಭವ್ ಅಂತಹ ಆಟಗಾರನಿರುವುದು ಎದುರಾಳಿಗಳಿಗೆ ನಡುಕ ಹುಟ್ಟಿಸುತ್ತದೆ. ವಿಶೇಷವಾಗಿ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲೆ ಓವಲ್‌ನಂತಹ ಮೈದಾನಗಳಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಪಿಚ್ ಬ್ಯಾಟಿಂಗ್‌ಗೆ ನೆರವಾಗುತ್ತದೆ. ಅಂತಹ ಸಂದರ್ಭದಲ್ಲಿ ವೈಭವ್ ಅಬ್ಬರವನ್ನು ತಡೆಯುವುದು ಯಾವುದೇ ಬೌಲಿಂಗ್ ದಾಳಿಗೂ ಅಸಾಧ್ಯ' ಎಂದು ಹೇಳಿದ್ದಾರೆ.
'ವೈಭವ್ ಅತ್ಯಂತ ಅಪಾಯಕಾರಿ ಆಟಗಾರನಾಗಬಲ್ಲರು'
ಇದೇ ವೇಳೆ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್‌ನ ಸವಾಲುಗಳ ಬಗ್ಗೆಯೂ ಸೋಧಿ ಅವರು ಪ್ರಸ್ತಾಪಿಸಿದ್ದಾರೆ. 'ಸಾಂಪ್ರದಾಯಿಕ ದೃಷ್ಟಿಕೋನದಿಂದ ನೋಡಿದರೆ, ಆತ ಸುದೀರ್ಘ ಅವಧಿಯವರೆಗೆ ಬ್ಯಾಟಿಂಗ್ ಮಾಡಬಲ್ಲನೇ ಮತ್ತು ಕ್ರೀಸ್‌ನಲ್ಲಿ ಹೆಚ್ಚು ಸಮಯ ಕಳೆಯಬಲ್ಲನೇ ಎಂಬ ಬಗ್ಗೆ ನನಗೆ ಖಚಿತತೆಯಿಲ್ಲ. ಏಕೆಂದರೆ ಆತನ ರಕ್ಷಣಾತ್ಮಕ ಆಟವನ್ನು ನಾನು ಹೆಚ್ಚು ನೋಡಿಲ್ಲ. ಆದರೆ ಆಧುನಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ವೈಭವ್ ಅತ್ಯಂತ ಅಪಾಯಕಾರಿ ಆಟಗಾರನಾಗಬಲ್ಲರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ,' ಎಂದು ಇಶ್ ಸೋಧಿ ಭವಿಷ್ಯ ನುಡಿದಿದ್ದಾರೆ.


Click it and Unblock the Notifications
