ಬೆಳ್ಳಗಾಗುವ ಆಸೆಗೆ ಫೇರ್‌ನೆಸ್ ಕ್ರೀಮ್ ಹಚ್ಚಿ ಬಾಲಕಿ ಕಿಡ್ನಿ ಹಾಳು: ಇನ್‌ಫ್ಲುಯೆನ್ಸರ್ಸ್ ಜಾಹೀರಾತು ವಿರುದ್ಧ ಭಾರಿ ಆಕ್ರೋಶ!
ತಿರುವನಂತಪುರಂ: ಬೆಳ್ಳಗೆ ಕಾಣಬೇಕು, ಮುಖದ ಕಾಂತಿ ಹೆಚ್ಚಿಸಿಕೊಳ್ಳಬೇಕು ಹಾಗೂ ಕ್ಷಣಾರ್ಧದಲ್ಲಿ ಮುಖ ಪಳಪಳ ಹೊಳೆಯಬೇಕು ಎಂದು ಮಾರುಕಟ್ಟೆಯಲ್ಲಿ ಸಿಗುವ ನಕಲಿ ಸೌಂದರ್ಯವರ್ಧಕಗಳನ್ನ ಬಳಸುವುದು ಎಷ್ಟು ಅಪಾಯಕಾರಿ ಎಂಬುದಕ್ಕೆ ಕೇರಳದಲ್ಲಿ ನಡೆದ ಈ ಘಟನೆಯೇ ಒಂದೊಳ್ಳೆ ಉದಾಹರಣೆ.
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ನೀಡುವ ಜಾಹೀರಾತನ್ನ ನಂಬಿ ಫೇರ್‌ನೆಸ್ ಕ್ರೀಮ್ ಬಳಸಿದ 17 ವರ್ಷದ ಯುವತಿ ಹಾಗೂ ಖ್ಯಾತ ಮಾಪಿಳಪ್ಪಾಟ್ಟು ಗಾಯಕ ಸಲೀಂ ಕೋಡತ್ತೂರ್ ಅವರು ಇದೀಗ ಗಂಭೀರ ಕಿಡ್ನಿ ಸಮಸ್ಯೆಗೆ ತುತ್ತಾಗಿದ್ದಾರೆ.

ಸದ್ಯ ಕೇರಳದಾದ್ಯಂತ ಈ ಫೇರ್‌ನೆಸ್ ಕ್ರೀಮ್ ವಿವಾದ ಭಾರಿ ಸಂಚಲನ ಸೃಷ್ಟಿಸಿದ್ದು, ರಾಜ್ಯ ಸರ್ಕಾರ ಹಾಗೂ ಬಾಲ ಹಕ್ಕುಗಳ ಆಯೋಗ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಮುಂದಾಗಿವೆ.
ಗಾಯಕ ಸಲೀಂ ಕೋಡತ್ತೂರ್ ಹಾಗೂ ಬಾಲಕಿಗೆ ಕಿಡ್ನಿ ಸಮಸ್ಯೆ
ಮಲಪ್ಪುರಂ ಮೂಲದ 17 ವರ್ಷದ ಬಾಲಕಿಯು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ನೀಡಿದ ಪ್ರಚಾರವನ್ನ ನೋಡಿ ಫೇರ್‌ನೆಸ್ ಕ್ರೀಮ್ ಖರೀದಿಸಿ ಬಳಸಿದ್ದಳು. ಇದರಿಂದ ಆಕೆಯ ಕಿಡ್ನಿಗಳಿಗೆ ತೀವ್ರ ಹಾನಿಯಾಗಿದ್ದು, ಈ ಸಂಬಂಧ ಕಾನೂನು ಹೋರಾಟ ನಡೆಸಲು ಆಕೆ ನಿರ್ಧರಿಸಿದ್ದಾಳೆ.
ಇದರ ಬೆನ್ನಲ್ಲೇ, ಖ್ಯಾತ ಗಾಯಕ ಸಲೀಂ ಕೋಡತ್ತೂರ್ ಕೂಡ ತಾವು ಇದೇ ರೀತಿಯ ಆರೋಗ್ಯ ಸಮಸ್ಯೆಗೆ ತುತ್ತಾಗಿರುವುದಾಗಿ ಬಹಿರಂಗಪಡಿಸಿದ್ದಾರೆ.
ಕಾಸರಗೋಡಿನ ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ಈ ಫೇರ್‌ನೆಸ್ ಕ್ರೀಮ್ ಬಳಸಲು ಆರಂಭಿಸಿದ್ದ ಸಲೀಂ ಅವರಿಗೆ, ಮೊದಲ ಕೆಲವು ದಿನಗಳಲ್ಲಿ ಮುಖದ ಬಣ್ಣ ಬೆಳ್ಳಗಾದಂತೆ ಭಾಸವಾಗಿತ್ತು. ಆದರೆ, ಕ್ರಮೇಣ ಅವರ ಆರೋಗ್ಯ ಹದಗೆಟ್ಟು, ರೋಗನಿರೋಧಕ ಶಕ್ತಿ ಸಂಪೂರ್ಣವಾಗಿ ಕುಸಿಯಿತು. ಆರೋಗ್ಯ ಸ್ಥಿತಿ ಗಂಭೀರವಾದ ಕಾರಣ ಅವರು ಹಲವು ತಿಂಗಳುಗಳ ಕಾಲ ತಮ್ಮ ಸಂಗೀತ ಕಾರ್ಯಕ್ರಮಗಳನ್ನೇ ರದ್ದುಗೊಳಿಸಬೇಕಾಯಿತು ಎಂದು ತಮಗಾದ ನೋವು ತೋಡಿಕೊಂಡಿದ್ದಾರೆ.
ಏನಿದು ಮೆಂಬ್ರನಸ್ ನೆಫ್ರೋಪತಿ? ಕ್ರೀಮ್‌ನಲ್ಲಿರುವ ಪಾದರಸದ ಅಪಾಯವೇನು?
ಬಾಲಕಿ ಮತ್ತು ಗಾಯಕ ಸಲೀಂ ಇಬ್ಬರೂ ಮೆಂಬ್ರನಸ್ ನೆಫ್ರೋಪತಿ (Membranous nephropathy) ಎಂಬ ಗಂಭೀರ ಕಿಡ್ನಿ ಕಾಯಿಲೆಗೆ ತುತ್ತಾಗಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಕಿಡ್ನಿಗಳಲ್ಲಿ ರಕ್ತವನ್ನ ಶುದ್ಧೀಕರಿಸುವ ಸೂಕ್ಷ್ಮ ರಚನೆಗಳಾದ ಗ್ಲೋಮೆರುಲಿಗಳಿಗೆ (Glomeruli) ಹಾನಿಯಾಗಿದ್ದು, ಅಲ್ಲಿ ಊತ ಉಂಟಾಗುವ ಸ್ಥಿತಿಯೇ ಮೆಂಬ್ರನಸ್ ನೆಫ್ರೋಪತಿ. ಇದರಿಂದ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಮೂತ್ರದ ಮೂಲಕ ಭಾರಿ ಪ್ರಮಾಣದಲ್ಲಿ ಹೊರಹೋಗುತ್ತದೆ, ದೇಹದಲ್ಲಿ ಊತ ಕಾಣಿಸಿಕೊಳ್ಳುತ್ತದೆ ಮತ್ತು ರೋಗನಿರೋಧಕ ಶಕ್ತಿ ಕುಂದುತ್ತದೆ.
ಅನಧಿಕೃತ ಹಾಗೂ ನಕಲಿ ಫೇರ್‌ನೆಸ್ ಕ್ರೀಮ್‌ಗಳಲ್ಲಿ ತ್ವರಿತವಾಗಿ ಬಣ್ಣ ಬರಲು ಅತಿಯಾದ ಪ್ರಮಾಣದಲ್ಲಿ ಪಾದರಸ (Mercury) ಬೆರೆಸಲಾಗುತ್ತದೆ. ಇದು ಚರ್ಮದಲ್ಲಿ ಮೆಲನಿನ್ ಉತ್ಪಾದನೆಯನ್ನ ತಡೆದು ಆರಂಭದಲ್ಲಿ ಕೃತಕ ಬೆಳ್ಳಗಿನ ಕಾಂತಿ ನೀಡುತ್ತದೆ. ಆದರೆ ನಂತರ ಚರ್ಮದ ಜೀವಕೋಶಗಳನ್ನ ನಾಶಪಡಿಸಿ ಮುಖವನ್ನ ಮತ್ತಷ್ಟು ಕಪ್ಪಾಗಿಸುವುದಲ್ಲದೆ, ಚರ್ಮದ ಮೂಲಕ ರಕ್ತಕ್ಕೆ ಸೇರಿ ಕಿಡ್ನಿಗಳನ್ನ ಶಾಶ್ವತವಾಗಿ ಹಾಳುಮಾಡುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಕೇಂದ್ರ ಪ್ರಯೋಗಾಲಯದ ಪರೀಕ್ಷೆಯಲ್ಲೂ ಈ ಕ್ರೀಮ್‌ನಲ್ಲಿ ಅಪಾಯಕಾರಿ ಮಟ್ಟದ ಪಾದರಸ ಇರುವುದು ಪತ್ತೆಯಾಗಿದೆ.
ಬಾಲ ಹಕ್ಕುಗಳ ಆಯೋಗದಿಂದ ಕೇಸ್: ರೆನೀಷಾ ರೆಹಮಾನ್ ಹೇಳಿದ್ದೇನು?
17ರ ಬಾಲಕಿಯ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಕೇರಳ ಬಾಲ ಹಕ್ಕುಗಳ ಆಯೋಗ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದೆ. ಆರೋಗ್ಯ ಇಲಾಖೆ ನಿರ್ದೇಶಕರು, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಡ್ರಗ್ಸ್ ಕಂಟ್ರೋಲರ್ ಹಾಗೂ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದಿಂದ (CCPA) ವಿವರಣೆ ಕೇಳಿದೆ.
ಅತ್ತ ಮಾಧ್ಯಮ ವರದಿಗಳು ಹಾಗೂ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಕೆ. ಪ್ರತಿಭಾ ಅವರ ದೂರಿನ ಮೇರೆಗೆ ಕೇರಳ ಮುಖ್ಯಮಂತ್ರಿಗಳ ಕಚೇರಿಯೂ ಮಧ್ಯಪ್ರವೇಶಿಸಿದೆ. ಪಾದರಸಯುಕ್ತ ಕ್ರೀಮ್‌ಗಳ ಮಾರಾಟ ತಡೆಯಲು ಪ್ರತಿ ಜಿಲ್ಲೆಯಲ್ಲೂ ವಿಶೇಷ ತಂಡ ರಚಿಸುವ ಕುರಿತು ಪರಿಶೀಲಿಸಲು ಸೂಚಿಸಿದೆ.
ಮತ್ತೊಂದೆಡೆ, ಈ ಕ್ರೀಮ್ ಅನ್ನಾ ಪ್ರಚಾರ ಮಾಡಿದ್ದಕ್ಕಾಗಿ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಇನ್‌ಫ್ಲುಯೆನ್ಸರ್ ರೆನೀಷಾ ರೆಹಮಾನ್ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ರೆನೀಷಾ, "ಒಂದು ವರ್ಷದ ಹಿಂದೆ ಆ ಕ್ರೀಮ್ ಅನ್ನಾ ನಾನು ಸ್ವತಃ ಬಳಸಿ, ಉತ್ತಮ ಫಲಿತಾಂಶ ಕಂಡ ಬಳಿಕವೇ ಪ್ರಚಾರ ಮಾಡಿದ್ದೆ. ಆ ಬಾಲಕಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ಕೇಳಿ ನನಗೂ ತೀವ್ರ ಆಘಾತವಾಗಿದೆ, ಆಕೆ ಬೇಗ ಗುಣಮುಖಳಾಗಲಿ" ಎಂದಿದ್ದಾರೆ.




Click it and Unblock the Notifications
