ದೀಪಾವಳಿಗೂ ಮುನ್ನ Zepto, Blinkit ಸೇರಿ ಬರೋಬ್ಬರಿ 105 ಮಳಿಗೆಗಳ ಮೇಲೆ FDA ದಾಳಿ: ಲೈಸೆನ್ಸ್ ರದ್ದು
ಮುಂಬೈ: ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರಿಗೆ ಕಲಬೆರಕೆ ಹಾಗೂ ಕಳಪೆ ಗುಣಮಟ್ಟದ ಆಹಾರ ಪೂರೈಸುವ ಮೂಲಕ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದ ಆಹಾರ ವಿತರಣಾ ಸಂಸ್ಥೆಗಳು ಹಾಗೂ ಮಳಿಗೆಗಳಿಗೆ ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ ಬಿಸಿ ಮುಟ್ಟಿಸಿದೆ.
ಖಡಕ್ ಕ್ರಮಗಳಿಗೆ ಹೆಸರಾಗಿರುವ ಖಡಕ್ ಅಧಿಕಾರಿ, ಮಹಾರಾಷ್ಟ್ರ ಎಫ್‌ಡಿಎ ಆಯುಕ್ತ ತುಕಾರಾಮ್ ಮುಂಢೆ ಅವರ ನೇತೃತ್ವದಲ್ಲಿ ರಾಜ್ಯಾದ್ಯಂತ ಎಫ್‌ಡಿಎ ಕಾರ್ಯಾಚರಣೆ ನಡೆಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಆಹಾರ ಸುರಕ್ಷತಾ ನಿಯಮಗಳನ್ನ ಉಲ್ಲಂಘಿಸಿದ ಬರೋಬ್ಬರಿ 105 ಮಳಿಗೆಗಳ ಪರವಾನಗಿಯನ್ನ ಅಮಾನತುಗೊಳಿಸಲಾಗಿದೆ.

ಈ ಬ್ಲಾಕ್‌ಲಿಸ್ಟ್ ಪಟ್ಟಿಯಲ್ಲಿ ಜನಪ್ರಿಯ ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಾದ ಝೆಪ್ಟೋ, ಬ್ಲಿಂಕಿಟ್ ಹಾಗೂ ಬಿರಿಯಾನಿ ಬೈ ಕಿಲೋ ದಂತಹ ಖ್ಯಾತ ಬ್ರ್ಯಾಂಡ್‌ಗಳು ಸೇರಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಝೆಪ್ಟೋ, ಬ್ಲಿಂಕಿಟ್ ಸೇರಿ 105 ಮಳಿಗೆಗಳ ಲೈಸೆನ್ಸ್ ರದ್ದು
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಹಾರ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾಗುವ ಕಾರಣ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಎಫ್‌ಡಿಎ ಅಧಿಕಾರಿಗಳು ನವೆಂಬರ್ 4 ಮತ್ತು 5ರಂದು ಮಹಾರಾಷ್ಟ್ರದಾದ್ಯಂತ ದಿಢೀರ್ ತಪಾಸಣೆ ಕೈಗೊಂಡಿದ್ದರು. ಈ ವಿಶೇಷ ಪರಿಶೀಲನಾ ಕಾರ್ಯಾಚರಣೆ ವೇಳೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ನಿಯಮಗಳ ಸ್ಪಷ್ಟ ಉಲ್ಲಂಘನೆ ಕಂಡುಬಂದಿದೆ.
ಕೇವಲ ಮುಂಬೈ ನಗರವೊಂದರಲ್ಲೇ 28 ಆಹಾರ ಮಳಿಗೆಗಳ ಲೈಸೆನ್ಸ್ ರದ್ದುಪಡಿಸಲಾಗಿದೆ. ಇದರಲ್ಲಿ ವೊರ್ಲಿಯಲ್ಲಿರುವ ಝೆಪ್ಟೋ ಔಟ್‌ಲೆಟ್, ಬ್ಲಿಂಕ್ ಕಾಮರ್ಸ್ ಪ್ರೈವೇಟ್ ಲಿಮಿಟೆಡ್ ನಡೆಸುತ್ತಿರುವ ಬ್ಲಿಂಕಿಟ್, 'ಬಿರಿಯಾನಿ ಬೈ ಕಿಲೋ, ಟಾಸಿನ್ ಪಿಜ್ಜಾದ ವೊರ್ಲಿ ಮಳಿಗೆ ಹಾಗೂ ಜಂಬೋ ಬರ್ಗರ್ ನಂತಹ ಪ್ರತಿಷ್ಠಿತ ಮಳಿಗೆಗಳ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗಿದೆ.
ಕ್ವಿಕ್-ಕಾಮರ್ಸ್ ಹೆಸರಿನಲ್ಲಿ 10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ವಸ್ತುಗಳನ್ನ ಪೂರೈಸುವ ಭರದಲ್ಲಿ ಗುಣಮಟ್ಟವನ್ನ ನಿರ್ಲಕ್ಷಿಸಲಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಸಂಸ್ಥೆಗಳ ಡಾರ್ಕ್ ಸ್ಟೋರ್‌ಗಳ ಮೇಲೂ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.
7 ಮಳಿಗೆಗಳು ಸಂಪೂರ್ಣ ಬಂದ್, 1.35 ಕೋಟಿ ರೂ. ಆಹಾರ ಜಪ್ತಿ
ಆಹಾರ ಸುರಕ್ಷತಾ ನಿಯಮಗಳ ಉಲ್ಲಂಘನೆಯನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಎಫ್‌ಡಿಎ, ರಾಜ್ಯದಾದ್ಯಂತ 7 ಮಳಿಗೆಗಳನ್ನ ಸಂಪೂರ್ಣವಾಗಿ ಮುಚ್ಚಲು ಆದೇಶಿಸಿದೆ. ಪುಣೆಯಲ್ಲಿ 3, ಅಮರಾವತಿಯಲ್ಲಿ 2, ಮುಂಬೈ ಮತ್ತು ಕೊಂಕಣ ಭಾಗದಲ್ಲಿ ತಲಾ ಒಂದು ಮಳಿಗೆಗಳನ್ನು ಬಂದ್ ಮಾಡಿಸಲಾಗಿದೆ. ಮುಂಬೈನ ಬೊರಿವಲಿಯಲ್ಲಿರುವ 'ರಾಜಧಾನಿ ಬಿರಿಯಾನಿ ಸೆಂಟರ್' ಅನ್ನು ಎಫ್‌ಎಸ್‌ಎಸ್‌ಎಐ ನಿಯಮಗಳ ಉಲ್ಲಂಘನೆಗಾಗಿ ಮುಚ್ಚಿಸಲಾಗಿದೆ.
ನಾಗ್ಪುರದ ಕಾಮ್ತಿ ರಸ್ತೆಯಲ್ಲಿರುವ ಡಿ-ಮಾರ್ಟ್ ಮಳಿಗೆಯ ಮೇಲೂ ದಾಳಿ ಮಾಡಲಾಗಿದ್ದು, ಲೈಸೆನ್ಸ್ ನಿಯಮಗಳ ಉಲ್ಲಂಘನೆ ಕಂಡುಬಂದ ಹಿನ್ನೆಲೆಯಲ್ಲಿ ರಿಫೈನ್ಡ್ ಸೋಯಾಬೀನ್ ಎಣ್ಣೆಯನ್ನು ಜಪ್ತಿ ಮಾಡಲಾಗಿದೆ. ರಾಜ್ಯಾದ್ಯಂತ ಒಟ್ಟು 69 ಸಂಸ್ಥೆಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಕಳಪೆ ಗುಣಮಟ್ಟದ ಹಾಗೂ ಕಲಬೆರಕೆ ಶಂಕೆಯ ಮೇರೆಗೆ ಬರೋಬ್ಬರಿ 1.35 ಕೋಟಿ ರೂ.ಗೂ ಅಧಿಕ ಮೌಲ್ಯದ ಆಹಾರ ಪದಾರ್ಥಗಳ ದಾಸ್ತಾನನ್ನ ಜಪ್ತಿ ಮಾಡಿದ್ದಾರೆ.
ನಿಷೇಧಿತ ಆಹಾರ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ 3 ಎಫ್‌ಐಆರ್ ದಾಖಲಿಸಲಾಗಿದ್ದು, ಇಬ್ಬರನ್ನ ಬಂಧಿಸಲಾಗಿದೆ ಮತ್ತು ಎರಡು ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ.
ಜೀವಾವಧಿ ಶಿಕ್ಷೆಯ ಎಚ್ಚರಿಕೆ ನೀಡಿದ ಆಯುಕ್ತ ತುಕಾರಾಮ್ ಮುಂಢೆ
ಈ ಕಾರ್ಯಾಚರಣೆಯ ಕುರಿತು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿರುವ ಮಹಾರಾಷ್ಟ್ರ ಎಫ್‌ಡಿಎ ಆಯುಕ್ತ ತುಕಾರಾಮ್ ಮುಂಢೆ, "ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುವಂತಹ ಯಾವುದೇ ಆಹಾರ ಬ್ಯುಸಿನೆಸ್ ಆದ್ರೂ ಸಹಿಸುವುದಿಲ್ಲ. ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಗುಡುಗಿದ್ದಾರೆ.
ಕಳಪೆ ಹಾಗೂ ಅಸುರಕ್ಷಿತ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುವುದು ಗಂಭೀರ ಅಪರಾಧವಾಗಿದ್ದು, ಇಂತಹ ಆಹಾರ ಸೇವನೆಯಿಂದ ಯಾವುದೇ ವ್ಯಕ್ತಿ ಮೃತಪಟ್ಟರೆ, ಕಾರಣರಾದವರಿಗೆ ಜೀವಾವಧಿ ಶಿಕ್ಷೆ ಹಾಗೂ 10 ಲಕ್ಷ ರೂ.ವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications
