ರಾಜಕೀಯಕ್ಕೆ ತ್ರಿಷಾ ಕೃಷ್ಣನ್? ಜಯಲಲಿತಾಗಿದ್ದ ‘ಇಳಯ ಪುರಚ್ಚಿ ತಲೈವಿ’ ಬಿರುದು, ಬೇರೆ ಹೆಸರೇ ಸಿಗಲಿಲ್ವಾ?
ಸನ್‌ರೈಸರ್ಸ್ ಹೈದರಾಬಾದ್ ತಂಡದ ಒಡತಿ ಕಾವ್ಯಾ ಮಾರನ್ ಮದ್ವೆಗೆ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೊಸೆಫ್ ಒಂಟಿಯಾಗಿ ಬಂದಿದ್ದು ಸದ್ದು ಮಾಡಿತ್ತು. ತ್ರಿಷಾ ಕೃಷ್ಣನ್ ಜೊತೆ ಬಾರದೇ ಹೋದದ್ದು ಒಂದೆಡೆ ಸುದ್ದಿಯಾದರೆ, ಮತ್ತೊಂದೆಡೆ ವಿಜಯ್ ಧರ್ಮಪತ್ನಿ ಸಂಗೀತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೂ, ಜೊತೆಯಾಗಿ ಇರದದ್ದು ಮತ್ತೊಂದು ಸುದ್ದಿಯಾಗಿತ್ತು. ಇದೇ ಬೆನ್ನಲ್ಲೇ ಇದೀಗ ರಾಜಕೀಯ ಎಂಟ್ರಿಗೆ ತ್ರಿಷಾ ಕೃಷ್ಣನ್ ಮುನ್ನುಡಿ ಬರೆದಿದ್ದು, ತಮಿಳುನಾಡಿನ ರಾಜಕೀಯ ವಲಯದಲ್ಲಿ ನಟಿಯ ಹೆಸರು ಮತ್ತೊಮ್ಮೆ ಚರ್ಚೆಗೆ ಬಂದಿದೆ.
ನಟ ದಳಪತಿ ವಿಜಯ್ ಅವರ ರಾಜಕೀಯ ಪ್ರವೇಶದ ನಂತರ ಇಬ್ಬರ ಸ್ನೇಹದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ನಡೆಯುತ್ತಿರುವಾಗಲೇ, ತ್ರಿಷಾ ಹೆಸರಿನಲ್ಲಿ 'ಇಳಯ ಪುರಚ್ಚಿ ತಲೈವಿ' ಎಂಬ ಹೊಸ ಅಭಿಮಾನಿ ಸಂಘಟನೆ ಆರಂಭವಾಗಲಿದೆ ಎಂಬ ವರದಿಗಳು ಗಮನ ಸೆಳೆದಿವೆ. ಈ ಬಿರುದಿಗೆ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ರಾಜಕೀಯ ಇತಿಹಾಸದ ನಂಟಿದ್ದು, ಸದಾ ಮಾಜಿ ಮುಖ್ಯಮಂತ್ರಿಗೆ ನಟಿಯನ್ನು ಹೋಲಿಸುತ್ತಿದ್ದು, ಅದು ಸಾಬೀತು ಆಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.

Trisha Krishnan ಹೆಸರಲ್ಲಿ ಹೊಸ ಅಭಿಮಾನಿ ಸಂಘಟನೆ
ತಮಿಳು ಚಿತ್ರರಂಗದ ಜನಪ್ರಿಯ ನಟಿ ತ್ರಿಷಾ ಅವರ ಹೆಸರಿನಲ್ಲಿ ಹೊಸ ಅಭಿಮಾನಿ ಸಂಘಟನೆಯೊಂದು ಅಸ್ತಿತ್ವಕ್ಕೆ ಬರಲಿದೆ ಎನ್ನಲಾಗುತ್ತಿದೆ. 'ಇಳಯ ಪುರಚ್ಚಿ ತಲೈವಿ ತ್ರಿಷಾ ಪೇರವೈ' ಎಂಬ ಹೆಸರಿನ ಸಂಘಟನೆಗೆ ನವೆಂಬರ್ 24ರಂದು ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ಚಾಲನೆ ನೀಡುವ ಸುದ್ದಿಯೊಂದು ಹರಿದಾಡುತ್ತಿದೆ. ಈ ಸಂಘಟನೆಯ ಹೆಸರೇ ಇದೀಗ ಕುತೂಹಲಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ರಾಜಕೀಯ ನಾಯಕರಿಗೆ ಸಂಬಂಧಿಸಿದಂತೆ ಬಳಸಲಾಗುವ 'ಪುರಚ್ಚಿ ತಲೈವಿ' ಬಿರುದನ್ನು ನಟಿ ತ್ರಿಷಾ ಅವರ ಹೆಸರಿನೊಂದಿಗೆ ಜೋಡಿಸಿರುವುದು ತಮಿಳುನಾಡಿನ ಸಿನಿಮಾ ಮತ್ತು ರಾಜಕೀಯ ವಲಯಗಳಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಲಿದೆ.
ವಿಜಯ್ ಮತ್ತು ತ್ರಿಷಾ ಸ್ನೇಹದ ಬಗ್ಗೆ ಹೆಚ್ಚಿದ ಕುತೂಹಲ
ತಮಿಳು ಚಿತ್ರರಂಗದಲ್ಲಿ ವಿಜಯ್ ಮತ್ತು ತ್ರಿಷಾ ಜೋಡಿಗೆ ವಿಶೇಷ ಅಭಿಮಾನಿ ಬಳಗವಿದೆ. 2004ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ 'ಗಿಲ್ಲಿ' ಚಿತ್ರದಲ್ಲಿ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದ ಈ ಜೋಡಿ, ನಂತರ 'ತಿರುಪಾಚಿ', 'ಆದಿ' ಹಾಗೂ 'ಕುರಿವಿ' ಚಿತ್ರಗಳಲ್ಲಿಯೂ ಕಾಣಿಸಿಕೊಂಡಿತ್ತು. ಹಲವು ವರ್ಷಗಳ ನಂತರ 2023ರಲ್ಲಿ ಬಿಡುಗಡೆಯಾದ 'ಲಿಯೋ' ಚಿತ್ರದ ಮೂಲಕ ವಿಜಯ್ ಮತ್ತು ತ್ರಿಷಾ ಮತ್ತೆ ತೆರೆಯ ಮೇಲೆ ಒಂದಾಗಿದ್ದರು.
ಅಷ್ಟೇ ಅಲ್ಲ ಆಗಿನಿಂದಲೇ ಈ ಜೋಡಿ ವೈಯಕ್ತಿಕವಾಗಿಯೂ ಹತ್ತಿರವಾಗಿದ್ದು, ವಿಜಯ್ ದಾಂಪತ್ಯದಲ್ಲಿ ಬಿರುಕು ಬಿಡಲು ಶುರುವಾಗಿದ್ದು. ಯಾವಾಗ ವಿಜಯ್ ತ್ರಿಷಾಗೆ ಹತ್ತಿರವಾದರೋ, ಆ ನಂತರ ವಿಜಯ್ ತಮ್ಮ ಪತ್ನಿ ಸಂಗೀತಾರಿಂದ ದೂರವಿದ್ದಾರೆ. ಆದರೆ, ಇತ್ತೀಚೆಗೆ ತ್ರಿಷಾ-ವಿಜಯ್ ಹೆಸರು ಸಿನಿಮಾಗಿಂತ ರಾಜಕೀಯ ಚರ್ಚೆಗಳಲ್ಲಿಯೇ ಹೆಚ್ಚು ಕೇಳಿ ಬರುತ್ತಿದೆ. ವಿಜಯ್ ರಾಜಕೀಯ ಪ್ರವೇಶಿಸಿದ ಬಳಿಕ ನಡೆದ ಕೆಲವು ಪ್ರಮುಖ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತ್ರಿಷಾ ಭಾಗವಹಿಸಿರುವುದು ಗಮನ ಸೆಳೆದಿದೆ. ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಗಳಲ್ಲಿಯೂ ತ್ರಿಷಾ ಹಾಜರಿದ್ದರು.
ಇದಲ್ಲದೆ, ಸೆಪ್ಟೆಂಬರ್‌ನಲ್ಲಿ ಬ್ರಿಟನ್‌ನ ಸಿಲ್ವರ್‌ಸ್ಟೋನ್‌ನಲ್ಲಿ ನಡೆದ ಕಾರ್ ರೇಸ್ ಸಂದರ್ಭದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ನವೆಂಬರ್ 5ರಂದು ಚೆನ್ನೈನಲ್ಲಿ ನಡೆದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಂಬಂಧಿಕರ ವಿವಾಹ ಆರತಕ್ಷತೆಯಲ್ಲಿಯೂ ವಿಜಯ್ ಮತ್ತು ತ್ರಿಷಾ ಒಟ್ಟಾಗಿ ಕಾಣಿಸಿಕೊಂಡಿದ್ದು, ಮತ್ತೊಮ್ಮೆ ಇವರಿಬ್ಬರ ಸಂಬಂಧದ ಬಗ್ಗೆ ಮಾತನಾಡುವಂತಾಯಿತು.
ಟಿವಿಕೆ ಪಕ್ಷದ ನಾಯಕರೊಂದಿಗೆ ತ್ರಿಷಾ ಮಾತುಕತೆ?
ವಿಜಯ್ ಸ್ಥಾಪಿಸಿರುವ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಆಂತರಿಕ ಬೆಳವಣಿಗೆಗಳಲ್ಲಿಯೂ ತ್ರಿಷಾ ಹೆಸರು ಕೇಳಿಬರುತ್ತಿದೆ. ನವೆಂಬರ್ 20ರಂದು ಪ್ರಕಟವಾದ ವರದಿಯೊಂದರ ಪ್ರಕಾರ, ಟಿವಿಕೆ ಪಕ್ಷದ ಪ್ರಮುಖ ನಾಯಕರಾದ ಬುಸ್ಸಿ ಆನಂದ್, ಆಧವ್ ಅರ್ಜುನ ಹಾಗೂ ವಿಜಯ್ ಅವರ ಸಲಹೆಗಾರ ವಿಷ್ಣು ರೆಡ್ಡಿ ಅವರು ತ್ರಿಷಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಪಕ್ಷದ ಮತ್ತೊಬ್ಬ ಪ್ರಮುಖ ಸಲಹೆಗಾರ ಜಾನ್ ಅರೋಕಿಯಸ್ವಾಮಿ ವಿರುದ್ಧ ಆಂತರಿಕ ಅಸಮಾಧಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆ ಎಂಬ ಮಾತುಗಳೂ ಕೇಳಿಬಂದಿವೆ.
ಆದರೆ ಈ ಭೇಟಿಯ ಉದ್ದೇಶವೇನು ಅಥವಾ ಪಕ್ಷದ ಆಂತರಿಕ ವಿಚಾರಗಳಲ್ಲಿ ತ್ರಿಷಾ ಪಾತ್ರವೇನು ಎಂಬುದರ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ. ಹೀಗಾಗಿ ಈ ವರದಿಗಳನ್ನು ದೃಢಪಟ್ಟ ರಾಜಕೀಯ ಬೆಳವಣಿಗೆಗಳೆಂದು ಪರಿಗಣಿಸಲು ಸಾಧ್ಯವಿಲ್ಲ.
'ಇಳಯ ಪುರಚ್ಚಿ ತಲೈವಿ' ಬಿರುದಿನ ಅರ್ಥವೇನು?
ತ್ರಿಷಾ ಹೆಸರಿನಲ್ಲಿ ಆರಂಭವಾಗಲಿದೆ ಎನ್ನಲಾದ ಅಭಿಮಾನಿ ಸಂಘಟನೆಯ ಬಿರುದಿಗೆ ತಮಿಳುನಾಡಿನ ರಾಜಕೀಯ ಇತಿಹಾಸದೊಂದಿಗೆ ನಂಟಿದೆ. ತಮಿಳು ಭಾಷೆಯಲ್ಲಿ 'ಪುರಚ್ಚಿ' ಎಂದರೆ ಕ್ರಾಂತಿ ಅಥವಾ ಬದಲಾವಣೆ. 'ತಲೈವಿ' ಎಂದರೆ ನಾಯಕಿ. ಈ ಎರಡೂ ಪದಗಳನ್ನು ಸೇರಿಸಿದರೆ 'ಪುರಚ್ಚಿ ತಲೈವಿ' ಎಂದರೆ 'ಕ್ರಾಂತಿಕಾರಿ ನಾಯಕಿ' ಎಂದರ್ಥ. ಇನ್ನು 'ಇಳಯ' ಎಂಬ ಪದಕ್ಕೆ ಯುವ ಅಥವಾ ಕಿರಿಯ ಎಂಬ ಅರ್ಥವಿದೆ. ಹೀಗಾಗಿ 'ಇಳಯ ಪುರಚ್ಚಿ ತಲೈವಿ' ಎಂದರೆ 'ಯುವ ಕ್ರಾಂತಿಕಾರಿ ನಾಯಕಿ' ಎಂಬ ಅರ್ಥ ಬರುತ್ತದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರನ್ನು ಅವರ ಬೆಂಬಲಿಗರು 'ಪುರಚ್ಚಿ ತಲೈವಿ' ಎಂದು ಕರೆಯುತ್ತಿದ್ದರು.ಜಯಲಲಿತಾ ಅವರ ರಾಜಕೀಯ ಗುರು ಹಾಗೂ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರಿಗೆ 'ಪುರಚ್ಚಿ ತಲೈವರ್' ಅಂದರೆ 'ಕ್ರಾಂತಿಕಾರಿ ನಾಯಕ' ಎಂಬ ಬಿರುದು ಇತ್ತು. ಅದರ ಸ್ತ್ರೀಲಿಂಗ ರೂಪವಾದ 'ಪುರಚ್ಚಿ ತಲೈವಿ' ಬಿರುದು ಜಯಲಲಿತಾ ಅವರೊಂದಿಗೆ ಜನಪ್ರಿಯವಾಯಿತು.
ಜೆ. ದೀಪಾ ಹೆಸರಿನಲ್ಲೂ ಬಳಕೆಯಾಗಿತ್ತು ಇದೇ ಬಿರುದು
ಜಯಲಲಿತಾ ಅವರ ನಿಧನದ ನಂತರ ಅವರ ಸೋದರ ಸೊಸೆ ಜೆ. ದೀಪಾ ರಾಜಕೀಯದಲ್ಲಿ ತಮ್ಮದೇ ಸ್ಥಾನ ನಿರ್ಮಿಸಿಕೊಳ್ಳಲು ಪ್ರಯತ್ನಿಸಿದ್ದರು.ಆ ಸಂದರ್ಭದಲ್ಲಿ ದೀಪಾ ಅವರ ಬೆಂಬಲಿಗರು ಅವರನ್ನು 'ಇಳಯ ಪುರಚ್ಚಿ ತಲೈವಿ' ಎಂದು ಕರೆಯುತ್ತಿದ್ದರು. ಜಯಲಲಿತಾ ಅವರ ನಂತರದ ಯುವ ನಾಯಕಿ ಎಂಬ ಅರ್ಥದಲ್ಲಿ ಈ ಬಿರುದನ್ನು ಬಳಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಜೆ. ದೀಪಾ ಸಕ್ರಿಯ ರಾಜಕೀಯದಿಂದ ದೂರ ಉಳಿದರು. ಇದೀಗ ಇದೇ ಬಿರುದು ನಟಿ ತ್ರಿಷಾ ಅವರ ಹೆಸರಿನೊಂದಿಗೆ ಕೇಳಿಬರುತ್ತಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.
ತ್ರಿಷಾ ಒಪ್ಪಿಗೆಯೊಂದಿಗೆ ಸಂಘಟನೆ ಆರಂಭವಾಗುತ್ತಿದೆಯೇ?
ತ್ರಿಷಾ ಹೆಸರಿನಲ್ಲಿ ಅಭಿಮಾನಿ ಸಂಘಟನೆ ಆರಂಭವಾಗುತ್ತಿರುವುದು ಇದೇ ಮೊದಲೇನಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ. ಈ ಹಿಂದೆ 'ತ್ಯಾಗ ಸುಡರ್ ತ್ರಿಷಾ ಪೇರವೈ' ಎಂಬ ಹೆಸರಿನ ಅಭಿಮಾನಿ ಸಂಘಟನೆಗೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದೀಗ 'ಇಳಯ ಪುರಚ್ಚಿ ತಲೈವಿ ತ್ರಿಷಾ ಪೇರವೈ' ಎಂಬ ಹೊಸ ಸಂಘಟನೆ ತಿರುನೆಲ್ವೇಲಿಯಲ್ಲಿ ಆರಂಭವಾಗಲಿದೆ ಎಂದು ವರದಿಯಾಗಿದ್ದರೂ, ಇದು ನಟಿ ತ್ರಿಷಾ ಅವರ ಅಧಿಕೃತ ಅಭಿಮಾನಿ ಸಂಘಟನೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಸಂಘಟನೆ ಸ್ಥಾಪನೆಗೆ ತ್ರಿಷಾ ಅನುಮತಿ ನೀಡಿದ್ದಾರೆಯೇ ಅಥವಾ ಅಭಿಮಾನಿಗಳು ತಮ್ಮ ಆಸಕ್ತಿಯಿಂದಲೇ ಈ ಹೆಸರಿನಲ್ಲಿ ಸಂಘಟನೆ ಕಟ್ಟುತ್ತಿದ್ದಾರೆಯೇ ಎಂಬುದರ ಕುರಿತೂ ಖಚಿತ ಮಾಹಿತಿ ಹೊರಬಂದಿಲ್ಲ.
ತ್ರಿಷಾ ರಾಜಕೀಯ ಪ್ರವೇಶ ಮಾಡುತ್ತಾರಾ?
ವಿಜಯ್ ಅವರ ರಾಜಕೀಯ ಪ್ರವೇಶದ ನಂತರ ತ್ರಿಷಾ ಹೆಸರಿನಲ್ಲಿ ರಾಜಕೀಯ ಹಿನ್ನೆಲೆಯ ಬಿರುದು ಹೊಂದಿರುವ ಅಭಿಮಾನಿ ಸಂಘಟನೆ ಆರಂಭವಾಗಲಿದೆ ಎಂಬ ವರದಿ ಸಹಜವಾಗಿಯೇ ಕುತೂಹಲ ಮೂಡಿಸಿದೆ. ಆದರೆ ಅಭಿಮಾನಿ ಸಂಘಟನೆಗೆ ರಾಜಕೀಯ ಬಿರುದು ನೀಡಲಾಗಿದೆ ಎಂಬ ಕಾರಣಕ್ಕೆ ತ್ರಿಷಾ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಈ ಬಗ್ಗೆ ನಟಿ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ.
ಒಟ್ಟಿನಲ್ಲಿ, ಜಯಲಲಿತಾ ಹಾಗೂ ಜೆ. ದೀಪಾ ಅವರೊಂದಿಗೆ ಗುರುತಿಸಿಕೊಂಡಿದ್ದ 'ಇಳಯ ಪುರಚ್ಚಿ ತಲೈವಿ' ಬಿರುದು ಇದೀಗ ತ್ರಿಷಾ ಹೆಸರಿನೊಂದಿಗೆ ಕೇಳಿಬರುತ್ತಿದೆ. ವಿಜಯ್ ಅವರ ರಾಜಕೀಯ ಚಟುವಟಿಕೆಗಳ ನಡುವೆಯೇ ಈ ಬೆಳವಣಿಗೆ ನಡೆದಿರುವುದು ತಮಿಳುನಾಡಿನ ಸಿನಿಮಾ ಮತ್ತು ರಾಜಕೀಯ ವಲಯಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಮುಂದಿನ ದಿನಗಳಲ್ಲಿ ತ್ರಿಷಾ ನಿಜವಾಗಿಯೂ ರಾಜಕೀಯದತ್ತ ಹೆಜ್ಜೆ ಇಡುತ್ತಾರಾ ಅಥವಾ ಈ ಬಿರುದು ಅಭಿಮಾನಿಗಳ ಉತ್ಸಾಹಕ್ಕೆ ಮಾತ್ರ ಸೀಮಿತವಾಗುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ. ಆದರೆ, ಜಯಲಲಿತಾ ಬಿರುದನ್ನೇ ತ್ರಿಷಾ ಪಡೆಯುತ್ತಿರುವುದೂ ಪರ, ವಿರೋಧ ಚರ್ಚೆಗೆ ಕಾರಣವಾಗಿದೆ. ಬೇರೆ ಯಾವುದೇ ಹೆಸರೂ ಈ ನಟಿಗೆ ಸಿಗಲಿಲ್ಲವ ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ.




Click it and Unblock the Notifications
