ಬೆಂಗಳೂರು-ಕಲಬುರಗಿ ವಿಮಾನ ಸೇವೆಗೆ ಭರ್ಜರಿ ಸ್ಪಂದನೆ: ನಿತ್ಯ ಶೇ.80ರಷ್ಟು ಭರ್ತಿ, ಬೀದರ್ ಸೇವೆ ಸ್ಥಗಿತ: ಖರ್ಗೆ
ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ಕಲ್ಯಾಣ ಕರ್ನಾಟಕದ ಪ್ರಮುಖ ಜಿಲ್ಲೆ ಕಲಬುರಗಿಗೆ ಸಂಚರಿಸುವ ವಿಮಾನ ಸೇವೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸ್ಟಾರ್ ಏರ್ ವಿಮಾನವು ಸರಸಾರಿ ಶೇ. 80ರಷ್ಟು ನಿತ್ಯದ ಪ್ರಯಾಣಿಕರೊಂದಿಗೆ ಸಂಚಾರ ಮಾಡುತ್ತಿದೆ. ಇತ್ತ ಬೆಂಗಳೂರು-ಬೀದರ್ ವಿಮಾನ ಸೇವೆ ದಿಢೀರ್ ಸ್ಥಗಿತಗೊಂಡಿದೆ.
ವಿಮಾನಯಾನ ಕ್ಷೇತ್ರಕ್ಕೆ ದೊರಕಿರುವ ಈ ಸ್ಪಂದನೆಯು ಕಲಬುರಗಿಯ ಪ್ರಗತಿಯ ದ್ಯೋತಕವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಂದು ಶುಕ್ರವಾರ ಎಕ್ಸ್ ಪೋಸ್ಟ್ ಮಾಡಿದ್ದಾರೆ. ಬೆಂಗಳೂರು-ಕಲಬುರಿಗಿ ನಡುವಿನ ವಿಮಾನ ಸಂಚಾರಕ್ಕೆ ಭರ್ಜರಿ ಸ್ಪಂದನೆ ದೊರೆತಿದೆ. ನಿತ್ಯ ಶೇ.80ರಷ್ಟು ಸೀಟುಗಳು ಭರ್ತಿ ಆಗುತ್ತಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಕಲಬುರಿಗಯ ಆರ್ಥಿಕ, ಶೈಕ್ಷಣಿಕ ಪ್ರಗತಿ
ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಎನಿಸಿಕೊಂಡಿರುವ ಕಲಬುರಗಿಯ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಾದ್ಯವಾಗುತ್ತಿರುವುದು ವಿಮಾನಯಾನ ಕ್ಷೇತ್ರದ ಯಶಸ್ಸಿಗೆ ಪೂರಕವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.
ಬೀದರ್ ಸೇರಿದಂತೆ ಇತರ ಕೆಲವು ಜಿಲ್ಲಾ ಕೇಂದ್ರಗಳಲ್ಲಿ ವಿಮಾನ ಸೇವೆ ಸ್ಥಗಿತಗೊಂಡಿವೆ, ಇನ್ನು ಕೆಲವು ಜಿಲ್ಲೆಗಳಲ್ಲಿ ಪ್ರಯಾಣಿಕರ ಕೊರತೆ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಕಲಬುರಗಿಯಲ್ಲಿ ಸಿಕ್ಕಿರುವ ಸ್ಪಂದನೆ ಬಹುದೊಡ್ಡದು. ಪ್ರಯಾಣಿಕರ ಸ್ಪಂದನೆ ಪರಿಗಣಿಸಿ ಮುಂದಿನ ದಿನಗಳಲ್ಲಿ ವಿಮಾನಗಳ ಸೇವೆಯನ್ನು ಇನ್ನಷ್ಟು ವಿಸ್ತರಿಸುವ ಕುರಿತು ಪ್ರಯತ್ನ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಬೀದರ್ ವಿಮಾನ ಸೇವೆ ಸ್ಥಗಿತ
ರಾಜಧಾನಿ ಬೆಂಗಳೂರಿನಿಂದ ಬೀದರ್ ಸಂಚರಿಸುವ ವಿಮಾನಯಾನ ಸೇವೆಯನ್ನು ಸ್ಟಾರ್ ಏರ್ ಸಂಸ್ಥೆಯು ಸ್ಥಗಿತಗೊಳಿಸಿದೆ. ಕೆಕೆಆರ್‌ಡಿಬಿ ನಷ್ಟವನ್ನು ಭರಿಸಿದ ಹೊರತಾಗಿಯೂ ಕಳೆದ ನವೆಂಬರ್ 1ರಿಂದ ಸೇವೆ ದಿಢೀರ್ ನಿಲ್ಲಿಸಲಾಗಿದೆ. ಆದರೆ ಈ ರೀತಿಯ ಸಮಸ್ಯೆ ಕಲಬುರಗಿ-ಬೆಂಗಳೂರು ನಡುವಿನ ವಿಮಾನ ಸೇವೆಗೆ ಆಗಿಲ್ಲ. ಈ ಮಾರ್ಗದಲ್ಲಿ ನಿತ್ಯವು ಸಾಕಷ್ಟು ಪ್ರಯಾಣಿಕರು ಸಂಚಾರ ಮಾಡುತ್ತಿದ್ದಾರೆ.
ಕಲಬುರಗಿಗೆ ನಿತ್ಯ ಕಾರ್ಯಾಚರಣೆ ಮಾಡುವ 76 ಸೀಟುಗಳ ಸ್ಟಾರ್ ಏರ್ ವಿಮಾನವು ಪ್ರತಿ ವೀಕೆಂಡ್ ನಲ್ಲಿ ಬಹುತೇಕ ಭರ್ತಿಯಾಗಿ ಸಂಚರಿಸುತ್ತಿದೆ. ಇದೇ ವರ್ಷ ಜೂನ್ 10ರಂದು ಮೊದಲ ಸೇವೆ ಆರಂಭಿಸಿದ್ದ ಸ್ಟಾರ್ ಏರ್ ವಿಮಾನವು 63 ಪ್ರಯಾಣಿಕರನ್ನು ಹೊತ್ತು ತಂದಿತ್ತು. ಕಲಬುರಗಿಯಿಂದ ಬೆಂಗಳೂರಿಗೆ 46 ಮಂದಿ ಪ್ರಯಾಣಿಸಿದ್ದರು.
ಒಂದೇ ದಿನ ಗರಿಷ್ಠ ಜನ ಸಂಚಾರ
ಜೂನ್ 26 ರಂದು 66 ಪ್ರಯಾಣಿಕರು ಕಲಬುರಗಿಗೆ ಬಂದಿದ್ದರೆ, ವಾಪಸ್ 70 ಪ್ರಯಾಣಿಕರು ತೆರಳಿದ್ದರು. ಅಕ್ಟೋಬರ್ 30ರಂದು ಬಹುತೇಕ ಎಲ್ಲ ಸೀಟುಗಳು ಭರ್ತಿಯಾಗಿದ್ದವು. ಅಲ್ಲಿಂದ ಈವರೆಗೆ ನಿತ್ಯ ಸಂಚಾರದಲ್ಲಿ ಬೆಳವಣಿಗೆ ಆಗುತ್ತಿದೆ. ನಿತ್ಯ ವಿಮಾನದ ಒಟ್ಟು ಆಸನಗಳ ಪೈಕಿ ಅರ್ಧದಷ್ಟಾದ ಜನ ಸಂಚಾರ ಮಾಡುತ್ತಿದ್ದಾರೆ. ಒಂದೊಮ್ಮೆ 148 ಮಂದಿ ಒಂದೇ ಭಾರಿಗೆ ವಿಮಾನದಲ್ಲಿ ಸಂಚರಿಸುವುದು ಈ ಮಾರ್ಗದಲ್ಲಿನ ಸಾರ್ವಜನಿಕಾಲಿಕ ದಾಖಲೆ ಆಗಿದೆ ಎಂದು ವಿಮಾನ ಸಂಸ್ಥೆ ಮುಖ್ಯಸ್ಥರು ತಿಳಿಸಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣ ಅಪ್ಡೇಟ್
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಸಂಚಾರ ಸ್ಥಗಿತ ಕುರಿತು ಸಾಕಷ್ಟು ಚರ್ಚೆಗಳು ಮುನ್ನೆಲೆಗೆ ಬಂದವು. ಕೇಂದ್ರ ಸರ್ಕಾರದ ಉಡಾನ್ ಯೋಜನೆ ಸ್ಥಗಿತ ಹಿನ್ನೆಲೆ ಅದರ ಪರಿಣಾಮ ಮೆಲೆನಾಡಿಗರು ಓಡಾಡುವ ವಿಮಾನ ನಿಲ್ದಾಣದ ಮೇಲಾಯಿತು. ಇದೀಗ ಉಡಾನ್ ಯೋಜನೆ ಅಡಿ ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಸಂಚರಿಸಲು ಟೆಂಡರ್ ಕರೆದಿದ್ದು, ನಾಗರಿಕ ವಿಮಾನ ಸಂಸ್ಥೆಗಳ ಪಾಲ್ಗೊಳ್ಳುವಿಕೆಗೆ ಅವಕಾಶ ನೀಡಲಾಗಿದೆ. ಇದೆಲ್ಲ ಪ್ರಕ್ರಿಯೆ ಮುಗಿಯಲು 3-4 ತಿಂಗಳು ಬೇಕು. 2027ರ ಮಾರ್ಚ್ ಹೊತ್ತಿಗೆ ಶಿವಮೊಗ್ಗ ಏರ್ ಪೋರ್ಟ್‌ನಿಂದ ವಿಮಾನಗಳು ಮತ್ತೆ ಸಂಚಾರ ಮಾಡಲಿವೆ.




Click it and Unblock the Notifications
