Namma Metro: ಮೂರು ಮೆಟ್ರೋ ಮಾರ್ಗದಲ್ಲಿ ಶನಿವಾರ ಬೆಳಗ್ಗೆ 4 ಗಂಟೆಗೇ ಮೆಟ್ರೋ ಸಂಚಾರ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಹಾಗೂ ವಾಕಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಅಧಿಕಾರಿಗಳು ಜೂನ್ 27ರಂದು ಶನಿವಾರ ಮುಂಜಾನೆ ಬೇಗ ಮೆಟ್ರೋ ಸೇವೆ ಆರಂಭಿಸಲು ನಿರ್ಧರಿಸಿದ್ದಾರೆ.
ಬೆಂಗಳೂರಿನ ವಿವಿಧ ಭಾಗಗಳಲ್ಲಿ ಆಯೋಜಿಸಲಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ. ಜೊತೆಗೆ ವಾಕ್‌ಥಾನ್ ಸಹ ನಡೆಯಲಿದ್ದು, ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗ್ಗೆ 4ಗಂಟೆಗೆ ಮೆಟ್ರೋ ಸೇವೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರು ಸುಲಭವಾಗಿ ತಮ್ಮ ಗಮ್ಯಸ್ಥಾನವನ್ನು ತಲುಪುವ ಉದ್ದೇಶದಿಂದ, ನಮ್ಮ ಮೆಟ್ರೋ ಎಲ್ಲಾ ಮೂರು ಮಾರ್ಗಗಳ (ನೇರಳೆ, ಹಸಿರು ಮತ್ತು ಹಳದಿ ಮಾರ್ಗದ) ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಬೆಳಗ್ಗೆ 4:00 ಗಂಟೆಗೆ ರೈಲು ಸಂಚಾರವನ್ನು ಆರಂಭಿಸಲಿದೆ. ಪ್ರತಿ ಶನಿವಾರ ಈದೇ ರೈಲುಗಳು ಬೆಳಗ್ಗೆ 5:00 ಗಂಟೆಯ ರೈಲುಗಳು ಸಂಚರಿಸುತ್ತಿದ್ದವು. ಭಾನುವಾರ 7 ಗಂಟೆಗೆ ಎಂದಿನಂತೆ ಸಂಚಾರ ಮಾಡಲಿದೆ.
ಸಾರ್ವಜನಿಕರು ಈ ವಿಶೇಷ ಬೆಳಗಿನ ಮೆಟ್ರೋ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಮೂಲಕ ಬೆಂಗಳೂರು ಪ್ರಾಧಿಕಾರದ ಸಸಿ ನೆಡುವ ಕಾರ್ಯಕ್ರಮ ಹಾಗೂ ವಾಕ್‌ಥಾನ್‌ನಲ್ಲಿ ಉತ್ಸಾಹದಿಂದ ಭಾಗವಹಿಸಬೇಕು. ಸುರಕ್ಷಿತ, ಸುಗಮ ಮತ್ತು ಪರಿಸರ ಸ್ನೇಹಿ ಮೆಟ್ರೋ ಸೇವೆಯನ್ನು ಬಳಸುವಂತೆ ಬೆಂಗಳೂರು ಮೆಟ್ರೋ ರೈಲು ನಿಮಗದ ಅಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.
ಕೆಂಪೇಗೌಡರ ಜಯಂತಿಗೆ 'ಹಸಿರು ಕಾಡು' ಕೊಡುಗೆ
ಮೇಲ್ಸೇತುವೆ, ನಿವೇಶನ, ಲೇಔಟ್ ಸೇರಿ ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ 50ನೇ ವರ್ಷದ ಸಂಭ್ರಮ ಹಿನ್ನೆಲೆ 'ಹಸಿರು ಕಾಡು' ಸೃಷ್ಟಿಸಲು ಮುಂದಾಗಿದೆ. ಇದೇ ಜೂನ್ 27ರಂದು ನಾಡಪ್ರಭು ಕೆಂಪೇಗೌಡರ ಜಯಂತಿ ಹಿನ್ನೆಲೆ ಒಟ್ಟು ಸುಮಾರು 15 ಲಕ್ಷ ಸಸಿ ನೆಟ್ಟು ಮೂರು ವರ್ಷ ಪೋಷಿಸಲು ಸರ್ಕಾರ ಮುಂದಾಗಿದೆ.
ಭಾನುವಾರ ಬೆಳಗ್ಗೆ ಮೆಟ್ರೊ ಸೇವೆ ಬೇಗ ಆರಂಭಿಸಿ..
ನಮ್ಮ ಮೆಟ್ರೋ ಬೆಳಗ್ಗೆ ಮತ್ತು ಸಂಜೆ ಪೀಕ್ ಅವರ್ ನಲ್ಲಿ ಹೆಚ್ಚಿನ ಜನರು ಸಂಚಾರ ಮಾಡುವ ಪ್ರಯುಕ್ತ ರೈಲುಗಳ ಆವರ್ತನ ಸಮಯ ಕಡಿಮೆ ಇರುತ್ತದೆ. ಮೂರು ಇಲ್ಲವೇ ಐದು ನಿಮಿಷಗಳ ಅಂತರದಲ್ಲಿ ಸಂಚಾರ ಮಾಡುತ್ತವೆ. ಸಾಮಾನ್ಯ ಸಮಯಗಳಲ್ಲಿ ಹತ್ತು ನಿಮಿಷಗಳ ಅಂತರದಲ್ಲಿ ಸಂಚಾರ ಮಾಡುತ್ತವೆ.
ಆದರೆ ಕಚೇರಿಗಳು ಬಂದ್ ಇರುವ ಕಾರಣ, ರಜಾ ದಿನ ಹಿನ್ನೆಲೆ ಜನಸಂಚಾರ ಕಡಿಮೆ ಇರುತ್ತದೆ ಎಂಬ ಕಾರಣಕ್ಕೆ ಪ್ರತಿ ಭಾನುವಾರ ಬೆಳಗ್ಗೆ 7 ಗಂಟೆಗೆ ಮೊದಲ ರೈಲು ಸಂಚಾರ ಆರಂಭಿಸುತ್ತದೆ. ಇದರಿಂದ ಊರುಗಳಿಂದ ಬೆಂಗಳೂರಿಗೆ ಬರುವ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ. ಬೆಳಗ್ಗೆ ಓಡಾಡುವ ಸಾರ್ವನಿಕರಿಗೆ ಮೆಜೆಸ್ಟಿಕ್, ಯಶವಂತಪುರ ಇನ್ನಿತರ ಮೆಟ್ರೋ ನಿಲ್ದಾಣಗಳಲ್ಲಿ ರೈಲುಗಳಿಲ್ಲದೇ ಸಮಸ್ಯೆ ಆಗುತ್ತದೆ. ಹೀಗಾಗಿ ಅಂದು ಸಹ ಬೆಳಗ್ಗೆ 5 ಗಂಟೆಗೆ ಅಥವಾ ಕನಿಷ್ಠ 6 ಗಂಟೆಗಾದರೂ ಸೇವೆ ಅರಂಭಿಸುವಂತೆ ಸಾರ್ವಜನಿಕ ಒತ್ತಾಯಿಸುತ್ತಿದ್ದಾರೆ. ಆದರೆ ಈ ಬಗ್ಗೆ ಬಿಎಂಆರ್ ಸಿಎಲ್ ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.













Click it and Unblock the Notifications