ಆಸ್ಪತ್ರೆಯಲ್ಲಿನ ಎಡವಟ್ಟಿನಿಂದ ಅದಲು ಬದಲಾದ ಮಕ್ಕಳು : 38 ವರ್ಷಗಳ ಬಳಿಕ ಡಿಎನ್ಎ ಪರೀಕ್ಷೆಯಿಂದ ಬಹಿರಂಗವಾದ ರಹಸ್ಯ
ಅಮೆರಿಕದ ಉತ್ತರ ಡಕೋಟಾದ ಗ್ರಾಫ್ಟನ್‌ನಿಂದ ಕಳವಳಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಘಟನೆ ಯೂನಿಟಿ ಮೆಡಿಕಲ್ ಸೆಂಟರ್‌ನಲ್ಲಿ ಸಂಭವಿಸಿದೆ. ಜನವರಿ 26, 1988 ರಂದು, ಅಲ್ಲಿ ಕೇವಲ ಇಬ್ಬರು ಮಕ್ಕಳು ಜನಿಸಿದ್ದರು. ಆ ಎರಡು ನವಜಾತ ಶಿಶುಗಳಿಗೆ ಕೈಲ್ ಬೇಲಿನ್ ಮತ್ತು ಜೆರೆಮಿ ಮಾರಿಸನ್ ಎಂದು ಹೆಸರಿಸಲಾಯಿತು. ಜನನದ ನಂತರ ಆಸ್ಪತ್ರೆ ಸಿಬ್ಬಂದಿ ಮಾಡಿದ ತಪ್ಪಿನಿಂದಾಗಿ ಎರಡೂ ಮಕ್ಕಳ ಜೀವನವೇ ಬದಲಾಯಿತು.
ಹೌದು, ಆಸ್ಪತ್ರೆಯಲ್ಲಿ ಮಕ್ಕಳು ಅದಲು ಬದಲಾಗಿದ್ದಾರೆ. ಡಿಸ್ಚಾರ್ಜ್ ನಂತರ ಇಬ್ಬರೂ ಮಕ್ಕಳ ಪೋಷಕರು ತಮ್ಮ ತಮ್ಮ ಮಗುವನ್ನು ಎತ್ತಿಕೊಂಡು ತಮ್ಮ ಮನೆಗೆ ತೆರಳಿದ್ಧಾರೆ. ಆದರೆ, 38 ವರ್ಷಗಳ ನಂತರ ಡಿಎನ್ಎ ಪರೀಕ್ಷೆಯಲ್ಲಿ ಇದೀಗ ರಹಸ್ಯವೊಂದು ಬಹಿರಂಗವಾಗಿದೆ. ಈಗ, ಎರಡೂ ಕುಟುಂಬಗಳು ಆಸ್ಪತ್ರೆಯ ವಿರುದ್ಧ ಮೊಕದ್ದಮೆ ಹೂಡಿವೆ.

36 ವರ್ಷಗಳಿಂದ ಯಾರಿಗೂ ಅನುಮಾನ ಬಂದಿರಲಿಲ್ಲ
ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಈ ತೀವ್ರ ಬದಲಾವಣೆಯು ದಶಕಗಳವರೆಗೆ ಗಮನಕ್ಕೆ ಬರಲಿಲ್ಲ. ಇಬ್ಬರೂ ಮಕ್ಕಳು ತಮ್ಮದೇ ಆದ ಕುಟುಂಬಗಳಲ್ಲಿ ಬೆಳೆದರು, ಶಾಲೆಗೆ ಹೋದರು, ಕೆಲಸಕ್ಕೂ ಸೇರಿಕೊಂಡರು. ತಮ್ಮದೇ ಆದ ರೀತಿಯಲ್ಲಿ ಜೀವನವನ್ನು ನಡೆಸುತ್ತಿದ್ದರು. ಕುಟುಂಬವೆಂದುಕೊಂಡು ಜೊತೆಯಲ್ಲಿ ಬದುಕುತ್ತಿದ್ದವರು ತಮ್ಮ ನಿಜವಾದ ಪೋಷಕರಲ್ಲ ಎನ್ನುವ ಸತ್ಯ ಅವರಿಗೆ ತಿಳಿದೇ ಇರಲಿಲ್ಲ. ಆದರೂ ಬಾಲ್ಯದಿಂದಲೂ, ಜೆರೆಮಿ ಮಾರಿಸನ್ ಅವರು ಕುಟುಂಬದ ಉಳಿದವರಿಗಿಂತ ತುಂಬಾ ಭಿನ್ನವಾಗಿ ಕಾಣುತ್ತಿದ್ದರು ಎನ್ನುವ ಕೊರಗು ಅವರಲ್ಲಿತ್ತು.
ಈ ಬಗ್ಗೆ ಮಾತನಾಡಿರುವ ಜೆರೆಮಿ, ತನ್ನ ಕುಟುಂಬದಲ್ಲಿ ಬಹುತೇಕ ಎಲ್ಲರೂ ಕಪ್ಪು ಕೂದಲಿನವರಾಗಿದ್ದರೆ, ತನಗೆ ಹೊಂಬಣ್ಣದ ಕೂದಲು ಇತ್ತು. ತನ್ನ ಮುಖ, ಲುಕ್ ಕೂಡಾ ಕುಟುಂಬದ ಉಳಿದವರನ್ನು ಹೋಲುತ್ತಿರಲಿಲ್ಲ ಎಂದು ಆಗಾಗ ಅನಿಸುತ್ತಿತ್ತಂತೆ. ಬಾಲ್ಯದಲ್ಲಿ ಇದು ವಿಚಿತ್ರವೆನಿಸಿತ್ತಾದರೂ ಇದರ ಹಿಂದೆ ಇಷ್ಟೊಂದು ಗಂಭೀರವಾದ ಕಾರಣ ಇರಬಹುದೆಂದು ಎಂದಿಗೂ ಊಹಿಸಿರಲಿಲ್ಲ ಎಂದು ಹೇಳಿದ್ದಾರೆ.
ಇಡೀ ಜೀವನವನ್ನು ಬದಲಾಯಿಸಿದ ಡಿಎನ್ಎ ಪರೀಕ್ಷೆ
ಸುಮಾರು ಎರಡು ವರ್ಷಗಳ ಹಿಂದೆ, ಕೈಲ್ ಬೇಲಿನ್ ಸರಳ ಕುತೂಹಲಕ್ಕಾಗಿ ಡಿಎನ್ಎ ಪರೀಕ್ಷೆಯನ್ನು ಮಾಡಿಸಿಕೊಂಡಿದ್ದಾರೆ. ತಮ್ಮ ಕುಟುಂಬದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇದು ಬಹಿರಂಗಪಡಿಸುತ್ತದೆ ಎನ್ನುವ ಕುತೂಹಲ ಅವರಿಗಿತ್ತು. ಆದರೆ ಡಿಎನ್‌ಎ ಟೆಸ್ಟ್‌ನ ರಿಸಲ್ಟ್ ಮಾತ್ರ ಆಘಾತಕಾರಿಯಾಗಿತ್ತು. ತನಗೆ ಅರಿವೇ ಇರದ ಮಹಿಳೆಯೊಂದಿಗೆ ಆ ರಿಸಲ್ಟ್ ಹೋಲಿಕೆಯಾಗುತ್ತಿತ್ತು. ಇದರ ಬಗ್ಗೆ ಮತ್ತಷ್ಟು ಆಳಕ್ಕೆ ಇಳಿದಾಗ ಆ ಮಹಿಳೆ ತನ್ನ ಚಿಕ್ಕಮ್ಮ ಎನ್ನುವುದು ಗೊತ್ತಾಯಿತು. ಇಲ್ಲಿಯೇ ಇಡೀ ಕಥೆ ತೆರೆದುಕೊಳ್ಳಲು ಪ್ರಾರಂಭಿಸಿತು.
ಕೈಲ್ ಬೇಲಿನ್ ಅವರು ಹುಟ್ಟಿದಾಗ ತಮ್ಮ ತೋಳಿನ ಮೇಲೆ ಇರಿಸಲಾಗಿದ್ದ ಆಸ್ಪತ್ರೆಯ ಗುರುತಿನ ಚೀಟಿ ಇನ್ನೂ ತಮ್ಮ ಬಳಿ ಇದೆ ಎಂದು ಹೇಳಿದ್ದಾರೆ. ಆ ಟ್ಯಾಗ್‌ನಲ್ಲಿರುವ ಹೆಸರನ್ನು ಸಹ ತಪ್ಪಾಗಿ ಬರೆಯಲಾಗಿದೆ ಎಂದು ಹೇಳಲಾಗಿದೆ. ಇದು ಅವರ ಅನುಮಾನಗಳನ್ನು ಬಲಪಡಿಸಿತು.
ಈ ಜನ್ಮ ದೋಷ ಸಂಭವಿಸದಿದ್ದರೆ, ಅವರ ಇಡೀ ಜೀವನವೇ ಬೇರೆಯಾಗಿರುತ್ತಿತ್ತು ಎಂದು ಜೆರೆಮಿ ಮಾರಿಸನ್ ಹೇಳುತ್ತಾರೆ. ಇಂದು ಅವರು ಅಮೆರಿಕದ ಕೊಲೊರಾಡೋದಲ್ಲಿ ವಾಸಿಸುತ್ತಿದ್ದಾರೆ, ಆದರೆ ತಮ್ಮನಿಜವಾದ ಕುಟುಂಬದ ಜೊತೆ ಬೆಳೆಯುತ್ತಿದ್ದಿದ್ದರೆ ಉತ್ತರ ಡಕೋಟಾದಲ್ಲಿ ವಾಸಿಸುತ್ತಿದ್ದರು. ಅವರ ಪ್ರಕಾರ, ಆಸ್ಪತ್ರೆಯ ತಪ್ಪು ಅವರ ಜೀವನದ ಹಾದಿಯನ್ನು ಬದಲಾಯಿಸಿತು.
ನಿಜವಾದ ಪೋಷಕರನ್ನು ಹುಡುಕುವುದು ಸುಲಭವಾಗಿರಲಿಲ್ಲ
ಸತ್ಯ ಹೊರಬಂದ ನಂತರ, ತಮ್ಮ ಹೆತ್ತವರನ್ನು ಭೇಟಿಯಾಗಿದ್ದಾರೆ. ಎರಡೂ ಕುಟುಂಬಗಳು ಪರಸ್ಪರ ಸ್ವಾಗತಿಸಿದರೂ, ಇಷ್ಟು ದೀರ್ಘ ಸಮಯದ ನಂತರ ಸಂಬಂಧಗಳಲ್ಲಿ ಹಠಾತ್ ಬದಲಾವಣೆಯನ್ನು ಒಪ್ಪಿಕೊಳ್ಳುವುದು ಸುಲಭವಾಗಿರಲಿಲ್ಲ. ಮೊದಲ ಭೇಟಿಯು ಭಾವನಾತ್ಮಕ ಮತ್ತು ಅನಾನುಕೂಲಕರವಾಗಿತ್ತು ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ.
ಸತ್ಯ ಬೆಳಕಿಗೆ ಬಂದ ನಂತರ, ಎರಡೂ ಕುಟುಂಬಗಳು ಆಸ್ಪತ್ರೆಯೊಂದಿಗೆ ಮಾತುಕತೆಗಳ ಮೂಲಕ ವಿಷಯವನ್ನು ಪರಿಹರಿಸಲು ಪ್ರಯತ್ನಿಸಿದವು. ಪರಿಹಾರದ ಕುರಿತು ಮಾತುಕತೆಗಳು ಸುಮಾರು ಒಂದು ವರ್ಷ ಮುಂದುವರೆದವು ಎಂದು ವರದಿಯಾಗಿದೆ. ಆದರೆ ಈ ಮಾತುಕತೆ ಪರಿಹಾರದ ಹಂತಕ್ಕೆ ತಲುಪಲಿಲ್ಲ. ನಂತರ ಎರಡೂ ಕುಟುಂಬಗಳು ಆಸ್ಪತ್ರೆಯ ವಿರುದ್ಧ ಮೊಕದ್ದಮೆ ಹೂಡಿವೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ, 36 ವರ್ಷಗಳ ಕಾಲ ಸತ್ಯದಿಂದ ದೂರವಿರವಂತಾಗಿತ್ತು ಎಂದು ಆರೋಪಿಸಿದ್ದಾರೆ.
ಆಸ್ಪತ್ರೆಯಿಂದಲೂ ಬಂತು ಪ್ರತಿಕ್ರಿಯೆ
ಈ ವಿಷಯಕ್ಕೆ ಯೂನಿಟಿ ಮೆಡಿಕಲ್ ಸೆಂಟರ್ ಕೂಡ ಪ್ರತಿಕ್ರಿಯಿಸಿದೆ. ಘಟನೆಯಲ್ಲಿ ಭಾಗಿಯಾಗಿರುವ ಕುಟುಂಬಗಳು ಅನುಭವಿಸಿರುವ ಭಾವನಾತ್ಮಕ ಯಾತನೆಯನ್ನು ಆಸ್ಪತ್ರೆ ಒಪ್ಪಿಕೊಂಡಿದೆ. ಆದರೆ ಅದರ ಮೇಲಿನ ಆರೋಪಗಳನ್ನು ಅದು ನಿರಾಕರಿಸಿದೆ. ಮೊಕದ್ದಮೆಯನ್ನು ವಜಾಗೊಳಿಸುವಂತೆ ಆಸ್ಪತ್ರೆ ನ್ಯಾಯಾಲಯವನ್ನು ಕೋರಿದೆ.
ಇದು ಕೇವಲ ಆಸ್ಪತ್ರೆ ತೋರಿದ ನಿರ್ಲಕ್ಷ್ಯದ ವಿಚಾರ ಮಾತ್ರವಲ್ಲ, 36 ವರ್ಷಗಳ ನಂತರ ಇದ್ದಕ್ಕಿದ್ದಂತೆ ಬದಲಾದ ಭಾವನೆಗಳ ಬಗ್ಗೆಯೂ ಆಗಿದೆ. ಇಬ್ಬರು ಪುರುಷರು ಕುಟುಂಬವೆಂದು ಪರಿಗಣಿಸಿದವರಿ ಅವರಿಗೆ ಜನ್ಮ ನೀಡಿದವರಾಗಿರಲಿಲ್ಲ. ಜನ್ಮ ನೀಡಿದ ಪೋಷಕರಿಗೆ ತಮ್ಮ ಮಗ ಬೇರೆ ಮನೆಯಲ್ಲಿ ಬೆಳೆಯುತ್ತಿದ್ದಾನೆಂದು ದಶಕಗಳವರೆಗೆ ತಿಳಿದಿರಲಿಲ್ಲ. ಸರಳವಾದ ಡಿಎನ್ಎ ಪರೀಕ್ಷೆಯು ಎರಡು ಕುಟುಂಬಗಳ ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಶಾಶ್ವತವಾಗಿ ಬದಲಾಯಿಸುವ ಸತ್ಯವನ್ನು ಬಹಿರಂಗಪಡಿಸಿತು. ಈಗ, ಎಲ್ಲರ ಕಣ್ಣುಗಳು ನ್ಯಾಯಾಲಯದ ತೀರ್ಪಿನ ಮೇಲೆ ನೆಟ್ಟಿದೆ.


Click it and Unblock the Notifications
