14 ವರ್ಷಗಳಲ್ಲಿ 1 ಕೋಟಿ ರೂ. ತೆರಿಗೆ ಕಟ್ಟಿದರೂ ಉದ್ಯೋಗ ಹೋದಾಗ ಸರ್ಕಾರ ಬೆಂಬಲ ನೀಡಿಲ್ಲ: ಟೆಕ್ಕಿ ಅಸಮಾಧಾನ
ಇಂದಿನ ಕಾರ್ಪೋರೇಟ್ ಜಗತ್ತಿನಲ್ಲಿ ಯಾವ ಉದ್ಯೋಗಕ್ಕೂ ಭಧ್ರತೆಯೇ ಇಲ್ಲ.. ಲೇಆಫ್ ಹೆಸರಿನಲ್ಲಿ ಇತ್ತೀಚೆಗೆ ಕಂಪೆನಿಗಳು ಉದ್ಯೋಗಿಗಳನ್ನಾ ತೆಗೆದುಹಾಕುವುದು ಸಾಮಾನ್ಯ ಎನ್ನುವಂತಾಗಿದೆ. ಇನ್ನೂ ವರ್ಷಾನುಗಟ್ಟಲೆ ಸರ್ಕಾರಕ್ಕೆ ಪ್ರಾಮಾಣಿಕವಾಗಿ ಲಕ್ಷಾಂತರ ರೂಪಾಯಿ ಆದಾಯ ತೆರಿಗೆ ಪಾವತಿಸಿದರೂ, ಕಷ್ಟದ ಸಮಯದಲ್ಲಿ ಸರ್ಕಾರದಿಂದ ಯಾವುದೇ ನೆರವು ಸಿಗುವುದಿಲ್ಲ ಎಂಬುದು ವಿಪರ್ಯಾಸ.
ಇದೀಗ ಇಂತಹದ್ದೇ ಒಂದು ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ವೃತ್ತಿಪರರೊಬ್ಬರು 14 ವರ್ಷಗಳ ತಮ್ಮ ವೃತ್ತಿಜೀವನದಲ್ಲಿ ಬರೋಬ್ಬರಿ 1 ಕೋಟಿ ರೂಪಾಯಿಗೂ ಹೆಚ್ಚು ಆದಾಯ ತೆರಿಗೆ ಪಾವತಿಸಿದ್ದಾರೆ. ಆದರೆ, ಇದೀಗ ಅವರು ತಮ್ಮ ಉದ್ಯೋಗ ಕಳೆದುಕೊಂಡಿದ್ದು, ಸರ್ಕಾರದಿಂದ ಅವರಿಗೆ ಯಾವುದೇ ಆರ್ಥಿಕ ಬೆಂಬಲ ಸಿಗುತ್ತಿಲ್ಲ ಎಂದು ಎಕ್ಸ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್ ನೌಸತ್ ಎಂಬುವವರು ಮಾಡಿರುವ ಈ ಪೋಸ್ಟ್ ಇದೀಗ ಭಾರತದಲ್ಲಿ ತೆರಿಗೆ ವ್ಯವಸ್ಥೆ ಮತ್ತು ನಿರುದ್ಯೋಗಿಗಳಿಗೆ ನೀಡಬೇಕಾದ ಸಾಮಾಜಿಕ ಭದ್ರತೆಯ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಮೊಹಮ್ಮದ್ ನೌಸತ್ ಅವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ, "14 ವರ್ಷಗಳ ವೃತ್ತಿಜೀವನ. ಇಲ್ಲಿಯವರೆಗೆ ಸುಮಾರು 1 ಕೋಟಿ ರೂಪಾಯಿಗಳಷ್ಟು ಆದಾಯ ತೆರಿಗೆಯಾಗಿ ಪಾವತಿಸಿದ್ದೇನೆ. ಆದರೆ ಈಗ ನನ್ನ ಉದ್ಯೋಗ ಹೋಗಿದೆ. ಈ ಕಷ್ಟದ ಸಮಯದಲ್ಲಿ ನನಗೆ ಯಾವುದೇ ಬೆಂಬಲ ಇಲ್ಲ. ಧನ್ಯವಾದ ಭಾರತ," ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಉದ್ಯೋಗ ಕಳೆದುಕೊಂಡಾಗ ಸಿಗುವ ಪರಿಹಾರ ಮೊತ್ತದ ಮೇಲೂ ತೆರಿಗೆ ವಿಧಿಸಲಾಗುತ್ತದೆ ಎಂಬ ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ. "ನನ್ನ ಪರಿಹಾರ ಮೊತ್ತಕ್ಕೂ ತೆರಿಗೆ ವಿಧಿಸಲಾಗುತ್ತದೆ ಎಂದು ಈಗಷ್ಟೇ ತಿಳಿಯಿತು! ಏನು ಹೇಳಬೇಕೆಂದೇ ನನಗೆ ಅರ್ಥವಾಗುತ್ತಿಲ್ಲ," ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ನಿರುದ್ಯೋಗ, ಅನಾರೋಗ್ಯ, ಅಥವಾ ವಯಸ್ಸಾದ ಕಾಲದಲ್ಲಿ ಜನರಿಗೆ ಆರ್ಥಿಕ ನೆರವು ನೀಡುವ ಸಾಮಾಜಿಕ ಭದ್ರತೆ ವ್ಯವಸ್ಥೆ ಸರಿಯಾಗಿಲ್ಲ ಎನ್ನುವುದು ಹಲವರ ವಾದ. ಈ ಬಗ್ಗೆ ಕಮೆಂಟ್ ವಿಭಾಗದಲ್ಲಿ ಅನೇಕರು ನೌಸತ್ ಅವರ ಮಾತಿಗೆ ದನಿಗೂಡಿಸಿದ್ದಾರೆ.
ತೆರಿಗೆದಾರರ ಪರ ಮತ್ತು ವಿರೋಧ ಚರ್ಚೆ
ನೌಸತ್ ಅವರ ಪೋಸ್ಟ್ ಪರ ಮತ್ತು ವಿರೋಧದ ಚರ್ಚೆಗೆ ಕಾರಣವಾಗಿದೆ. ಕೆಲವರು ವ್ಯಕ್ತಿಯ ಕಷ್ಟದ ಸಮಯದಲ್ಲಿ ನೆರವಾಗುವುದು ಸರ್ಕಾರದ ಜವಾಬ್ದಾರಿ ಎಂದರೆ, ಇನ್ನು ಕೆಲವರು ಆರ್ಥಿಕ ಭದ್ರತೆಯನ್ನು ವ್ಯಕ್ತಿಗಳೇ ರೂಪಿಸಿಕೊಳ್ಳಬೇಕು ಎಂದಿದ್ದಾರೆ.
ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ ಮತ್ತು ಫ್ರಾನ್ಸ್‌ನಂತಹ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಆರ್ಥಿಕ ನೆರವು ನೀಡಲಾಗುತ್ತದೆ. ನಾವು ತೆರಿಗೆಯನ್ನು ಇತರ ದೇಶಗಳೊಂದಿಗೆ ಹೋಲಿಸುತ್ತೇವೆ, ಆದರೆ ಅಲ್ಲಿನ ತೆರಿಗೆದಾರರಿಗೆ ಸಿಗುವ ಸೌಲಭ್ಯಗಳನ್ನು ಹೋಲಿಕೆ ಮಾಡಲು ಮರೆಯುತ್ತೇವೆ ಎಂದು ಎಕ್ಸ್ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಮತ್ತೊಬ್ಬರು, ಸರ್ಕಾರವು ಇಪಿಎಫ್, ಎನ್‌ಪಿಎಸ್, ಮತ್ತು 80Cಯಂತಹ ತೆರಿಗೆ ಉಳಿತಾಯ ಯೋಜನೆಗಳನ್ನು ನೀಡಿದೆ. ಅಲ್ಲದೆ ಉಚಿತ ಸರ್ಕಾರಿ ಆಸ್ಪತ್ರೆಗಳು ಮತ್ತು ಶಾಲೆಗಳು ಇವೆ. ಇವುಗಳನ್ನು ಬಳಸಿಕೊಳ್ಳುವುದನ್ನು ಯಾರು ತಡೆದಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ನಿರುದ್ಯೋಗದ ಸಮಯದಲ್ಲಿ 3 ರಿಂದ 6 ತಿಂಗಳವರೆಗೆ ತೆರಿಗೆ ವಿನಾಯಿತಿ ಅಥವಾ ಪಾವತಿಸಿದ ತೆರಿಗೆಯಲ್ಲಿ ಸ್ವಲ್ಪ ಭಾಗವನ್ನು ಹಿಂದಿರುಗಿಸುವ ವ್ಯವಸ್ಥೆ ಇರಬೇಕು ಎಂದು ನೌಸತ್ ತಮ್ಮ ನಿರೀಕ್ಷೆಯನ್ನು ಹಂಚಿಕೊಂಡಿದ್ದಾರೆ.
ಗುಣಮಟ್ಟದ ಮೂಲಸೌಕರ್ಯದ ಕೊರತೆ ನೆಟ್ಟಿಗರಿಗೆ ತಿರುಗೇಟು
ತಮ್ಮನ್ನ ಟೀಕಿಸಿದವರಿಗೆ ಮತ್ತೊಂದು ಪೋಸ್ಟ್ ಮೂಲಕ ಖಡಕ್ ತಿರುಗೇಟು ನೀಡಿರುವ ನೌಸತ್, ಭಾರತದಲ್ಲಿ ಗುಣಮಟ್ಟದ ಮೂಲಭೂತ ಸೌಕರ್ಯದ ಕೊರತೆಯ ಬಗ್ಗೆ ಬೆರಳು ಮಾಡಿ ತೋರಿಸಿದ್ದಾರೆ. ನಿರುದ್ಯೋಗದ ಸಮಯದಲ್ಲಿ ತೆರಿಗೆದಾರರಿಗೆ ಆರ್ಥಿಕ ನೆರವು ನೀಡಬಾರದು ಎಂದು ಜನರು ಭಾವಿಸಿದರೆ, ನಾವು ಕಟ್ಟುವ ತೆರಿಗೆಗೆ ಪ್ರತಿಯಾಗಿ ಕನಿಷ್ಠ ಗುಣಮಟ್ಟದ ಸಾರ್ವಜನಿಕ ಸೌಲಭ್ಯಗಳನ್ನಾದರೂ ಸರ್ಕಾರ ಒದಗಿಸಬೇಕು ಎಂದು ಅವರು ವಾದಿಸಿದ್ದಾರೆ.
14 years of career, paid close to 1 cr as income tax so far. Now, being laid off.
— Mohamed Nowsath (@Md_Nowsath_) July 18, 2026
Absolutely no trace of any support system. Thank you India 🙏🤐
"ನಾನು ಆದಾಯ ತೆರಿಗೆದಾರರಿಗೆ ಆರ್ಥಿಕ ನೆರವು ಕೇಳಿದ್ದಕ್ಕೆ ಅನೇಕರಿಗೆ ಬೇಸರವಾಗಿದೆ. ಸರಿ, ನಾನು ನನ್ನ ತುರ್ತು ನಿಧಿಯನ್ನು ಬಳಸಿಕೊಂಡು ಜೀವನ ನಡೆಸುತ್ತೇನೆ, ಸರ್ಕಾರದಿಂದ ಏನನ್ನೂ ಕೇಳುವುದಿಲ್ಲ. ಆದರೆ ಅದಕ್ಕೆ ಪ್ರತಿಯಾಗಿ, ರಸ್ತೆಗಳಲ್ಲಿರುವ ಧೂಳು, ಶಬ್ದ ಮಾಲಿನ್ಯವಿಲ್ಲದೆ ನನ್ನ ಮಗುವನ್ನು ಸ್ಟ್ರಾಲರ್‌ನಲ್ಲಿ ಕರೆದೊಯ್ಯುವ ವಾತಾವರಣ ನಿರ್ಮಿಸಿಕೊಡಿ.
ಸುರಕ್ಷಿತ ಫುಟ್‌ಪಾತ್‌ಗಳು, ಲಾರಿಗಳ ಭಯವಿಲ್ಲದೆ ಮಕ್ಕಳು ಸೈಕಲ್ ಓಡಿಸುವ ರಸ್ತೆಗಳು, ಮಾಲ್‌ಗಳ ಬದಲಿಗೆ ನಗರದಲ್ಲಿ ಹಸಿರು ಉದ್ಯಾನವನಗಳು, ಮತ್ತು ಟ್ರಾಫಿಕ್ ಜಾಮ್ ಇರುವ ಹೆದ್ದಾರಿಗಳ ಬದಲು ಗಂಟೆಗೆ 200 ಕಿ.ಮೀ. ವೇಗದಲ್ಲಿ ಚಲಿಸುವ ರೈಲುಗಳ ವ್ಯವಸ್ಥೆಯನ್ನು ಸರ್ಕಾರ ಒದಗಿಸಲಿ," ಎಂದು ಅವರು ಸವಾಲು ಹಾಕಿದ್ದಾರೆ.


Click it and Unblock the Notifications
