ಗೋವಾದಲ್ಲಿ ರಣಧೀರ ನಟಿ ಖುಷ್ಬೂ ಪುತ್ರಿಯ ಅದ್ಧೂರಿ ಮದುವೆ: ಸ್ಯಾಂಡಲ್‌ವುಡ್‌ನ ಯಾವೆಲ್ಲ ಸ್ಟಾರ್ ಭಾಗಿಯಾಗಿದ್ರು
ಭಾರತೀಯ ಚಿತ್ರರಂಗದ ಸ್ಟಾರ್ ದಂಪತಿ ಖುಷ್ಬೂ ಮತ್ತು ಸುಂದರ್ ಸಿ ಅವರ ಮನೆಯಲ್ಲಿ ಮದುವೆಯ ಸಂಭ್ರಮ ಮನೆಮಾಡಿದೆ. ಇವರ ಹಿರಿಯ ಮಗಳಾದ ಅವಂತಿಕಾ ಸುಂದರ್ ಅವರು ಶ್ರವಣ್ ಶ್ರೀನಿವಾಸನ್ ಜೊತೆ ಗೋವಾದ ಖಾಸಗಿ ರೆಸಾರ್ಟ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅತ್ಯಂತ ಅದ್ಧೂರಿಯಾಗಿ ನಡೆದ ಈ ವಿವಾಹ ಸಮಾರಂಭಕ್ಕೆ ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್ ನಟರು ಮಾತ್ರವಲ್ಲದೆ ಬಾಲಿವುಡ್‌ನ ಪ್ರಮುಖ ತಾರೆಯರು ಸಾಕ್ಷಿಯಾಗಿದ್ದಾರೆ.
ಸ್ಟಾರ್ ನಟರ ಸಮಾಗಮ
ಮದುವೆಯು ಕೇವಲ ಆಪ್ತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ನಡೆಯಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಮದುವೆಯ ಅತಿಥಿಗಳ ಪಟ್ಟಿ ಮತ್ತು ವೈಭವವನ್ನು ನೋಡಿದರೆ ಇದು ಈ ವರ್ಷದ ಅತ್ಯಂತ ಚರ್ಚಿಸಲ್ಪಡುವ ಸೆಲೆಬ್ರಿಟಿ ವೆಡ್ಡಿಂಗ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ದಕ್ಷಿಣ ಸಿನಿಮಾರಂಗ ಸ್ಟಾರ್ ನಟರಾದ ಮೆಗಾಸ್ಟಾರ್ ಚಿರಂಜೀವಿ, ಕಿಂಗ್ ನಾಗಾರ್ಜುನ, ವಿಕ್ಟರಿ ವೆಂಕಟೇಶ್ ಮತ್ತು ಅಮಲಾ ಅಕ್ಕಿನೇನಿ ಈ ಸಮಾರಂಭದಲ್ಲಿ ಭಾಗವಹಿಸಿ ನವಜೋಡಿಗೆ ಆಶೀರ್ವದಿಸಿದ್ದಾರೆ.

ಸ್ಯಾಂಡಲ್‌ವುಡ್‌ನ ಹಿರಿಯ ನಟ, ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ, ಸೌತ್ ಕ್ವೀನ್ ತ್ರಿಶಾ ಕೃಷ್ಣನ್, ಬಾಲಿವುಡ್‌ನ ಹಿರಿಯ ನಟರಾದ ಜಾಕಿ ಶ್ರಾಫ್ ಮತ್ತು ಅನಿಲ್ ಕಪೂರ್ ಕೂಡ ಮದುವೆಯ ಸಂಭ್ರಮದಲ್ಲಿ ಪಾಲ್ಗೊಂಡು ಮಿಂಚಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚಿರಂಜೀವಿ, ನಾಗಾರ್ಜುನ ಮತ್ತು ವೆಂಕಟೇಶ್ ಅವರ ಸಾಂಪ್ರದಾಯಿಕ ಉಡುಗೆಯ ಫೋಟೋ ಹಾಗೂ ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ.
ದಶಕಗಳ ಸ್ನೇಹಕ್ಕೆ ಸಾಕ್ಷಿಯಾದ ಸಮಾರಂಭ
ಖುಷ್ಬೂ ಅವರು ತಮ್ಮ ನಟನಾ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ತೆಲುಗಿನ ಸ್ಟಾರ್ ನಟರಾದ ಚಿರಂಜೀವಿ, ನಾಗಾರ್ಜುನ ಮತ್ತು ವೆಂಕಟೇಶ್ ಅವರೊಂದಿಗೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಆ ಕಾಲದಿಂದಲೂ ಬೆಳೆದುಬಂದ ಇವರ ದಶಕಗಳ ಸ್ನೇಹದ ಬಾಂಧವ್ಯ ಎಷ್ಟು ಗಟ್ಟಿಯಾಗಿದೆ ಎಂಬುದಕ್ಕೆ ಈ ಸ್ಟಾರ್ ನಟರೆಲ್ಲರೂ ಖುಷ್ಬೂ ಮಗಳ ಮದುವೆಗೆ ಗೋವಾಗೆ ಆಗಮಿಸಿರುವುದೇ ಸಾಕ್ಷಿಯಾಗಿದೆ.

ಕುಟುಂಬಸ್ಥರ ಬ್ಯುಸಿ ಶೆಡ್ಯೂಲ್
ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಖುಷ್ಬೂ, ಮಗಳ ಮದುವೆಯ ಸಿದ್ಧತೆಗಳ ಬಗ್ಗೆ ಹಂಚಿಕೊಂಡಿದ್ದರು. "ನನ್ನ ಹಿರಿಯ ಮಗಳು ಮದುವೆಯ ಸಿದ್ಧತೆಗಳಲ್ಲಿ ಮುಳುಗಿದ್ದಾಳೆ. ನನ್ನ ಪತಿ ಸುಂದರ್ ಸಿ ಅವರು 'ಪುರುಷನ್' ಸಿನಿಮಾದ ಶೂಟಿಂಗ್ ಹಾಗೂ ಮದುವೆಯ ಕೆಲಸಗಳೆರಡರಲ್ಲೂ ಬ್ಯುಸಿಯಾಗಿದ್ದಾರೆ. ಇನ್ನು ಕಿರಿಯ ಮಗಳು ಸಿನಿಮಾ ಪ್ರೊಡಕ್ಷನ್ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾಳೆ" ಎಂದು ಹೇಳಿದ್ದರು. ಖುಷ್ಬೂ ಮತ್ತು ಸುಂದರ್ ಸಿ ದಂಪತಿಗೆ ಅವಂತಿಕಾ ಮತ್ತು ಆನಂದಿತಾ ಎಂಬ ಇಬ್ಬರು ಪುತ್ರಿಯರಿದ್ದಾರೆ.
ಅವಂತಿಕಾ-ಆನಂದಿತಾ ವೃತ್ತಿಜೀವನ
ಹಸೆಮಣೆ ಏರಿರುವ ಹಿರಿಯ ಪುತ್ರಿ ಅವಂತಿಕಾ ಈಗಾಗಲೇ ನಟನೆಯತ್ತ ಒಲವು ತೋರಿದ್ದು, ಹಲವು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಇನ್ನು ಕಿರಿಯ ಪುತ್ರಿ ಆನಂದಿತಾ ಸುಂದರ್ ಕ್ಯಾಮೆರಾ ಹಿಂದೆ ಕೆಲಸ ಮಾಡಲು ಆಸಕ್ತಿ ಹೊಂದಿದ್ದಾರೆ. ಇತ್ತೀಚೆಗಷ್ಟೇ ತಮ್ಮ ತೂಕ ಇಳಿಕೆಯ ಜರ್ನಿ ಹಾಗೂ ಸ್ಟಾರ್ ಕಿಡ್ ಆಗಿ ಬೆಳೆಯುವಾಗ ಎದುರಿಸಿದ ಸವಾಲುಗಳ ಬಗ್ಗೆ ಅವರು ಮಾತನಾಡಿದ್ದರು. ಇವರು ಖ್ಯಾತ ನಿರ್ದೇಶಕ ಮಣಿ ರತ್ನಂ ಅವರ 'ಪೊನ್ನಿಯಿನ್ ಸೆಲ್ವನ್ 2' ಮತ್ತು 'ಥಗ್ ಲೈಫ್' ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಇತ್ತೀಚೆಗೆ 'ಡಬಲ್ ಆಕ್ಯುಪೆನ್ಸಿ' ಎಂಬ ಪ್ರಾಜೆಕ್ಟ್ ಮೂಲಕ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ.













Click it and Unblock the Notifications