ಅಂತಾರಾಷ್ಟ್ರೀಯ ಪದಕ ಗುರಿ; 35 ಕ್ರೀಡಾಪಟುಗಳಿಗೆ ಹೈಎಂಡ್ ಸೈಕಲ್ ನೀಡಿದ ಸರ್ಕಾರ: ಪರಮೇಶ್ವರ್
ಬೆಂಗಳೂರು: ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ವತಿಯಿಂದ ಇಂದು ಸುಮಾರು 35 ಪರಿಶಿಷ್ಟ ಜಾತಿಯ ಪ್ರತಿಭಾನ್ವಿತ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ ಸ್ಪರ್ಧಿಸಲು ಅವಶ್ಯಕವಾಗಿರುವ ಹೈ ಎಂಡ್ ಸೈಕಲ್‌ಗಳನ್ನು ನೀಡಲಾಗಿದೆ. ಇದರಿಂದ ಒಲಿಂಪಿಕ್ಸ್, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ತರಬೇತಿ ಪಡೆಯಲು ಸಹಾಯವಾಗುತ್ತದೆ ಎಂದು ಉಪ ಮುಖ್ಯಮಂತ್ರಿಗಳು, ಕಂದಾಯ ಮತ್ತು ಕ್ರೀಡಾ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಹೇಳಿದರು.
ಬುಧವಾರ ಬೆಂಗಳೂರಿನ ನೃಪತುಂಗ ರಸ್ತೆಯ ಯುವನಿಕಾ ಸಭಾಂಗಣದ ಮುಂಭಾಗದಲ್ಲಿ 35 ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಹೈ ಎಂಡ್ ಸೈಕಲ್‌ಗಳನ್ನು ವಿತರಿಸಿದರು. ಬಳಿಕ ಸುದ್ದಿಗಾರರ ಬಳಿ ಬಿಡದಿ ಟೌನ್‌ಶಿಪ್ ಯೋಜನೆ, ಎನ್‌ಡಿಆರ್‍ಎಫ್ ಅನುದಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.

35 ಕ್ರೀಡಾಪಟುಗಳಿಗೆ ತಲಾ 14 ಲಕ್ಷ ರೂಪಾಯಿ ಮೌಲ್ಯದ ಒಂದು ಸೈಕಲ್ ನಂತೆ ಎಲ್ಲರಿಗೂ ವಿತರಿಸಿದ್ದೇವೆ. ವಿಜಯಪುರ, ಗದಗ ಮತ್ತು ಬಾಗಲಕೋಟೆ ಜಿಲ್ಲೆಗಳ ಕ್ರೀಡಾ ವಸತಿ ನಿಲಯಗಳಲ್ಲಿ ಸೈಕ್ಲಿಂಗ್ ತರಬೇತಿ ಪಡೆಯುತ್ತಿರುವ ಕ್ರೀಡಾಪಟುಗಳಿಗೆ ಇದರಿಂದ ಅನುಕೂಲವಾಗಲಿದೆ. ಸೈಕಲ್‌ಗಳನ್ನು ಸಮರ್ಪಕವಾಗಿ ಬಳಸಿಕೊಂಡು ಕ್ರೀಡಾಪಟುಗಳಿಗೆ ಉತ್ತಮ ತರಬೇತಿ ನೀಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪದಕಗಳನ್ನು ಗಳಿಸುವಂತೆ ತರಬೇತುದಾರರಿಗೆ ಸೂಚಿಸಲಾಗಿದೆ ಎಂದರು.
ಎನ್ಡಿಆರ್ಎಫ್ ಅನುದಾನಕ್ಕೆ ಮನವಿ
ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗುವ ಸಾಧ್ಯತೆಯಿದೆ. ಅದಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಹಾಗಾಗಿ ನಾವು ಮುಂಚಿತವಾಗಿಯೇ ಎನ್‌ಡಿಆರ್‌ಎಫ್ ಅನುದಾನವನ್ನು ಒಂದಿಷ್ಟಾದರೂ ನೀಡಿ ಎಂದು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ಮತ್ತು ನಾನು ಪ್ರಧಾನಮಂತ್ರಿಯವರಿಗೆ ಪತ್ರ ಬರೆದು ಅಗತ್ಯ ನೆರವು ನೀಡುವಂತೆ ಕೋರಿದ್ದೇವೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು, ನಾನು ಹಾಗೂ ಎಲ್ಲ ಸಚಿವರುಗಳು ವಿಶೇಷ ಅನುದಾನವನ್ನು ನೀಡುವಂತೆ ಕೇಂದ್ರಕ್ಕೆ ಮನವಿ ನೀಡುತ್ತೇವೆ. ಆದರೆ ಅದಕ್ಕೂ ಮುನ್ನ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಎನ್‌ಡಿಆರ್‌ಎಫ್‌ನಿಂದ ಮುಂಗಡ ಅನುದಾನ ಬಿಡುಗಡೆ ಮಾಡುವಂತೆ ಕೋರಿದ್ದೇವೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದರು.
ಬರಗಾಲಪೀಡಿತ ಪ್ರದೇಶ ಎಂದು ಯಾವಾಗ ಘೋಷಣೆ ಮಾಡುತ್ತೀರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಕುಡಿಯುವ ನೀರಿನ ಲಭ್ಯತೆ, ಮುಂದಿನ ದಿನಗಳಲ್ಲಿ ಬರ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಹಾಗೂ ಅದಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದೇವೆ. ಜೊತೆಗೆ ರಾಜ್ಯದ ಜಲಾಶಯಗಳಲ್ಲಿ ಎಷ್ಟು ನೀರು ಸಂಗ್ರಹವಾಗಿದೆ, ಒಳಹರಿವು ಮತ್ತು ಹೊರಹರಿವಿನ ಪ್ರಮಾಣ ಎಷ್ಟಿದೆ ಎಂಬ ವಿವರಗಳನ್ನೂ ಒಂದು ವಾರದೊಳಗೆ ನೀಡುವಂತೆ ನಿರ್ದೇಶಿಸಲಾಗಿದೆ. ಆ ವರದಿ ಬಂದ ಬಳಿಕ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಸೂಚನೆಗಳಾದ ಮಳೆಯ ಪ್ರಮಾಣ, ಮಳೆ ಕೊರತೆ, ಮಣ್ಣಿನ ತೇವಾಂಶ, ಹವಾಮಾನ ಇಲಾಖೆ ವರದಿ ಸೇರಿದಂತೆ ಎಲ್ಲ ಅಂಶಗಳನ್ನು ಪರಿಶೀಲಿಸಿ ಬರ ಘೋಷಣೆ ಬಗ್ಗೆ ನಿರ್ಧರಿಸುತ್ತೇವೆ.
ಯಾವುದೇ ಜಿಲ್ಲೆ ಅಥವಾ ತಾಲೂಕನ್ನು ಬೇಕಾಬಿಟ್ಟಿ ಬರಪೀಡಿತ ಪ್ರದೇಶ ಎಂದು ಘೋಷಿಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳು ಮತ್ತು ಮಾನದಂಡಗಳ ಆಧಾರದ ಮೇಲೆಯೇ ನಾವು ಒಂದು ಜಿಲ್ಲೆ ಅಥವಾ ತಾಲ್ಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಕಾಲ್ತುಳಿತಕ್ಕೆ ಒಬ್ಬರನ್ನೇ ಹೋಣೆ ಮಾಡಲಾಗಲ್ಲ
ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತ ವಿಚಾರಕ್ಕೆ ಸಂಬಂಧಿಸಿ ಕರ್ತವ್ಯ ಲೋಪ ನಡೆದಿದೆ ಎಂಬ ಕಾರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಮೊದಲು ಅಮಾನತು ಮಾಡಲಾಗಿತ್ತು. ಬಳಿಕ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ, ವರದಿ ಆಧಾರದ ಮೇಲೆ ಅವರನ್ನು ಖುಲಾಸೆ ಮಾಡಲಾಗಿದೆ. ಸಾವಿಗೆ ಯಾರೋ ಒಬ್ಬರನ್ನು ಹೊಣೆಯಾಗಿಸಲು ಆಗುವುದಿಲ್ಲ ಎಂದರು.
ಬಿಡದಿ ಯೋಜನೆಗೆ ರಾಜಕೀಯ ಬಣ್ಣ ಬೇಡ
ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಮುಖ್ಯಮಂತ್ರಿಗಳು ಎರಡು ತಿಂಗಳೊಳಗೆ ಸಮಿತಿ ರಚಿಸಿ ವರದಿ ಪಡೆದು ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ. ಈ ಮಧ್ಯೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮಧ್ಯ ಪ್ರವೇಶಿಸಿದ್ದಾರೆ. ಇದರಿಂದ ಸರ್ಕಾರಕ್ಕೆ ಹಿನ್ನಡೆಯಾಗುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ರಾಜಕೀಯ ಬಣ್ಣ ಹಚ್ಚುವುದು ಸರಿಯಲ್ಲ.
ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನು ನಾವು ಸಮರ್ಥಿಸಿಕೊಳ್ಳುತ್ತೇವೆ. ಮುಖ್ಯಮಂತ್ರಿಗಳು ಈಗಾಗಲೇ ಬಿಡದಿಯಲ್ಲಿ ಟೌನ್‌ಶಿಪ್ ಅಭಿವೃದ್ಧಿಪಡಿಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಕುರಿತು ಹಲವು ಚರ್ಚೆಗಳು ನಡೆದಿದ್ದವು. ಕುಮಾರಸ್ವಾಮಿ ಅವರ ಅವಧಿಯಲ್ಲಿಯೂ ಈ ವಿಷಯ ಚರ್ಚೆಗೆ ಬಂದಿತ್ತು. ಹೀಗಾಗಿ ಇದಕ್ಕೆ ಹೊಸದಾಗಿ ರಾಜಕೀಯ ಬಣ್ಣ ಬಳಿಯುವುದು ಸೂಕ್ತವಲ್ಲ ಎಂದು ತಿಳಿಸಿದರು.













Click it and Unblock the Notifications