Firecraker: ಬೆಂಗಳೂರು ಹವಾಮಾನ ರಕ್ಷಣೆಗೆ ವಿಶೇಷ ತಂಡ ರಚನೆ
ಬೆಂಗಳೂರು, ನವೆಂಬರ್ 14: ಸಿಲಿಕಾನ್ ಸಟಿಯಲ್ಲಿ ಪಟಾಕಿಗಳ ಅಕ್ರಮ ಮಾರಾಟ ತಡೆಯಲು ಹಾಗೂ ಪಟಾಕಿ ಮಾರಾಟದ ಮೇಲೆ ಹದ್ದಿನ ಕಣ್ಣಿಡಲು ಸಹಾಯಕ ಪೊಲೀಸ್ ಆಯುಕ್ತರ (ಎಸಿಪಿ) ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಈ ಮೂಲಕ ದೀಪಾವಳಿ ಸಂದರ್ಭದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಸೋಮವಾರವಷ್ಟೇ ಈ ಬಗ್ಗೆ ಗೃಹ ಸಚಿವ ಜಿ.ಪರಮೇಶ್ವರ ಮಾಹಿತಿ ನೀಡಿದ್ದಾರೆ. ರಚನೆಯಾದ ಈ ವಿಶೇಷ ತಂಡಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳು ಇದ್ದಾರೆ ಎಂದು ತಿಳಿಸಿದರು.

ಈ ವಿಶೇಷ ತಂಡಗಳ ಸದಸ್ಯರು ಬೆಂಗಳೂರಿನಲ್ಲಿಯೇ ಬೀಡು ಬಿಟ್ಟಿದ್ದಾರೆ. ವಾಯು ಮಾಲಿನ್ಯವನ್ನು ಮಾಡುವವರ ವಿರುದ್ಧ ಹಾಗೂ ನಿಷೇಧಿತ ಪಟಾಕಿ ಮಾರಾಟ ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಈಗಾಗಲೇ ರಾಜ್ಯ ಸರ್ಕಾರ ಹಸಿರು ಪಟಾಕಿಗಳನ್ನು ಸಾರ್ವಜನಿಕರಿಗೆ ಅವಕಾಶ ನೀಡಿದೆ. ಹೀಗಿದ್ದರೂ ಸಹಿತ ದುರದೃಷ್ಟವಶಾತ್, ತಮಿಳುನಾಡಿನ ಹೊಸೂರಿನಿಂದ ಹಲವಾರು ಜನರು ಮಾಲಿನ್ಯಕಾರಕ ಪಟಾಕಿಗಳನ್ನು ತಂದು ಹೊಡೆಯುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪಟಾಕಿ ದುರಂತ: ಪಟಾಕಿ ಸಂಪೂರ್ಣ ನಿಷೇಧಕ್ಕೆ ಚಿಂತನೆ
ಇತ್ತೀಚೆಗೆ ನಗರದ ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ಬೆಂಕಿ ಅವಘಡ ಸಂಭವಿಸಿ ಒಟ್ಟು 17 ಮಂದಿ ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಸರ್ಕಾರ ಎಲ್ಲ ಹಬ್ಬಗಳಲ್ಲಿ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲು ಸರ್ಕಾರ ಚಿಂತನೆ ನಡೆಸಿದೆ. ಹಬ್ಬದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಹಸಿರು ಪಟಾಕಿಗೆ ಮಾತ್ರ ಅನುಮತಿ ನೀಡಿದೆ. ಸದ್ಯ ದೀಪಾವಳಿಯಲ್ಲಿ ಈ ನಿಯಮ ಮೀರಿ ಮಾಲಿನ್ಯಕಾರಕ ಪಟಾಕಿಗಳನ್ನು ಹೊಡೆಯುತ್ತಿದ್ದಾರೆ ಎಂದು ಅವರು ಆಕ್ರೋಶ ಹೊರಹಾಕಿದರು.
ಬೆಂಗಳೂರಿನ ಹಾವಾಮಾನ ರಕ್ಷಿಸಬೇಕು
ಬೆಂಗಳೂರಿನಲ್ಲಿ ಪಟಾಕಿ ಹೊಡೆವುದರಿಂದ ಮಾಲಿನ್ಯ ಹೆಚ್ಚಾಗಿದೆ. ಬೆಂಗಳೂರು ಉತ್ತಮ ಗಾಳಿ, ತಂಪು, ಹಸಿರು ಹೀಗೆ ತನ್ನದೇ ಉತ್ತಮ ಹವಾಮಾನ ಹೊಂದಿದೆ. ಇದರಿಂದ ಸಿಲಿಕಾನ್ ಸಿಟಿ ಅಚ್ಚುಮೆಚ್ಚಾಗಿದೆ. ನಗರದ ಹವಾಮಾನವನ್ನು ರಕ್ಷಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.
ಹಬ್ಬಗಳ ಸಮಯದಲ್ಲಿ ನವದೆಹಲಿಯಂತಹ ವಾತಾವರಣೆ ಬೆಂಗಳೂರಿಗೆ ಬೇಕಿಲ್ಲ. ಪಟಾಕಿಗಳು ವಾತಾವರಣವನ್ನು ಕಲುಷಿತಗೊಳಿಸುವುದಲ್ಲದೆ ರೋಗಿಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಹಾಗಾಗಿ, ಮಾಲಿನ್ಯಕಾರಕ ಪಟಾಕಿಗಳನ್ನು ಸಿಡಿಸದೇ ಕೇವಲ ಹಸಿರು ಪಟಾಕಿ ಹೊಡೆಯಬೇಕು. ಇಂತಹ ವಿಚಾರಗಳ ಕುರಿತು ಜನರು ಹೆಚ್ಚು ಜಾಗೃರಾಗಬೇಕು ಎಂದು ಸಚಿವರು ತಿಳಿಸಿದರು.












Click it and Unblock the Notifications