ಬೆಂಗಳೂರು: ದೀಪಾವಳಿ ಸಂಭ್ರಮಾಚರಣೆಯಲ್ಲಿ ಎಡವಟ್ಟು, ಪಟಾಕಿ ಸಿಡಿದು ಹಲವರ ದೃಷ್ಟಿಗೆ ಆಪತ್ತು
ಬೆಂಗಳೂರು, ನವೆಂಬರ್ 14: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದಷ್ಟೇ ಅಪಾಯಕಾರಿ ಕೂಡ. ದೀಪ ಬೆಳಗಿಸಿ ಆಚರಿಸುವ ಹಬ್ಬದಿಂದ ಸಂಭ್ರಮ ಹೆಚ್ಚಾದರೆ, ಪಟಾಕಿ ಸಿಡಿಸಿ ಆಚರಿಸುವ ಹಬ್ಬದಿಂದ ಅಪಾಯಗಳು ಹೆಚ್ಚಿರುತ್ತದೆ.
ಬೆಳಕಿನ ಹಬ್ಬದಲ್ಲಿ ಪಟಾಕಿ ಸಿಡಿಸಿ ನಾಡಿನಾದ್ಯಂತ ಸಂಭ್ರಮಿಸುತ್ತಾರೆ. ಹೀಗಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದು ಕಡೆ ವಾಯು ಮಾಲಿನ್ಯ ಕಂಟ್ರೋಲ್ ಮಾಡಲು ಪಟಾಕಿ ಸಿಡಿಸಲು ಸಮಯ ನಿಗದಿ ಮಾಡಲಾಗಿದೆ. ಜೊತೆಗೆ ಯಾವುದೇ ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆಗಳನ್ನು ಸಹ ನೀಡಲಾಗಿದೆ. ಆದರೆ ಬಹುತೇಕ ಕಡೆ ಪಟಾಕಿಯಿಂದ ಸಾಕಷ್ಟು ಅವಾಂತರಗಳು ನಡೆದಿದೆ.

ಬೆಂಗಳೂರು ನಗರದ ಮಿಂಟೋ ಹಾಗೂ ನಾರಾಯಣ ನೇತ್ರಾಲಯದಲ್ಲಿ ಪಟಾಕಿ ಸಿಡಿಸಿದ ಸಂದರ್ಭದಲ್ಲಿ ಆದ ಎಡವಟ್ಟಿನ ಪರಿಣಾಮದಿಂದ ಹಾಗೂ ಬೇರೆಯವರು ಪಟಾಕಿ ಸಿಡಿಸಿದಾಗ ಆದ ಸಮಸ್ಯೆಯಿಂದ ಹಲವಾರು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರ ಸಂಖ್ಯೆ ಗಣನೀಯ ಏರಿಕೆಯಾಗಿದೆ.
ಪಟಾಕಿ ಅವಘಡದಿಂದ ನಾರಾಯಣ ನೇತ್ರಾಲಯದಲ್ಲಿ 26 ಪ್ರಕರಣ ದಾಖಲು ಆಗಿದೆ. ನವೆಂಬರ್ 12 ರಿಂದ ಇಲ್ಲಿಯವರೆಗೆ 26 ಕೇಸ್ ದಾಖಲಾಗಿದ್ದು, 5 ಮಂದಿಗೆ ಗಂಭೀರ ಗಾಯ ಆಗಿದೆ. 26 ಜನರ ಪೈಕಿ ಇನ್ನೊಬ್ಬರು ಸಿಡಿಸಿದ ಪಟಾಕಿಯಿಂದಲೇ 12 ಮಂದಿಗೆ ಗಾಯವಾಗಿರುವುದು ದುರದೃಷ್ಟಕರವಾಗಿದೆ. ಇನ್ನೂ ಸ್ವತಃ ತಾವೇ ಪಟಾಕಿ ಸಿಡಿಸುತ್ತಿದ್ದಾಗ ಗಾಯಗೊಂಡವರ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ.
ಪಟಾಕಿ ಅವಘಡದಲ್ಲಿ ನಾರಾಯಣ ನೇತ್ರಾಲಯಕ್ಕೆ ಬಂದ 26 ಕೇಸ್ ಪೈಕಿ 13 ಮಕ್ಕಳಿಗೆ ಪಟಾಕಿ ಅವಘಡದಿಂದ ತೊಂದರೆಯಾಗಿದೆ. ಹೆಚ್ಚಿನ ರೋಗಿಗಳು ಬೆಂಗಳೂರಿನ ನಿವಾಸಿಯಾಗಿದ್ದು, ಒಬ್ಬರು ಬಿಹಾರ ಮೂಲದವರು ಎನ್ನುವ ಮಾಹಿತಿ ಲಭ್ಯವಾಗಿದೆ.
ನಿನ್ನೆ ರಾತ್ರಿ 8 ಗಂಟೆಯಿಂದ ಮಿಂಟೋ ಆಸ್ಪತ್ರೆಯಲ್ಲಿ ಇದುವರೆಗೂ 10 ಕೇಸ್ ದಾಖಲಾಗಿದೆ. 10 ಕೇಸ್ ಪೈಕಿ 6 ಮಕ್ಕಳ ಕಣ್ಣಿಗೆ ಗಾಯವಾಗಿದ್ದು ಇದರಲ್ಲಿ ನಾಲ್ವರ ಕಣ್ಣಿಗೆ ಗಂಭೀರ ಗಾಯವಾಗಿದೆ. 3 ಮಕ್ಕಳಿಗೆ ರಾತ್ರೋ ರಾತ್ರಿ ಕಣ್ಣಿನ ಆಪರೇಷನ್ ಕೂಡ ನಡೆದಿದ್ದು, ಉಳಿದವರಿಗೆ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ. ಇನ್ನು ನಿನ್ನೆ ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆ ತನಕ ಪಟಾಕಿ ಅವಾಂತರದಿಂದ 13 ಮಂದಿ ಗಾಯಗೊಂಡಿದ್ದಾರೆ.
ಒಟ್ಟಿನಲ್ಲಿ ದೀಪಾವಳಿಯ ಸಂಭ್ರಮದಲ್ಲಿ ಪ್ರತೀ ಬಾರಿ ಕೂಡ ಪಟಾಕಿ ಸಿಡಿಸಿದಾಗ ಅಥವಾ ಬೇರೆಯವರು ಸಿಡಿಸಿದಾಗ ದೇಹಕ್ಕೆ ಆಗುವ ಹಾನಿಯಿಂದ ಅನೇಕರು ಆಸ್ಪತ್ರೆಯ ಕದ ತಟ್ಟುತ್ತಲೆ ಇದ್ದಾರೆ. ಸರ್ಕಾರ ಏನೇ ಸೂಚನೆ ಕೊಟ್ಟರೂ ಕೆಲವೊಮ್ಮೆ ಜನ ಅದರ ಪಾಲನೆ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ಎಷ್ಟೇ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರೂ ಸಂಭ್ರಮದಲ್ಲಿ ಮೈ ಮರೆಯುವ ಹಲವರು ಪಟಾಕಿಯಿಂದ ಎಡವಟ್ಟು ಮಾಡಿಕೊಳ್ಳುತ್ತಲೇ ಇದ್ದಾರೆ.












Click it and Unblock the Notifications