ಬೆಂಗಳೂರಿನ ಕಸ ಸಮಸ್ಯೆಗೆ ಸಿಗುತ್ತಾ ಶಾಸ್ವತ ಪರಿಹಾರ?: ಜಿಬಿಎ ಅಧಿಕಾರಿಗಳಿಗೆ ಸಚಿವರ ಖಡಕ್ ಎಚ್ಚರಿಕೆ
ಬೆಂಗಳೂರು: ಉದ್ಯಾನ ನಗರಿ, ಐಟಿ ಕೇಂದ್ರ ಬೆಂಗಳೂರಿನಲ್ಲಿ ಅದೆಷ್ಟೇ ಕ್ರಮ ಕೈಗೊಂಡರು ತ್ಯಾಜ್ಯ ಸಮಸ್ಯೆ ಬಗೆಹರಿಯುತ್ತಿಲ್ಲ. ಘನ ತ್ಯಾಜ್ಯ, ಕಟ್ಟಡದ ಭಗ್ನಾವಶೇಷಗಳನ್ನು ತಂದು ಎಲ್ಲೆಂದರಲ್ಲಿ ಸುರಿಯುತ್ತಿದ್ದಾರೆ. ಈ ಸಂಬಂಧ ಮುಂದಿನ ಕೆಲವು ತಿಂಗಳುಗಳಲ್ಲಿ ಶಾಸ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಚಿವರ ವೇಗ ನೋಡಿದರೆ ಬೆಂಗಳೂರು ಕಸ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತಾ? ಎಂದು ಕಾದು ನೋಡಬೇಕಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ ಕೈಗೊಂಡಿರುವ ಕ್ರಮಗಳ ಕುರಿತು ಸಚಿವರು ಸುದೀರ್ಘ ಸಭೆ ನಡೆಸಿದರು. ನಗರದಲ್ಲಿನ ಕಸದ ಸಮಸ್ಯೆ ನಿವಾರಣೆಗಾಗಿ ಈಗಿರುವ ವ್ಯವಸ್ಥೆಯನ್ನೇ ಪರಿಣಾಮಕಾರಿಯಾಗಿ ಬಳಸಿಕೊಂಡು ಕಾರ್ಯ ನಿರ್ವಹಿಸಬೇಕು. ನಗರದಲ್ಲಿ ಕಸದ ಸಮಸ್ಯೆ ಪ್ರತಿದಿನ ಚರ್ಚೆಯಾಗುತ್ತಿರುವ ಪ್ರಮುಖ ವಿಷಯವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಲಾಗಿದೆ ಎಂದು ಹೇಳಿದರು.

ತ್ಯಾಜ್ಯ ಸಂಗ್ರಹಣೆ: 33 ಪ್ಯಾಕೇಜ್‌ಗಳಿಗೆ ಟೆಂಡರ್
ತ್ಯಾಜ್ಯ ಸಂಗ್ರಹಣೆಗಾಗಿ ಹೊಸ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. 33 ಪ್ಯಾಕೇಜ್‌ಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. ಅದರಲ್ಲಿ 6 ಪ್ಯಾಕೇಜ್‌ಗಳು ನ್ಯಾಯಾಲಯದಲ್ಲಿವೆ. ಉಳಿದ 27 ಪ್ಯಾಕೇಜ್‌ಗಳು ಅಂತಿಮ ಹಂತದಲ್ಲಿದ್ದು, ಹೊಸ ವ್ಯವಸ್ಥೆ ಜಾರಿಯಾಗುವವರೆಗೆ ಈಗಿರುವ ವ್ಯವಸ್ಥೆಯಲ್ಲಿಯೇ ಅಗತ್ಯ ಬದಲಾವಣೆಗಳನ್ನು ತಂದು ಕಸದ ಸಮಸ್ಯೆ ನಿಯಂತ್ರಣಕ್ಕೆ ತರಲು ಮುಂದಾಗಿದ್ದೇವೆ.
ತ್ಯಾಜ್ಯ ವಿಲೇವಾರಿಗೆ ಕೆಲವು ಕಡೆ ವಾಹನಗಳ ಕೊರತೆ ಇದ್ದರೆ, ಇನ್ನೂ ಕೆಲವು ಕಡೆ ಸಿಬ್ಬಂದಿ ಕೊರತೆಯಿದೆ. ಪ್ರಸ್ತುತ ತ್ಯಾಜ್ಯ ವಿಲೇವಾರಿಗಾಗಿ ಬಳಸುತ್ತಿರುವ ವಾಹನಗಳಲ್ಲಿ ಜಿಪಿಎಸ್ ವ್ಯವಸ್ಥೆ ಇಲ್ಲ. ಕೆಲವು ಗುತ್ತಿಗೆದಾರರು ದುರ್ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಬಂದಿದ್ದು, ಹಲವು ವರ್ಷಗಳಿಂದ ಹೊಸ ಟೆಂಡರ್ ಪ್ರಕ್ರಿಯೆಗೆ ಅಡ್ಡಿಯಾಗುವಂತೆ ನ್ಯಾಯಾಲಯಗಳಲ್ಲಿ ದಾವೆ ಹೂಡುತ್ತಿದ್ದರು. ಇಂತಹ ಸಮಸ್ಯೆಗಳಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ರಸ್ತೆ ಬದಿ ಕಸ ಹಾಕದಂತೆ ಕಡಿವಾಣ
ನಗರದಲ್ಲಿ ಹಿಂದೆ ಇಷ್ಟು ಪ್ರಮಾಣದಲ್ಲಿ ರಸ್ತೆ ಬದಿ ಕಸ ಬಿಸಾಡುವ ಪ್ರವೃತ್ತಿ ಇರಲಿಲ್ಲ. ಆಟೋ ಟಿಪ್ಪರ್‌ಗಳ ಮೂಲಕ ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸಲಾಗುತ್ತಿದೆ. ಆದರೆ ಅನೇಕ ನಾಗರಿಕರು ಮನೆ ಮುಂದೆ ಬರುವ ವಾಹನಗಳಿಗೆ ಕಸ ನೀಡದೆ ರಸ್ತೆ ಬದಿಯಲ್ಲೇ ಬಿಸಾಡುವ ಅಭ್ಯಾಸ ಮುಂದುವರಿಸಿಕೊಂಡಿದ್ದಾರೆ. ಇದರ ತಡೆಗೆ ಅಗತ್ಯ ಕ್ರಮಕ್ಕೆ ಸೂಚಿಸಿದ್ದೇವೆ.
ಕಸ ವಿಲೇವಾರಿಗೆ ವಾರ್ಡ್ ಮಟ್ಟದಲ್ಲಿ ಅಧಿಕಾರಿಗಳು, ಮಾರ್ಷಲ್‌ಗಳು, ಲಿಂಕ್ ವರ್ಕರ್‌ಗಳು, ಮನೆ-ಮನೆಗೆ ತೆರಳಿ ಕಸ ಸಂಗ್ರಹಿಸುವ ಸಿಬ್ಬಂದಿ ಹಾಗೂ ಆಟೋ ಟಿಪ್ಪರ್‌ಗಳ ವ್ಯವಸ್ಥೆ ಇದೆ. ಈಗಿರುವ ವ್ಯವಸ್ಥೆಯನ್ನೇ ಸಮರ್ಪಕವಾಗಿ ಬಳಸಿಕೊಂಡು ಕಾರ್ಯನಿರ್ವಹಿಸಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಅವರು ಎಚ್ಚರಿಕೆ ನೀಡಿದರು.
ಹಸಿ-ಒಣ ಕಸ ವಿಂಗಡಣೆ ಕಡ್ಡಾಯ
ನಗರದ ಕೆಲವು ಪ್ರದೇಶಗಳಲ್ಲಿ ಹಸಿ ಮತ್ತು ಒಣ ತ್ಯಾಜ್ಯ ವಿಂಗಡಣೆ ಶೇಕಡಾ 65, 70 ಹಾಗೂ 80 ರಷ್ಟು ತಲುಪಿದ್ದರೆ, ಇನ್ನೂ ಕೆಲವು ಪ್ರದೇಶಗಳಲ್ಲಿ ಅದು ಶೇಕಡಾ 45ರಷ್ಟೇ ಇದೆ. ಇನ್ನು ಮುಂದೆ ವಿಂಗಡಿಸದ ಕಸವನ್ನು ಸಂಗ್ರಹಿಸಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ಗುತ್ತಿಗೆದಾರರಿಗೆ ದಂಡ ವಿಧಿಸಲಾಗುವುದು ಎಂದರು.
ಕಸದ ಸಮಸ್ಯೆ ನಿವಾರಣೆಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದು, ತ್ಯಾಜ್ಯ ನಿರ್ವಹಣೆಯಲ್ಲಿ ಸುಧಾರಣೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಕಸ ಸಮಸ್ಯೆ ಬಗೆಹರಿಸಲು ಶೇಕಡಾ 50 ರಷ್ಟು ನಾಗರಿಕರ ಸಹಕಾರ ಅಗತ್ಯವಾಗಿದೆ. ಸರ್ಕಾರ, ನಗರ ಪಾಲಿಕೆ ಹಾಗೂ ನಾಗರಿಕರು ಕೈಜೋಡಿಸಿದಾಗ ಮಾತ್ರ ಶಾಶ್ವತ ಸುಧಾರಣೆ ಸಾಧ್ಯ ಎಂದು ವಿನಂತಿಸಿಕೊಂಡರು.
ಮನೆ ಬಳಿ ಕಸದ ವಾಹನ ಬಾರದಿದ್ದರೆ ತಿಳಿಸಿ
ನಿಮ್ಮ ಮನೆ ಹತ್ತಿರ ಕಸ ಸಂಗ್ರಹಿಸಲು ವಾಹನ ಬರದಿದ್ದರೆ ನಮಗೆ ತಿಳಿಸಿ. ವಾಹನಗಳು ಬರುವಂತೆ ಮಾಡುವುದು ಪಾಲಿಕೆಯ ಜವಾಬ್ದಾರಿ. ಆದರೆ ವಾಹನ ಬಂದರೂ ರಸ್ತೆ ಬದಿಯಲ್ಲಿ ಕಸ ಬಿಸಾಡುವವರ ವಿರುದ್ಧ ದಂಡಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.














Click it and Unblock the Notifications